Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ

ಟೀಮ್​ ವೈ.ಎಸ್​. ಕನ್ನಡ

5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ

Tuesday May 23, 2017 , 3 min Read

ಮೌಂಟ್ ಎವರೆಸ್ಟ್ ಬಗ್ಗೆ ಗೊತ್ತು. ಹಿಮಾಲಯದ ತುತ್ತ ತುದಿಯನ್ನು ತಲುಪಲು ಅದೆಷ್ಟು ಕಷ್ಟವಿದೆ ಅನ್ನುವ ಬಗ್ಗೆ ಅರಿವಿದೆ. ಜೀನದಲ್ಲಿ ಒಂದು ಸಾರಿ ಮೌಂಟ್ ಎವರೆಸ್ಟ್ ಏರುವುದೇ ದೊಡ್ಡ ಸಾಹಸ. ಆದ್ರೆ ಈಗ ನಾವು ಹೇಳುವ ಕಥೆಯೇ ವಿಭಿನ್ನ. ಕೇವಲ 5 ದಿನಗಳ ಅಂತರದಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದವಳ ಕಥೆ ಇದು. ಭಾರತೀಯ ಮಹಿಳೆಯೊಬ್ಬಳು ಹೊಸ ದಾಖಲೆ ಮಾಡಿದ ಸಂಭ್ರಮವಿದು. ವಿಶ್ವದ ಅತೀ ಎತ್ತರವನ್ನು ಒಂದೇ ಸೀಸನ್​ನಲ್ಲಿ ಎರಡು ಬಾರಿ ಏರಿದ ಹೊಸ ದಾಖಲೆ ಇದು.

image


ಅಂಶು ಜಂಸೆನ್ಪ, ಮೌಂಟ್ ಎವರೆಸ್ಟ್ ಅನ್ನು 5 ದಿನಗಳ ಅಂತರದಲ್ಲಿ 2 ಬಾರಿ ಏರಿ, ದಾಖಲೆ ಬರೆದ ವೀರ ವನಿತೆ. 37 ವರ್ಷದ ಅಂಶು ಅರುಣಾಚಲ ಪ್ರದೇಶದ ಬೊಮ್ಡಿಲಾ ಪ್ರದೇಶದವರು. ಈಕೆ 8,848 ಮೀಟರ್ ಅಥವಾ 29028 ಫೀಟ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಅನ್ನು ಮೇ 16ರಂದು ಮೊದಲ ಬಾರಿಗೆ ಏರಿದ್ದಳು. ಆದ್ರೆ ಸಾಧನೆಯ ಕನಸು ಮತ್ತೆ ದೊಡ್ಡದಾಗಿತ್ತು. ಹೀಗಾಗಿ ಕೊಂಚ ವಿರಾಮದ ನಂತರ ಮತ್ತೆ ಮೌಂಟ್ ಎವರೆಸ್ಟ್ ಏರುವ ಸಾಹಸಕ್ಕೆ ಕೈ ಹಾಕಿದಳು. ಮೇ 19ರಂದು ಮೌಂಟ್ ಎವರೆಸ್ಟ್ ಅನ್ನು ಮತ್ತೊಮ್ಮೆ ಏರುವ ಸಾಹಸಕ್ಕೆ ಮುಂದಾದಳು. ನೇಪಾಳಿ ಪರ್ವತಾರೋಹಿ ಫ್ಯೂರಿ ಶೆರ್ಪಾ ಜೊತೆ ಸೇರಿಕೊಂಡು ಸಾಹಸ ಕಾರ್ಯ ಆರಂಭಿಸಿದಳು. ಅಷ್ಟೇ ಮೇ 21ರ ಬೆಳಗ್ಗೆ 8 ಗಂಟೆಗೆ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿ ತಲುಪಿ ದಾಖಲೆ ಬರೆದಳು. ಮಹಿಳೆಯೊಬ್ಬಳು ಕೇವಲ 5 ದಿನದ ಅಂತರದಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು 2 ಬಾರಿ ಏರಿದ್ದು ಇದೇ ಮೊದಲಾಯಿತು.

ಅಂದಹಾಗೇ, ಅಂಶು ಎರಡು ಮಕ್ಕಳ ತಾಯಿ ಅನ್ನುವುದು ಮತ್ತೊಂದು ವಿಶೇಷ. ಸಾಹಸ ಕೈಗೊಳ್ಳುವ ಮುನ್ನ ಅಂಶು ಬೌದ್ಧ ಗುರು ದಲೈಲಾಮ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದರು. ಅಂಶು ಇದೇ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಹತ್ತಿಲ್ಲ. ಈ ಬಾರಿಯ ಸಾಹಸವೂ ಸೇರಿದಂತೆ ಒಟ್ಟು 5 ಬಾರಿ ಅಂಶು ಜಗತ್ತಿನ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಾಖಲೆ ಬರೆದಿದ್ದಾರೆ. ಆಂಶು ಈಶಾನ್ಯ ರಾಜ್ಯಗಳ ಪ್ರವಾಸೋದ್ಯಮದ ರಾಯಭಾರಿಯೂ ಆಗಿದ್ದಾರೆ ಅನ್ನುವುದು ವಿಶೇಷ.

