Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಸವಾಲಿಗೆ ಸವಾಲೆಸೆದ ದಿಟ್ಟ ಮಹಿಳೆ: ಬದುಕಿನ ಪಾಠಕ್ಕೆ ಮಾಲತಿ ಮಾದರಿ

ಜೀವನ್​​​​​​​

ಸವಾಲಿಗೆ ಸವಾಲೆಸೆದ ದಿಟ್ಟ ಮಹಿಳೆ:  ಬದುಕಿನ ಪಾಠಕ್ಕೆ ಮಾಲತಿ ಮಾದರಿ

Tuesday October 06, 2015 , 5 min Read

ಈಕೆಯ ಹತ್ತಿರ ಎಲ್ಲವೂ ಇದೆ. ಸಾಲು ಸಾಲು ಪ್ರಶಸ್ತಿಗಳ ಸರಮಾಲೆಯೇ ಇದೆ. ಶೋಕೇಸ್​​​ನಲ್ಲಿ ಪದಕಗಳನ್ನು ಜೋಡಿಸಲು ಸಾಧ್ಯವಾಗದಷ್ಟು ಸಾಧನೆಗಳನ್ನು ಮಾಡಿದ್ದಾರೆ. ಗೆಲುವು ಮಾತ್ರ ಇವರ ಗುರಿಯಾಗಿತ್ತು. ಸೋಲು ಅನ್ನೋದು ಇವರ ಹತ್ತಿರವೂ ಸುಳಿಯುತ್ತಿರಲಿಲ್ಲ. ಹೌದು ಕರ್ನಾಟಕದ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅಂತಹ ಸಾಧನೆ ಮಾಡಿದ ಅದ್ಭುತ ಮಹಿಳೆ. ವಿಕಾಲಾಂಗ ಚೇತನರ ಪಾಲಿಗೆ ಸ್ಪೂರ್ತಿಯ ಚಿಲುಮೆ.

ವ್ಹೀಲ್​​ಚೇರ್​​ನಲ್ಲಿ ಮಾಲತಿ ಹೊಳ್ಳ

ವ್ಹೀಲ್​​ಚೇರ್​​ನಲ್ಲಿ ಮಾಲತಿ ಹೊಳ್ಳ


ಮಾಲತಿ ಹೊಳ್ಳ ಹುಟ್ಟಿದ್ದು ಬಡ ಕುಟುಂಬದಲ್ಲಿ. ಉಡುಪಿ ಜಿಲ್ಲೆಯ ಕೋಟಾ ಗ್ರಾಮ ಮಾಲತಿಯ ಹುಟ್ಟೂರು. ಅಪ್ಪ ಬೆಂಗಳೂರಿನಲ್ಲಿದ್ದ ಉಡುಪಿ ಹೊಟೇಲ್ ಒಂದರಲ್ಲಿ ಅಡುಗೆ ಭಟ್ಟ. ಅಮ್ಮ ಹೌಸ್ ವೈಫ್. ಮಾಲತಿ ಹೊಳ್ಳ ನಾಲ್ಕು ಮಕ್ಕಳ ಪೈಕಿ ಚಿಕ್ಕವರು. ಆದ್ರೆ ವಿಧಿಯ ಆಟವೇ ಬೇರೆ ಇತ್ತು. ಮಾಲತಿ ಹೊಳ್ಳ ಎಲ್ಲಾ ಮಕ್ಕಳಂತೆ ಸಖತ್ ಚೂಟಿ. ಆದ್ರೆ ತನ್ನ ಮೊದಲ ಬರ್ತ್ ಡೇ ಆಚರಿಸಿಕೊಂಡ ಕೆಲವೇ ತಿಂಗಳುಗಳ ನಂತ್ರ ದೇವರು ಶಾಕ್ ಕೊಟ್ಟಿದ್ದ. ತನಗೆ ಗೊತ್ತೇ ಇಲ್ಲದ ವಯಸ್ಸಿನಲ್ಲಿ ಮಾಲತಿಯವರಿಗೆ ಜ್ವರ ಬಂದಿತ್ತು. ವಾರಗಟ್ಟಲೆ ಟ್ರೀಟ್​​ಮೆಂಟ್ ಮಾಡಿದ ಮೇಲೆ ಜ್ವರ ಇಳಿದಿತ್ತು. ಆದ್ರೆ ಬದುಕಿನ ಭವಿಷ್ಯ ಮಂಕಾಗಿ ಹೋಗಿತ್ತು. ಜ್ವರ ಬಿಡುವ ಹೊತ್ತಿಗೆ ಮಾಲತಿ ಹೊಳ್ಳ ಪ್ಯಾರಾಲೈಸ್​​ಗೆ ಒಳಗಾಗಿದ್ದರು. ಮಹಾಮಾರಿ ಪೊಲಿಯೊ ಮಾಲತಿಯವರ ದೇಹವನ್ನು ಆವರಿಸಿಕೊಂಡು ಬಿಟ್ಟಿತ್ತು. ದೇಹ ಮನಸ್ಸಿನ ಇಚ್ಛೆಯಂತೆ ಕೆಲಸ ಮಾಡೋದಿಕ್ಕೆ ಸಾಧ್ಯವಾಗದ ಮಟ್ಟಕ್ಕೆ ಹೋಗಿತ್ತು. ದೇಹವನ್ನು ಅಲ್ಲಾಡಿಸೋ ಶಕ್ತಿಯನ್ನು ಕೂಡ ಮಾಲತಿ ಹೊಳ್ಳ ಕಳೆದುಕೊಂಡಿದ್ದರು. ಇಷ್ಟೆಲ್ಲಾ ಆದಾಗ ಮಾಲತಿ ಜಸ್ಟ್​​​ 14 ತಿಂಗಳು

