Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಇಂಟರ್‌ನೆಟ್ ಇಲ್ಲದೆ ರೇಡಿಯೋದಲ್ಲಿ ಬರಲಿದೆ ಮಾಹಿತಿ ‘ಏರ್ ಪೇಪರ್ ’

ಉಷಾ ಹರೀಶ್

ಇಂಟರ್‌ನೆಟ್ ಇಲ್ಲದೆ ರೇಡಿಯೋದಲ್ಲಿ ಬರಲಿದೆ ಮಾಹಿತಿ  ‘ಏರ್ ಪೇಪರ್ ’

Wednesday January 27, 2016 , 3 min Read

ಐಟಿ ಕೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದರೂ ಅತಿ ಹೆಚ್ಚು ಜನರನ್ನು ಏಕಕಾಲಕ್ಕೆ ತಲುಪುವ ಏಕೈಕ ಮಾಧ್ಯಮವಾಗಿ ರೇಡಿಯೋ ಅಗ್ರಸ್ಥಾನವನ್ನು ಇಂದಿಗೂ ಉಳಿಸಿಕೊಂಡಿದೆ. ಆ ರೇಡಿಯೋ ತರಂಗಗಳನ್ನು ಬಳಸಿಕೊಂಡು ಹಾಸನ ಯುವ ಟೆಕ್ಕಿಗಳ ತಂಡ ಕೋಟ್ಯಂತರ ಜನರಿಗೆ ಅಗತ್ಯ- ತುರ್ತು ಮಾಹಿತಿ ಮತ್ತು ಸುದ್ದಿಗಳನ್ನು ಏಕಕಾಲಕ್ಕೆ ತಲುಪಿಸುವ ಒಂದು ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ.

image


ಇಂಟರ್‌ನೆಟ್ ಇಲ್ಲದಿದ್ದರೂ ಖರ್ಚಿಲ್ಲದೇ ಮೊಬೈಲ್‌ನಲ್ಲಿ ಮುದ್ರಿತ ಮಾಹಿತಿ, ಚಿತ್ರ ವೀಕ್ಷಣೆಗೆ ಅವಕಾಶ. ದುರ್ಗಮ ಪ್ರದೇಶ, ಪ್ರತಿಕೂಲ ಹವಾಮಾನದಲ್ಲೂ ರೇಡಿಯೋದಲ್ಲಿ ಮುದ್ರಿತ ಸಂದೇಶ ತಲುಪಿಸುವ ಒಂದು ವಿಶಿಷ್ಟ ಪ್ರಯೋಗ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.

ಹಾಸನದ ಎ.ಬಿ.ಸಚಿನ್ ಅಂಚನ್, ಎಂ.ಅನಿಲ್‌ಕುಮಾರ್, ಎಲ್.ಗೌರವ್ ಸೇರಿಕೊಂಡು ಅಭಿವೃದ್ಧಿಪಡಿಸಿರುವ ‘ಏರ್‌ಪೇಪರ್’ ಎಂಬ ಮೊಬೈಲ್ ಆ್ಯಪ್ ಸಿದ್ದಪಡಿಸಿ ಆ ಮೂಲಕ ರಾಷ್ಟ್ರೀಯ ಸ್ಪರ್ಧೆಯಲ್ಲಿ ಟಾಪ್ 10 ತಂಡಗಳಲ್ಲಿ ಸ್ಥಾನ ಪಡೆದು ರಾಷ್ಟ್ರಪತಿಗಳ ಪ್ರಶಂಸೆಗೆ ಪಾತ್ರವಾಗಿದ್ದಾರೆ.

image


ಪ್ರಯೋಗದ ವಿವರ

ಹಾಸನ ಸರಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 2013ರಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ ಈ ಮೂವರು ಯುವ ಸಾಹಸಿಗಳ ಪೈಕಿ ಸಚಿನ್ ಹಾಗೂ ಗೌರವ್ ಸ್ನಾತಕೋತ್ತರ ಪದವಿ ಮುಗಿಸಿದರು, ಆದರೆ ಅನಿಲ್ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಮೂವರು ಸೇರಿಕೊಂಡು ಗೀಕ್ ಸಿನರ್ಜಿ ಟೆಕ್ನಾಲಜಿಸ್ ಎಂಬ ಸಂಸ್ಥೆ ಸ್ಥಾಪಿಸಿದರು.

