ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಸಾಧಕ- ದೃಷ್ಠಿ ವಿಕಲಚೇತನರ ಕ್ರಿಕೆಟ್ನಲ್ಲಿ ಶೇಖರ್ "ನಾಯಕ"
ಟೀಮ್ ವೈ.ಎಸ್. ಕನ್ನಡ
ಶೇಖರ್ ನಾಯಕ್. ದೃಷ್ಠಿ ವಿಕಲ ಚೇತನ ಕ್ರಿಕೆಟರ್. ದೇಶಕ್ಕಾಗಿ ಆಡಿ ಮಿಂಚಿದ ಕ್ರಿಕೆಟರ್. ದೃಷ್ಠಿ ಒಂದಿಲ್ಲ ಅನ್ನೋದು ಬಿಟ್ರೆ, ಟೀಮ್ ಇಂಡಿಯಾದ ಕ್ರಿಕೆಟರ್ಗಳಿಗೆ ಸಮವಾಗಿ ನಿಲ್ಲಬಲ್ಲ ಸಾಧನೆ ಮಾಡಿದ್ದಾರೆ. ದೃಷ್ಠಿ ವಿಕಲ ಚೇತನ ತಂಡದ ನಾಯಕನಾಗಿ ಎರಡು ವಿಶ್ವಕಪ್ಗಳನ್ನು ಗೆದ್ದುಕೊಟ್ಟಿದ್ದಾರೆ. 2012ರ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ಕಪ್ ಗೆದ್ದಾಗ ನಾಯಕನಾಗಿದ್ದಿದ್ದು ಶೇಖರ್ ನಾಯಕ್. 2014ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ವಿಶ್ವಕಪ್ ಗೆದ್ದಾಗಲೂ ಶೇಖರ್ ನಾಯಕ್ ತಂಡವನ್ನು ಮುನ್ನಡೆಸಿದ್ದರು. ಭಾರತಕ್ಕೆ ಎರಡು ವಿಶ್ವಕಪ್ಗಳನ್ನು ಗೆದ್ದು ಕೊಟ್ರೂ, ಶೇಖರ್ ನಾಯಕ್ ಸುದ್ದಿಯಾಗಿಲ್ಲ. ನಮ್ಮ ನಡುವೆ ಪಕ್ಕದಲ್ಲೇ ನಡೆದುಕೊಂಡು ಹೋದ್ರೂ ಜನ ಗುರುತು ಹಿಡಿಯೋದಿಲ್ಲ. ಆದ್ರೆ ಸಾಧನೆಗಳು ಮಾತ್ರ ಶೇಖರ್ಗೆ ಹೆಸರು ತಂದುಕೊಟ್ಟಿವೆ. ಶೇಖರ್ ಸಾಧನೆ ಯಾರ ಕಣ್ಣಿಗೆ ಬೀಳದೇ ಇದ್ರೂ ಪರವಾಗಿಲ್ಲ. ಸರಕಾರ ಗುರುತಿಸಿದೆ. ಪದ್ಮಶ್ರೀ ಪ್ರಶಸ್ತಿ ನೀಡಿ ದೃಷ್ಠಿ ವಿಕಲಚೇತನ ಕ್ರಿಕೆಟಿಗರಿಗೆ ಹೊಸ ಆತ್ಮವಿಶ್ವಾಸವನ್ನು ಕೊಟ್ಟಿದೆ.
ಹುಟ್ಟಿನಿಂದಲೇ ದೃಷ್ಠಿ ಇರಲಿಲ್ಲ
ಶೇಖರ್ ಹುಟ್ಟಿನಿಂದಲೇ ದೃಷ್ಠಿ ಕಳೆದುಕೊಂಡ ನತದೃಷ್ಟ. ಒಂದು ರೀತಿಯಲ್ಲಿ ದೃಷ್ಟಿ ವಿಕಲತೆ ಶೇಖರ್ಗೆ ಅನುವಂಶೀಯವಾಗಿತ್ತು ಅನ್ನಬಹುದು. ಯಾಕಂದ್ರೆ ಶೇಖರ್ ಕುಟುಂಬದಲ್ಲಿ ಹಲವರು ದೃಷ್ಟಿ ವಿಕಲಚೇತನರು ಆಗಿದ್ದರು.
