60 ರೂಪಾಯಿ ಸಂಬಳ ತರುತ್ತಿದ್ದವ ಈಗ ಕೋಟಿ ಒಡೆಯ
ಟೀಮ್ ವೈ.ಎಸ್. ಕನ್ನಡ
200 ಚದರ ಅಡಿ ಬಾಡಿಗೆ ಮನೆಯಲ್ಲಿ ವಾಸಿಸುತ್ತ, 60 ರೂಪಾಯಿ ಸಂಬಳದಲ್ಲಿ ಜೀವನ ನಡೆಸುತ್ತಿದ್ದ ರಾಜ್ ಕುಮಾರ್ ಗುಪ್ತಾ ಈಗ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಪ್ರಸಿದ್ಧ ಬ್ಯುಸಿನೆಸ್ ಮೆನ್. `ಬಡವ ಸಿರಿವಂತನಾದ’ ಕಥೆ ಬೇರೆಯವರಿಗೆ ಪ್ರೇರಣೆ ನೀಡುತ್ತದೆ. ಅವರ ಹಾರ್ಡ್ ವರ್ಕ್ ಇದಕ್ಕೆಲ್ಲ ಕಾರಣ. ಕಡಿಮೆ ವೇತನ ಬರುವಾಗಲೂ ಗುಪ್ತಾ ಒಳ್ಳೆಯ ಯೋಚನೆಗಳನ್ನು ಮಾಡ್ತಾ ಇದ್ದರು. ಬೆಳೆಯುತ್ತಿರುವ ಕುಟುಂಬ, ಒಂದು ಚಿಕ್ಕ ಕೋಣೆಯ ವಾಸದಲ್ಲಿಯೂ ಅವರು ಬೇರೆಯವರಿಗೆ ಒಳ್ಳೆಯದನ್ನು ಬಯಸುತ್ತಿದ್ದರು.
ಮುಕ್ತಿ ಗ್ರೂಪ್ ನ ಸಂಸ್ಥಾಪಕ ಅಧ್ಯಕ್ಷರು ರಾಜ್ ಕುಮಾರ್ ಗುಪ್ತಾ. 1984ರಲ್ಲಿ ರಾಜಸ್ತಾನದ ಹೂಗ್ಲಿ ಜಿಲ್ಲೆಯಲ್ಲಿ ಅವರು ಮೊದಲ ವಸತಿ ಅಪಾರ್ಟ್ ಮೆಂಟ್ ಲಾಂಚ್ ಮಾಡಿದರು. ಕೊಲ್ಕತ್ತಾ ಹೂಗ್ಲಿ ಬೆಲ್ಟ್ ನಲ್ಲಿ ಆಧುನಿಕ ವಾಸ್ತುಶಿಲ್ಪದ ಆಧಾರದ ಮೇಲೆ ನಿವೇಶನಗಳನ್ನು ಪರಿಚಯಿಸಿದ್ರು. ಬೆಂಗಾಲದಲ್ಲಿ ಮಲ್ಟಿಪ್ಲೆಕ್ಸ್ ಮನರಂಜನಾ ಕೇಂದ್ರ, ಅಂತರಾಷ್ಟ್ರೀಯ ಹೊಟೇಲ್, ಲೌಂಜ್, ಫೈನ್ ಡೈನ್ ರೆಸ್ಟೋರೆಂಟ್ ಸೇರಿದಂತೆ ಅನೇಕ ಕಟ್ಟಡಗಳ ಮೂಲಕ ಮುಕ್ತಿ ಗ್ರೂಪ್ ದೊಡ್ಡ ಹೆಸರು ಮಾಡಿದೆ. ಆದ್ರೆ ಇತರರಂತೆ ರಾಜ್ ಕುಮಾರ್ ಗುಪ್ತಾ ಹೆಸರು ಕೂಡ ಇಂಟರ್ ನೆಟ್ ನಲ್ಲಿ ಸುಲಭವಾಗಿ ಸಿಗುವುದಿಲ್ಲ.
ಸರಳ ಮತ್ತು ಸೌಮ್ಯ ಸ್ವಭಾವದ ಗುಪ್ತಾ, ಸದಾ ವ್ಯವಹಾರ ಹಾಗೂ ಚಾರಿಟಿ ಕೆಲಸದಲ್ಲಿ ಬ್ಯೂಸಿಯಾಗಿರುತ್ತಾರೆ. ನಿಮ್ಮ ಕಥೆ ವಿಶ್ವದ ಜನರಿಗೆ ಪ್ರೋತ್ಸಾಹ ನೀಡುತ್ತೆ ಅಂತಾ ಎರಡು ಬಾರಿ ಹೇಳಿದ ನಂತರ ಅವರು ಸಂದರ್ಶನ ನೀಡಲು ಒಪ್ಪಿಕೊಂಡರು. ಯಶಸ್ಸಿನ ಉತ್ತುಂಗಕ್ಕೇರಿದ್ದರೂ ಸಭ್ಯವಾಗಿಯೇ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.
