Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

"ಥಟ್ ಅಂತಾ ಹೇಳಿದ್ದಾರೆ" ಆರತಿ ಎಚ್ ಎನ್ ಅವರಿಗೆ ಈ ಬರಹವನ್ನ ಬಹುಮಾನವನ್ನಾಗಿ ನೀಡಲಾಗ್ತಿದೆ..!

ಚೈತ್ರಾ ಎನ್​

"ಥಟ್ ಅಂತಾ ಹೇಳಿದ್ದಾರೆ" ಆರತಿ ಎಚ್ ಎನ್ ಅವರಿಗೆ ಈ ಬರಹವನ್ನ ಬಹುಮಾನವನ್ನಾಗಿ ನೀಡಲಾಗ್ತಿದೆ..!

Sunday May 15, 2016 , 5 min Read

ಎಲೆಮರೆಕಾಯಿಗಳ ಹಣ್ಣಾಗಿಸಿದವರು, ಮುದುಡಿದ್ದ ಮುದ್ದು ಮುದ್ದು ಕಂದಮ್ಮಗಳ ಕಣ್ಣಲ್ಲಿ ಭರವಸೆ ಹೂವು ಅರಳಿಸಿದವರು. ಥಟ್ ಅಂತಾ ಹೇಳುತ್ತಲೇ ಶಾರದೆಯ ಮಡಿಲು ತುಂಬಿದವರು. ಝೀರೋ ಸೈಜ್‍ನ ಗುಟ್ಟು, ಸಿಕ್ಸ್ ಪ್ಯಾಕ್‍ನ ರಟ್ಟು ಮಾಡಲು ಮೈಕ್ ಹಿಡಿದವರು ನಿಂತಲ್ಲೇ ಇದ್ದರೇ, ಇವರು ಅದೇ ಮೈಕನ್ನು ಮೈಮನಗಳ ಸುಳಿಯಲ್ಲಿ ತಾವು ಹೆಣ್ಣೋ ಗಂಡೋ ಎಂದು ತಮ್ಮನ್ನೇ ಹುಡುಕುತ್ತಿದ್ದವರ ಕಂಬನಿ ಬಳಿ ತೆಗೆದುಕೊಂಡು ಹೋದವರು. ಮೈಕ್ ಮತ್ತು ಕ್ಯಾಮರಾ ಸರ್ಕಾರಿ ಸಹಿಗಿಂತ ಹರಿತ ಅನ್ನೋದನ್ನ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಇದಕ್ಕಾಗಿಯೇ " ಅಂತರಾಷ್ಟ್ರೀಯ ಮಾಧ್ಯಮಾ ಮತ್ತು ಜಾಹೀರಾತು" ವಿಭಾಗದ ವತಿಯಿಂದ ಪ್ರಶಸ್ತಿ ಪಡೆದ ಮೊದಲ ಕನ್ನಡ ವಿದ್ಯುನ್ಮಾನ(ಎಲೆಕ್ಟ್ರಾನಿಕ್) ಮಾಧ್ಯಮದ ಪತ್ರಕರ್ತೆ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡರು. ಆ ಮೂಲಕ ಕನ್ನಡ ಎಲೆಕ್ಟ್ರಾನಿಕ್ ಮೀಡಿಯಾದ ಶ್ರೇಷ್ಠತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಕೀರ್ತಿಗೆ ಪಾತ್ರರಾದವರು. 2500 ಸಂಚಿಕೆಗಳನ್ನು ದಾಟಿ ಲಿಮ್ಕಾ ರೆಕಾರ್ಡ್ ಸೇರಿದ ಥಟ್ ಅಂತಾ ಹೇಳಿ ಕಾರ್ಯಕ್ರಮದ ಹಿಂದಿನ ಶಕ್ತಿ, ಕನ್ನಡ ಮಾಧ್ಯಮದ ಮನೆಮಗಳು ಶ್ರೀಮತಿ ಆರತಿ ಎಚ್ ಎನ್!