ಆದ್ರೆ ಮನೆಯಲ್ಲಿ ಮಾಲತಿ ಮುದ್ದಿನ ಮಗಳು. ಅಪ್ಪ ಅಮ್ಮ ಮಾಲತಿ ಹೊಳ್ಳಗೆ ಹೇಗಾದ್ರೂ ಮಾಡಿ ಚಿಕಿತ್ಸೆ ಕೊಡಿಸಲೇಬೇಕು ಅಂತ ಪಣ ತೊಟ್ಟಿದ್ದರು. ಮಗಳ ಭವಿಷ್ಯವನ್ನು ಉಜ್ವಲ ಮಾಡಬೇಕು ಅಂತ ಕನಸು ಕಂಡಿದ್ದರು. ಆದ್ರೆ ಆ ಬಡ ಕುಟುಂಬಕ್ಕೆ ಅಂದುಕೊಂಡಿದ್ದನ್ನು ಮಾಡೋದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದ್ರೆ ಛಲ ಮತ್ತು ಆಸೆಯನ್ನು ಬಿಟ್ಟಿರಲಿಲ್ಲ. ದೇವರ ಮೇಲೆ ಭಾರ ಹಾಕಿ ಮಾಲತಿ ಕುಟಂಬ ಈ ಮಗುವಿಗೆ ಚಿಕಿತ್ಸೆ ಕೊಡಲೇ ಬೇಕೆಂದು ನಿರ್ಧರಿಸಿದ್ರು. ಅಪ್ಪ ಹೊಟೇಲ್ ಒಂದರಲ್ಲಿ ಕೆಲಸ ಮಾಡ್ತಾ ಇದ್ದಿದ್ರಿಂದ ಊಟು ತಿಂಡಿಗೆ ಪ್ರಾಬ್ಲಂ ಆಗುತ್ತಾ ಇರಲಿಲ್ಲ. ಆದ್ರೆ ಇದ್ರಿಂದ ಬಂದ ಸಂಬಳ ಕೇವಲ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿತ್ತು. ಆದ್ರೆ ಮಾಲತಿಯ ದೇಹ ಸ್ಥಿತಿ ಮಾತ್ರ ಯಾವುದೇ ಚೇತರಿಕೆ ಕಂಡಿರಲಿಲ್ಲ.

