ಬಜೆಟ್ 2021: ಆರ್ಥಿಕತೆಯ ಪುನಶ್ಚೇತನಕ್ಕೆ ಸರ್ಕಾರ ಸಕಲ ರೀತಿಯಿಂದಲೂ ಸಿದ್ಧ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಆರು ಪ್ರಮುಖ ಆಧಾರ ಸ್ಥಂಭಗಳ ಮೇಲೆ ನಿಂತಿರುವ ಭಾರತದ ಮೊದಲ ಕಾಗದ ರಹಿತ ಡಿಜಿಟಲ್ ಬಜೆಟ್ 2021 ಅನ್ನು ಮಂಡಿಸುತ್ತಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕತೆಯ ಪುನಶ್ಚೇತನಕ್ಕೆ ಸಕಲ ಸಿದ್ಧತೆ ನಡೆದಿದೆ ಎಂದರು.
“ಮುಂಜಾವಿನ ಕತ್ತಲಲ್ಲೂ ಬೆಳಕನ್ನು ಕಂಡು ಹಾಡುವ ಹಕ್ಕಿಯೆ ನಂಬಿಕೆ.”
ರಬೀಂದ್ರನಾಥ್ ಟಾಗೋರ್ ಅವರ ಪದ್ಯದ ಸಾಲುಗಳನ್ನು ಹೇಳಿ ಸೋಮವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾರತದ ಮೊದಲ ಕಾಗದ ರಹಿತ ಡಿಜಿಟಲ್ ಬಜೆಟ್ 2021 ಅನ್ನು ಮಂಡಿಸಿದರು. ಸಾಂಕ್ರಾಮಿಕ ಉಂಟು ಮಾಡಿರುವ ತೊಂದರೆಗಳನ್ನು ಸರಿಪಡಿಸಿಕೊಳ್ಳಬೇಕಾದ ಸಮಯದಲ್ಲಿ ಈ ಬಜೆಟ್ ತುಂಬಾ ಪ್ರಮುಖವಾಗಿದೆ.
“ಭಾರತದ ಆರ್ಥಿಕತೆಯಲ್ಲಿ ಕೇವಲ 3 ಬಾರಿ ಬಜೆಟ್ ಕುಗ್ಗಿದೆ. ಆದರೆ ಈ ಬಾರಿ ಕೊರೊನಾ ಹಾವಳಿಯಿಂದ ಎಲ್ಲ ದೇಶಗಳಂತೆ ನಮ್ಮಲ್ಲೂ ಆಗಿದೆ. ಆರ್ಥಿಕತೆಯ ಪುನಶ್ಚೇತನಕ್ಕಾಗಿ ಸರ್ಕಾರ ಎಲ್ಲ ರೀತಿಯಿಂದಲೂ ಸಿದ್ಧವಾಗಿದೆ ಎಂಬುದನ್ನು ನಾನು ಧೈರ್ಯದಿಂದ ಹೇಳಬಯಸುತ್ತೇನೆ,” ಎಂದಸೀತಾರಾಮನ್ ಹೇಳಿದರು.
ಆರು ಪ್ರಮುಖ ಅಂಶಗಳ ಮೇಲೆ 2021-22 ನೇ ಸಾಲಿನ ಬಜೆಟ್ ನಿಂತಿದೆ ಎಂದರು ವಿತ್ತ ಸಚಿವೆ. ಅವು
- ಆರೋಗ್ಯ ಮತ್ತು ಯೋಗಕ್ಷೇಮ
- ಮೂಲಸೌಕರ್ಯ
- ಅಂತರ್ಗತ ಅಭಿವೃದ್ಧಿ
- ಮಾನವ ಬಂಡವಾಳದ ಅಭಿವೃದ್ಧಿ
- ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ)
- ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ
ಆರ್ಥಿಕತೆಗೆ ವೇಗ ನೀಡಲು ಸಮಾಜದ ಎಲ್ಲ ರಂಗಗಳಿಗಾಗಿ ಪ್ರಸ್ತುತ ಪಡಿಸಿದ ಆತ್ಮನಿರ್ಭರ ಭಾರತ ಪ್ಯಾಕೆಜ್ ಮತ್ತು ಕೋವಿಡ್-19 ಸುಧಾರಣಾ ಪ್ಯಾಕೆಜ್ಗಳು “ಐದು ಸಣ್ಣ ಬಜೆಟ್” ನಂತಿದ್ದವು, ಈ ಬಜೆಟ್ ಆ ನಿಟ್ಟಿನಲ್ಲ ಮುಂದುವರಿದ ಪ್ರಯತ್ನವಾಗಿದೆ ಎಂದು ಸೀತಾರಾಮನ್ ಹೇಳಿದರು.
"ಇತಿಹಾಸದಲ್ಲಿ ಈ ಕ್ಷಣವು ಹೊಸ ಯುಗದ ಪ್ರಾರಂಭ, ಅಲ್ಲಿ ಭಾರತವು ಭರವಸೆಯ ಮತ್ತು ಭರವಸೆಯ ಭೂಮಿಯಾಗಿರಲು ಸಿದ್ಧವಾಗಿದೆ."
ಈ ಮುಂಜಾನೆ ವಿತ್ತ ಸಚಿವೆ ಎಂದಿನಂತೆ “ಬಹಿ ಖಾತಾ” ಬದಲು ಕೆಂಪು ಬಟ್ಟೆಯಲ್ಲಿ ಸುತ್ತಿದ್ದ ಮೇಡ್ ಇನ್ ಇಂಡಿಯಾ ಟ್ಯಾಬ್ ಹೊತ್ತು ಸಂಸತ್ತಿನೆಡೆ ಧಾವಿಸಿದರು.