Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ದಿ ರಿಯಲ್ ಹೀರೋ!

ವಿಶಾಂತ್​​​

ದಿ ರಿಯಲ್ ಹೀರೋ!

Sunday December 06, 2015 , 3 min Read

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ, ಕುಗ್ಗದೇ ಜಗ್ಗದೇ ಹಿಗ್ಗಿ ನಡೆ ಮುಂದೆ... ಈ ಪದ್ಯ ಓದುತ್ತಿದ್ದರೆ, ಎಷ್ಟು ಸ್ಫೂರ್ತಿ ತುಂಬುತ್ತದೆ ಅಲ್ವಾ..? ಈ ಯುವರ್ ಸ್ಟೋರಿ ಓದಿ, ನಿಮ್ಮಲ್ಲಿ ಅಷ್ಟೇ ಧೈರ್ಯ, ಛಲ ಮತ್ತು ಸ್ಫೂರ್ತಿ ತುಂಬುತ್ತದೆ.

image


ಹೌದು, ಇದು ಒಬ್ಬ ವ್ಯಕ್ತಿ ಝೀರೋದಿಂದ ಹೀರೋ ಆದ ಕಥೆ. ಕಡು ಬಡತನ, ದಡ್ಡ ಎಂಬ ಅವಮಾನಗಳನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು, ಛಲ ಬಿಡದ ತ್ರಿವಿಕ್ರಮನಂತೆ ಇಂದು ಕೋಟ್ಯಾಂತರ ಮಂದಿ ಕನಸು ಕಾಣುವಂತಹ ಸಾಧನೆ ಮಾಡಿದ್ದಾರೆ. ಹೌದು, ಈ ಬಾರಿಯ ಅತ್ಯುತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ ನಾಗಭೂಷಣಯ್ಯನವರ ಕಥೆಯಿದು.

image


ಇವರು ಬ್ಯಾಡನೂರು ನಾಗಭೂಷಣ

ಬ್ಯಾಡನೂರು ನಾಗಭೂಷಣ ಅಥವಾ ಎಸ್. ನಾಗಭೂಷಣಯ್ಯ. ಮೂಲತಃ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ಬ್ಯಾಡನೂರು ಗ್ರಾಮದವರು. ತಂದೆ ಶಿವಣ್ಣ, ತಾಯಿ ಪುಟ್ಟಮ್ಮ. 4 ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳ ತುಂಬು ಕುಟುಂಬ. ನಾಗಭೂಷಣ ಎರಡನೇ ಮಗ. ಬಾಲ್ಯದಿಂದಲೂ ಬಡತನದ ಬೇಗೆಯಲ್ಲಿ ಬೆಂದವರು. ಕಡುಬಡತನದಿಂದಾಗಿ ಹೊಟ್ಟೆ- ಬಟ್ಟೆಗೂ ನಡೆಯದ ದಿನಗಳನ್ನೂ ಕಂಡವರು. ಓದಿನಲ್ಲೂ ದಡ್ಡ ಎಂದು ಹೀಯಾಳಿಸಿಕೊಂಡವರು. ಸಂಕುಚಿತ ಮನೋಭಾವ, ಸಿನಿಕತನ, ಗೊತ್ತುಗುರಿಯಿಲ್ಲದ ನಡವಳಿಕೆ. 6ನೇ ತರಗತಿಯಲ್ಲೇ ಎರಡು ವರ್ಷ ನಪಾಸಾಗಿದ್ದ ನಾಗಭೂಷಣರವರು ಶಾಲೆಯನ್ನು ತೊರೆದು ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸಕ್ಕೆ ಸೇರಿದರು. ಸುಮಾರು 10 ವರ್ಷಗಳ ಕಾಲ ಅಲ್ಲಿ ದುಡಿದು ಮತ್ತೆ ವಿದ್ಯಾಭ್ಯಾಸ ಮುಂದುವರಿಸುವ ಪಣ ತೊಟ್ಟರು. ಓದಿನ ಜೊತೆಗೆ ದುಡಿಮೆ, ಮದುವೆ ಸಂಸಾರವೂ ಪ್ರಾರಂಭವಾಯ್ತು.