" ಕುರುಡುತನ ನಮ್ಮ ಕುಟುಂಬದಲ್ಲಿ ಅನುವಂಶೀಯವಾಗಿದೆ. ನನ್ನ ತಾಯಿ ಸೇರಿದಂತೆ ನಮ್ಮ ಕುಟುಂಬದಲ್ಲಿ ಸುಮಾರು 15 ಮಂದಿ ದೃಷ್ಠಿ ವಿಕಲಚೇತನರಿದ್ದೇವೆ. ದೃಷ್ಟಿ ಕಳೆದುಕೊಂಡು ಹಳ್ಳಿಯಲ್ಲಿ ಬದುಕುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಮ್ಮ ಹಳ್ಳಿಯಲ್ಲಿ ಶಿಕ್ಷಣದ ಕೊರತೆ ಇತ್ತು. ನನ್ನ ಜೊತೆ ಆಡುತ್ತಿದ್ದವರು ಮತ್ತು ನನ್ನ ವಯಸ್ಸಿನವರೇ ಆಗಿದ್ದ ಇತರೆ ಹುಡುಗರು ನನ್ನನ್ನು ಹೀಯಾಳಿಸುತ್ತಿದ್ದರು. ನನ್ನ ತಂದೆ ನನ್ನ ಬಗ್ಗೆ ಅತೀಯಾದ ಕಾಳಜಿ ವಹಿಸಿದ್ದರು. ಹೀಗಾಗಿ ನಾನು ಶಾಲೆಗೆ ಹೋಗಲು ಆಗಲಿಲ್ಲ. ಅವರಿಗೆ ನನ್ನನ್ನು ಶಾಲೆಗೆ ಕಳುಹಿಸುವಷ್ಟು ನಂಬಿಕೆ ಇರಲಿಲ್ಲ. "
- ಶೇಖರ್ ನಾಯಕ್, ಪದ್ಮಶ್ರೀ ವಿಜೇತ ದೃಷ್ಟಿ ವಿಕಲ ಚೇತನ ಕ್ರಿಕೆಟಿಗ
ಶೇಖರ್ ನಾಯಕ್ ಬದುಕಿಗೆ ತಿರುವು ಸಿಕ್ಕಿದ್ದು ಒಂದು ರೀತಿಯ ಅದೃಷ್ಟದಿಂದಲೇ. ಸುಮಾರು 7 ವರ್ಷ ವಯಸ್ಸಿನವರಿದ್ದಾಗ ಶೇಖರ್ ನದಿ ದಂಡೆಯಿಂದ ಕೆಳಗೆ ಬಿದ್ದು ತಲೆಗೆ ಗಾಯ ಮಾಡಿಕೊಳ್ಳುತ್ತಾರೆ. ಗ್ರಾಮದಲ್ಲಿ ನಡೆಯುತ್ತಿದ್ದ ಹೆಲ್ತ್ ಕ್ಯಾಂಪ್ನಲ್ಲಿ ಚಕಪ್ಗೆಂದು ಹೋಗುತ್ತಾರೆ. ಈ ಸಮಯದಲ್ಲಿ ವೈದ್ಯರು ಶೇಖರ್ಗೆ ದೃಷ್ಟಿ ಬರಬಹುದು ಅನ್ನುವ ವರದಿ ನೀಡುತ್ತಾರೆ. ಶೇಖರ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ಶೇಖರ್ ಬಲಗಣ್ಣು ಶೇಕಡಾ 60 ರಷ್ಟು ದೃಷ್ಟಿ ಪಡೆಯುತ್ತದೆ. ಸದ್ಯ ಶೇಖರ್ ಸುಮಾರು 3 ಮೀಟರ್ ದೂರದ ವಸ್ತುಗಳನ್ನು ಮಾತ್ರ ಗುರುತಿಸುವ ಶಕ್ತಿ ಹೊಂದಿದ್ದಾರೆ.
ಇದನ್ನು ಓದಿ: ಕರ್ನಾಟಕದಲ್ಲೂ ಇದೆ ಕ್ಯಾಶ್ಲೆಸ್ ಗ್ರಾಮ- "ಬೆಳಪು" ಡಿಜಿಟಲ್ ವ್ಯವಹಾರದ ಮೊದಲ ಬೆಳಕು..!
ಖುಷಿ ಜೊತೆ ನೋವು
ಶೇಖರ್ಗೆ ಕಣ್ಣಿನ ದೃಷ್ಟಿ ಬಂದ ಖುಷಿ ಒಂದು ಕಡೆ ಇದ್ದರೆ ಇನ್ನೊಂದು ಕಡೆಯಲ್ಲಿ ನೋವು ಇದ್ದೇ ಇತ್ತು. ಶಸ್ತ್ರ ಚಿಕತ್ಸೆಯಾದ ಮೂರೇ ಮೂರು ತಿಂಗಳಿನಲ್ಲಿ ಶೇಖರ್ ತನ್ನ ತಂದೆಯನ್ನು ಕಳೆದುಕೊಂಡ್ರು. ಅಮ್ಮ ಶೇಖರ್ ರನ್ನು ಶಿವಮೊಗದ ಶಾರಾದಾ ದೇವಿ ಅಂಧರ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಶೇಖರ್ಗೆ ಕ್ರಿಕೆಟ್ ಬಗ್ಗೆ ಮೊದಲಿಗೆ ಆಸಕ್ತಿ ಹುಟ್ಟಿಕೊಳ್ಳುತ್ತದೆ.
