Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಎಂಡೋಸಲ್ಫಾನ್​​ನಿಂದ ನೊಂದವಳು ಇಂದು ಡಾಕ್ಟರ್ ಆಗುವ ಹಾದಿಯಲ್ಲಿ..

ಎನ್​​.ಎಸ್​. ರವಿ

ಎಂಡೋಸಲ್ಫಾನ್​​ನಿಂದ ನೊಂದವಳು ಇಂದು ಡಾಕ್ಟರ್ ಆಗುವ ಹಾದಿಯಲ್ಲಿ..

Saturday January 23, 2016 , 3 min Read

ಎಂಡೋಸಲ್ಫಾನ್ ಎಂದರೆ ಸಾಕೂ ಕರ್ನಾಟಕ ಜನತೆ ಬೆಚ್ಚಿ ಬೀಳ್ತಾರೆ. ಕಾಸರಗೋಡಿನ ಎಂಡೋಸಲ್ಫಾನ್ ದುರಂತದ ಬಗ್ಗೆ ಕೇಳುವಾಗಲೆಲ್ಲಾ ಅಂಗವೈಕಲ್ಯತೆಯಿಂದ ಬಳಲುತ್ತಿರುವ, ಬುದ್ಧಿ ಮಾಂದ್ಯರಾಗಿರುವ ಮಕ್ಕಳ ದೃಶ್ಯವೇ ನಮ್ಮ ಕಣ್ಮುಂದೆ ಥಟ್ ಅಂತ ಬಂದು ಹೋಗುತ್ತದೆ. ಎಂಡೋಸಲ್ಫಾನ್‌ನ ಮಹಾಮಾರಿಗೆ ಹಲವು ಜನರು ಬದುಕಿದ್ದು ಸತ್ತಿದ್ದರೆ. ಉಸಿರಿದ್ದರು ಪ್ರಯೋಜನಕ್ಕಿಲ್ಲದಂತೆ ಮಾಡಿದೆ ಈ ಮಹಾಮಾರಿ.

image


ಎಣ್ಮಕಜೆ ಗ್ರಾಮದ ಜನರ ದಯನೀಯ ಸ್ಥಿತಿ, ಮಕ್ಕಳ ಅಂಗವೈಕಲ್ಯತೆ, ಅವರ ಕಷ್ಟಗಳು. ಇವೆಲ್ಲವನ್ನೂ ಪದಗಳಲ್ಲಿ ಹೇಳಲು ನಿಜಕ್ಕೂ ಅಸಾಧ್ಯ. ಊರಿಗೆ ಊರೇ ಎಂಡೋಸಲ್ಫಾನ್‌ನ ಭೀಕರ ಹೊಡೆತಕ್ಕೆ ನಲುಗಿ ಹೋಗಿದೆ. ಒಂದೊಮ್ಮೆ ಎಂಡೋಸಲ್ಫಾನ್​​ನಿಂದ ಬಳಲುತ್ತಿದ್ದ ಅಲ್ಲಿನ ಮಕ್ಕಳ ಫೋಟೋ ತೆಗೆಯಲಾಗಿತ್ತು. ಆ ಫೋಟೊಗಳಲ್ಲಿ ಅಂಗವೈಕಲ್ಯತೆಯಿಂದ ಬಳಲುತ್ತಿರುವ ಪುಟ್ಟ ಹುಡುಗಿಯೊಬ್ಬಳ ಫೋಟೋ ಕೂಡಾ ಇತ್ತು. ಆ ಪುಟ್ಟ ಹುಡುಗಿಯ ಹೆಸರು ಶ್ರುತಿ. ಎಂಡೋಸಲ್ಫಾನ್​​ಗೆ ಒಳಗಾದವರು ನರಳಾಟ ನೋಡಲಾಗುವುದಿಲ್ಲ. ಆ ದೇಹ ವಿಕೃತವಾಗಿ ಕಾಣಿಸುತ್ತದೆ. ಅಂತಹ ರೋಗದ ಮಧ್ಯೆಯು ಆ ಪುಟ್ಟ ಹುಡಗಿ ತನ್ನ ಗಟ್ಟಿತನವನ್ನು ಪ್ರದರ್ಶಿಸಿದ್ದಾಳೆ. ಇದೀಗ ಈಕೆ ವೈದ್ಯೆಯಾಗುವ ಕನಸು ಹೊತ್ತು ಮುನ್ನಡೆಯುತ್ತಿದ್ದಾಳೆ. ಬದುಕಿನ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಈಕೆ ತನ್ನ ಕನಸುಗಳನ್ನು ನನಸು ಮಾಡಿದ್ದಾಳೆ.

