ಹಸಿವು... ಬಡವರನ್ನು ಬಡವರನ್ನಾಗೇ ಉಳಿಸುವ ನೋವು. ಪ್ರತಿದಿನ ಅನ್ನ ಸಿಗದೇ, ಹೊಟ್ಟೆ ತುಂಬದೇ, ತುತ್ತು ಕೂಳಿಗಾಗಿ ಪರದಾಡಿ ಮಲಗುವ ಲಕ್ಷಾಂತರ ಮಂದಿ ನಮ್ಮ ದೇಶದಲ್ಲಿದ್ದಾರೆ. ಇಂಥ ಹಸಿವನ್ನು ಬುಡಸಮೇತ ಕಿತ್ತೊಗೆಯುವುದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲೊಂದು ಅತ್ಯದ್ಭುತ ಸಾಹಸವೊಂದು ಶುರುವಾಗಿದೆ. ದೇಶಧ ಮೊಟ್ಟ ಮೊದಲ ಆಹಾರ ಧಾನ್ಯದ ಬ್ಯಾಂಕ್ ಪ್ರಾರಂಭಗೊಂಡಿದೆ.
ಆಹಾರ ಧಾನ್ಯಕ್ಕೂ ಬ್ಯಾಂಕಾ..?
ಯೆಸ್, ಇಂಥದ್ದೊಂದು ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಆಹಾರ ಧಾನ್ಯಗಳ ಬ್ಯಾಂಕ್ ಜೀವ ತಳೆದಿದೆ. ವಾರಣಾಸಿಯ ಎನ್ಜಿಒ, ವಿಶಾಲ್ ಭಾರತ್ ಸಂಸ್ಥಾನ್ ಪೇಠ್ ಭರಾಓ ಅಭಿಯಾನವನ್ನು ಆರಂಭಿಸಿತ್ತು. ಇದರ ಅಡಿಯಲ್ಲಿಯೇ ಹುಕುಲ್ ಗಂಜ್ ಏರಿಯಾದ ವರುಣಾನಗರ ಕಾಲನಿಯಲ್ಲಿ ವಿಶಾಲ್ ಭಾರತ್ ಆಹಾರ ಧಾನ್ಯಗಳ ಬ್ಯಾಂಕ್ ಆರಂಭಗೊಂಡಿದೆ. ನವರಾತ್ರಿ ಹಬ್ಬದ ಮೊದಲ ದಿನದಂದು ಶುರುವಾದ ಬ್ಯಾಂಕ್ ಗೆ ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು. ಆಹಾರ ಧಾನ್ಯಗಳ ಬ್ಯಾಂಕ್ ಉದ್ಘಾಟನೆಯಂದು ಬರೋಬ್ಬರೀ 688 ಕೆಜಿ ಆಹಾರ ಧಾನ್ಯವನ್ನು ಡಿಪಾಸಿಟ್ ಮಾಡಲಾಗಿತ್ತು.
ಅನಾಜ್ ಬ್ಯಾಂಕ್ ಹೇಗೆ ಕೆಲಸ ಮಾಡತ್ತೆ..?
ಹಣವನ್ನು ಡಿಪಾಸಿಟ್ ಇಡುವ ಸಾಮಾನ್ಯ ಬ್ಯಾಂಕ್ ಗೂ ಅನಾಜ್ ಬ್ಯಾಂಕ್ ಅಂದ್ರೆ ಆಹಾರ ಧಾನ್ಯಗಳ ಬ್ಯಾಂಕ್ಗೂ ಅಂತಹದ್ದೇನು ವ್ಯತ್ಯಾಸವೇನಿಲ್ಲ. ಅಲ್ಲಿ ಹಣವನ್ನು ಡಿಪಾಸಿಟ್ ಇಟ್ಟರೆ, ಇಲ್ಲಿ ಆಹಾರ ಧಾನ್ಯಗಳನ್ನು ಡಿಪಾಸಿಟ್ ಇಡಲಾಗತ್ತೆ. ದೇಶದ ಯಾವುದೇ ನಾಗರೀಕ ಕೂಡ ವಿಶಾಲ್ ಭಾರತ್ ಫುಡ್ ಗ್ರೇನ್ ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡಬಹುದು, ಅಕೌಂಟ್ ತೆರೆದವರಿಗೆ ಒಂದು ಪಾಸ್ ಪುಸ್ತಕ ಕೂಡ ಕೊಡಲಾಗತ್ತೆ. ಬ್ಯಾಂಕ್ ನಲ್ಲಿ ಖಾತೆ ತೆರೆದವರು ಕನಿಷ್ಟ 5 ಕೆಜಿಯಷ್ಟು ಆಹಾರ ಧಾನ್ಯವನ್ನು ಜಮಾ ಮಾಡಬೇಕು ಅನ್ನೋದು ಕಡ್ಡಾಯ. ಆಹಾರ ಧಾನ್ಯ ಜಮಾ ಮಾಡಿದವರಿಗೆ ಇಲ್ಲಿ ಸಿಗೋದು ಬಡ್ಡಿಯಲ್ಲ, ಬದಲಿಗೆ ಸಂತೃಪ್ತಿ ಮತ್ತು ಆಶೀರ್ವಾದ.
