160 ಕಿ.ಮೀ.ನದಿಗೆ ಮರುಜೀವ ನೀಡಿದ ಸಂತ - ಹಲವು ಹಳ್ಳಿಗಳ ಪಾಲಿಗೆ ಈತ ಆಧುನಿಕ ಭಗೀರಥ
ಟೀಮ್ ವೈ.ಎಸ್. ಕನ್ನಡ
ಸಾಧು, ಸಂತರು, ಸನ್ಯಾಸಿಗಳು ಎಂದರೆ ಊರೂರು ಅಲೆಯುತ್ತಾ, ಕಾಡು ಮೇಡುಗಳಲ್ಲಿ ಜಪ- ತಪ, ಧ್ಯಾನ ಮಾಡುತ್ತಾ ಕಾಲ ಕಳೆಯುತ್ತಾರೆ. ಅಥವಾ ಮಠ- ಮಾನ್ಯಗಳನ್ನು ಕಟ್ಟಿಕೊಂಡು ಧರ್ಮಪ್ರಚಾರ ಮಾಡುತ್ತಾರೆ. ಜೊತೆಗೆ ಶಾಲೆ- ಕಾಲೇಜುಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ. ಆದರೆ ಇಲ್ಲೊಬ್ಬ ಸಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪುರಾಣದಲ್ಲಿ ಭಗೀರಥ ಮಹರ್ಷಿ ಗಂಗೆಯನ್ನು ಭೂಮಿಗೆ ಕರೆತಂದಂತೆ, ಮಾಲಿನ್ಯದಿಂದಾಗಿ ವಿನಾಶದ ಅಂಚಿನಲ್ಲಿದ್ದ ನದಿಯೊಂದಕ್ಕೆ ಮರುಜೀವ ನೀಡಿದ್ದಾರೆ. ಆ ಮೂಲಕ ಸಕಲ ಜಲಾಚರಗಳು ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾತ್ರವಲ್ಲ ಜೀವಜಲ, ಕೃಷಿಗಾಗಿ ಆ ನದಿಯನ್ನೇ ಅವಲಂಬಿಸಿದ್ದ ಲಕ್ಷಾಂತರ ಜನರಿಗೂ ಹೊಸ ಜೀವನ ನೀಡಿದ್ದಾರೆ.
ಕಾಲೀಬೇನ್ ಪೌರಾಣಿಕ ಹಿನ್ನೆಲೆ
ಕಾಲೀಬೇನ್ ಉಪನದಿಯು ಪಂಜಾಬ್ನ ಹೋಷಿಯಾರ್ಪುರ ಜಿಲ್ಲೆಯ ಧನುವಾ ಗ್ರಾಮದಲ್ಲಿ ಹುಟ್ಟುತ್ತದೆ. ಅಲ್ಲಿಂದ ಕಪೂರ್ತಲಾ, ಜಲಂಧರ್, ಸುಲ್ತಾನ್ಪುರ್ ಲೋಧಿ ನಗರಗಳ ಮೂಲಕ ಸಟ್ಲೆಜ್ ಹಾಗೂ ಬಿಯಾಸ್ ನದಿಗಳನ್ನು ಸೇರುತ್ತದೆ. ಹೀಗೆ 160 ಕಿಲೋಮೀಟರ್ ಸಾಗುವ ಈ ಕಾಲೀಬೇನ್ಗೆ ಛೋಟಿ ಬೇನ್, ಓಧ್ರಾ ಹಾಗೂ ಮುಕೇರಿಯಾ ಎಂಬ ಸಣ್ಣ ಝರಿಗಳೂ ಸೇರಿಕೊಳ್ಳುತ್ತವೆ.
ಇದನ್ನು ಓದಿ: ಓಮಿತ್ರ ಹುಟ್ಟಿಗೆ ಕಾರಣ ಆ 30 ಗಂಟೆಗಳು !
ಇಂತಹ ಕಾಲೀಬೇನ್ಗೆ ಪೌರಾಣಿಕ ಹಿನ್ನೆಲೆಯೂ ಇದೆ. ಅದೇನೆಂದರೆ ಸಿಖ್ ಧರ್ಮ ಗುರು, ಗುರು ನಾನಕ್ ಅವರಿಗೆ ಈ ನದಿಯಲ್ಲಿ ಮಿಂದ ಬಳಿಕವಷ್ಟೇ ಜ್ಞಾನೋದಯವಾಯಿತಂತೆ. ನೀರಿನಲ್ಲಿ ಮುಳುಗಿ ಮೂರು ದಿನಗಳ ನಂತರ ಎದ್ದುಬಂದ ಅವರು, ಸಿಖ್ಖರ ಮೂಲಮಂತ್ರವಾದ ‘ಇಕ್ ಓಂಕಾರ್’ ಅನ್ನು ಪಠಿಸಿದರು ಎನ್ನಲಾಗಿದೆ. ಇನ್ನು ಗುರುನಾನಕರು ಧ್ಯಾನ ಮಾಡುತ್ತಿದ್ದ ಗುರುದ್ವಾರ ಬೇರ್ ಸಾಹೆಬ್ ಕೂಡ ಸುಲ್ತಾನ್ಪುರ ಲೋಧಿಯಲ್ಲಿ ಹರಿವ ಕಾಲೀಬೇನ್ ತಟದಲ್ಲಿದೆ.
ಕಾಲೀಬೇನ್ಗೆ ಶುರುವಾಯ್ತು ಕಂಟಕ
ಹೌದು, ಹಸಿರು ಕ್ರಾಂತಿಯ ಕಾಲದಲ್ಲಿ ಹೋಷಿಯಾರ್ಪುರ, ಕಪೂರ್ತಲಾ, ಜಲಂಧರ್ ಸೇರಿದಂತೆ ಕಾಲೀಬೇನ್ ಉಪನದಿ ಹರಿಯುವ ಪ್ರಮುಖ ನಗರಗಳಲ್ಲಿ ಕಾರ್ಖಾನೆಗಳು ಹೆಚ್ಚಾಗತೊಡಗಿದವು. ಹಾಗೇ ರಾಸಾಯನಿಕ ಯುಕ್ತ ಕೃಷಿಯೂ ಹೆಚ್ಚತೊಡಗಿತು. ಇದರಿಂದಾಗಿ ಒಂದೆಡೆ ಕಾರ್ಖಾನೆಗಳಿಂದ ಹರಿಯುವ ರಾಸಾಯನಿಕ ತ್ಯಾಜ್ಯಗಳು ಕಾಲೀಬೇನ್ ಸೇರತೊಡಗಿದವು. ಇದರಿಂದ ಈ ಉಪನದಿ ದಿನಂಪ್ರತಿ ಮಲಿನವಾಗತೊಡಗಿತು. ಅದರ ಜೊತೆಗೇ ನದಿಯ ಇಕ್ಕೆಲಗಳಲ್ಲಿ ಹೆಚೆಚ್ಚು ಕೃಷಿ ಚಟುವಟಿಕೆ ನಡೆಯತೊಡಗಿದ ಕಾರಣ ನೀರು ಕೂಡ ಬತ್ತತೊಡಗಿತು. ಹೀಗೆ ಕೆಲವೇ ವರ್ಷಗಳಲ್ಲಿ 160 ಕಿಲೋಮೀಟರ್ ಸ್ವಚ್ಛಂದವಾಗಿ ಹರಿಯುತ್ತಿದ್ದ ಶುದ್ಧ ಕಾಲೀಬೇನ್, ಮಲಿನಗೊಂಡು ವಿಷ ಕಾರತೊಡಗಿತು. ಇದರಿಂದ ಲಕ್ಷಾಂತರ ಜನರಿಗೆ ನೀರಿನ ಸಮಸ್ಯೆ ಎದುರಾಯಿತು.
ಬಂದರು ನೋಡಿ ಎಕೋಬಾಬಾ
ಅದೇ ಸಮಯದಲ್ಲೇ ಸಂತ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಎಚ್ಚೆತ್ತುಕೊಂಡರು. ಅದಾಗಲೇ ಪ್ರಕೃತಿಪರ ಹೋರಾಟಗಳಿಂದ ಪಂಜಾಬ್ನಾದ್ಯಂತ ಎಕೋಬಾಬಾ ಎಂದೇ ಹೆಸರು ಗಳಿಸಿದ್ದ ಅವರು, 2000ನೇ ಇಸವಿಯಲ್ಲಿ ಕಾಲೀಬೇನ್ ನದಿಯ ರಕ್ಷಣೆಗೆ ಪಣತೊಟ್ಟಿ ನಿಂತರು. ಪಂಜಾಬ್ನ ಮಾಲಿನ್ಯ ನಿಯಂತ್ರಣ ಮಂಡಳಿಯೇ ಕೈಚೆಲ್ಲಿ ಕುಳಿತಿದ್ದಾಗ, ಕಾವಿ ತೊಟ್ಟು ಬಂದ ಈ ಸಂತ, ಕಾಲೀಬೇನ್ ಸಂರಕ್ಷಣೆಗೆ ಮುಂದಾದರು.