image


ಮೂಲತಃ ರೇಡಿಯೋ ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸುತ್ತಿದ್ದ ಸಮಯದಲ್ಲಿ ರೇಡಿಯೋ ಮೂಲಕ ಬರೀ ವಾಯ್ಸ್​ ಮಾತ್ರ ಕೇಳಿಸಿಕೊಳ್ಳಬಹುದು. ಆದರೆ ಸುದ್ದಿ ಟೆಕ್ಸ್ಟ್ ಮೆಸೆಜ್‌ಗಳನ್ನು ನೀಡುವ ಬಗೆಯನ್ನು ಕಂಡು ಹಿಡಿದರೆ ಹೇಗೆ ಎಂಬ ಆಲೋಚನೆ ಹೊಳೆದದ್ದೇ ತಡ ಆ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಸಿದ್ದರೇಡಿಯೋ ತರಂಗದಲ್ಲಿ ಮುದ್ರಿತ ಮಾಹಿತಿ ಎಲ್ಲ ಎಫ್‌ಎಂ ಹಾಗೂ ಸಮುದಾಯ ರೇಡಿಯೋ ವಾಹಿನಿಗಳ ಪ್ರಸಾರಕ್ಕೆ 100 ಕೆಲೋಹರ್ಡ್ಸ್ ಸಾಮರ್ಥ್ಯದ ತರಂಗಾಂತರ ಜಾಲವಿದೆ. ಇದರಲ್ಲಿ ಶೇ.60ರಷ್ಟು ಬಳಕೆಯಾಗುತ್ತಿದ್ದು, ಶೇ.40ರಷ್ಟು ಕಿಲೋಹರ್ಡ್ಸ್ ತರಂಗಾಂತರ ಮಾರ್ಗದಲ್ಲಿ ಮೊಬೈಲ್ ರೇಡಿಯೋಗಳಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು ಯುವಕರು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ಯಾವುದೇ ಇಂಟರ್‌ನೆಟ್ ಸಹಾಯದ ಅಗತ್ಯ ಇಲ್ಲ. ಭಾರತದಲ್ಲಿ ಸುಮಾರು ಶೇ 75ಕ್ಕೂ ಹೆಚ್ಚು ಜನ ಇಂಟರ್‌ನೆಟ್ ಬಳಸುತ್ತಿಲ್ಲ. ಸಾಕಷ್ಟು ಸುದ್ದಿಗಳು ಇಂಟರ್‌ನೆಟ್ ಆಧಾರಿತವಾಗಿವೆ. ಆ ನಿಟ್ಟಿನಲ್ಲಿ ಸಾಮಾನ್ಯ ಜನರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಈ ಸುದ್ದಿ ಮಾಹಿತಿಯನ್ನು ತಲುಪಿಸುವ ದೃಷ್ಟಿಯಿಂದ ಈ ಏರ್‌ಪೇಪರ್ ಆ್ಯಪ್ ಸಾಕಷ್ಟು ಸಹಾಯಕಾರಿಯಾಗಿದೆ.

image


ಮೊದಲಿಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಮಾಹಿತಿ ರೇಡಿಯೋ ವೇವ್ಸ್‌ಗಳಿಗೆ ಮೂಲಕ ರೇಡಿಯೋಗಳಿಗೆ ರವಾನಿಸಿ ನಂತರ ಸ್ಮಾಟ್‌ಫೋನ್‌ನಿಂದ ಒಮ್ಮೆ ಏರ್‌ಪೇಪರ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಸಾಕು. ನಂತರ ರೇಡಿಯೋ ಆನ್ ಮಾಡಿದರೆ ನಿರ್ದಿಷ್ಟ ತರಂಗಾಂತರದಲ್ಲಿ ಮೆಸೆಜ್‌ಗಳನ್ನು ಪಡೆಯಬಹುದು.

ಈ ಏರ್‌ಪೇಪರ್‌ನಿಂದ ಇಂಟರ್‌ನೆಟ್ ಇಲ್ಲದಿದ್ದರೂ ರೇಡಿಯೋದಲ್ಲಿ ನಿರಂತರ ಮಾಹಿತಿ ಪಡೆಯಬಹುದು. ಮತ್ತು ಸರಕಾರದ ಯೋಜನೆ, ಸೌಲಭ್ಯಗಳ ಬಗ್ಗೆ ಮುದ್ರಿತ ಮಾಹಿತಿ ಪಡೆಯಬಹುದು. ಇದನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ನೀಡಬಹುದು. ಕೃಷಿ, ಹವಾಮಾನ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ತುರ್ತು ಮಾಹಿತಿಯನ್ನು ಇದರ ಮೂಲಕ ರವಾನಿಸಬಹುದು. ಈ ಏರ್ ಪೇಪರ್‌ನಲ್ಲಿ ಮಾಹಿತಿ ಪಡೆಯಲು ಮೊಬೈಲ್‌ನಲ್ಲಿ ಕರೆನ್ಸಿಯ ಅವಶ್ಯಕತೆ ಇಲ್ಲ.