image


ಸೋಲನ್ನೇ ಓಡಿಸಿದ ಹೊಳ್ಳ

ಮಗಳ ಈ ಸ್ಥಿತಿ ಮನೆಯಲ್ಲಿ ಸಾಕಷ್ಟು ಚಿಂತೆಯನ್ನು ಉಂಟು ಮಾಡಿತ್ತು. ಆದ್ರೆ ಕೈಯಿಂದ ಮಾಡೋದು ಮಾತ್ರ ಏನೂ ಉಳಿದಿರಲಿಲ್ಲ. ಅಮ್ಮನಿಗೆ ಮಾತ್ರ ಪ್ರತಿದಿನ ಕಣ್ಣೀರು ಹಾಕೋದನ್ನ ಹೇಗಾದ್ರೂ ನಿಲ್ಲಿಸಬೇಕು ಅನ್ನೋ ಛಲ ಹುಟ್ಟಿಕೊಂಡಿತ್ತು. ಆಸ್ಪತ್ರೆಗಳಲ್ಲಿ ಪೊಲಿಯೋ ಚಿಕಿತ್ಸೆ ಬಗ್ಗೆ ವಿಚಾರಿಸಿದ್ರು. ಕೊನೆಗೂ ವಿಕ್ಟೋರಿಯಾ ಹಾಸ್ಪಿಟಲ್​​ನಲ್ಲಿ ಮಾಲತಿ ಹೊಳ್ಳ ಚಿಕಿತ್ಸೆ ಆರಂಭವಾಯಿತು. ಆದ್ರೆ ಆ ಚಿಕಿತ್ಸೆಯ ವಿಧಾನವನ್ನು ಕೇಳಿದ್ರೆ ಮೈ ಜುಂ ಅನ್ನುತ್ತೆ. ಮನೆ ಬೆಂಗಳೂರಿನ ಒಂದು ಮೂಲೆಯಲ್ಲಿ ಇದ್ರೆ ಆಸ್ಪತ್ರೆ ಇದ್ದಿದ್ದು ಮತ್ತೊಂದು ಮೂಲೆಯಲ್ಲಿ. ಆದ್ರೆ ವಿಧಿ ಇರಲಿಲ್ಲ. ಟ್ರೀಟ್​ಮೆಂಟ್​​ ಮಾಡಲೇಬೇಕಿತ್ತು. ಹೀಗಾಗಿ ಅಮ್ಮ ಮಗಳನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಎದುರಿಸಿದ್ರು. ಬಿಎಂಟಿಸಿ ಬಸ್​​ನಲ್ಲಿ ಮಗಳನ್ನು ಎತ್ತಿಕೊಂಡು ಅಮ್ಮ ಆಸ್ಪತ್ರೆ ಬೇಟಿಯನ್ನು ಆರಂಭಿಸಿದ್ರು. ಆದ್ರೆ ಚಿಕಿತ್ಸೆ ಒಂದೆರಡು ದಿನಗಳದ್ದಲ್ಲ. ಬರೋಬ್ಬರಿ 2 ವರ್ಷಗಳ ಕಾಲ ನಡೆದಿತ್ತು. ಅದೂ ಕೂಡ ಎಲೆಕ್ಟ್ರಿಕ್ ಶಾಕ್ ಟ್ರೀಟ್​​ಮೆಂಟ್. ಚಿಕ್ಕ ಮಗು ಮಾಲತಿ ಶಾಕ್ ಟ್ರೀಟ್​​ಮೆಂಟ್​​ನ ನೋವು ಸಹಿಸಿಕೊಳ್ಳದೆ ಅಳುತ್ತಿದ್ದಳು. ಮಗಳ ನೋವು ತಡೆಯಲಾರದೆ ಅಮ್ಮ ಕೂಡ ಕಣ್ಣೀರು ಹಾಕುತ್ತಿದ್ದರು. ಆದ್ರೆ ಎರಡು ವರ್ಷಗಳ ಬಳಿಕ ಮಾಲತಿಯ ದೇಹದಲ್ಲಿ ಒಂಚೂರೂ ಬದಲಾವಣೆ ಆಗಿರಲಿಲ್ಲ. ದೇವರು ದೊಡ್ಡವನು ಅನ್ನೋದನ್ನ ಮಾತ್ರ ಮಾಲತಿಯ ಕುಟುಂಬ ನಂಬಿಕೊಂಡಿತ್ತು. ಅದೊಂದು ದಿನ ಮಾಲತಿಯ ದೇಹ ಪಾಸಿಟಿವ್ ಆಗಿ ಬದಲಾಗಿತ್ತು. ದೇಹ ತಕ್ಕಮಟ್ಟಿಗೆ ಮನಸ್ಸಿಗೆ ತಕ್ಕಂತೆ ವರ್ತನೆ ಮಾಡತೊಡಗಿತು. ಆದ್ರೆ ಕೇವಲ ಅಪ್ಪರ್ ಬಾಡಿ ಮಾತ್ರ ಸ್ಪಂಧಿಸುತ್ತಾ ಇತ್ತು. ಕೆಳ ಶರೀರ ನಿಶ್ಚಲವಾಗೇ ಇತ್ತು. ಕೆಳ ಶರೀರ ಎಷ್ಟರ ಮಟ್ಟಿಗೆ ವೀಕ್ ಆಗಿತ್ತು ಅಂದ್ರೆ ಮಾಲತಿಗೆ ನಡೆದಾಡೋದಿಕ್ಕೂ ಸಾಧ್ಯವಾಗುತ್ತಿರಲಿಲ್ಲ.