2000ರಲ್ಲಿ ಪ್ರಾರಂಭವಾದ ಕಾಲೀಬೇನ್ ಸ್ವಚ್ಛತಾ ಅಭಿಯಾನದಲ್ಲಿ ಮೊದಲು ಸುಲ್ತಾನ್ಪುರ ಲೋಧಿ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕರ ಸೇವಕರನ್ನು ಒಟ್ಟುಗೂಡಿಸಿ ತಾವೂ ನದಿಗಿಳಿದ ಎಕೋಬಾಬಾ ಅದರಲ್ಲಿದ್ದ ರಾಶಿ ರಾಶಿ ಕಳೆಗಿಡ, ಗಂಟೆ ಹೂವಿನ ಜೊಂಡುಗಳನ್ನು ಹೊರಹಾಕಿದರು. ಬರೊಬ್ಬರಿ 3 ವರ್ಷಗಳ ಕಾಲ ಅರ್ಥಾತ್ 2003ರವರೆಗೂ ಇದೇ ಕೆಲಸ ನಡೆಯಿತು. ಕೆಲವೊಮ್ಮೆಯಂತೂ 3 ಸಾವಿರಕ್ಕೂ ಹೆಚ್ಚು ಮಂದಿ ಕಾಲೀಬೇನ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಶ್ರಮಾದಾನ ಮಾಡುತ್ತಿದ್ದರು. ಸುತ್ತಮುತ್ತಲಿನ ಹಳ್ಳಿಯ ಜನರಿಂದಲೇ ಧನಸಹಾಯ ಪಡೆದು, ಸ್ವಚ್ಛತೆಗೆ ಬೇಕಾದ ಪರಿಕರಗಳನ್ನು ಖರೀದಿಸಲಾಗಿತ್ತು. ಹಾಗಂತ ಎಕೋಬಾಬಾ ಸ್ವಚ್ಛತೆಗೆ ಮಾತ್ರವಲ್ಲ ಅದರ ಜೊತೆ ಜೊತೆಗೇ ನದಿನೀರು, ಅಂತರ್ಜಲಗಳ ಕುರಿತು ಜನರಲ್ಲಿ ಅರಿವು ಮೂಡಿಸುವತ್ತಲೂ ಗಮನ ಹರಿಸಿದರು. ಇದರಿಂದ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಹಾಗೂ ಕೊಳಚೆ ಮೋರಿಗಳಿಂದ ಕಾಲೀಬೇನ್ ಸೇರುತ್ತಿದ್ದ ಮಲಿನ ನೀರನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ದಿನಕಳೆದಂತೆ ಕಾಲೀಬೇನ್ನ ನೀರಿನ ಮಟ್ಟವೂ ಹೆಚ್ಚಾಗತೊಡಗಿತು.
ಇಷ್ಟು ಮಾತ್ರವಲ್ಲ ಎಕೋಬಾಬಾ, ಪಂಜಾಬ್ ಸರ್ಕಾರದೊಂದಿಗೆ ಕೈ ಜೋಡಿಸಿ ಕೆರೆ-ಕಟ್ಟೆಗಳನ್ನು ಸೇರಿದ ಕೊಳಚೆ ನೀರನ್ನು ನೈಸರ್ಗಿಕವಾಗಿಯೇ ಶುದ್ಧೀಕರಿಸುವ ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದ್ದಾರೆ. ಅದರ ಜೊತೆಗೆ ಕಡಿಮೆ ವೆಚ್ಚದ, ಪ್ರಕೃತಿಗೆ ಮಾರಕವಾಗದ ಕಸ ಸಂಸ್ಕರಣಾ ಘಟಕಕ್ಕೂ ಚಾಲನೆ ನೀಡಿದ್ದಾರೆ. ಹೀಗೆ ವಿದ್ಯಾ ಸಂಸ್ಥೆಗಳನ್ನು ಕಟ್ಟುವ ಮೂಲಕ ಶಿಕ್ಷಣ ನೀಡುವುದರ ಜೊತೆಗೆ ಎಕೋಬಾಬಾ ಪರಿಸರ ಸಂರಕ್ಷಣೆಗೂ ಟೊಂಕ ಕಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬ ಭಾರತೀಯರಲ್ಲೂ ಇಂತಹ ಒಬ್ಬ ಬಾಬಾ ಇದ್ದರೆ ಸಾಕು, ಸ್ವಚ್ಛ ಭಾರತ ಸುಂದರ ಭಾರತದ ಕನಸು, ಕೆಲವೇ ದಿನಗಳಲ್ಲಿ ನನಸಾಗುವುದರಲ್ಲಿ ಸಂಶಯವೇ ಇಲ್ಲ.
1. ವಿಮಾನ ನಿಲ್ದಾಣದ ಲಾಂಚ್ನಲ್ಲಿ ಹುಟ್ಟಿಕೊಂಡ ಪಝಲ್ ಸ್ನ್ಯಾಕ್ಸ್..!
2. ಒಂದೇ ವರ್ಷದಲ್ಲಿ 7ಮಿಲಿಯನ್ ಆದಾಯ ಗಳಿಸಿದ ನಾಲೆಡ್ಜ್ ಫ್ಯಾಕ್ಟರಿ ಹಲ್ವೇಝ್..!
3. ಚಿಕ್ಕ ಪಟ್ಟಣದ ಉದ್ದಿಮೆದಾರನ ಜ್ಯೂಸ್ ಮೇಕಿಂಗ್ ಬಿಸಿನೆಸ್ನಿಂದ ಬೆಂಗಳೂರಿಗರ ಡಯಟ್ ನಿರ್ವಹಣೆ