ಆರಂಭ
ನಾನು ಪಂಜಾಬ್ ನ ಒಂದು ಬಡ ಕುಟುಂಬದಲ್ಲಿ ಜನಿಸಿದೆ. ಶಿಕ್ಷಣ ಪಡೆಯಲು ನಾನು ಬಹಳ ಕಷ್ಟ ಅನುಭವಿಸಬೇಕಾಯ್ತು. ನಂತರ ಕೋಲ್ಕತ್ತಾಕ್ಕೆ ಬಂದು ಶಿಕ್ಷಣ ಪಡೆದೆ. 1978ರಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ನನ್ನ ಸಂಬಳ 60 ರೂಪಾಯಿಯಾಗಿತ್ತು. ಕೆಲ ವರ್ಷಗಳ ನಂತರ ಹಿಂದೂಸ್ತಾನ್ ಮೋಟರ್ಸ್ ನಲ್ಲಿ ಕೆಲಸ ಸಿಕ್ಕಿತು. ನನ್ನ ಸಂಬಳ ಕೂಡ ಸ್ವಲ್ಪ ಜಾಸ್ತಿಯಾಗಿತ್ತು. ಅಲ್ಲಿ ನಾಲ್ಕೈದು ವರ್ಷ ಕೆಲಸ ಮಾಡಿದೆ. ಅಲ್ಲಿ ವ್ಯಾಪಾರದ ತಂತ್ರಗಳನ್ನು ತಿಳಿದುಕೊಂಡೆ. ನಂತರ ನಾನು ನನ್ನ ವ್ಯಾಪಾರ ಶುರುಮಾಡಿದೆ.
ಪರೋಪಕಾರದಿಂದ ಸಿಗ್ತು ಯಶಸ್ಸು
ನಾನು ಮೊದಲು 200 ಚದರ ಅಡಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಈಗ ಸ್ವತಂತ್ರವಾಗಿದ್ದೇನೆ. ನನ್ನ ಹಾಗೇ ಅದೃಷ್ಟ ಹೊಂದಿರದವರಿಗೆ ನೆರವಾಗಲು ನಾನು ಬಯಸುತ್ತೇನೆ. ಈ ಬಗ್ಗೆ ನನ್ನ ಸ್ನೇಹಿತರಿಗೆ ತಿಳಿಸಿದೆ. ನೀನೆ ಸಮಸ್ಯೆಯಲ್ಲಿರುವೆ. ನೀನು ಹೇಗೆ ನೆರವಾಗುತ್ತೀಯಾ ಎಂದು ಕೇಳಿದರು. ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಮಾತ್ರ ಸೇವೆಯಲ್ಲ. ಸಣ್ಣ ಪುಟ್ಟ ಸೇವೆಯನ್ನೂ ನಾವು ಮಾಡಬಹುದೆಂದು ಸ್ನೇಹಿತರಿಗೆ ತಿಳಿಸಿ ಹೇಳಿದೆ. ಹಾಗೇ ಸ್ಟೇಷನ್ ನಲ್ಲಿ ಸ್ವಚ್ಛ ನೀರು ಸಿಗುತ್ತಿರಲಿಲ್ಲ. ಅಲ್ಲಿ ಸ್ವಚ್ಚ ನೀರಿಡುವ ವ್ಯವಸ್ಥೆ ಮಾಡಿದೆವು. ನಂತರ ಉಚಿತ ಆಸ್ಪತ್ರೆ ಶುರು ಮಾಡಿದೆವು. ಇದರಿಂದ ಸ್ವಲ್ಪ ಆರ್ಥಿಕ ನಷ್ಟವುಂಟಾಯಿತು. ಆದರೂ ಕೆಲಸ ಬಿಡಲಿಲ್ಲ. ಹಿಂದುಸ್ತಾನ್ ಮೋಟರ್ಸ್ ಅಧ್ಯಕ್ಷ ಎನ್.ಕೆ. ಬಿರ್ಲಾ ನೇತೃತ್ವದಲ್ಲಿ ಆಸ್ಪತ್ರೆಯನ್ನು ಆರಂಭಿಸಲಾಯ್ತು.