ದೇಹದಲ್ಲಿ ಕೊಂಚ ಶಕ್ತಿ ಮಾತ್ರ ಇದ್ರೂ ಮನಸ್ಸಿನಲ್ಲಿ ದೊಡ್ಡ ಕನಸಿಗೆ ಮಾಲತಿ ಶಕ್ತಿ ನೀಡ ತೊಡಗಿದ್ರು. ತನ್ನ ಬದುಕಿಗೆ ಸವಾಲೆಸೆದಿದ್ದ ಪೊಲಿಯೋಗೆ ಸವಾಲೆಸೆಯಲು ಸಿದ್ಧತೆ ಮಾಡಿಕೊಂಡ್ರು. ತಾನೊಬ್ಬ ವಿಕಲಾಂಗ ಹುಡುಗಿ ಅನ್ನೋದನ್ನ ಮರೆಯೋ ಸಾಹಸಕ್ಕೆ ಕೈ ಹಾಕಿದ್ರು. ಯಾರು ಏನೇ ಅಂದ್ರೂ ತಲೆ ಕೆಡಿಸಿಕೊಳ್ಳೋದಿಕ್ಕೆ ಹೋಗಲೇ ಇಲ್ಲ. ತನಗೆ ಹೇಗೆ ಬೇಕೋ ಹಾಗೆ ಬೆಳೆಯುವ ಸಾಹಸ ಮಾಡಿದ್ರು.