"ಅಲ್ಲಿ ಕೆಲವು ಹುಡುಗರು ಚೆಂಡು ಮತ್ತು ಬ್ಯಾಟ್ ಹಿಡಿದು ಓಡಾಡುತ್ತಿದ್ದರು. ಅವರನ್ನು ನೋಡಿ ನನಗೆ ನಗು ಬರುತ್ತಿತ್ತು. ಯಾಕಂದ್ರೆ ನನಗೆ ಇದು ಅಚ್ಚರಿ ಹುಟ್ಟಿಸಿತ್ತು. ಆದ್ರೆ ಒಬ್ಬರು ಕೋಚ್ ಬಂದು ನನ್ನ ಬಳಿ ಆಟ ಆಡುವಂತೆ ಕೇಳಿಕೊಂಡ್ರು. ನನಗೆ ಆಟ ಇಷ್ಟವಾಯಿತು. ನಾನು ಕ್ರಿಕೆಟ್ನಲ್ಲಿ ಪಳಗಲು ಆರಂಭಿಸಿದೆ"
- ಶೇಖರ್ ನಾಯಕ್, ಪದ್ಮಶ್ರಿ ಪ್ರಶಸ್ತಿ ವಿಜೇತ ಕ್ರಿಕೆಟ್
ಈ ಮಧ್ಯೆ ಶೇಖರ್ ಆಗಲಿ ಅಥವಾ ಕಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಹೀಗಾಗಿ ಚಪ್ಪಲಿಯಲ್ಲೇ ಆಟ ಆಡುವುದು ಅನಿವಾರ್ಯವಾಗಿತ್ತು. ಆದ್ರೆ ಅದೇ ಮಜಾ ಕೊಡುತ್ತಿತ್ತು ಅನ್ನುವುದನ್ನ ಶೇಖರ್ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಶೇಖರ್ಗೆ ಅಮ್ಮನ ಬೆಂಬಲವೂ ಸಿಗುತ್ತದೆ.
" ನನ್ನ ಅಮ್ಮನಿಗೆ ಕ್ರಿಕೆಟ್ ಅಂದ್ರೆ ಏನು ಅಂತಲೇ ಗೊತ್ತಿರಲಿಲ್ಲ. ಆದ್ರೆ ಆಕೆ ನನಗೆ ಹುರಿದುಂಬಿಸುತ್ತಿದ್ದಳು. ನಾನು ಶ್ರೇಷ್ಟ ಸಾಧನೆ ಮಾಡಬೇಕು ಅನ್ನುವುದು ಆಕೆಯ ಗುರಿಯಾಗಿತ್ತು. ಆದ್ರೆ ಆಕೆ ಹೆಚ್ಚು ಕಾಲ ಬದುಕಲಿಲ್ಲ. ನಾನು12 ವರ್ಷವಿದ್ದಾಗ ಆಕೆಯೂ ತೀರಿಕೊಂಡಳು "
- ಶೇಖರ್ ನಾಯಕ್, ಪದ್ಮಶ್ರೀ ವಿಜೇತ ದೃಷ್ಟಿ ವಿಕಲ ಚೇತನ ಕ್ರಿಕೆಟಿಗ
ಬದುಕಿನಲ್ಲಿ ಅದೇನೇ ಕಷ್ಟ ಎದುರಾದ್ರೂ ಶೇಖರ್ ಕ್ರಿಕೆಟ್ ಆಟವನ್ನು ಬಡಿಲಿಲ್ಲ. 2000ನೇ ಇಸವಿಯಲ್ಲಿ ಶಾಲಾ ಟೂರ್ನಿವೊಂದರಲ್ಲಿ ಶೇಖರ್ ಕೇವಲ 46 ಎಸೆತಗಳಲ್ಲಿ 136 ರನ್ಗಳನ್ನು ಸಿಡಿಸಿದ್ರು. ಈ ಸಾಧನೆ ಶೇಖರ್ಗೆ ರಾಜ್ಯ ದೃಷ್ಟಿ ವಿಕಲಚೇತನರ ತಂಡದಲ್ಲಿ ಸ್ಥಾನ ತಂದುಕೊಟ್ಟಿತ್ತು.