ಸಮಾಜ ಸೇವೆಯಿಂದ ನಾನು ಬೆಳೆದೆ. ಹಾಗೂ ಉತ್ತಮ ವ್ಯಕ್ತಿಗಳ ಸಂಪರ್ಕ ನನಗಾಯಿತು. ನನ್ನ ಕಲ್ಪನೆಗಳಿಗೆ ರೂಪಕೊಡಲು ಅನೇಕರು ಮುಂದೆ ಬಂದರು. ನಾನು ಅವರ ಮುಂದೆ ಆಸ್ಪತ್ರೆ,ಅಪಾರ್ಟ್ ಮೆಂಟ್ , ಕಾಂಪ್ಲೆಕ್ಸ್ ಪ್ರಾಜೆಕ್ಟ್ ಗಳನ್ನು ಇಟ್ಟೆ. ಹೀಗೆ ಸಮಾಜ ಸೇವೆ ನನ್ನ ಅದೃಷ್ಟಕ್ಕೆ ಜೊತೆಯಾಯ್ತು.
ಮುಕ್ತಿ ಏರ್ವೇಸ್ : ಮುರಿದ ಕನಸು
ನಾನು ನನ್ನ ಜೀವನದಲ್ಲಿ ಪ್ರಸಿದ್ಧಿ ಹಾಗೂ ಸಾಧನೆಯನ್ನು ಬಯಸುವುದಿಲ್ಲ. ವಸತಿ ಕ್ಷೇತ್ರದಲ್ಲಿ ಅತ್ಯಂತ ಆಕರ್ಷಕ ಕೊಡುಗೆಗಳ ನಂತರ ಬೇರೆ ಏನನ್ನಾದರೂ ಮಾಡಬೇಕೆಂದು ಹವಣಿಸುತ್ತಿದ್ದೆ. ಆ ವೇಳೆ ಏಷ್ಯಾದಲ್ಲಿ ವಿಮಾನಯಾನ ವಲಯ ಆರಂಭವಾಗಿತ್ತು. ನಾನು ಇದರ ಭಾಗವಾಗಲು ಇಚ್ಛಿಸಿದೆ. ಇದಕ್ಕಾಗಿ ನಮ್ಮದೇ ಏರ್ ಲೈನ್ ಆರಂಭಿಸಲು ಯೋಚಿಸಿದೆ.
ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿತ್ತು. ಆದರೆ ಯೋಜನೆಯನ್ನು ಜಾರಿಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ನನಗೆ ಏರ್ ಲೈನ್ ಬಗ್ಗೆ ಏನೂ ತಿಳಿದಿರಲಿಲ್ಲ. ಕಚೇರಿಗೆ ಹೋಗಿ, ನಾನು ಏರ್ ಲೈನ್ ಆರಂಭಿಸಲು ಇಚ್ಛಿಸುತ್ತೇನೆ ಎಂದೆ. ಅನೇಕರು ಮುಂದೆ ಬಂದರು. 1994ರಲ್ಲಿ ಬಂಗಾಲದಲ್ಲಿ ತೆಗೆದುಕೊಂಡ ನಿರ್ಣಯ ತಪ್ಪಾಗಿತ್ತು. ಆದರೆ ಅದರ ಅರಿವು ನನಗಿರಲಿಲ್ಲ. ಕೆಲ ಎಂಜಿನಿಯರ್ ಹಾಗೂ ತಂತ್ರಜ್ಞರ ತಂಡ ರಚಿಸಿದೆವು.
ನನ್ನ ಪ್ರೋಜೆಕ್ಟ್ ರಿಪೋರ್ಟ್ ಜನವರಿ 1, 1995ರಂದು ಸಿದ್ಧವಾಯ್ತು. ಅಂದೇ ಟಾಟಾ ಸಿಂಗಾಪುರ್ ಏರ್ ಲೈನ್ ರಿಪೋರ್ಟ್ ಕೂಡ ಸಿದ್ಧವಾಗಿತ್ತು. ವಿಮಾನಯಾನ ಸಚಿವಾಲಯ ನನ್ನ ವರದಿಗೆ ಒಪ್ಪಿಗೆ ನೀಡಿತು. ಆದ್ರೆ ಟಾಟಾ ಸಿಂಗಾಪುರ್ ಏರ್ ಲೈನ್ ಗೆ ಒಪ್ಪಿಗೆ ಸಿಗಲಿಲ್ಲ.