ಬದುಕಿದ್ರೆ ರಾಣಿಯಂತೆ ಬದುಕಬೇಕು

ಬಾಲ್ಯದಲ್ಲೇ ಕಷ್ಟ ಅಂದ್ರೆ ಏನು ಅನ್ನೋದನ್ನ ಇಂಚು ಇಂಚಾಗಿ ಅರಿತಿದ್ದ ಮಾಲತಿ ಹೊಳ್ಳ ಚಿಕ್ಕ ವಯಸ್ಸಿನಲ್ಲೇ ದೃಢ ನಿರ್ಧಾರ ಮಾಡಿದ್ದರು. ಬದುಕಿದ್ದರೆ ರಾಣಿಯಂತೆ ಬದುಕಬೇಕು ಅಂತ ನಿರ್ಧಾರ ಮಾಡಿದ್ರು. ಮಾಲತಿಯ ಈ ನಿರ್ಧಾರಕ್ಕೆ ಕುಟುಂಬದ ಬೆಂಬಲವೂ ಸಿಕ್ತು. ಅಪ್ಪ ಅಂತೂ ಮಗಳಿಗೆ ಬೆನ್ನೆಲುಬಾಗಿ ನಿಂತುಕೊಂಡು ಬಿಟ್ರು. “ ನನ್ನ ಸಮಸ್ಯೆಗಳನ್ನು ನಾನೇ ಮೆಟ್ಟಿನಿಲ್ಲುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಕುಟುಂಬದ ಸಹಾಯಹಸ್ತವೂ ಬೇಕಿತ್ತು. ಅಪ್ಪ ನನ್ನ ಹಿಂದೆ ಬೆನ್ನೆಲುಬಾಗಿ ನಿಂತ್ರು. ಅಮ್ಮ ಮತ್ತು ಕುಟುಂಬದ ಇತರ ಸದಸ್ಯರು ನನ್ನ ನೋವು ಮರೆಸಲು ಎಲ್ಲಾ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ರು. ಆವತ್ತೇ ನಾನು ನಿರ್ಧಾರ ಮಾಡಿ ಬಿಟ್ಟಿದೆ. ಇಷ್ಟು ದಿನ ಅನುಭವಿಸಿದ ನೋವು ಸಾಕು. ಭವಿಷ್ಯದಲ್ಲಿ ರಾಣಿಯಂತೆ ಬದುಕಬೇಕು”. ಆದ್ರೆ ಮಾಲತಿ ಅಂದುಕೊಂಡಷ್ಟು ಸುಲಭ ಯಾವುದೂ ಆಗಿರಲಿಲ್ಲ. ಅದಕ್ಕಾಗಿ ಹೆಚ್ಚು ಶ್ರಮಪಡಬೇಕಿತ್ತು. ನೀಲನಕ್ಷೆಯನ್ನು ರೂಪಿಸಿಕೊಳ್ಳಬೇಕಿತ್ತು. ಮಾಲತಿ ಅದನ್ನೂ ಮಾಡಿದ್ರು. ಮುಂದಿನ ಹೆಜ್ಜೆ ಯಾವುದು ಅನ್ನೋದನ್ನ ಕೂಡ ಹುಡುಕಿಕೊಂಡಿದ್ದರು. ಚೆನ್ನೈನ ಈಶ್ವರಿ ಪ್ರಸಾದ್ ವಿದ್ಯಾಲಯಕ್ಕೆ ಮಾಲತಿ ಸೇರ್ಪಡೆಗೊಂಡ್ರು. ಅಲ್ಲ ಮಾಲತಿಯಂತಹದ್ದೆ ಸಮಸ್ಯೆ ಎದುರಿಸ್ತಾ ಇದ್ದ ಅದೆಷ್ಟೊ ಮಕ್ಕಳು ಇದ್ರು. “ಈಶ್ವರಿ ಪ್ರಸಾದ್ ವಿದ್ಯಾಲಯದಲ್ಲಿ ನನ್ನಂತಹ ನೂರಾರು ಜನ ಇದ್ರು. ಅವ್ರೆಲ್ಲರೂ ಒಂದೊಂದು ಕನಸು ಕಟ್ಟಿಕೊಂಡಿದ್ದರು. ನನ್ನ ಸಮಸ್ಯೆಗೆ ಔಷಧಿಯ ಜೊತೆ ಆಟ ಪಾಠ ಎಲ್ಲವೂ ಒಂದೇ ಕಡೆ ಸಿಗುತ್ತಾ ಇತ್ತು. ಇದು ನನ್ನ ಕನಸುಗಳು ದೊಡ್ಡದಾಗಿ ಬೆಳೆಯೋದಿಕ್ಕೆ ಸಹಾಯ ಮಾಡಿತ್ತು. ಬದುಕಿನಲ್ಲಿ ಏನಾದ್ರೂ ಸಾಧಿಸಬೇಕು ಅನ್ನೊ ಛಲಕ್ಕೆ ಮತ್ತಷ್ಟು ಬಲ ಸಿಕ್ತು.” ಮಾಲತಿ ಮುಂದಿನ 10ರಿಂದ 15 ವರ್ಷಗಳನ್ನು ಇಲ್ಲೇ ಕಳೆದ್ರು. ತನ್ನ ಬದುಕಿಗೆ ಒಂದು ಹೊಸ ಆಯಾಮವನ್ನು ತಾನೇ ಕಟ್ಟಿಕೊಂಡ್ರು.