ಟಾಪ್ 50 ರಪಟ್ಟಿಯಲ್ಲಿ ಏರ್ ಪೇಪರ್

ಈ ಪ್ರಯೋಗದ ರೂಪುಗೊಳ್ಳುತ್ತಿದ್ದಂತೆ ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಸರಕಾರದ ಡಿಎಸ್‌ಟಿ ಹಾಗೂ ಇಂಟೆಲ್ ಸಹಯೋಗದಲ್ಲಿ ‘ಇನ್ನೋವೇಟ್ ಫಾರ್ ಡಿಜಿಟಲ್ ಇಂಡಿಯಾ ಚಾಲೆಂಜ್’ ರಾಷ್ಟ್ರೀಯ ಸ್ಪರ್ಧೆ ಪ್ರಕಟವಾಗಿದ್ದರಿಂದ ಟೆಕ್ಕಿಗಳು ತಮ್ಮ ಪರಿಕಲ್ಪನೆ ರವಾನಿಸಿದರು. ದೇಶಾದ್ಯಂತ 1,913 ಪರಿಕಲ್ಪನೆಗಳ ಪೈಕಿ ಟಾಪ್ 50ರ ಪಟ್ಟಿಯಲ್ಲಿ ಟೆಕ್ಕಿಗಳ ಏರ್‌ಪೇಪರ್ ಸ್ಥಾನ ಪಡೆಯಿತು. ಅಹಮದಾಬಾದ್‌ನ ಐಐಎಂ ಸಂಸ್ಥೆಯಲ್ಲಿ ನಡೆದ ಪರಿಷ್ಕರಣೆಯಲ್ಲೂ ಟಾಪ್ 20ರಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಎರಡು ಲಕ್ಷ ಉತ್ತೇಜನ

ನಂತರ ಪ್ರಾಯೋಗಿಕ ಪ್ರದರ್ಶನಕ್ಕಾಗಿ (ಪ್ರೋಟೊಟೈಪ್) ತಂಡಕ್ಕೆ ಎರಡು ಲಕ್ಷ ರೂ. ಉತ್ತೇಜನ ದೊರಕಿತು. ಪುಣೆಯಲ್ಲೇ ಮೂರು ತಿಂಗಳಿದ್ದ ಟೆಕ್ಕಿಗಳು 20 ಸೆಕೆಂಡ್ ಕಾಲ ರೇಡಿಯೋ ತರಂಗಾಂತರದಲ್ಲೇ ಮುದ್ರಿತ ಮಾಹಿತಿ ರವಾನಿಸುವಲ್ಲಿ ಯಶಸ್ವಿಯಾಗಿದ್ದರಿಂದ ಟಾಪ್ 10 ತಂಡಗಳ ಪೈಕಿ ಸ್ಥಾನ ಪಡೆದ್ದಿದಾರೆ. ದಿಲ್ಲಿಯಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ತಂಡಕ್ಕೆ ಬಹುಮಾನ ನೀಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಮೂಲಕ ಹಳ್ಳಿಗರಿಗೂ ಸುದ್ದಿಗಳನ್ನು, ವಿಶೇಷ ವರದಿಗಳನ್ನು ಮಾಹಿತಿಗಳನ್ನು ಉಚಿತವಾಗಿ ಹಂಚುವ ಯೋಜನೆ ಈ ತಂಡಕ್ಕಿದೆ.

ಕೋಟ್

ದೇಶದಲ್ಲಿ ಇಂದಿಗೂ ದೊಡ್ಡ ಸಂಖ್ಯೆಯಲ್ಲಿರುವ ಗ್ರಾಮೀಣ ಜನರಿಗೆ ಮಾಹಿತಿ ನೀಡುವ ಖರ್ಚಿಲ್ಲದ ವ್ಯವಸ್ಥೆಯನ್ನು ರೂಪಿಸಿದ್ದೇವೆ. ತುರ್ತು ಸಂದರ್ಭದಲ್ಲೂ ಇದನ್ನು ಪರಿಣಾಮಕಾರಿಯಾಗಿ ಬಳಸಲು ಅವಕಾಶವಿದೆ. ಮುಂದಿನ ದಿನಳಗಳಲ್ಲಿ ಈ ಸೇವೆಯನ್ನು ಉಚಿತವಾಗಿ ನಾವು ಜನರಿಗೆ ತಲುಪಿಸಲು ಪ್ರಯತ್ನ ಪಡುತ್ತೇವೆ. -ಸಚಿನ್ ಅಂಚನ್ ಯುವ ಟೆಕ್ಕಿ