image


ಇಂಥ ಪೋಷಕರ ಮಗಳಾಗಿರುವುದು ಅದೃಷ್ಟ

ಹೌದು. ಇಂದು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಚಿಂತನೆಗಳ ಮೂಲಕ ಗುರುತಿಸಿಕೊಂಡಿರುವ ಆರತಿ ಎಚ್ ಎನ್ ರವರು ಕನ್ನಡದ ಸಾಹಿತ್ಯ ಕ್ಷೇತ್ರದ ಅಪರೂಪದ ದಂಪತಿಗಳಾಗಿರುವ ಹಿರಿಯ ಸಂಶೋಧಕರಾದ ಡಾ. ಹಂಪಾ ನಾಗರಾಜಯ್ಯ ಮತ್ತು ಡಾ. ಕಮಲಾ ಹಂಪನಾ ಅವರ ಪ್ರೀತಿಯ ಮಗಳು. 

" ನಾನು ಆಟಿಕೆಗಳ ಜೊತೆ ಬೆಳೆಯಲೇ ಇಲ್ಲ, ನನ್ನ ಬಾಲ್ಯ ಸಂಪೂರ್ಣ ಭಿನ್ನವಾಗಿತ್ತು. ನನ್ನ ಅಮ್ಮ ಎಂದೂ ಕಾಫಿ ಲೋಟ ಹಿಡಿದುಕೊಂಡು ಅಕ್ಕ ಪಕ್ಕದ ಮನೆಯವರ ಜೊತೆ ಸಮಯ ಕಳೆದದ್ದು ನಾನು ನೋಡಲೇ ಇಲ್ಲ. ನನಗೆ ಮಧ್ಯರಾತ್ರಿ ನಿದ್ದೆಯಿಂದ ಎಚ್ಚರವಾದಗಲೂ ಅಮ್ಮ ಓದುವುದು ಅಥವಾ ಬರೆಯುವುದೇ ಕಾಣುತಿತ್ತು." 
                             - ಆರತಿ, ಎಚ್​.ಎನ್​

ಹೀಗೆ ಅಕ್ಷರಗಳ ಅಂಗಳದಲ್ಲೇ ಅಂಬೆಗಾಲಿಟ್ಟಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ ಆರತಿಯವರು. ಈ ಎಲ್ಲಾ ಅಂಶಗಳು ಅವರ ಒಳಗಿದ್ದ ಬರಹಗಾರ್ತಿಯನ್ನು ಪೋಷಿಸುತ್ತಿದ್ದವು.

ಇದನ್ನು ಓದಿ: ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..