ಕ್ರೀಡೆ ನೋವು ಮರೆಯುವ ಔಷಧಿ

ಕನಸು ಕಟ್ಟಿಕೊಂಡ ಮೇಲೆ ಅದನ್ನು ನನಸು ಮಾಡಿಕೊಳ್ಳಬೇಕು. ಅದಕ್ಕಾಗಿ ಮಾಲತಿ ಹುಡಕಿಂಡ ಔಷಧಿ ಕ್ರೀಡೆ. ಅದ್ರಲ್ಲೂ ಡಿಸ್ಕಸ್ ಮತ್ತು ಶಾಟ್​​​​​ಪುಟ್​​​​ನಲ್ಲಿ ಮಾಲತಿ ಸಾಧನೆಗಳ ಮೇಲೆ ಸಾಧನೆ ಮಾಡಿದ್ರು. “ಕ್ರೀಡೆ ಅನ್ನೋ ನನ್ನ ಜೀವನಕ್ಕೆ ಹೊಸ ತಿರುವು ನೀಡ್ತು. ಸಾಮಾನ್ಯವಾಗಿ ನಮ್ಮಂತಹವರು ಈ ವಿಭಾಗದಲ್ಲಿ ಮಿಂಚಬೇಕು ಅಂದ್ರೆ ಅದು ಕೊಂಚ ಕಷ್ಟವೇ. ಅದ್ರೆ ಯಾವುದು ಕಷ್ಟವಿದೆಯೋ ಅದನ್ನೇ ಮಾಡಬೇಕು ಅನ್ನೋದು ನನ್ನ ಆಸೆ ಆಗಿತ್ತು. ಹೀಗಾಗಿ ನಾನು ಕ್ರೀಡೆಯನ್ನು ನನ್ನ ಬೆಳವಣಿಗಾಗಿ ಆಯ್ದುಕೊಂಡೆ” ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮಾಲತಿ. ಮಾಲತಿ ಹೊಳ್ಳ ಡಿಸ್ಕಸ್​ ಮತ್ತು ಶಾಟ್​​​ಪುಟ್​​​​ನಲ್ಲಿ ಪಂಟರ್ ಆಗಿ ಬೆಳೆದ್ರು. ಅದ್ಯಾವ ಮಟ್ಟಿಗೆ ಮಾಲತಿ ಕ್ರೀಡೆಯನ್ನು ತನ್ನ ವೃತ್ತಿಯಾಗಿ ಪರಿಗಣಿಸಿದ್ದರು ಅಂದ್ರೆ 450ಕ್ಕೂ ಅಧಿಕ ಮೆಡಲ್​​ಗಳು ಮಾಲತಿ ಹೊಳ್ಳರ ಶೋ ಕೇಸ್​​ನಲ್ಲಿ ರಾರಾಜಿಸುತ್ತಿವೆ. 4 ಬಾರಿ ಪ್ಯಾರಾಲಿಂಪಿಕ್ಸ್​​ನಲ್ಲಿ ಮಾಲತಿ ಭಾಗವಹಿಸಿದ್ದಾರೆ. ಅದೆಷ್ಟೋ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಿಂಚಿದ್ದಾರೆ. ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್​​ಗಳಲ್ಲಿ ಪಾಲ್ಗೊಂಡಿದ್ದಾರೆ. ಐವಾಸ್ ಕ್ರೀಡಾಕೂಟದಲ್ಲೂ ಮಾಲತಿ ಪದಕ ಗೆದ್ದು ದೇಶಕ್ಕೆ ಗೌರವ ತಂದುಕೊಟ್ಟಿದ್ದರು.

ಸರ್ಜರಿಗಳೊಂದಿಗೆ ಬದುಕು..!

