ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ
ಟೀಮ್ ವೈ.ಎಸ್.ಕನ್ನಡ
ಕರ್ಸನ್ಭಾಯಿ ಪಟೇಲ್ ತಮ್ಮ ಪುತ್ರಿ ನಿರ್ಮಾಳನ್ನು ಕಾರು ಅಪಘಾತದಲ್ಲಿ ಕಳೆದುಕೊಂಡ್ರು. ತಮ್ಮ ಮಗಳಂತೇ ಪ್ರೀತಿಸುತ್ತಿದ್ದ ಹೊಚ್ಚ ಹೊಸ ಬ್ರಾಂಡ್ಗೆ ಪುತ್ರಿ ನಿರ್ಮಾಳ ಹೆಸರನ್ನೇ ಇಡಲು ನಿರ್ಧರಿಸಿದ್ರು. ಇವತ್ತು ''ಸಬ್ಕಿ ಪಸಂದ್ ನಿರ್ಮಾ'' ಅನ್ನೋ ಜಾಹೀರಾತನ್ನು ಎಲ್ಲರೂ ಗುನುಗ್ತಾರೆ. ಹಿಂದೊಮ್ಮೆ ಕರ್ಸನ್ಭಾಯಿ ಮನೆ ಮನೆಗೆ ಹೋಗಿ ಮಾರುತ್ತಿದ್ದ ಉತ್ಪನ್ನ ಈಗ ಸಾಬೂನು ಮಾರುಕಟ್ಟೆಯಲ್ಲಿ ಶೇ.20ರಷ್ಟು ಪಾಲು ಹೊಂದಿದೆ. ಡಿಟರ್ಜೆಂಟ್ ಮಾರುಕಟ್ಟೆಯಲ್ಲೂ ಶೇ.35ರಷ್ಟು ಪಾಲು ನಿರ್ಮಾ ಬ್ರಾಂಡ್ನದ್ದು.
ಕರ್ಸನ್ಭಾಯಿ 1969ರಲ್ಲಿ ನಿರ್ಮಾ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ರು. ಆಗ ಸೋಪ್ ಮತ್ತು ಡಿಟರ್ಜೆಂಟ್ ಮಾರ್ಕೆಟ್ನಲ್ಲಿ ಹೆಚ್ಚು ಕಂಪನಿಗಳೇನೂ ಇರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳೇ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದವು. ಬಡವರು ಹಾಗೂ ಮಧ್ಯಮವರ್ಗದವರಿಗೆ ಸಾಬೂನು ಮತ್ತು ಡಿಟರ್ಜೆಂಟ್ ಕೈಗೆಟುಕದ ವಸ್ತುವಾಗಿತ್ತು. ಅಹಮದಾಬಾದ್ನ ಖೋಕ್ರಾ ಬಳಿ ಇರುವ ತಮ್ಮ ಮನೆಯ ಒಂದು ಬದಿಯಲ್ಲಿ ಕರ್ಸನ್ಭಾಯಿ ಡಿಟರ್ಜೆಂಟ್ ಪೌಡರ್ ತಯಾರಿಸಲು ಆರಂಭಿಸಿದ್ರು. ಅದನ್ನು ಮನೆಮನೆಗೆ ಹೋಗಿ 3 ರೂಪಾಯಿಗೆ ಪ್ರತಿ ಕೆಜಿಯಂತೆ ಮಾರಾಟ ಮಾಡ್ತಾ ಇದ್ರು. ಆಗ ಉಳಿದ ಬ್ರಾಂಡ್ಗಳ ಬೆಲೆ ಕೆಜಿಗೆ 13 ರೂಪಾಯಿ ಇತ್ತು.
