Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಾರಿಶಕ್ತಿ ಪ್ರದರ್ಶನ

ಮಹಿಳಾ ದಿನಾಚರಣೆಯಂದು ಪ್ರಧಾನಮಂತ್ರಿ ಮೋದಿಯವರ ಟ್ವಿಟರ್‌ ಖಾತೆಯಲ್ಲಿ 7 ಮಹಿಳೆಯರು ತಮ್ಮ ಅದ್ಭುತ ಕಥೆಗಳನ್ನು ಹಂಚಿಕೊಂಡರು.

ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಾರಿಶಕ್ತಿ ಪ್ರದರ್ಶನ

Monday March 09, 2020 , 4 min Read

ಕಳೆದ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ “ಈ ಭಾನುವಾರ ನಾನು ಸಾಮಾಜಿಕ ಮಾಧ್ಯಮವನ್ನು ಬಿಟ್ಟುಬಿಡುವ ಚಿಂತನೆಯಲ್ಲಿದ್ದೇನೆ,” ಎಂದು ಟ್ವೀಟ್‌ ಮಾಡಿದ್ದರು. ಆದರೆ ಅದರ ನಂತರದ ದಿನವೇ ಮೋದಿಯವರು ತಮ್ಮ ಖಾತೆಗಳನ್ನು ಅಂತಾರಾಷ್ಟ್ರೀಯ ಮಹಿಳೆಯರ ದಿನದ ಅಂಗವಾಗಿ 7 ಜನ ಸಾಧಕ ಮಹಿಳೆಯರಿಗೆ ತಮ್ಮ ಸಾಹಸಗಾಥೆಗಳನ್ನು, ತಾವು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಹೇಳಿಕೊಳ್ಳಲು ಬಿಟ್ಟು ತಾವು ಅದೊಂದು ದಿವಸ ತಮ್ಮ ಖಾತೆಯಿಂದ ಹೊರಉಳಿಯುವುದಾಗಿ ತಿಳಿಸಿದ್ದರು.


ನಿನ್ನೆ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ತಮ್ಮ ಖಾತೆಯನ್ನು ಬಿಟ್ಟುಕೊಡುವ ಮುನ್ನ ಮೋದಿ “ಮೊದಲೇ ಹೇಳಿದಂತೆ ನಾನು ಸೈನ್‌ಆಫ್‌ ಮಾಡುತ್ತಿದ್ದೇನೆ. ಈಗಿನಿಂದ ಏಳು ಮಹಿಳೆಯರು ತಮ್ಮ ಜೀವನ ಯಾತ್ರೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಅವರು ಯಾತ್ರೆ, ಕನಸು ಲಕ್ಷಾಂತರ ಮಂದಿಗೆ ಸ್ಪೂರ್ತಿ,” ಎಂದು ಟ್ವೀಟ್‌ ಮಾಡಿದ್ದರು.


ಯಾರು ಈ ಏಳು ಮಂದಿ ಸಾಧಕಿಯರು?

ಸ್ನೇಹಾ ಮೋಹನದಾಸ್

2015ರ ಮಹಾಮಾರಿ ಚೆನೈ ಪ್ರವಾಹದ ಸಂದರ್ಭದಲ್ಲಿ ಜನರ ಹಸಿವು, ಆಹಾರ ಕೊರತೆಯನ್ನು ಕಂಡು ಮರುಗಿದ ಸ್ನೇಹಾ “ಫುಡ್‌ ಬ್ಯಾಂಕ್‌ ಇಂಡಿಯಾ” ಎಂಬ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿ “ಹಸಿವು ಮುಕ್ತ ಭಾರತ”ವೇ ತಮ್ಮ ಧೇಯೋದ್ದೇಶವೆಂದವರು. ಚೆನ್ನೈ ಮೂಲದ ಸಂಸ್ಥೆಯ ಸ್ಥಾಪಕರಾದ ಇವರೇ ಪ್ರಧಾನಿಗಳ ಖಾತೆಯಲ್ಲಿ ತಮ್ಮ ಕಥೆಯನ್ನು ಹೇಳಿದ ಮೊದಲ ಮಹಿಳೆ.


ತಮ್ಮ ಎನ್‌ಜಿಓ ಮೂಲಕ ಅವರು ಮನೆಯಲ್ಲಿ ತಯಾರಾದ ಆಹಾರವನ್ನು ಅಥವಾ ದಾನಿಗಳು ನೀಡಿದ ಆಹಾರವನ್ನು ಹಸಿದವರಿಗೆ, ಸೂರಿಲ್ಲದವರಿಗೆ ಶುದ್ಧವಾಗಿ ತಲುಪಿಸುತ್ತಾರೆ.