ಮಾಲತಿ ಹೊಳ್ಳರ ಬದುಕಿನಲ್ಲಿ ಅದೆಷ್ಟು ಸರ್ಜರಿಗಳು ಆಗಿದೆ ಅಂದ್ರೆ ಒಬ್ಬ ಸಾಮಾನ್ಯ ಮನುಷ್ಯ ಇಷ್ಟು ಹೊತ್ತಿಗೆ ಆತ್ಮವಿಶ್ವಾಸಗಳೆಲ್ಲವನ್ನೂ ಕಳೆದುಕೊಳ್ಳುತ್ತಿದ್ದ. ಆದ್ರೆ ಮಾಲತಿ ಹೊಳ್ಳ ಅದಕ್ಕೆ ವಿಭಿನ್ನ ಕೆಟಗರಿಯವರು. ಅದೆಷ್ಟೇ ಕಷ್ಟ ಬಂದ್ರೂ, ಅದೆಂತಹದ್ದೇ ಸವಾಲಿದ್ರೂ ಅದನ್ನು ಮೆಟ್ಟಿ ನಿಲ್ಲಬೇಕು ಅಂತ ನಿರ್ಧಾರ ಮಾಡುವವರು. ಹೀಗಾಗಿ ಮಾಲತಿ ಸರಿಸುಮಾರು 32 ಸರ್ಜರಿಗಳನ್ನು ಮಾಡಿಕೊಂಡ್ರು ಅದ್ರಿಂದ ಜರ್ಜರಿತಗೊಂಡಿಲ್ಲ. ಸವಾಲಿಗೆ ಪ್ರತಿಸವಾಲನ್ನು ಒಡ್ಡಿಮುನ್ನುಗ್ಗಿದ್ದಾರೆ. “ 32 ಸರ್ಜರಿಗಳು ನನ್ನ ಪಾಲಿಗೆ ಹೊಸ ಸ್ಫೂರ್ತಿ ನೀಡಿವೆ. ನಾನು ಎಂದಿಗೂ ಯಾವುದಕ್ಕೂ ಹೆದರಿಲ್ಲ. ಅಂತಹುದ್ರಲ್ಲಿ ಸರ್ಜರಿಗೆ ಭಯ ಬಿದ್ದ ಉದಾಹರಣೆಯೇ ಇಲ್ಲ. ನನಗೆ ಪ್ರತೀ ದಿನವೂ ಸರ್ಜರಿ ಡೇ ಇದ್ದಂತೆ. ನಾನು ಗೆಲ್ಲಬೇಕು ಅಂತ ಮಾತ್ರ ಬಯಸುತ್ತೇನೆ. ಅದು ಹೇಗಾದ್ರು ಸರಿ.. ಏನೇ ಕಷ್ಟ ಇದ್ರೂ ಸರಿ. ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ನನಗಿದೆ.” ಅಂತ ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ತಬಲಾ ಮತ್ತು ವಯೋಲಿನ್​​ನಲ್ಲಿ ಆಸಕ್ತಿ

ಅಂದಹಾಗೇ ಮಾಲತಿ ಹೊಳ್ಳ ಕೇವಲ ಕ್ರೀಡೆಯಲ್ಲಿ ಮಾತ್ರ ಅಮೋಘ ಸಾಧನೆ ಮಾಡಿಲ್ಲ. ಮೆಂಡೋಲಿನ್​​ ಮತ್ತು ವಯೋಲಿನ್​ನಲ್ಲೂ ಮಾಲತಿ ಎಕ್ಸ್​​ಪರ್ಟ್. “ ಕೇವಲ ಒಂದು ವಿಷಯದಲ್ಲಿ ಪಳಗಿದ್ದರೆ ಒಂದೊಂದು ಬಾರಿ ಅದು ಬೇಜಾರು ತರಬಹುದು. ಹೀಗಾಗಿ ಮೆಂಡೋಲಿನ್​​ ಮತ್ತು ವಯೋಲಿನ್ ನುಡಿಸೋದನ್ನು ಕಲಿತೆ. ನನಗೆ ಯಾವುದು ಖುಷಿ ಕೊಡುತ್ತದೋ ಅದನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ತಬಲ ಮತ್ತು ವಯೋಲಿನ್ ನನಗೆ ಮಾನಸಿಕವಾಗಿ ನೆಮ್ಮದಿ ನೀಡುವ ಅದ್ಭುತ ಮೆಡಿಸಿನ್”. ಅನ್ನೋದು ಮಾಲತಿ ಅಭಿಮತ. ಚಿಕ್ಕವರಿದ್ದಾಗ ಡ್ಯಾನ್ಸ್​​ಗಳಲ್ಲೂ ತೊಡಗಿದ್ದ ಮಾಲತಿ ತನಗೆಷ್ಟು ಸಾಧ್ಯವೋ ಅಷ್ಟು ಬ್ಯೂಸಿ ಆಗಿ ಇರ್ತಾ ಇದ್ರು. ಇದು ಅವರಿಗಿದ್ದ ವಿಕಲತೆಯನ್ನೇ ಮರೆಸಿತ್ತು.