image


ಬಡತನ, ಅವಮಾನಗಳನ್ನೇ ಶಕ್ತಿಯಾಗಿ ಪರಿವರ್ತಿಸಿಕೊಂಡು, ಚೆನ್ನಾಗಿ ಓದಿದ ನಾಗಭೂಷಣ ಅವರಿಗೆ ಕ್ರಮೇಣ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿ ದೊರೆಯಿತು. ಇನ್ನೇನು ಬದುಕು ಬದಲಾಯಿತು, ಕೆಟ್ಟ ದಿನಗಳು ದೂರಾಗಿ ಒಳ್ಳೆಯ ದಿನಗಳು ಬಂದವು ಎಂದುಕೊಳ್ಳುತ್ತಿರುವಾಗಲೇ ಅವರಿಗೆ ಕೌಟುಂಬಿಕ ಸಮಸ್ಯೆಗಳಿಂದಾಗಿ ಅನಾರೋಗ್ಯ ಕಾಡಲಾರಂಭಿಸಿತು. ಅದರಿಂದಾಗಿ ಮಾನಸಿಕವಾಗಿ ಜರ್ಝರಿತರಾದ ನಾಗಭೂಷಣ, ಮರೆಗುಳಿ ಖಾಯಿಲೆಗೆ ತುತ್ತಾದರು. ಸುಮಾರು 2 ವರ್ಷಗಳ ಕಾಲ ಅದಕ್ಕೆ ಚಿಕಿತ್ಸೆ ಪಡೆದರು. ಶಿಕ್ಷಕ ವೃತ್ತಿಗೆ ನೆನಪಿನ ಶಕ್ತಿ ಅನಿವಾರ್ಯವಾದ ಕಾರಣ ನಿರಂತರ ಅಭ್ಯಾಸದಲ್ಲಿ ತೊಡಗಿದ ಅವರು ಬಿಎ, ಎಂಎ, ಬಿಎಡ್ ಪದವಿಗಳನ್ನು ಓದಿ ಪಾಸ್ ಮಾಡಿ, ವೃತ್ತಿಯಲ್ಲಿ ಕಾರ್ಯದಕ್ಷತೆ ಹೆಚ್ಚಿಸಿಕೊಂಡರು. ಶಿಕ್ಷಣ ಇಲಾಖೆಯ ಹೊಸ ಯೋಜನೆಗಳಿಗೆ ಮನ್ನಣೆ ಕೊಟ್ಟು ಅನುಷ್ಠಾನಗೊಳಿಸಲು ಪ್ರಯತ್ನಿಸಿ, ಹೆಚ್ಚುವರಿ ಕೆಲಸಗಳನ್ನು ಮಾಡಿದ್ದು, ಅಸೂಯಾಪರ ಇತರೆ ಶಿಕ್ಷಕರಿಂದ ಟೀಕೆ-ಟಿಪ್ಪಣಿಗಳಿಗೆ ಗುರಿಯಾಗಬೇಕಾಯ್ತು. ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಬರವಣಿಗೆಯನ್ನೂ ರೂಢಿಸಿಕೊಂಡರು. ಆದ್ರೆ ಬರವಣಿಗೆಯಿಂದಲೂ ಅವರು ಕಷ್ಟ - ನಿಷ್ಠುರ ಅನುಭವಿಸಬೇಕಾಗಿದ್ದು ವಿಪರ್ಯಾಸವೇ ಸರಿ.

ಸಾಧನೆಗಳು

10 ವರ್ಷಗಳ ಹಿನ್ನಡೆಯಿಂದ ಮೇಲೆದ್ದು ಬಂದು ವಿದ್ಯಾಭ್ಯಾಸದಲ್ಲಿ ತೊಡಗಿದ ನಾಗಭೂಷಣರು ಅಲ್ಪ ದುಡಿಮೆಯ ಹಣದಿಂದಲೇ ಕುಟುಂಬ ನಿರ್ವಹಣೆಯೊಂದಿಗೆ ವಿದ್ಯಾಭ್ಯಾಸದ ಖರ್ಚುಗಳನ್ನು ಸರಿದೂಗಿಸುತ್ತಿದ್ದರು. ಶಿಕ್ಷಣ ವೃತ್ತಿಗೆ ಸೇರಿ ಇಚ್ಛಾಶಕ್ತಿ, ಕ್ರಿಯಾಶೀಲತೆಗಳಿಂದ ಸೇವೆ ಸಲ್ಲಿಸಿದರು. ಹೀಗೆ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ದುಡಿದು ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಗಳಿಸಿ ಎಲ್ಲರ ನೆಚ್ಚಿನ ಶಿಕ್ಷಕ ಎನಿಸಿಕೊಂಡರು.