ಮೊದಲು ತೊದಲು

ಆರತಿಯವರು 8 ನೇತರಗತಿಯಲ್ಲಿ ಮೊದಲ ಬಾರಿಗೆ ಪದ್ಯ ಬರೆದರು. ಆ ಮೂಲಕ ಅವರೊಳಗಿದ್ದ ಬರಹಗಾರ್ತಿ ಮೊದಲ ಬಾರಿಗೆ ಈ ಜಗತ್ತಿಗೆ ತೆರೆದುಕೊಂಡರು. ಅಲ್ಲಿಂದ ಅವರು ಡಿಗ್ರಿ ಓದುವಾಗಲೇ ಮೊದಲ ಕವನ ಸಂಕಲನ "ಓಕುಳಿ" ಲೋಕಾರ್ಪಣೆಯಾಯಿತು. ಅದೇ ಸಮಯದಲ್ಲಿ ಪೋಷಕರನ್ನು ಸಂದರ್ಶಿಸಲು ಪತ್ರಕರ್ತರು ಮನೆಗೆ ಬರುವುದನ್ನು ನೋಡುತ್ತಿದ್ದ ಆರತಿಯವರಲ್ಲಿ ಪತ್ರಿಕೋದ್ಯಮದ ಕನಸು ಬೀಜ ಬಿತ್ತಿತು. ಸಾಹಿತ್ಯದ ಪ್ರೀತಿ ಅದಕ್ಕೆ ಜೀವ ತುಂಬಿತು. ಕಾಲೇಜು ದಿನಗಳಲ್ಲೇ ಶ್ರೀನಿವಾಸ್ ಸರ್ ಬಹಳಷ್ಟು ಕವಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಸತತ 6 ವರ್ಷ ನಡೆದ ಕವಿಗೋಷ್ಟಿಯಲ್ಲಿ ಆರತಿಯವರಿಗೊಂದು ಬಹುಮಾನ ಖಾಯಂ. ಕಾಲೇಜು ಮುಗಿದ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ಇಂಟರ್ನ್​ಶಿಪ್ ಮಾಡುವಾಗ ಮೊದಲ ನುಡಿಚಿತ್ರ ಪ್ರಕಟವಾಗಿತ್ತು. ಅದೇ ಸಮಯ ದೂರದರ್ಶನ ವಾಹಿನಿ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ಹಮ್ಮಿಕೊಂಡಿತ್ತು. ಈ ನಾಟಕೋತ್ಸವದಲ್ಲಿ ಕುಸುಮಬಾಲೆ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಆರತಿಯವರಿಗೆ ಕಾರ್ಯಕ್ರಮ ನಿರೂಪಣೆಯ ಅವಕಾಶ ದೊರೆಯಿತು. ಇದು ಆರತಿಯವರಿಗೆ ದೊಡ್ಡ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿತು. ಅಲ್ಲಿಂದ ಜನರು ಗುರುತಿಸುವುದು ಕಂಡಾಗ ಈ ಕ್ಷೇತ್ರದಲ್ಲೇ ಮುಂದುವರಿಯಬೇಕು ಎಂದು ನಿರ್ಧರಿಸಿದರು. ಇಲ್ಲಿಂದಲೇ ದೂರದರ್ಶನದೊಂದಿಗೆ ಬಾಂಧವ್ಯ ಬೆಳೆಯಿತು.

image


ಹುಡುಕಿಹೋದ ಬಳ್ಳಿ ಕಾಲಿಗೆ ಸಿಕ್ಕಿದ ಕಥೆ

ಆಗ ಕೇಂದ್ರದಿಂದ ಎಕ್ಸಾಮ್‍ಗೆ ಕರೆಬಂತು. 34 ಜನ ಕ್ಲಾಸ್‍ಮೇಟ್​​ಗಳಲ್ಲಿ ಆರತಿಯವರು ಸೇರಿದಂತೆ ಮೂವರು ಮಾತ್ರ ಆಯ್ಕೆಯಾಗಿದ್ದರು. ಆ ಮೂಲಕ ದೂರದರ್ಶನ ವಾಹಿನಿಯ ಕಾರ್ಯಕ್ರಮ ನಿರ್ವಾಹಕರಾಗುವ ಬಂಪರ್ ಅವಕಾಶ. ಅಲ್ಲಿಂದ ಪತ್ರಿಕೋದ್ಯಮದಲ್ಲೊಂದು ಮಿನುಗು ತಾರೆ ಕಣ್ಣು ಬಿಡಲಾರಂಭಿಸಿತು. "ಭಾಷೆಯನ್ನು ಸಿದ್ದಿಸಿಕೊಂಡರೇ ಯಾವುದೇ ಮಾಧ್ಯಮವಿರಲಿ ಕೆಲಸ ಮಾಡುವುದು ಸುಲಭವಾಗುತ್ತದೆ ಅನ್ನೋದು ಆರತಿಯವರ ಅನುಭವದ ನುಡಿ. ಇದಕ್ಕೂ ಮುಂಚೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ 7 ತಿಂಗಳು ಕೆಲಸ ಕಲಿತ ಆರತಿಯವರು ಮುದ್ರಣ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನು ಕರಗತ ಮಾಡಿಕೊಂಡರು.