ಹೌದು, ಯಾವುದೇ ಖಾತೆ ತೆರೆದ ವ್ಯಕ್ತಿಯೂ ಕೂಡ ಫುಡ್ ಗ್ರೇನ್ ಬ್ಯಾಂಕ್ ನಲ್ಲಿ ಧಾನ್ಯಗಳನ್ನು ಡಿಪಾಸಿಟ್ ಇಡಬಹುದು. ಅಕ್ಕಿ, ಗೋಧಿ, ರಾಗಿ, ಬಾರ್ಲಿ, ಹಿಟ್ಟು, ಭತ್ತ, ಸಕ್ಕರೆ ಸೇರಿದಂತೆ ಯಾವುದೇ ಥರದ ಧಾನ್ಯ ಆಹಾರ ಸಾಮಾಗ್ರಿಗಳನ್ನು ಡಿಪಾಸಿಟ್ ಇಟ್ಟು ಪಾಸ್ ಪುಸ್ತಕದಲ್ಲಿ ನೋಂದಾಯಿಸಬಹುದು.
ಮೊದಲ ಫುಡ್ ಗ್ರೇನ್ ಬ್ಯಾಂಕ್ ಶುರುವಾಗಿದ್ದು ಹೇಗೆ..?
ಬಡವರ ಹಸಿವನ್ನು ನೀಗಿಸಬೇಕು ಅನ್ನೋ ಉದ್ದೇಶದಿಂದ ಹೊಳೆದದ್ದೇ ಆಹಾರ ಧಾನ್ಯಗಳ ಬ್ಯಾಂಕ್ ಅನ್ನೋ ಕಾನ್ಸೆಪ್ಟ್. ವಿಶಾಲ್ ಭಾರತ್ ಸಂಸ್ಥಾನ ಸ್ಥಾಪಕ ಬನಾರಸ್ ಹಿಂದೂ ವಿವಿಯ ಪ್ರೊಫೆಸರ್ ರಾಜೀವ್ ಶ್ರೀವಾತ್ಸವ್ ಹೇಳೋ ಪ್ರಕಾರ ಬ್ಯಾಂಕ್ ಸ್ಥಾಪನೆಗೂ ಮುನ್ನ 9 ಯುವತಿಯರ ಟೀಂ ಮನೆ ಮನೆಗೂ ಭೇಟಿ ನೀಡ ಸಮೀಕ್ಷೆ ನಡೆಸಿದರು. ಸಮೀಕ್ಷೆಯಲ್ಲಿ ಅತ್ಯಂತ ಕಡು ಬಡವರಾದ ವಿಧವೆಯರು, ಗಂಡನನ್ನು ತೊರೆದವರು, ಪೋಷಕಾಂಶದಿಂದ ಬಳಲುತ್ತಿದ್ದವರು ಸಿಕ್ಕಿದ್ರು. 58 ಮಹಿಳೆಯರಿಗೆ ಆಹಾರ ಧಾನ್ಯಗಳ ತೀರಾ ಅವಶ್ಯಕತೆಯಿತ್ತು. ಇವರಿಗೆ ಬೆಂಬಲ ನೀಡುವುದಕ್ಕಾಗಿ ಪ್ರತಿಯೊಬ್ಬರಿಗೂ ತಿಂಗಳಿಗೆ 5 ಕೆಜಿ ಅಕ್ಕಿ, 1 ಕೆಜಿ ಹಿಟ್ಟು, 1 ಕೆಜಿ ಸಕ್ಕರೆ ನೀಡುವ ಜರೂರತ್ತು ಇತ್ತು. ಅಲ್ಲಿಂದ ಶುರುವಾಗಿದ್ದೇ ಆಹಾರ ಧಾನ್ಯಗಳ ಬ್ಯಾಂಕ್. ಹಿಂದಿಯಲ್ಲಿ ಹೇಳೋದಾದ್ರೆ ಅನಾಜ್ ಬ್ಯಾಂಕ್.
ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆಯುತ್ತಿದೆ ಧಾನ್ಯಗಳ ಬ್ಯಾಂಕ್..