ಸ್ನೇಹಾ, ಟ್ವೀಟ್‌ ಮಾಡಿ, “’ನೀವು ಫುಡ್‌ ಫಾರ್‌ ಥಾಟ್ʼ ಬಗ್ಗೆ ಕೇಳಿದ್ದೀರಿ. ಈಗ, ನಮ್ಮ ಬಡವರಿಗೆ ಜೀವನ ರೂಪಿಸುವ ಅದರ ಕುರಿತ ಕ್ರಿಯೆಗಿಳಿಯುವ ಸಮಯ. ನನಗೆ ನನ್ನ ತಾಯಿಯೇ ಸ್ಪೂರ್ತಿ. ಸೂರು ಇಲ್ಲದ ಬಡಜನರಿಗೆ ಅವರು ಆಹಾರ ನೀಡುತ್ತಿದ್ದರು. ಅವರ ಕೆಲಸ ನೀಡಿದ ಪ್ರೇರಣೆಯೇ ನನಗೆ ಫುಡ್‌ಬ್ಯಾಂಕ್‌ ಇಂಡಿಯಾವನ್ನು ಆರಂಭಿಸಲು ಒದಗಿದ ಸ್ಪೂರ್ತಿಸೆಲೆ, ಹಸಿವನ್ನು ಹೋಗಲಾಡಿಸುವ ಸಂದೇಶ ಹಬ್ಬಿಸಲು ಪ್ರಧಾನಿಯವರ ಖಾತೆಯನ್ನು ಬಳಸಿಕೊಳ್ಳುತ್ತಿದ್ದೇನೆ. ನೀವೂ ಕೈ ಜೋಡಿಸಿ,” ಎಂದರು.

ಮುಂದುವರಿದು,


“ನಾನು ಅಂದುಕೊಂಡಿದ್ದನ್ನು ನಾನು ಮಾಡಿ ಪೂರೈಸಿದಾಗಲೇ ನಾನು ಸಬಲೀಕರಣಗೊಂಡೆ ಎಂದೆನ್ನಿಸುತ್ತದೆ ನನಗೆ! ನನ್ನ ಸಹವರ್ತಿ ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರು ಮುಂದೆ ಬರಲು ಮತ್ತು ನನ್ನೊಂದಿಗೆ ಕೈಜೋಡಿಸಲು ಪ್ರೇರೇಪಿಸಲು ನಾನು ಬಯಸುತ್ತೇನೆ. ಪ್ರತಿಯೊಬ್ಬರೂ ಕನಿಷ್ಠ ಒಬ್ಬ ನಿರ್ಗತಿಕ ವ್ಯಕ್ತಿಗೆ ಆಹಾರವನ್ನು ನೀಡಬೇಕು ಮತ್ತು ಹಸಿವು ಮುಕ್ತ ಪ್ರಪಂಚಕ್ಕೆ ಕೊಡುಗೆ ನೀಡಬೇಕೆಂದು ನಾನು ವಿನಂತಿಸುತ್ತೇನೆ,” ಎಂದರು.

ಡಾ. ಮಾಳವಿಕ ಐಯ್ಯರ್‌

2002ರಲ್ಲಿ ಬಿಕನೇರ್‌ನಲ್ಲಿ ನಡೆದ ಬಾಂಬ್‌ ಸ್ಪೋಟದಲ್ಲಿ 13 ವರ್ಷದ ಬಾಲಕಿ ಮಾಳವಿಕರ ಕೈ ಚಿದ್ರಗೊಂಡವು, ಕಾಲುಗಳಿಗೆ ಅತೀವ ಗಾಯಗಳಾಗಿದ್ದವು. ಅಂದಿನಿಂದ ತಮ್ಮ ದೈಹಿಕ ಮಿತಿಯನ್ನು ಮೀರಿ ಅವರು ಒಂದೇ ಬೆರಳಿನಲ್ಲಿ ಬರೆಯುತ್ತಾ ಶಿಕ್ಷಣ ಮುಗಿಸಿ, ಸಮಾಜಸೇವೆಯಲ್ಲಿ ತಮ್ಮ ಪಿ.ಎಚ್‌.ಡಿ ಪದವಿ ಪಡೆದುಕೊಂಡರು. ಈಗ ಅವರು ಅಂತಾರಾಷ್ಟ್ರೀಯ ಮಟ್ಟದ ಸ್ಪೂರ್ತಿದಾಯಕ ಭಾಷಣಕಾರ್ತಿ, ಅಂಗವಿಕಲರ ಹಕ್ಕುಗಳ ಚಳುವಳಿಗಾರ್ತಿ ಹಾಗೂ ವಿಶ್ವ ವಾಣಿಜ್ಯ ವೇದಿಕೆಯ ಗ್ಲೋಬಲ್‌ ಶೇಪರ್ಸ್‌ ಕಮಿಟಿಯ ಸದಸ್ಯೆಯೂ ಹೌದು. ತಮ್ಮ ಜೀವನ ಯಾತ್ರೆಯ ಬಗ್ಗೆ ಮೋದಿಯವರ ಖಾತೆಯಲ್ಲಿ ಹಂಚಿಕೊಂಡ ಮಾಳವಿಕಾ,


“ಸ್ವೀಕರಿಸುವ ಅಭ್ಯಾಸ ನಾವು ನಮಗೇ ನೀಡಿಕೊಳ್ಳಬಹುದಾದ ಬಹುಮಾನ. ನಾವು ನಮ್ಮ ಜೀವನವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಾವು ಖಂಡಿತವಾಗಿಯೂ ಜೀವನದ ಬಗೆಗಿನ ನಮ್ಮ ಮನೋಭಾವವನ್ನು ನಿಯಂತ್ರಿಸಬಹುದು. ದಿನದ ಅಂತ್ಯದಲ್ಲಿ, ನಮ್ಮ ಸವಾಲುಗಳನ್ನು ನಾವು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ಹೆಚ್ಚು ಮುಖ್ಯವಾಗಿದೆ,” ಎಂದರು.


ಆರಿಫಾ ಜಾನ್

ಆರಿಫಾ ಕಾಶ್ಮೀರದ ಕುಶಲಕರ್ಮಿ, ನಾಮಡಾ ಕರಕುಶಲತೆಯನ್ನು ಪುನರುಜ್ಜೀವನಗೊಳಿಸಲು ವ್ಯಾಪಕವಾಗಿ ಕೆಲಸ ಮಾಡಿದವರು. ನವದೆಹಲಿಯಲ್ಲಿ ಕೈಯಿಂದ ತಯಾರಿಸಿದ ವಸ್ತುಗಳ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದ ತಮ್ಮ ಮೊದಲ ವ್ಯವಹಾರ ಚಟುವಟಿಕೆಯ ಬಗ್ಗೆ ಅವರು ಹಂಚಿಕೊಂಡರು. ಪ್ರದರ್ಶನವು ಉತ್ತಮ ಗ್ರಾಹಕರನ್ನು ಮತ್ತು ವಹಿವಾಟನ್ನು ಆಕರ್ಷಿಸಿತು ಎಂದು ಅವರು ಹೇಳಿದರು.


‘ಅವಳು ನಮ್ಮನ್ನು ಪ್ರೇರೇಪಿಸುತ್ತಾಳೆ’ ಅಭಿಯಾನದ ರೂವಾರಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಆರಿಫಾ, ಈ ನಡೆ ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಿದೆ ಮತ್ತು ಇದು ಕರಕುಶಲ ಮತ್ತು ಕಾಶ್ಮೀರದಾದ್ಯಂತದ ಕುಶಲಕರ್ಮಿಗಳ ಸುಧಾರಣೆಗೆ ಹೆಚ್ಚು ಶ್ರಮಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಜಲಮಹಿಳೆ ಕಲ್ಪನಾ ರಮೇಶ್

ಮೋದಿಯವರ ಖಾತೆಯಲ್ಲಿ ತಮ್ಮ ಜಲಗಾಥೆಯನ್ನು ಕಲ್ಪನಾ ರಮೇಶ್‌ ಹಂಚಿಕೊಂಡರು. ಜಲ ಸಂರಕ್ಷಣೆ ಹಾಗೂ ನೀರಿನ ಕೊರತೆಯ ಬಗ್ಗೆ ಕಾಳಜಿವಹಿಸಿರುವ ಇವರು ಹಲವರ ಗಮನ ಸೆಳೆದಿದ್ದಾರೆ.


ಕಲ್ಪನಾ ಅವರು ‘ವಾಟರ್ ವಾರಿಯರ್’ ಎಂದೇ ಪ್ರಸಿದ್ಧಿಯಾದವರು. ಜನರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅವರು ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸಣ್ಣ ಪ್ರಯತ್ನಗಳು ದೊಡ್ಡ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಅವರು ಗಾಢವಾಗಿ ನಂಬಿದ್ದಾರೆ.