image


ಎಂಡೋಸಲ್ಫಾನ್‌ನ ಹೊಡೆತಕ್ಕೆ ಸಿಕ್ಕಿ ಶ್ರುತಿ ಅಂಗವೈಕಲ್ಯತೆಯಿಂದಲೇ ಜನಿಸಿದ್ದಳು. ಬಲಗಾಲು ಊನವಾಗಿತ್ತು. ಕೈಯಲ್ಲಿ ನಾಲ್ಕು ಬೆರಳುಗಳು ಅಡ್ಡಾದಿಡ್ಡಿಯಾಗಿ ಬೆಳೆದಿದ್ವು. ಆ ನಾಲ್ಕು ಬೆರಳುಗಳನ್ನು ತೋರಿಸಿ ನಿಂತಿರುವ ಪುಟ್ಟ ಬಾಲಕಿಯ ಫೋಟೋ ಅಂದು ಹೆಚ್ಚಿನ ಗಮನವನ್ನು ಸೆಳೆದಿತ್ತು. ಆ ಹಸ್ತವನ್ನು ನೋಡಿದ್ರೆ ಎಂತವರು ಮರುಗಬೇಕು ಆಗಿತ್ತು ಆಕೆಯ ಹಸ್ತ. ಭವಿಷ್ಯ ಹೇಳಲು ಅವಳ ಕೈ ಸಾಮಾನ್ಯರ ಕೈಯಂತೆ ಇರಲಿಲ್ಲ. ಎಷ್ಟೋ ಜನ ಇವಳ ಕೈ ನೋಡಿ ಮರುಗಿದ್ರೆ, ಅನೇಕ ಜನರು ಮುಜುಗುರದಿಂದ ನೋಡುತ್ತಿದ್ರು. ಆದರೆ ಈಗ ಈಕೆಯ ಛಲ ಹಾಗೂ ಬುದ್ದಿವಂತಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಎಣ್ಮಕಜೆ ಗ್ರಾಮದ ಅಭಿಮಾನದ ಸಂಕೇತವಾಗಿ ಇಂದು ಶ್ರುತಿ ಬೆಳೆದು ನಿಂತಿದ್ದಾಳೆ. ಕರ್ನಾಟಕದ ವೈದ್ಯಕೀಯ ವೃತ್ತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕಗಳಿಸಿರುವ ಶೃತಿ ಈಗ ಬೆಂಗಳೂರು ಸರಕಾರಿ ಹೋಮಿಯೋ ಮೆಡಿಕಲ್ ಕಾಲೇಜಿನಲ್ಲಿ ಬಿಹೆಚ್‌ಎಂಎಸ್‌ಗೆ ಪ್ರವೇಶ ಪಡೆದಿದ್ದಾಳೆ.