ಬಡವರಿಗೆ, ಹಸಿದವರಿಗೆ ಧರ್ಮವಿಲ್ಲ. ಎಲ್ಲ ಧರ್ಮದಲ್ಲೂ ಹಸಿವದರು ಇದ್ದೇ ಇದ್ದಾರೆ. ವಿಶಾಲ್ ಭಾರತ್ ಆಹಾರ ಧಾನ್ಯಗಳ ಬ್ಯಾಂಕ್ ಧರ್ಮಗಳ ಎಲ್ಲೆ ಮೀರಿ ಬೆಳೆಯುತ್ತಿದೆ. ಸಂಸ್ಥೆಯ ವತಿಯಿಂದ ಪೇಠ್ ಭರಾವೋ ಅಭಿಯಾನ ಹಮ್ಮಿಕೊಂಡಾಗ 80 ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ನೂರಾರು ಟನ್ ಧಾನ್ಯವನ್ನು ಬ್ಯಾಂಕ್ಗೆ ನೀಡಿದ್ರು. ಇದೆಲ್ಲ ಧಾನ್ಯ 200 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಹೊಟ್ಟೆ ತುಂಬಿಸಿದೆ. ಪ್ರತಿ ತಿಂಗಳೂ ಕೂಡ ಕ್ವಿಂಟಾಲ್ ಗಟ್ಟಲೆ ಧಾನ್ಯ ಬ್ಯಾಂಕ್ ಗೆ ಹರಿದು ಬರತೊಡಗಿದೆ. ಶ್ರೀಮಂತರ ಬಳಿ ಹೆಚ್ಚಾಗಿ ಉಳಿದ ಧಾನ್ಯ ಬಡವರ ಹೊಟ್ಟೆ ತುಂಬಿಸುತ್ತಿದೆ.
ಯಾರೆಲ್ಲ ಅಕೌಂಟ್ ತೆರೆದಿದ್ದಾರೆ ಗೊತ್ತಾ?
ಆಹಾರ ಧಾನ್ಯಗಳ ಬ್ಯಾಂಕ್ ನಲ್ಲಿ ಖಾತೆ ತೆರೆದವರು ಪ್ರತಿ ತಿಂಗಳೂ ಧಾನ್ಯಗಳ ಡಿಪಾಸಿಟ್ ಇಡುತ್ತಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ರಿಂಗೂ ಖಾತೆ ತೆರೆಯಲು ವಿನಂತಿ ಹೋಗಿದ್ರೆ ನರೇಂದ್ರ ಮೋದಿಯವರಿಗೂ ಬ್ಯಾಂಕ್ ನಲ್ಲಿ ಖಾತೆ ತೆರೆದು ಆಹಾರ ಧಾನ್ಯ ನೀಡುವಂತೆ ವಿಶಾಲ್ ಭಾರತ್ ಸಂಸ್ಥಾನ್ ಮನವಿ ಪತ್ರ ಕಳುಹಿಸಿದೆ. ಮಾಜಿ ಕೇಂದ್ರ ಮಾಹಿತಿ ಆಯುಕ್ತ ಓಪಿ ಕೇಜ್ರಿವಾಲ್, ಮಾಜಿ ಪೆಟ್ರೋಲಿಯಂ ಖಾತೆ ಕಾರ್ಯದರ್ಶಿ ಸೌರಭ್ ಚಂದ್ರ ಸೇರಿದಂತೆ ಗಣ್ಯಾತಿ ಗಣ್ಯರು ಬ್ಯಾಂಕ್ ಖಾತೆಯನ್ನು ತೆರೆದು ಫುಡ್ ಗ್ರೇನ್ ನೀಡಿದ್ದಾರೆ. ಜನವರಿ ಅಂತ್ಯದ ಹೊತ್ತಿಗೆ ಬುಂದೇಲ್ ಖಂಡ್, ಮತ್ತು ಅಯೋಧ್ಯೆಯಲ್ಲೂ ಆಹಾರ ಧಾನ್ಯಗಳ ಬ್ಯಾಂಕ್ ತಲೆ ಎತ್ತಲಿದೆ.
ದೇಶದಲ್ಲಿ ಹಸಿವನ್ನು ನೀಗಿಸಿ ಎಲ್ಲರ ಹೊಟ್ಟೆ ತುಂಬಿಸುವುದೇ ನಮ್ಮ ಮೂಲ ಉದ್ದೇಶ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ತತ್ವಗಳನ್ನು ಅಳವಡಿಸಿಕೊಂಡು ಆಹಾರ ಧಾನ್ಯಗಳ ಬ್ಯಾಂಕ್ ಮುನ್ನಡೆಸುತ್ತಿದ್ದೇವೆ ಅಂತಾರೆ ಸಂಸ್ಥಾಪಕ ರಾಜೀವ್ ಶ್ರೀವಾತ್ಸವ್.