80ರ ದಶಕದಲ್ಲಿ ಸೇಲ್ಸ್ ಇಲ್ಲದೆ ನಿರ್ಮಾ ಕಂಗಾಲಾಗಿತ್ತು. ಆಗ ಬುದ್ಧಿವಂತಿಕೆಯಿಂದ ಬಾಕಿ ವಸೂಲಿ ಮಾಡಿದವರು ಇದೇ ಕರ್ಸನ್ಭಾಯಿ. ಅಷ್ಟೇ ಅಲ್ಲ ತಮ್ಮ ಪುತ್ರಿ ನಿರ್ಮಾಳನ್ನೇ ಹಾಕಿಕೊಂಡು ಜಾಹೀರಾತೊಂದನ್ನು ನಿರ್ಮಾಣ ಮಾಡಿದ್ರು. ಕರ್ಸನ್ಭಾಯಿ ಅವರ ಐಡಿಯಾ ಮ್ಯಾಜಿಕ್ ಮಾಡಿತ್ತು. ನಿರ್ಮಾ ಬ್ರಾಂಡ್ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಯ್ತು. ಆ ವರ್ಷ ನಿರ್ಮಾದ ಮಾರಾಟ ಎಷ್ಟಿತ್ತೆಂದ್ರೆ ಅತಿ ಹೆಚ್ಚು ಮಾರಾಟವಾದ ಡಿಟರ್ಜೆಂಟ್ ಎಂಬ ಖ್ಯಾತಿಯನ್ನೂ ಗಳಿಸಿತ್ತು. ಎದುರಾಳಿ ಬ್ರಾಂಡ್ ಸರ್ಫ್ ಆಫ್ ಹಿಂದುಸ್ಥಾನ್ ಯುನಿಲಿವರ್ ಅನ್ನು ಹಿಂದಿಕ್ಕಿತ್ತು.
ಈ ವರ್ಷ ಕರ್ಸನ್ಭಾಯಿ LafargeHolcimನ ಸಿಮೆಂಟ್ ಬ್ಯುಸಿನೆಸ್ ಅನ್ನು 1.4 ಬಿಲಿಯನ್ಗೆ ಕೊಂಡುಕೊಳ್ಳುವ ಮೂಲಕ ಮತ್ತೊಮ್ಮೆ ತಾವೊಬ್ಬ ಶ್ರೇಷ್ಠ ಉದ್ಯಮಿ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಈ ಒಪ್ಪಂದದಿಂದ ರಾಜಸ್ತಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಾ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲಿದೆ. ಉದ್ಯಮಿ ಅನ್ನೋ ಪದಕ್ಕೆ ಮತ್ತೊಂದು ಅರ್ಥ ಕರ್ಸನ್ಭಾಯಿ ಅಂದ್ರೆ ತಪ್ಪಿಲ್ಲ. ಮಾಧ್ಯಮದೆದುರು ಹೆಚ್ಚು ಪ್ರಚಾರ ಪಡೆಯಲು ಇಚ್ಛಿಸದ ನಾಚಿಕೆ ಸ್ವಭಾವದ ವ್ಯಕ್ತಿ ಅವರು. ದೇಶದ ಅಭಿವೃದ್ಧಿ ಬಗೆಗೂ ವಿಶಾಲ ದೃಷ್ಟಿಕೋನ ಹೊಂದಿದ್ದಾರೆ. 1995ರಲ್ಲಿ ನಿರ್ಮಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 2003ರಲ್ಲಿ ನಿರ್ಮಾ ಯೂನಿವರ್ಸಿಟಿ ಆಫ್ ಸೈನ್ಸ್ & ಟೆಕ್ನಾಲಜಿ, ಮತ್ತು ನಿರ್ಮಾ ಎಜುಕೇಶನ್ & ರಿಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. ಭಾರತದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ತರಬೇತಿ ನೀಡಲು 2004ರಲ್ಲಿ ನಿರ್ಮಾ ಲ್ಯಾಬ್ಸ್ ಎಜುಕೇಶನ್ ಪ್ರಾಜೆಕ್ಟ್ ಅನ್ನು ಕೂಡ ಆರಂಭಿಸಿದ್ದಾರೆ. 2010ರಲ್ಲಿ ಕರ್ಸನ್ಭಾಯಿ ಪಟೇಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ..