Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಅಂದು ಸೋಲಿನ ಸರದಾರ...ಇಂದು ಶತಕೋಟಿ ವೀರ

ಟೀಮ್​​ ವೈ.ಎಸ್​​.

ಅಂದು ಸೋಲಿನ ಸರದಾರ...ಇಂದು ಶತಕೋಟಿ ವೀರ

Sunday October 25, 2015 , 3 min Read

ಇದು ಸೋತು ಗೆದ್ದವರ ಜೀವನಗಾಥೆ. ನಾಲ್ಕಾರು ಉದ್ಯಮದಲ್ಲಿ ಸೋತರೂ ಎದೆಗುಂದದೆ ಮರಳಿ ಯತ್ನವ ಮಾಡಿ ಯಶಸ್ಸು ಕಂಡ ಹ್ರಿತೇಶ್ ಲೋಹಿಯಾ ಅವರ ಬದುಕಿನ ರೋಚಕ ಕಥೆ. ಹ್ರಿತೇಶ್ ಲೋಹಿಯಾ ಮೊದಲು ಟೆಕ್ಸ್​​​ಟೈಲ್ ಕೆಮಿಕಲ್ ಫ್ಯಾಕ್ಟರಿ ಆರಂಭಿಸಿ ನಷ್ಟ ಅನುಭವಿಸಿದ್ರು. ಅದಾದ್ಮೇಲೆ ಹರಳು ಕತ್ತರಿಸುವ ಉದ್ಯಮ, ವಾಶಿಂಗ್ ಪೌಡರ್ ಉತ್ಪಾದನೆ ಹಾಗೂ ಮಾರಾಟದಲ್ಲಿ ತೊಡಗಿಕೊಂಡ್ರು. ಅದು ಕೂಡ ಹ್ರಿತೇಶ್ ಅವರ ಕೈಹಿಡಿಯಲಿಲ್ಲ. ನಂತರ ಷೇರು ವ್ಯವಹಾರದಲ್ಲೂ ಅವರು ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳಬೇಕಾಯ್ತು. ತುತ್ತು ಅನ್ನಕ್ಕೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲಾ ಉದ್ದಿಮೆಗಳಿಗೆ ಬಳಸಿದ ಕಚ್ಚಾ ವಸ್ತುಗಳ ತ್ಯಾಜ್ಯ ಬಿಟ್ರೆ ಅವರ ಬಳಿ ಬೇರೆ ಏನೂ ಇರಲಿಲ್ಲ. ಹೊಟ್ಟೆ ಪಾಡಿಗಾಗಿ ಅದನ್ನೇ ಮಾರಿಬಿಡೋಣ ಎಂದ್ರೆ ಕೊಂಡುಕೊಳ್ಳುವವರೇ ಇರಲಿಲ್ಲ. ಆಗಲೇ ಅವರಿಗೆ ಹೊಳೆದಿದ್ದು ತ್ಯಾಜ್ಯ ಮರುಬಳಕೆಯ ಐಡಿಯಾ. ಬಂಡವಾಳ ಹೂಡಲು ನಯಾಪೈಸೆ ಕೈಯಲ್ಲಿ ಇಲ್ಲದೇ ಇದ್ದಿದ್ರಿಂದ ಇದೊಂದೇ ಅವರಿಗಿದ್ದಿದ್ದ ಕೊನೆಯ ಅವಕಾಶ. ತ್ಯಾಜ್ಯದಿಂದ್ಲೇ ಆದಾಯ ಗಳಿಸಲು ಮುಂದಾದ ಹ್ರಿತೇಶ್ 2005ರಲ್ಲಿ ಪ್ರೀತಿ ಇಂಟರ್‍ನ್ಯಾಶನಲ್ ಅನ್ನೋ ಕಂಪನಿಯನ್ನು ಆರಂಭಿಸಿದ್ರು.

ಪದೇ ಪದೇ ಸೋಲಿನ ಅನುಭವವಾಗಿದ್ರಿಂದ ಹೊಸ ಉದ್ಯಮ ಆರಂಭಿಸುವಾಗ ಹ್ರಿತೇಶ್ ಅವರನ್ನು ಮೂಢನಂಬಿಕೆ ಕಾಡಿದ್ದು ಸುಳ್ಳಲ್ಲ. ಆದ್ರೆ ಪತ್ನಿ ತಮ್ಮ ಪಾಲಿನ ಅದೃಷ್ಟ ದೇವತೆ ಎನ್ನುತ್ತಾರೆ ಅವರು. ಈ ಹಿಂದೆ ಹತ್ತಾರು ಉದ್ಯಮ ಆರಂಭಿಸಿದರೂ ಪತ್ನಿಯ ಹೆಸರನ್ನು ಇಡದೇ ಇದ್ದಿದ್ರಿಂದ ಕೈಸುಟ್ಟುಕೊಳ್ಳಬೇಕಾಯ್ತು ಅನ್ನೋದು ಅವರ ನಂಬಿಕೆ. ಈ ಬಾರಿಯೂ ಮತ್ತದೇ ತಪ್ಪನ್ನು ಮಾಡಬಾರದೆಂದು ನಿರ್ಧರಿಸಿದ ಹ್ರಿತೇಶ್ ತಮ್ಮ ಹೊಸ ಸಂಸ್ಥೆಗೆ ಪತ್ನಿ ಪ್ರೀತಿ ಅವರ ಹೆಸರನ್ನೇ ಇಟ್ರು.

image


ಪ್ರೀತಿ ಇಂಟರ್‍ನ್ಯಾಶನಲ್ ಕಂಪನಿಯಲ್ಲಿ ತ್ಯಾಜ್ಯಗಳಿಂದಲೇ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತದೆ. ಯಂತ್ರಗಳನ್ನು ಬಳಸದೆ ಇವನ್ನೆಲ್ಲ ಕೈಯಲ್ಲೇ ಮಾಡುವುದು ವಿಶೇಷ. ಹಳೆಯ ಗೋಣಿಚೀಲದಿಂದ ಹ್ಯಾಂಡ್‍ಬ್ಯಾಗ್ ತಯಾರಿಸ್ತಾರೆ. ಜೊತೆಗೆ ಮಿಲಿಟರಿ ಟೆಂಟ್‍ಗಳು, ಡೆನಿಮ್ ಪ್ಯಾಂಟ್‍ಗಳು ಸೇರಿದಂತೆ ಹಲವಾರು ವಸ್ತುಗಳನ್ನು ಇಲ್ಲೇ ತಯಾರಿಸಲಾಗುತ್ತೆ. ಕೆಲಸಕ್ಕೆ ಬಾರದ ಟಿನ್, ಡ್ರಮ್, ಹಳೆಯ ಮಿಲಿಟರಿ ಜೀಪ್, ಟ್ರ್ಯಾಕ್ಟರ್ ಬಿಡಿ ಭಾಗಗಳು, ಯಂತ್ರಗಳ ಬಿಡಿಭಾಗಗಳು, ಹಳೆ ಸ್ಕೂಟರ್ ಹಾಗೂ ಬೈಕ್‍ಗಳ ಲೈಟ್‍ಗಳನ್ನೆಲ್ಲ ಬಳಸಿ ಪೀಠೋಪಕರಣಗಳನ್ನು ತಯಾರಿಸುವುದು ವಿಶೇಷ. ಚೀನಾ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಯುರೋಪಿಯನ್ ರಾಷ್ಟ್ರಗಳಿಗೆ ಇವನ್ನು ರಫ್ತು ಮಾಡಲಾಗ್ತಿದೆ. ಪ್ರೀತಿ ಇಂಟರ್‍ನ್ಯಾಶನಲ್ ಕೈ ಕಲೆಯಿಂದಲೇ ತಯಾರಿಸಿದ ಉತ್ಪನ್ನಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ರಫ್ತು ಮಾಡುತ್ತಿರುವ ಸಂಸ್ಥೆ. ಚೀನಾಕ್ಕೆ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ಏಕೈಕ ಕಂಪನಿ.

ಸದ್ಯ ಪ್ರೀತಿ ಇಂಟರ್‍ನ್ಯಾಶನಲ್ ಸಂಸ್ಥೆ 8 ಮಿಲಿಯನ್ ಡಾಲರ್ ವಹಿವಾಟು ಮಾಡ್ತಿದೆ. 36 ದೇಶಗಳಲ್ಲಿ ಗ್ರಾಹಕರನ್ನು ಹೊಂದಿದೆ. ಮೂರು ಕಾರ್ಖಾನೆಗಳಿದ್ದು, 400 ಮಂದಿ ಕೆಲಸ ಮಾಡ್ತಿದ್ದಾರೆ. ಚೀನಾದಲ್ಲಿ ಪ್ರೀತಿ ಇಂಟರ್‍ನ್ಯಾಶನಲ್ ಕಂಪನಿಯ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದ್ದು, ಅಲ್ಲಿನ ಮಾರುಕಟ್ಟೆಯತ್ತಲೇ ಹ್ರಿತೇಶ್ ಹೆಚ್ಚು ಗಮನಹರಿಸಿದ್ದಾರೆ. 2016ರ ವೇಳೆಗೆ ವಹಿವಾಟು 20 ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಹ್ರಿತೇಶ್ ಅವರಿಗಿದೆ. ಸದ್ಯ ಚೀನಾದ ನಿಂಬ್​ಗೋದಲ್ಲಿ ರಿಟೇಲ್ ಶೋ ರೂಮ್ ಒಂದನ್ನು ಆರಂಭಿಸಿರುವ ಸಂಸ್ಥೆ ಅಂತಹ 12 ಅಂಗಡಿಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ.

ಸದ್ಯ ಭಾರತದಲ್ಲಿ ಆನ್‍ಲೈನ್ ಶಾಪಿಂಗ್ ಭರಾಟೆ ಜೋರಾಗಿದೆ. ಹಾಗಾಗಿ ಆನ್‍ಲೈನ್ ಶಾಪಿಂಗ್ ವೆಬ್‍ಗಳ ಜೊತೆಗೂ ಹ್ರಿತೇಶ್ ಮಾತುಕತೆ ನಡೆಸಿದ್ದಾರೆ. ಪ್ರೀತಿ ಇಂಟರ್‍ನ್ಯಾಶನಲ್ ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡಲು ಪೆಪ್ಪರ್ ಫ್ರೈ, ಫ್ಲಿಪ್‍ಕಾರ್ಟ್‍ನಂತಹ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ವರ್ಷಪೂರ್ತಿ ಆಗುವಷ್ಟು ಆರ್ಡರ್ ಬಂದಿರೋದ್ರಿಂದ ಹ್ರಿತೇಶ್ ಅವರಿಗೆ ಯಾವುದೇ ತಲೆನೋವಿಲ್ಲ. 2016ರಲ್ಲಿ ವಿದೇಶಗಳಲ್ಲಿ ನಡೆಯುವ ಪ್ರದರ್ಶಗಳಲ್ಲಿ ಪ್ರೀತಿ ಇಂಟರ್‍ನ್ಯಾಶನಲ್ ಸಂಸ್ಥೆ ತನ್ನ ಉತ್ಪನ್ನಗಳನ್ನು ಪರಿಚಯಿಸಲಿದೆ. ವಿಶೇಷ ಅಂದ್ರೆ ಡಿಸ್ಕವರಿ ವಾಹಿನಿ ಹ್ರಿತೇಶ್ ಅವರ ಯಶಸ್ವಿ ಉದ್ಯಮವನ್ನ ಚಿತ್ರಿಸಿದೆ. 140 ದೇಶಗಳಲ್ಲಿ ಅದನ್ನು ಟೆಲಿಕಾಸ್ಟ್ ಮಾಡಲಿದೆ. ಅಚ್ಚರಿಯ ಸಂಗತಿ ಅಂದ್ರೆ ಪ್ರೀತಿ ಇಂಟರ್‍ನ್ಯಾಶನಲ್ ಸಂಸ್ಥೆ ಯಾವುದೇ ಬ್ಯಾಂಕ್‍ನಿಂದ ಸಾಲ ಪಡೆದಿಲ್ಲ. ಹ್ರಿತೇಶ್ ಹಾಗೂ ಪ್ರೀತಿ ಈ ಸಂಸ್ಥೆಗೆ ಆಧಾರ. ಕಂಪನಿಯ ನೌಕರರ ಬಗ್ಗೆ ಕೂಡ ಇವರು ಅಪಾರ ಪ್ರೀತಿ ಹಾಗೂ ವಿಶ್ವಾಸ ಇಟ್ಟುಕೊಂಡಿದ್ದಾರೆ.

ಸತತ ಸೋಲುಗಳಿಂದ ಕಂಗೆಟ್ಟಾಗ ಮತ್ತೆ ಹೊಸ ಸಾಹಸಕ್ಕೆ ಕೈಹಾಕುವುದು ಸುಲಭವಲ್ಲ ಎನ್ನುತ್ತಾರೆ ಹ್ರಿತೇಶ್. ಯೋಜನೆಯನ್ನೆಲ್ಲ ಸಾಕಷ್ಟು ಜನರಿಗೆ ಹ್ರಿತೇಶ್ ವಿವರಿಸಿದ್ರು. ಆದ್ರೆ ಹೂಡಿಕೆ ಮಾಡಲು ಯಾರೊಬ್ಬರೂ ಮುಂದೆ ಬಂದಿರ್ಲಿಲ್ಲ. ಹಣಕಾಸಿನ ಮುಗ್ಗಟ್ಟಿನಿಂದಾಗಿ ತಮ್ಮ ಪತ್ನಿಯ ಆಭರಣಗಳನ್ನೂ ಮಾರಬೇಕಾಯ್ತು ಎನ್ನುತ್ತಾರೆ ಅವರು. ಬಳಿಕ ಗ್ರಾಹಕರಿಂದ ಮೊದಲ ಆರ್ಡರ್ ಪಡೆಯಲು ಹ್ರಿತೇಶ್ 2 ವರ್ಷ ಕಷ್ಟಪಡಬೇಕಾಯ್ತು. ಅದೇನೇ ಆದ್ರೂ ಸಧ್ಯ ಪ್ರೀತಿ ಇಂಟರ್‍ನ್ಯಾಶನಲ್ ಭಾರೀ ಯಶಸ್ಸು ಗಳಿಸಿದೆ. ಅಹಂ ಭ್ರಹ್ಮಾಸ್ಮಿ ಅನ್ನೋದ್ರಲ್ಲೇ ಹ್ರಿತೇಶ್ ನಂಬಿಕೆ ಇಟ್ಟಿದ್ದಾರೆ. ಪರಿಶ್ರಮವೊಂದಿದ್ದರೆ ಎಂತಹ ಚಮತ್ಕಾರವೂ ಸಾಧ್ಯ ಅನ್ನೋದಕ್ಕೆ ಇವರೇ ಸಾಕ್ಷಿ.