ಪರವಾನಿಗೆ ಪಡೆಯಲು ನಾನು ದೆಹಲಿಗೆ ತೆರಳಿದೆ. ಹಾಗೇ ಅಲ್ಲಿ ಆಗಿನ ವಿಮಾನಯಾನ ಸಚಿವರಾಗಿದ್ದ ಗುಲಾಮ್ ಅಲಿ ಅಯ್ಯರ್ ಅವರನ್ನು ಭೇಟಿಯಾದೆ. ಜಂಟಿ ಕಾರ್ಯದರ್ಶಿ ಮಿಶ್ರಾ ಅವರನ್ನೂ ಭೇಟಿಯಾದೆ. ಅವರು ತಾಂತ್ರಿಕ ತರಬೇತಿ ಹಾಗೂ ಇತರ ಮಾನದಂಡಗಳಿಲ್ಲದ ವ್ಯಕ್ತಿಗೆ ಪರವಾನಿಗೆ ನೀಡುವುದಿಲ್ಲ ಎಂದರು. ನನ್ನ ಬಳಿ ನೀವು ಹೇಳಿದ ಯಾವುದೂ ಇಲ್ಲ. ಆದ್ರೆ ನಾನು ಉತ್ತಮ ವ್ಯಾಪಾರಿ. ಇದಕ್ಕೆ ನಾನು ಸೂಕ್ತ ವ್ಯವಸ್ಥೆ ಮಾಡುತ್ತೇನೆ ಎಂದೆ. ಆಗ ಅವರು ಪರವಾನಿಗೆ ನೀಡಲು ಒಪ್ಪಿಕೊಂಡರು.
ಇಂಟರ್ನ್ಯಾಷನಲ್ ವಿಮಾನ ತಯಾರಿಕಾ ಕಂಪನಿಗಳ ಜೊತೆ ನಾವು ಮಾತುಕತೆ ನಡೆಸಿದೆವು. ಇನ್ನೇನು ಏರ್ ಲೈನ್ ಶುರುಮಾಡಬೇಕು ಆ ವೇಳೆ ಹರ್ಷದ್ ಮೆಹ್ತಾ ಏರ್ ಲೈನ್ಸ್ ಹಗರಣ ದೇಶವ್ಯಾಪಿ ಸುದ್ದಿ ಮಾಡಿತ್ತು. ಇದು ಹೊಸ ಉದಾರವಾದಿ ಆರ್ಥಿಕ ವ್ಯವಸ್ಥೆಯನ್ನು ದಿಗ್ಭ್ರಮೆಗೊಳಿಸಿತು. ಹೂಡಿಕೆದಾರರು ಈ ಉದ್ಯಮಕ್ಕೆ ಕಾಲಿಡಲು ಮುಂದೆ ಬರಲಿಲ್ಲ. ಆಕಾಶಕ್ಕೆ ಹಾರುವ ಮೊದಲೇ ಮುಕ್ತಿ ಏರ್ ಲೈನ್ ನೆಲಕ್ಕಪ್ಪಳಿಸಿತು.
ವೈಫಲ್ಯ ಮತ್ತು ನಿರಾಶೆ
ವಿಮಾನಯಾನ ವಿಫಲವಾಗಿದ್ದರಿಂದ ನನ್ನ ಮನಸ್ಸು ಘಾಸಿಗೊಂಡಿತು. ಅದಕ್ಕಾಗಿ ಅನೇಕ ವರ್ಷಗಳನ್ನು ಹಾಳು ಮಾಡಿದೆ ಎನ್ನಿಸಿತು. ಅದೇ ಸಮಯವನ್ನು ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದರೆ ಈ ವೇಳೆ ನಮ್ಮ ಕಂಪನಿ ದೊಡ್ಡ ಹೆಸರು ಮಾಡಿರುತ್ತಿತ್ತು. ಹಿಂದೆ ನೋಡಿದಾಗ ನಮ್ಮ ಸಾಧನೆ ಖುಷಿ ನೀಡುತ್ತದೆ. ಹಾಗೇ ವಿಫಲತೆ ನಮಗೆ ಕಲಿಸುತ್ತದೆ. ಒಂದು ದಿನ ಮುಕ್ತಿ ಏರ್ ಲೈನ್ಸನ್ನು ವಾಸ್ತವಿಕತೆಯಾಗಿ ಬದಲಿಸ್ತೇನೆ. ಅಲ್ಲಿಯವರೆಗೆ ನಾನು ಸಾಧಿಸಿದ್ದರಲ್ಲಿಯೇ ಖುಷಿ ಕಾಣುತ್ತೇನೆ.
ಜೀವನದಲ್ಲಿ ಸಾಧಿಸಬೇಕೆನ್ನುವರಿಗೆ ಸಂದೇಶ
ಯಶಸ್ಸು ಶ್ಲಾಘನೀಯ. ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚಿಸಿ ನೀವು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ದೊಡ್ಡ ಚಿತ್ರದಲ್ಲಿ ಒಂದು ಭಾಗವಾಗಿ ನಿಮ್ಮನ್ನು ನೋಡಿ. ಮನಸ್ಸಿಟ್ಟು, ಹೃದಯಪೂರ್ವಕವಾಗಿ ಕೆಲಸ ಮಾಡಿ. ನಂತರ ನೋಡಿ ಜೀವನ ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು.
ಲೇಖಕರು: ರತನ್ ನೌಟಿಯಲ್
ಅನುವಾದಕರು: ರೂಪ ಹೆಗಡೆ