image


"ಆ ಫೋಟೋ ತೆಗೆದಾಗ ನಾನು ಎರಡು ಅಥವಾ ಮೂರನೇ ಕ್ಲಾಸಿನ ವಿದ್ಯಾರ್ಥಿನಿ. ಒಬ್ಬರು ಅಂಕಲ್ ಬಂದು ಫೋಟೋ ತೆಗೆದಿದ್ದರು ಎಂಬುದಷ್ಟೇ ನನಗೆ ನೆನಪು. ಆ ಫೋಟೋ ಹೀಗೆಲ್ಲಾ ಪ್ರಕಟವಾಗಿತ್ತು ಎಂಬುದು ಹಲವು ವರುಷಗಳು ಕಳೆದ ನಂತರವೇ ನನ್ನ ಗಮನಕ್ಕೆ ಬಂದಿದ್ದು ಅಂತಾರೆ ಶ್ರುತಿ". ಚಿಕ್ಕವಳಿರುವಾಗ ಶ್ರುತಿ ಅಪ್ಪ ಅಮ್ಮನಲ್ಲಿ ಕೇಳುತ್ತಿದ್ದದ್ದು ಒಂದೇ ಪ್ರಶ್ನೆ, ನಾನ್ಯಾವಾಗ ಡಾಕ್ಟರ್ ಆಗುವುದು? ಆ ವೇಳೆ ಅಪ್ಪ ತಾರಾನಾಥ್ ರಾವ್ ಮತ್ತು ಅಮ್ಮ ಮೀನಾಕ್ಷಿಗೆ ಮಗಳ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದೇ ಗೊತ್ತಿರಲಿಲ್ಲ. ನುಂಗಲಾರದ ಬಿಸಿ ತುಪ್ಪವಾಗುತ್ತಿತ್ತು. ಮಗಳ ಈ ಪ್ರಶ್ನೆ ಸರಿಯಾಗಿ ಮುಷ್ಟಿ ಬಿಗಿ ಹಿಡಿಯಲು ಬಾರದ ಹುಡುಗಿ ಡಾಕ್ಟರ್ ಆಗುವುದು ಎಂದರೆ ಮನೆಯವರಿಗೆ ಆ ದೃಶ್ಯವನ್ನು ಕಲ್ಪಸಿಕೊಳ್ಳಲು ಆಗುತ್ತಿರಲಿಲ್ಲ. ಕೈ ಮತ್ತು ಕಾಲು ಊನವಾಗಿರುವ ಮಗಳ ಕನಸು ಡಾಕ್ಟರ್ ಆಗಬೇಕೆಂಬುದಾಗಿತ್ತು. ಆಕೆಯ ಕನಸನ್ನು ನನಸು ಮಾಡಲು ಅಪ್ಪ ಅಮ್ಮ ನೆರವಾದರು. ಅಮ್ಮ ಮರಣ ಹೊಂದಿದ ನಂತರ ಅಪ್ಪ ಎರಡನೇ ಮದುವೆ ಆಗಿದ್ದರು. "ಮೀನಾಕ್ಷಿ, ನನ್ನ ಎರಡನೇ ಅಮ್ಮ. ಅವರು ನನ್ನನ್ನು ಸ್ವಂತ ಮಗಳಂತೆ ನೋಡಿಕೊಂಡರು. ಸ್ವಲ್ಪ ದೊಡ್ಡವಳಾದ ಮೇಲೆ ಎಂಡೋಸಲ್ಫಾನ್‌ನ ಪೀಡಿತರ ಫೋಟೋದಲ್ಲಿ ನನ್ನ ಫೋಟೋ ಕಾಣುವಾಗಲೆಲ್ಲಾ ನನಗೆ ಅತೀವ ಸಂಕಟವಾಗುತ್ತಿತ್ತು. ಕೃತಕ ಕಾಲುಗಳ ಸಹಾಯದಿಂದ ಕಿಲೋಮೀಟರ್‌ಗಳಷ್ಟು ನಡೆದು ಶಾಲೆಗೆ ಹೋಗಬೇಕಿತ್ತು. ಬ್ಯಾಗ್ ಭಾರ ಹೊತ್ತು ಅಷ್ಟು ಕಿಲೋಮೀಟರ್ ನಡೆದು ಶಾಲೆಗೆ ತಲುಪುವ ವೇಳೆಗೆ ಕಾಲು ಊದಿಕೊಳ್ಳುತ್ತಿತ್ತು. ಕೃತಕ ಕಾಲುಗಳನ್ನು ಬಳಸಿ ನಡೆಯುವುದು ಮೊದ ಮೊದಲಿಗೆ ಹೆಚ್ಚು ಕಷ್ಟ ಎನಿಸುತ್ತಿತ್ತು. ಫಂಗಸ್ ಬಾಧೆಯಿಂದಾಗಿ ಕೆಲವೊಮ್ಮೆ ಶಾಲೆಗೆ ಹೋಗುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಆ ಕಷ್ಟಗಳಲ್ಲಿಯೂ ನಾನು ಸುಖವನ್ನು ಕಂಡೆ. ಎಂಡೋಸಲ್ಫಾನ್‌ನ ಭೀಕರತೆಗೆ ಬಲಿಯಾಗಿ ದೇಹದ ಮೇಲೆ ಸ್ವಾಧೀನ ಕಳೆದುಕೊಂಡವರ ಮುಂದೆ ನನ್ನ ಅಂಗವೈಕಲ್ಯತೆ ಏನೇನೂ ಅಲ್ಲ ಎಂದು ಕೊಂಡು ಸ್ವಯಂ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ನನ್ನ ಕಲಿಕೆಗೆ ಒಳ್ಳೆಯ ಪ್ರೋತ್ಸಾಹ ಲಭಿಸತೊಡಗಿದಾಗ ಆತ್ಮವಿಶ್ವಾಸ ಹೆಚ್ಚುತ್ತಾ ಸಾಗಿತು. ಕಲಿತು ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲ ಇನ್ನೂ ಗಟ್ಟಿಯಾಯ್ತು. ಆದೇ ನಾನು ಇಂದು ಈ ಮಟ್ಟಕ್ಕೆ ಬರಲು ಪ್ರೇರಣೆಯಾಯ್ತು"