image


ಕೆರೆಯ ನೀರನ್ನು ಕೆರೆಗೆ ಚೆಲ್ಲಿ..

ಮಾಲತಿ ಹೊಳ್ಳ ತನ್ನ ಸಾಧನೆಯನ್ನು ತಾನೇ ಮಾಡಿ ತೋರಿಸಿದ್ದಾರೆ. ಮಾಲತಿ ಈಗ ಲೆಜೆಂಡ್. ಆದ್ರೆ ಇಲ್ಲಿಗೆ ಮಾಲತಿ ತನ್ನ ಕೆಲಸ ಮುಗೀತು ಅಂತ ಸುಮ್ಮನೆ ಕೂತಿಲ್ಲ. ತನ್ನಂತೆಯೇ ವೈಕಲ್ಯತೆ ಅನುಭವಿಸುತ್ತಿರುವವರ ಜೊತೆ ಕೈ ಜೋಡಿಸಿದ್ದಾರೆ. ಗೆಳೆಯರ ಜೊತೆ ಸೇರಿಕೊಂಡಯ ಮಾತೃ ಪೌಂಡೇಷನ್ ಅನ್ನೋ ಎನ್​​ಜಿಒ ಒಂದನ್ನು ಸ್ಥಾಪಿಸಿ ವಿಕಲ ಚೇತನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ವಿಕಲಚೇತನರು ಸಮಾಜದ ಮುಖ್ಯವಾಹಿನಿಯಲ್ಲಿರಬೇಕು ಅಂತ ಬಯಸುತ್ತಿದ್ದಾರೆ. ಮಾಲತಿ ತನ್ನ ಜೀವನದ ಕುರಿತು ಕಷ್ಟವನ್ನು ಮೆಟ್ಟಿ ನಿಂತ ಕುರಿತು “ಡಿಫರೆಂಟ್ ಸ್ಪಿರಿಟ್” ಅನ್ನೋ ಬಯೋಗ್ರಾಫಿಯನ್ನೂ ಬರೆದಿದ್ದಾರೆ.

ಮಾಲತಿ ಹೊಳ್ಳ ಸಾಧನೆ ನಿಜಕ್ಕೂ ಇನ್ನೊಬ್ಬರಿಗೆ ಸ್ಫೂರ್ತಿ. ಒಂದು ಚಿಕ್ಕ ಗಾಯಕ್ಕೆ ಹೆದರಿಕೊಂಡು ಅಥವಾ ಅದ್ಯಾವುದೋ ಅಂದು ಕೊಂಡ ಕೆಲಸ ಸರಿ ಹೋಗಿಲ್ಲ ಅಂತ ತಲೆ ಕೆಡಿಸಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುವ ಅದೆಷ್ಟೋ ಮಂದಿಗೆ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅತೀ ದೊಡ್ಡ ಮಾಡೆಲ್. ಮಾಲತಿ ಮತ್ತು ಅವ್ರ ಸಾಧನೆಗೆ ನಮ್ಮದೊಂದು ಸಲಾಂ.