"ಪ್ರಿಂಟ್ ಮೀಡಿಯಾದಲ್ಲಿ ಸುದ್ದಿ ಸಂಗ್ರಹ ಕಲೆ, ಎಡಿಟಿಂಗ್ ಚಾಕ ಚಕ್ಯತೆ ಕಲಿತುಕೊಳ್ಳಬಹುದು. 300 ಪದಗಳನ್ನು 3 ಸೆಂಟೆನ್ಸ್​​ನಲ್ಲಿ ಹೇಳುವ ದೃಶ್ಯ ಮಾಧ್ಯಮದ ಮ್ಯಾಜಿಕ್ ಬರಹಕ್ಕೆ ಪ್ರಿಂಟಿಂಗ್ ಮೀಡಿಯಾದ ಬೇಸ್ ಇರಲೇಬೇಕು. ಭಾಷೆಯ ಮೇಲಿನ ಪ್ರಭುತ್ವ ವರವಾಗಿ ಪರಿಣಮಿಸುತ್ತದೆ " 
                     - ಆರತಿ, ಎಚ್​.ಎನ್​

ಥಟ್ ಅಂತಾ ಹೇಳಿ

ದೂರದರ್ಶನದ ಹೆಮ್ಮೆಯ ಗರಿ ಥಟ್ ಅಂತಾ ಹೇಳಿ ಕ್ವಿಜ್ ಕಾರ್ಯಕ್ರಮ. ವಿಶ್ವದ ಮಾಧ್ಯಮದ ಇತಿಹಾಸದಲ್ಲೇ ಇದು ಹೊಸತು ಮತ್ತು ಯಶಸ್ವಿ ಪ್ರಯತ್ನವಾಗಿತು. ಜನರಲ್ಲಿ ಕಡಿಮೆಯಾಗುತ್ತಿದ್ದ ಓದುವ ಆಸಕ್ತಿಯನ್ನು ಪುನರುಜ್ಜೀವನಗೊಳಿಸಲು, ಪುಸ್ತಕಗಳ ಮಾಹಿತಿ ಕೊರತೆಯನ್ನು ನೀಗಿಸಲು, ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರತಿಯವರ ಮಾರ್ಗದರ್ಶನದಲ್ಲಿ ಮೂಡಿ ಬಂದ ಕಾರ್ಯಕ್ರಮ. ಡಾ. ನಾ. ಸೋಮಶೇಖರ್‍ರವರ ಚಂದದ ನಿರೂಪಣೆ ಮತ್ತು ಸ್ಪರ್ಧಿಗಳ ಆಯ್ಕೆಯಲ್ಲಿ ವಿಭಿನ್ನತೆ, ಅಪರೂಪದ ಮಾಹಿತಿಯನ್ನು ಒಳಗೊಂಡ ಈ ಕಾರ್ಯಕ್ರಮ 2500 ಸಂಚಿಕೆಗಳನ್ನು ಪೂರೈಸಿ ಲಿಮ್ಕಾ ರೆಕಾರ್ಡ್ ದಾಖಲಿಸಿತು. ಇದೀಗ 3000 ಸಂಚಿಕೆಯತ್ತ ದಾಪುಗಾಲು ಹಾಕುತ್ತಿದ್ದು ಗಿನ್ನೆಸ್ ರೆಕಾರ್ಡ್‍ಗೆ ಇನ್ನೆರಡು ತಿಂಗಳು ಬಾಕಿ ಇದೆ. ಸದ್ಯ ಚಂದನ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಬೆಳಗು ಕಾರ್ಯಕ್ರಮ ನಿರ್ಮಾಣದ ಬ್ಯುಸಿಯಲ್ಲಿ ಥಟ್ ಅಂತಾ ಹೇಳಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ.

image


ಪತ್ರಿಕೋದ್ಯಮಕ್ಕೆ ಬಂದ ಸಾರ್ಥಕ ಕ್ಷಣಗಳು

ಥಟ್ ಅಂತಾ ಹೇಳಿ ಕಾರ್ಯಕ್ರಮದಲ್ಲಿ ವಿಭಿನ್ನ ಯೋಜನೆಗಳನ್ನು ರೂಪಿಸುತ್ತಿದ್ದ ಆರತಿಯವರು. ಕರ್ನಾಟಕದ ಸರ್ಕಾರಿ ಶಾಲೆ ಮಕ್ಕಳಿಗೆ ಥಟ್ ಅಂತಾ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವೇದಿಕೆ ನಿರ್ಮಾಣ ಮಾಡಿದರು. ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ಕೂಲಿ ಕಾರ್ಮಿಕರ ಮಕ್ಕಳಲ್ಲಿ ಅಡಗಿದ್ದ ಅಂಜಿಕೆ, ಕೀಳರಿಮೆ ತೊಡೆದು ಹಾಕುವುದಕ್ಕಿಂತಲೂ ಹೆಚ್ಚಾಗಿ ಅವರಲ್ಲಿ ಅಡಗಿದ್ದ ಬುದ್ದಿವಂತಿಕೆಯನ್ನು ಪರಿಚಯಿಸುವ ಮಹದಾಸೆ ಇತ್ತು. ಒಬ್ಬ ಹುಡುಗಿ ನೀನು ಮುಂದೆ ಏನಾಗುತ್ತೀಯಾ ಎನ್ನುವ ಪ್ರಶ್ನೆಗೆ ನೀಡಿದ ಉತ್ತರ " ನಾನು ದೊಡ್ಡವಳಾದ ಮೇಲೆ ದೂರದರ್ಶನ ವಾಹಿನಿಯಲ್ಲಿ ನಿರೂಪಕಿಯಾಗ್ತಿನಿ" ಎನ್ನುವ ಮಾತನ್ನು ಕೇಳಿದಾಗ ಪತ್ರಿಕೋದ್ಯಮದ ನಿಜ ಆಶಯ ಮತ್ತು ಅದನ್ನು ನಿರ್ವಹಿಸಿದ ಕ್ಷಣಗಳು ಜೀವನದ ಸಾರ್ಥಕದ ಕ್ಷಣಗಳು ಎನ್ನುತಾರೆ.

image


ದಿಸ್ ಅವಾರ್ಡ್ ಗೋಸ್ ಟೂ...!

ಎಸ್, ಅದು ಜೀವನದ ಮರೆಯಲಾರದ ಕ್ಷಣಗಳು. ತೃತೀಯ ಲಿಂಗಿಗಳು, ಸಲಿಂಗ ಕಾಮಿಗಳ ತುಮುಲ, ಅವರ ನೋವು, ಹೋರಾಟದ ಬಗ್ಗೆ ಬೆಳಕು ಚೆಲ್ಲುವ " ನಡುವೆ ಸುಳಿವ ಆತ್ಮ" ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಮಾಧ್ಯಮ ಮತ್ತು ಜಾಹೀರಾತು ವಿಭಾಗದಿಂದ ಪ್ರಶಸ್ತಿಯು ಲಭಿಸಿತು. ಈ ವಿಭಾಗದ ಪ್ರಶಸ್ತಿ ಕನ್ನಡ ಎಲೆಕ್ಟ್ರಾನಿಕ್ ಮೀಡಿಯಾಗೆ ದೊರೆತ ಮೊಟ್ಟ ಮೊದಲ ಪ್ರಶಸ್ತಿ ಅನ್ನೊದು ಮಾಧ್ಯಮ ಕ್ಷೇತ್ರಕ್ಕೆ ಹೆಮ್ಮೆ ತರುವ ವಿಷಯ. ಇದು ನಿಜವಾಗಿಯೂ ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗುವ ಸಂಗತಿ. ಇದಿಷ್ಟೆ ಅಲ್ಲದೇ ಚಂದನವಾಹಿನಿಯ ಬೆಳಗು ಕಾರ್ಯಕ್ರಮದ ಮೂಲಕ ಹಲವಾರು ಎಲೆಮರೆಕಾಯಿಯಂಥ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇಂದಿಗೂ ಕರ್ನಾಟಕದ ಮೂಲೆ ಮೂಲೆಯಲ್ಲೂ ಇವರನ್ನು ನೆನೆಯುವವರಿದ್ದಾರೆ.

image


ಅಕ್ಷರ ಯಾನ

ಇದುವರೆವಿಗೂ 5 ಪುಸ್ತಕಗಳನ್ನು ಹೊರತಂದಿದ್ದಾರೆ. 2 ಕವನ ಸಂಕಲನ, 2 ಅನುವಾದ ಕೃತಿ ಮೆಚ್ಚುಗೆಗೆ ಪಾತ್ರವಾಗಿದೆ. "ಪ್ರಣಯ ಶತಕ" ಎಂಬ ಅನುವಾದ ಕೃತಿಗೆ ಕೇರಳದಿಂದ ಅತ್ಯುತ್ತಮ ಅನುವಾದ ಕೃತಿ ಪ್ರಶಸ್ತಿ ಲಭಿಸಿದೆ. ಕೆಲಸದ ಕಾರ್ಯದೊತ್ತಡದಿಂದ ಸದ್ಯ ಬರವಣಿಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬೇಸರವಿದ್ದರೂ ಕೆಲಸದ ಬಗೆಗಿನ ಸಮರ್ಪಣ ಭಾವಕ್ಕೆ ಆತ್ಮತೃಪ್ತಿ ಇದೆ ಎನ್ನುತ್ತಾರೆ.

ಜರ್ನಲಿಸಂ ಅನ್ನೊದು ಬಹಳ ಕ್ರಿಯಾತ್ಮಕ ಕೆಲಸ. ಟೀಂ ಜೊತೆಗೆ ಕೆಲಸ ಮಾಡುವುದು ನಿಮ್ಮ ಸಹನೆಗೆ ಪರೀಕ್ಷೆಯೇ ಸರಿ. ಮೇಕಪ್, ಲೈಟ್ಸ್, ಪಿಸಿಆರ್, ಗೆಸ್ಟ್, ನಿರೂಪಕರು ಎಲ್ಲವನ್ನು ನಿಭಾಯಿಸಿ ಉತ್ತಮ ಕಾರ್ಯಕ್ರಮ ನೀಡುವುದು ಬಹಳ ಮುಖ್ಯ. ಆದರೆ ಎಲ್ಲೆಡೆ ಕಾಣುವ " ಎಷ್ಟಾದರೂ ಇವರು ಹೆಣ್ಣು" ಅನ್ನೋ ಮನೋಭಾವ ಬದಲಾಗಬೇಕು. ಕೆಲಸವನ್ನು ಗುರುತಿಸಬೇಕು. ಬೋನ್ಸಾಯ್ ಮನೋಭಾವವನ್ನು ತೊಡೆದು ಹಾಕಬೇಕು ಎಂದು ಚಿಂತನೆಗೆ ಹಚ್ಚುತ್ತಾರೆ.