ಇದನ್ನು ಓದಿ: ಮೆಕ್ ಡೊನಾಲ್ಡ್ಸ್​​, ಕೆಎಫ್​ಸಿಗೂ ಭಯ ಹುಟ್ಟಿಸಿದೆ 'ಪತಂಜಲಿ'..! 

ಈ ಹಿಂದೆ ಒಂದೇ ಸೀಸನ್​​ನಲ್ಲಿ ಮೌಂಟ್ ಎವರೆಸ್ಟ್ ಅನ್ನು 2 ಬಾರಿ ಏರಿದ ಗಿನ್ನೆಸ್ ದಾಖಲೆ ನೇಪಾಳಿ ಪರ್ವತಾರೋಹಿ, ಚುರಿಮ್ ಶೆರ್ಪಾ ಹೆಸರಿನಲ್ಲಿತ್ತು. ಚುರಿಮ್ 2012ರಲ್ಲಿ ಈ ಸಾಧನೆ ಮಾಡಿದ್ದರು. ಆದ್ರೆ ದಿನಗಳ ಲೆಕ್ಕಾಚಾರದಲ್ಲಿ ಹೆಚ್ಚು ಅಂತರವಿತ್ತು. ಆದ್ರೆ ಈಗ ಅಂಶು ಕೇವಲ 5 ದಿನಗಳ ಅಂತರದಲ್ಲಿ ಈ ಸಾಧನೆ ಮಾಡಿದ್ದಾರೆ.

image


ಈ ವರ್ಷ ಸುಮಾರು 120ಕ್ಕೂ ಅಧಿಕ ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಪ್ರಯತ್ನ ಮಾಡಿದ್ದರು. ಆದ್ರೆ ಅತೀಯಾದ ವೇಗದಿಂದ ಬೀಸಿದ ಗಾಳಿ, ಹಿಮಪಾತ ಮತ್ತು ಶೀತ ವಾತಾವರಣ ಪರ್ವತಾರೋಹಿಗಳ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಕಳೆದ ವಾರ ನೇಪಾಳಿ ಪರ್ವತಾರೋಹಿ ಮಹಿಳೆ ಲಕ್ಪಾ ಶೆರ್ಪಾ 8ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಅವರದ್ದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.

ಈ ಮಧ್ಯೆ ಪರ್ವತಾರೋಹಿಗಳ ಸಾಧನೆಗಳು ಮತ್ತು ಪದೇ ಪದೇ ಮೌಂಟ್ ಎವರೆಸ್ಟ್ ಅನ್ನು ಏರುತ್ತಿರುವ ಬಗ್ಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಪರ್ವತಾರೋಹಿಗಳು ಗಾಳಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಇದು ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ವೈಯಕ್ತಿಕ ಸಾಧನೆಯ ಉದ್ದೇಶದಿಂದ ಪ್ರತೀ ವರ್ಷ ಸುಮಾರು 700ಕ್ಕೂ ಅಧಿಕ ಜನರು ಮೌಂಟ್ ಎವರೆಸ್ಟ್ ಶಿಖರ ಏರುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎವರೆಸ್ಟ್ ಏರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸರ ಹಾನಿಯೂ ಆಗುತ್ತಿದೆ. ಈ ಮಧ್ಯೆ ಪ್ರತಿಕೂಲ ವಾತಾವರಣದಿಂದಾಗಿ ಹಲವರು ಎವರೆಸ್ಟ್ ಏರುವ ಪ್ರಯತ್ನದಲ್ಲಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ವರ್ಷವೂ ಇಬ್ಬರು ಪ್ರಾಣ ಕಳೆದುಕೊಂಡ ಬಗ್ಗೆ ವರದಿ ಆಗಿದೆ. ಸ್ವಿಟ್ಜರ್​ಲೆಂಡ್​ನ ಖ್ಯಾತ ಪರ್ವತಾರೋಹಿ ಉಯೆಲಿ ಸ್ಟೆಕ್ ಈ ಬಾರಿ ಮೌಂಟ್ ಎವರೆಸ್ಟ್ ಏರುವ ಸಮಯದಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳದ ಕಾರಣದಿಂದಾಗಿ ಪ್ರಾಣ ಕಳೆದುಕೊಂಡಿದ್ದರು.

ಎವರೆಸ್ಟ್ ಏರುವ ಸಾಧನೆಯೇ ಜೀವಿತಾವಧಿಯ ಶ್ರೇಷ್ಟ ಸಾಧನೆ ಅನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಅಂಶು ಮಾಡಿರುವ ಸಾಹಸ ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳುವಂತಹದ್ದೇ.

ಇದನ್ನು ಓದಿ:

1. ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ

2. ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!

3. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