image


"ಆದೆ ಸಮಯಕ್ಕೆ ನನ್ನ ಬದುಕಿಗೆ ಜಗದೀಶ್ ಪ್ರವೇಶವಾಯ್ತು. ಕಾರಡ್ಕ ಪಂಚಾಯತ್‌ನಲ್ಲಿ ಕಟ್ಟಡ ಕಾರ್ಮಿಕ ಜಗದೀಶ್. ಜಗದೀಶ್‌ನೊಂದಿಗಿನ ಪ್ರೀತಿ ಮದುವೆಯ ಹಂತಕ್ಕೂ ಬಂದು ನಿಂತಿತು. ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದೆ. ನಂತರ ನೆರೆಮನೆಯ ಡಾಕ್ಟರ್ ವೈಎಸ್ ಮೋಹನ್ ಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಮುಳ್ಳೇರಿಯಾ ಜಿಹೆಚ್‌ಎಸ್ ಶಾಲೆಯಲ್ಲಿ ಪ್ಲಸ್ ಟುಗೆ ಸೇರಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಮನೆಯಿಂದ ಶಾಲೆಗೆ ಹೋಗುವುದು ಕಷ್ಟವಾದಾಗ, ಐತನಡ್ಕದಲ್ಲಿರುವ ಸಂಬಂಧಿಗಳ ಮನೆಯಲ್ಲಿ ಉಳಿದುಕೊಂಡು ಪ್ಲಸ್ ಟು ಪೂರೈಸಿದೆ. ಪ್ಲಸ್ ಟು ಮುಗಿದ ಕೂಡಲೇ ಜಗದೀಶ್ ಜತೆ ನನ್ನ ವಿವಾಹವಾಯ್ತು. ಆತ ಬೇರೆ ಜಾತಿಯವನಾಗಿದ್ದರಿಂದ ಮನೆಯವರಿಂದ ನಮ್ಮ ವಿವಾಹಕ್ಕೆ ವಿರೋಧವಿತ್ತು".

image


"ಬದುಕಿನಲ್ಲಿ ನಾನು ಸೋತೆ ಎನ್ನುವಷ್ಟರಲ್ಲಿ ಜಗದೀಶ್ ನನ್ನ ಕನಸುಗಳನ್ನು ನೆರವೇರಿಸುವಲ್ಲಿ ಜೊತೆಯಾದ್ರು. ಕೂಲಿ ಕೆಲಸಕ್ಕೆ ಹೋಗಿ ಸಂಪಾದಿಸಿದ ಹಣದಲ್ಲಿ ಜಗದೀಶ್ ನನಗೆ ಪ್ರವೇಶ ಪರೀಕ್ಷೆ ತರಬೇತಿ ಕ್ಲಾಸಿಗೆ ಕಳಿಸಿಕೊಟ್ಟಿದ್ದಾನೆ. ಇನ್ನು ಬಿಹೆಚ್‌ಎಂಎಸ್‌ನಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಕನಸು ನನ್ನದು. ನನ್ನಲ್ಲಿ ಆತ್ಮವಿಶ್ವಾಸ ತುಂಬಲು, ಜತೆಯಾಗಿ ಕನಸು ಕಾಣಲು, ನನ್ನ ಪ್ರಾರ್ಥನೆಗಳೊಂದಿಗೆ ಜಗದೀಶ್ ಜತೆಗಿದ್ದಾನೆ ಅಂತಾರೆ ಶ್ರುತಿ". ಶ್ರುತಿ ಹಸ್ತ ನೋಡಿದ್ರೆ ಅವರು ಹೇಗೆ ಸ್ಟೇಥಸ್ಸ್ಕೋಪ್ ಹಿಡಿಯುತ್ತಾರೆಂದು ನೀವು ಹುಬ್ಬೇರಿಸಬಹುದು. ಆತ್ಮವಿಶ್ವಾಸವೊಂದಿದ್ರೆ ಎನ್ ಬೇಕಾದ್ರು ಮಾಡಬಹುದು ಎಂಬುದನ್ನು ಈ ಗಟ್ಟಿಗಿತ್ತಿ ತೋರಿಸಿಕೊಟ್ಟಿದ್ದಾಳೆ. ಶ್ರುತಿಯ ಕನಸು ನನಸಾಗಲಿ. ಹಲವು ಜನರಿಗೆ ಈಕೆ ಪ್ರೇರಣೆಯಾಗಲಿ ಎಂದು ಆಶಿಸೋಣ.