ಯುವ ಪತ್ರಕರ್ತರೇ ಇಲ್ಲಿ ಕೇಳಿ

ಸಕ್ಸಸ್‍ಗೆ ಶಾರ್ಟ್ ಕಟ್ ಇಲ್ಲ. ಗಡಿಯಾರ ನೋಡಿ ಯಾವತ್ತು ಕೆಲಸ ಮಾಡಬಾರದು. ಇದು ನನ್ನ ಕೆಲಸ ಅನ್ನೋ ಶ್ರದ್ಧೆ ಬೇಕು. ಭಾಷೆ ಬಗ್ಗೆ ಗಮನವಿರಬೇಕು. ಮೊನ್ನೆ ಜ್ಯೂರಿಯಾಗಿ ಒಂದು ಸ್ಪರ್ಧೆಗೆ ಹೋಗಿದ್ದೆ ಅಲ್ಲಿ ಈಗಷ್ಟೆ ಪೋಸ್ಟ್ ಗ್ರ್ಯಾಜುಯೇಷನ್ ಮುಗಿಸಿರುವ ಮಕ್ಕಳ ಕಾಗುಣಿತದ ತಪ್ಪನ್ನು ನೋಡಿ ನಿಜಕ್ಕೂ ಬೇಸರವಾಯಿತು. ಪತ್ರಕರ್ತನಿಗೆ ಭಾಷೆ ಬಗ್ಗೆ ಕಾಳಜಿ ಇರಬೇಕು ಅನ್ನೋ ಆಶಯ ವ್ಯಕ್ತಪಡಿಸುತ್ತಾರೆ.

image


"ಮುಖ್ಯವಾಗಿ ನಾವು ಎಷ್ಟೇ ದೊಡ್ಡವರಾದರೂ ಅಹಂ ನಮ್ಮಿಂದ ದೂರವಿರಬೇಕು. ನಿಮ್ಮ ಕೆಲಸ 'ಅದು ಕಾಯಕ ನಿಮ್ಮ ಅಧಿಕಾರವಲ್ಲ' ಎನ್ನುತ್ತಾರೆ. ಸೌಜನ್ಯ, ವಿನಯ ಇರಲೇಬೇಕು. ದಾಷ್ಟ್ಯ ಎಂದಿಗೂ ಒಳ್ಳೆಯದಲ್ಲ" ಎಂಬ ಬುದ್ದಿ ಮಾತು ಹೇಳುತ್ತಾರೆ. ಸದಾ ಯುವ ಮನಸುಗಳಿಗೆ ಪ್ರೋತ್ಸಾಹ ನೀಡುತ್ತಾ ಆ ಮೂಲಕ ತಾವು ಬೆಳೆಯುತ್ತಿದ್ದಾರೆ.

ಒಟ್ಟಾರೇ ಇಂದು ಹಲವಾರು ಕನಸು ಹೊತ್ತು ಬರುತ್ತಿರುವ ಯುವ ಪತ್ರಕರ್ತರ ಆಶಯವೇನಾಗಿರಬೇಕು?. ನಿಜವಾದ ಪತ್ರಿಕೋದ್ಯಮವೆಂದರೇನು? ದೃಶ್ಯ ಮಾಧ್ಯಮವೆಂದರೆ ನಿರೂಪಕರು ,ವರದಿಗಾರರು ಅಷ್ಟೇ ಅಲ್ಲ ಅವರ ಕಿಂಗ್ ಮೇಕರ್ ಕಾರ್ಯಕ್ರಮ ನಿರ್ಮಾಪಕರ ಸಾಧ್ಯತೆಗಳ ಬಗ್ಗೆ ಆರತಿಯವರ ಜೀವನ ತೆರೆದ ಪುಸ್ತಕವಿದ್ದಂತೆ, ಪತ್ರಿಕೋದ್ಯಮದಿಂದ ನಮ್ಮ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಸುಧಾರಣೆಯಲ್ಲ, ದೇಶದ ಸಾಮಾಜಿಕ ಆರ್ಥಿಕ ಸ್ಥಿತಿಯ ಸುಧಾರಣೆ ಮತ್ತು ಶ್ರೀಮಂತಿಕೆಯಾಗಬೇಕು ಅನ್ನೋದನ್ನು ಕಲಿಸುತ್ತದೆ.

ಇದನ್ನು ಓದಿ:

1. ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!

2. ಅವಿವಾಹಿತರಿಗೆ ಇನ್ನು ಮುಂದೆ ಯಾರ ಕಾಟವೂ ಇಲ್ಲ..!

3. ಒಂದೇ ಕ್ಲಿಕ್​ನಲ್ಲಿ ದೊಡ್ಡ ಮನೆಯ ದೊಡ್ಡ ಮಾಹಿತಿ..!