ಪ್ರಧಾನಿ ಮೋದಿಯವರ ಟ್ವಿಟ್ಟರ್ ಖಾತೆಯಲ್ಲಿ ಅವರು, "ನೀರು ನಮಗೆ ದೊರೆತ ಅಮೂಲ್ಯವಾದ ಆನುವಂಶಿಕತೆಯಾಗಿದೆ. ನಮ್ಮ ಮುಂದಿನ ಪೀಳಿಗೆ ಇದರಿಂದ ವಂಚಿತರಾಗಬಾರದು. ನೀರನ್ನು ಜವಾಬ್ದಾರಿಯುತವಾಗಿ ಬಳಸುವುದು, ಮಳೆನೀರನ್ನು ಕೊಯ್ಲು ಮಾಡುವುದು, ಸರೋವರಗಳನ್ನು ಉಳಿಸುವುದು, ಬಳಸಿದ ನೀರನ್ನು ಮರುಬಳಕೆ ಮಾಡುವುದು ಮತ್ತು ಜಾಗೃತಿ ಮೂಡಿಸುವ ಮೂಲಕ ಕೊಡುಗೆ ನೀಡಿ,” ಎಂದು ಮನವಿ ಮಾಡಿದರು.

ವಿಜಯಾ ಪವಾರ್‌

ವಿಜಯ ಪವಾರ್ ಕಳೆದ ಎರಡು ದಶಕಗಳಿಂದ ಬಂಜಾರ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಪ್ರಧಾನಿ ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ, ಅವರು ತಮ್ಮ ಮಾರ್ಗದರ್ಶನದಲ್ಲಿ ಸಾವಿರಾರು ಮಹಿಳಾ ಕುಶಲಕರ್ಮಿಗಳನ್ನು ಹೇಗೆ ಪ್ರೋತ್ಸಾಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.


ಮರಾಠಿಯಲ್ಲಿ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರು ‘ಗೋರ್ಮತಿ ಕಲೆ’ ಯನ್ನು ಉತ್ತೇಜಿಸಲು ಪ್ರೋತ್ಸಾಹಿಸುವುದಲ್ಲದೆ ಆರ್ಥಿಕ ಸಹಾಯವನ್ನೂ ನೀಡಿದರು ಎಂದು ಬರೆದಿದ್ದಾರೆ. ಬಂಜಾರ ಕರಕುಶಲತೆಗೆ ಸಂಬಂಧಿಸಿದ ಮಹಿಳೆಯರಿಗೆ ಇದು ವೈಭವದ ವಿಷಯವಾಗಿದೆ ಎಂದು ಅವರು ಹೇಳಿದರು.


“ನೀವು ಭಾರತದ ವಿವಿಧ ಭಾಗದ ವಿವಿಧ ರೀತಿಯ ಕುಶಲಕಲೆಗಳ ಬಗ್ಗೆ ಕೇಳಿರಬಹುದು. ನನ್ನ ಸಹ ಭಾರತೀಯರೇ, ನಾನು ನಿಮಗೆ ಮಹರಾಷ್ಟ್ರದ ಬಂಜಾರ ಗ್ರಾಮೀಣ ಸಮುದಾಯದ ಕರಕುಶಲ ವಸ್ತುಗಳ ಪರಿಚಯ ಮಾಡಿಸುತ್ತೇನೆ. ಇದರ ಸಲುವಾಗಿ ನಾನು ಕಳೆದ ಎರಡು ದಶಕಗಳಿಂದ ಕೆಲಸ ಮಾಡುತ್ತಿದ್ದೇನೆ ಹಾಗೂ ಸಾವಿರಾರು ಮಹಿಳೆಯರು ನನ್ನೊಟ್ಟಿಗೆ ಕೆಲಸ ಮಾಡುತ್ತಾರೆ,” ಎಂದು ಟ್ವೀಟಿಸಿದರು.


ಕಲಾವತಿ

ಉತ್ತರ ಪ್ರದೇಶದ ಕಾನ್ಪುರದ ಕಲಾವತಿ ದೇವಿಯವರ ಜೀವನ ಕಥೆ ಅಸಾಧಾರಣವಾದ್ದು. ಅವರು ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಬಲ್ಲರು. ಪ್ರಧಾನಿ ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳಿಗಳಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡರು.