1991ರಲ್ಲಿ ತುಮಕೂರು ಜಿಲ್ಲಾ ಸಾಕ್ಷರತಾ ಆಂದೋಲನದಲ್ಲಿ ನಾಗಭೂಷಣರವರು ಸ್ವಯಂ ಸೇವಕನಾಗಿ ಪಾವಗಡ ತಾಲ್ಲೂಕಿನ 45 ಹಳ್ಳಿಗಳಲ್ಲಿ ನಿರ್ದೇಶಕನಾಗಿ ಕಲಾ ಜಾಥಾ ನಡೆಸಿದ್ದಾರೆ. 2000ರಲ್ಲಿ ಪ್ರಾರಂಭವಾದ ಸರ್ವಶಿಕ್ಷಣ ಅಭಿಯಾನದ ನಲಿ-ಕಲಿ ಶಿಕ್ಷಣ ಪದ್ಧತಿಯಲ್ಲಿ ತೊಡಗಿಸಿಕೊಂಡು ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ರು. ಮಾದರಿ ಗ್ರಾಮ ಹಾಗೂ ಜಲಾಶಯ ಯೋಜನೆಗಳನ್ನು ಮಾಡಿರುವ ಹೆಗ್ಗಳಿಕೆಯೂ ನಾಗಭೂಷಣರವರಿಗೆ ಸಲ್ಲುತ್ತದೆ. ಡಿಎಸ್‍ಇಆರ್‍ಟಿ ಯೋಜಿತ ಎರಡನೇ ತರಗತಿ ಪಠ್ಯವಸ್ತು ಪರಿಷ್ಕರಣೆಯಲ್ಲಿ ತೊಡಗಿದ, ಪಾವಗಡ ತಾಲ್ಲೂಕು ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯಕರ್ತನಾಗಿ ದುಡಿದರು ನಾಗಭೂಷಣರದು. ಪಠ್ಯಪುಸ್ತಕದಿಂದ ‘ಋ’ ಅಕ್ಷರ ತೆಗೆದುದನ್ನು ಪ್ರತಿಭಟಿಸಿ ನಾಗಭೂಷಣರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಲೇಖನ ಬರೆದ ಪರಿಣಾಮ ‘ಋ’ ಮರುಸೇರ್ಪಡೆಯಾಗಿಯ್ತು.

image


ಕ್ರಮೇಣ ಪ್ರಾಥಮಿಕ ಶಾಲೆಯಿಂದ ಅವರಿಗೆ ಪ್ರೌಢಶಾಲೆಗೆ ಬಡ್ತಿ ದೊರೆಯಿತು. ಪ್ರೌಢಶಾಲೆಯಲ್ಲಿ ಶಾಲಾ ಪರಿಸರದಲ್ಲಿ ಕಾಳಜಿ ವಹಿಸಿದ ಅವರು ವಿದ್ಯಾರ್ಥಿಗಳಲ್ಲಿ ಹಸಿರಿನ ಕುರಿತು ಅರಿವು ಮೂಡಿಸಿ ಗಿಡ- ಮರಗಳನ್ನು ಪೋಷಿಸಿದ್ದಾರೆ. ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಯನ್ನು ಅನುಕೂಲಕ್ಕೆ ತಕ್ಕಂತೆ ವಿಸ್ತರಿಸಿ ಶಾಲೆಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಅಲ್ಲದೇ ‘ಮಾನಸ ಗಂಗಾ’ ಎಂಬ ಗೋಡೆ ಪತ್ರಿಕೆಂiÀiನ್ನೂ ನಡೆಸಿದ ಖ್ಯಾತಿ ನಾಗಭೂಷಣರಿಗೆ ಸಲ್ಲುತ್ತೆ. ಪಠ್ಯೇತರ ಚಟುವಟಿಕೆಗಳನ್ನು 10 ವರ್ಷಗಳ ಕಾಲ ನಿಭಾಯಿಸಿದ ಅವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಫಲಿತಾಂಶವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾತ್ರಿ ಸಮಯದಲ್ಲಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ಕೊಟ್ಟು ಪೋಷಕರೊಂದಿಗೆ ಅವರ ಮಕ್ಕಳ ಓದಿನ ಕುರಿತು ಚರ್ಚಿಸುತ್ತಿದ್ದರು. ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ತಾವೇ ತಮ್ಮ ಸ್ವಂತ ಖರ್ಚಿನಿಂದ ಬಹುಮಾನ ಕೊಟ್ಟು ಪುರಸ್ಕರಿಸುತ್ತಿದ್ದರು ನಾಗಭೂಷಣ.

ನಾಗಭೂಷಣರು ರಚಿಸಿದ ಕೃತಿಗಳು

ಈ ಕೆಲಸಗಳ ಜೊತೆಗೆ ಬರವಣಿಗೆಯನನು ಪ್ರವೃತ್ತಿಯಾಗಿ ರೂಢಿಸಿಕೊಂಡ ನಾಗಭೂಷಣರವರು ಅಶಕ್ತರು (ಕಥಾ ಸಂಕಲನ), ಎಳೆಯರ ಗೆಳೆಯ (ಶಿಶು ಪ್ರಾಸಗಳು), ಆತ್ಮಗೀತೆ (ಕವನ ಸಂಕಲನ), ನಕಲಿಗಳ ಲೋಕದಲ್ಲಿ (ವಿನೋದ – ವಿಡಂಬಣೆ), ಎಳೆಯರ ಗೆಳೆಯ (ಮಕ್ಕಳ ಅಂಗಳ), ಬಣ್ಣದ ಲೋಕ (ಮಕ್ಕಳ ಕವನ ಸಂಕಲನ), ಏನೋ ಮಾಡಲು ಹೋಗಿ... (ವಿಡಂಬನೆಗಳು), ಬ್ಯಾಡನೂರು ದರ್ಶನ (ಸಂಶೋಧನೆ), ಜನಪದ ಮಕ್ಕಳ ಪ್ರಾಸಗಳು ಸೇರಿದಂತೆ 10 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಅವತಾರಿ ಎಂಬ ಕಾದಂಬರಿ ಪ್ರಕಟಣೆಗೆ ಸಿದ್ಧವಾಗಿದೆ.

ಪ್ರಶಸ್ತಿ – ಪುರಸ್ಕಾರಗಳು

ನಾಗಭೂಷಣರವರ ಈ ಅನನ್ಯ ಸೇವೆಗೆ ಹಲವು ಗೌರವಗಳು ಸಂದಿವೆ. 1997ರಲ್ಲಿ ತುಮಕೂರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 1998ರಲ್ಲಿ ಪಾವಗಡ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ತುಮಕೂರು ಯುವಜನ ಮೇಳ ಸನ್ಮಾನ, 2012ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ, ಶಿಕ್ಷಣ ಜ್ಞಾನ ಪತ್ರಿಕೆಯಿಂದ ಜ್ಞಾನಸಿಂಧು ಪ್ರಶಸ್ತಿ ಹಾಗೂ ವಾಸನ್ ಐ ಕೇರ್ ಅವರಿಂದ ಬೆಸ್ಟ್ ಟೀಚರ್ ಅವಾರ್ಡ್, 2015ರಲ್ಲಿ ಶಿಕ್ಷಕ ರಾಷ್ಟ್ರಪ್ರಶಸ್ತಿ ಗೌರವಗಳು ನಾಗಭೂಷಣ ಅವರಿಗೆ ದೊರೆತಿವೆ. ಹೀಗೆ ನಾಗಭೂಷಣ ಅವರಿಗೆ ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿಗಳು ಮೂರು ಗೌರವಗಳು ಸಂದಿರೋದೂ ವಿಶೇಷವೇ ಸರಿ.