ತಮ್ಮ ಹಳ್ಳಿಯವರಿಂದ ಹಣವನ್ನು ಸಂಗ್ರಹಿಸಿ ಸ್ವಚ್ಚತೆಯ ಮಹತ್ವದ ಬಗ್ಗೆ ಜನರನ್ನು ಜಾಗೃತಗೊಳಿಸಿದರು. ತಮ್ಮ ದೃಢಸಂಕಲ್ಪದ ಮೂಲಕ, ಅವರು ಸಾವಿರಾರು ಶೌಚಾಲಯಗಳನ್ನು ನಿರ್ಮಿಸಿದ್ದಾರೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಜನರನ್ನು ಪ್ರೋತ್ಸಾಹಿಸಿದ್ದಾರೆ. "ಆರೋಗ್ಯವಾಗಿರಲು ನೈರ್ಮಲ್ಯ ಅಗತ್ಯ," ಎನ್ನುತ್ತಾರೆ ಕಲಾವತಿ.


ದೇಶಾದ್ಯಂತದ ಎಲ್ಲ ಮಹಿಳೆಯರಿಗೆ ಕಲಾವತಿ ದೇವಿಯವರ ಸಂದೇಶವಿದು, “ಸಮಾಜವನ್ನು ಮುಂದೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ. ನಿಮ್ಮ ಮನೆಗಳಿಂದ ಹೊರಬನ್ನಿ. ಯಾರಾದರೂ ವಿರೋಧಿಸಿದರೆ ಅಥವಾ ವಾದಿಸಿದರೆ, ಅವರು ಅದನ್ನು ಮಾಡಲಿ. ನಿಮ್ಮ ಗುರಿಯನ್ನು ಸಾಧಿಸಲು ನೀವು ಬಯಸಿದರೆ, ಹಿಂತಿರುಗಿ ನೋಡಬೇಡಿ,” ಎಂದರು.

ವೀಣಾ ದೇವಿ

ಬಿಹಾರದ ಮುಂಗೇರ್‌ ಸರಪಂಚ್‌ ಆಗಿರುವ ವೀಣಾದೇವಿಯವರದ್ದು ಒಂದು ವಿಶಿಷ್ಟ ಕಥೆ. ಅವರು ತಮ್ಮ ಕಾರ್ಯಕ್ಕೆ ರಾಷ್ಟ್ರಪತಿಗಳು ನೀಡುವ ನಾರಿ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಮನೆಯಲ್ಲೇ ಅಣಬೆ ಬೆಳೆಯುವ ವಿಶಿಷ್ಟ ರೀತಿಯನ್ನು ಕಂಡುಕೊಂಡ ಅವರು ಮೊದಲು ಅಣಬೆ ಬೆಳೆದದ್ದು ತಮ್ಮ ಮಂಚದ ಕೆಳಗೆ! ಅದನ್ನ ಗ್ರಾಮದ ಎಲ್ಲ ಮಹಿಳೆಯರಿಗೂ ಕಲಿಸಿಕೊಟ್ಟು ಮಹಿಳೆಯರನ್ನು ಸ್ವಾವಲಂಬಿಯರನ್ನಾಗಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಗ್ರಾಮದ ಪಂಚಾಯಿತಿ ಚುಣಾವಣೆಗೆ ನಿಂತು ಮಹಿಳೆಯರ ಬೆಂಬಲದಿಂದ ಅಭೂತಪೂರ್ವ ಜಯ ದಾಖಲಿಸಿ, ಅವರ ಪಂಚಾಯಿತಿಯ ಸರಪಂಚ್‌ ಆಗಿದ್ದಾರೆ. ಪ್ರಧಾನಿಗಳ ಟ್ವಿಟರ್‌ ಖಾತೆಯಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡ ಇವರು,

“ಇಂದು ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಸಹ ಹಿಂದುಳಿದಿಲ್ಲ. ದೇಶದ ಅಧಿಕಾರವನ್ನು ಮಹಿಳೆ ನಿರ್ಧರಿಸಿದರೆ, ಅವರು ತಮ್ಮ ಮನೆಯಿಂದಲೇ ತಮ್ಮ ಪ್ರಯಾಣವನ್ನು ಪ್ರಾರಂಭಿಸಬಹುದು. ಈ ಕೃಷಿಯಿಂದಾಗಿ ನನಗೆ ಗೌರವ ಸಿಕ್ಕಿತು. ನಾನು ಸರಪಂಚ್‌ ಆಗಿ ಆಯ್ಕೆಗೊಂಡೆ. ನನ್ನಂತಹ ಅನೇಕ ಮಹಿಳೆಯರು ಇದೇ ರೀತಿಯ ತರಬೇತಿ ಅವಕಾಶಗಳನ್ನು ಪಡೆಯುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ,” ಎಂದರು.