ದೃಷ್ಟಿ ವಿಕಲಚೇತನರ ತಂಡದಲ್ಲಿ ಶೇಖರ್ B2 ಕೆಟಗರಿಯನ್ನು ಪ್ರತಿನಿಧಿಸುತ್ತಿದ್ದಾರೆ. ದೃಷ್ಟಿ ವಿಕಲ ಚೇತನರ ತಂಡದಲ್ಲಿ B1,B2 ಮತ್ತು B3 ಅನ್ನುವ ಮೂರು ವಿಭಾಗಗಳಿವೆ. B1 ಕೆಟಗರಿಯ ಆಟಗಾರರು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡವರಾಗಿರುತ್ತಾರೆ. B2 ಮತ್ತು B3 ಕೆಟಗರಿಯವರು ಕೊಂಚ ದೃಷ್ಟಿ ಹೊಂದಿದ್ದರೂ, ಅದು ತುಂಬಾ ಕಡಿಮೆ ಇರುತ್ತದೆ. ದೃಷ್ಟಿ ವಿಕಲ ಚೇತನರ ತಂಡದ ಆಡುವ ಬಳಗದಲ್ಲಿ B1 ಕೆಟಗರಿಯಿಂದ 4 ಆಟಗಾರರು ಮತ್ತು B2, B3 ಕೆಟಗರಿಯಿಂದ ತಲಾ ಮೂವರು ಆಟಗಾರರು ಇರಲೇಬೇಕಾಗುತ್ತದೆ.
ಶೇಖರ್ ನಾಯಕ್ 2012ರಲ್ಲಿ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆ ಆದ್ರು. ಅಲ್ಲಿಂದ ಇಲ್ಲಿ ತನಕ ಶೇಖರ್ ಭಾರತ ತಂಡದ ಒಂದು ಭಾಗವೇ ಆಗಿ ಹೋಗಿದ್ದಾರೆ. ಇಲ್ಲಿ ತನಕ ಶೇಖರ್ ಸುಮಾರು 63 ಪಂದ್ಯಗಳನ್ನು ಎಲ್ಲಾ ಫಾರ್ಮೆಟ್ಗಳಲ್ಲೂ ಆಡಿದ್ದಾರೆ. ಶೇಖರ್ 32 ಶತಕ ಮತ್ತು 15 ಅರ್ಧಶತಕಗಳನ್ನು ಬಾರಿಸಿದ್ದಾರೆ. ಶೇಖರ್ ನಾಯಕತ್ವದಲ್ಲಿ ಭಾರತ ತಂಡ 2012ರಲ್ಲಿ ಪಾಕ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದರೆ, 2014ರ ಏಕದಿನ ವಿಶ್ವಕಪ್ನಲ್ಲೂ ಚಾಂಪಿಯನ್ ಆಗಿತ್ತು. ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಶೇಖರ್ ಕೇವಲ 58 ಎಸೆತಗಳಲ್ಲಿ 134 ರನ್ ಬಾರಿಸಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು ಅನ್ನುವುದನ್ನು ಮರೆಯುವ ಹಾಗಿಲ್ಲ.
ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಶೇಖರ್ ಬದುಕು ನಿರಾಳವಾಗಿಲ್ಲ. ಇವತ್ತು ಕೂಡ ಶೇಖರ್ಗೆ ದುಡಿಮೆಯೇ ಆದಾಯದ ಮೂಲವಾಗಿದೆ.
"ನಮಗೆ ಪ್ರೋತ್ಸಾಹ ಸಿಗುತ್ತಿಲ್ಲ. ಬಿಸಿಸಿಐನಿಂದ ನಮಗೆ ಗೌರವ ಕೂಡ ಸಿಗುತ್ತಿಲ್ಲ. ವಿಶ್ವದ ಎಲ್ಲಾ ದೃಷ್ಟಿ ವಿಕಲಚೇತನರ ಕ್ರಿಕೆಟ್ ತಂಡಗಳು ಆಯಾ ದೇಶದ ಕ್ರಿಕೆಟ್ ಬೋರ್ಡ್ಗಳ ಜೊತೆ ಒಂದಾಗಿವೆ. ಆದ್ರೆ ಬಿಸಿಸಿಐ ನಮ್ಮನ್ನು ದೂರವಿಟ್ಟಿದೆ. ನನಗೆ ಪದ್ಮಶ್ರೀ ಪ್ರಶಸ್ತಿ ಬಂದ ಮೇಲಾದ್ರೂ ಬಿಸಿಸಿಐ ಮನಸ್ಸು ಬದಲಿಸಿ, ಅವರ ಜೊತೆ ನಮ್ಮ ಕ್ರಿಕೆಟಿಗರನ್ನು ಕೂಡ ಸೇರಿಸಿಕೊಳ್ಳಬಹುದು"
- ಶೇಖರ್ ನಾಯಕ್, ಪದ್ಮಶ್ರೀ ವಿಜೇತ ದೃಷ್ಟಿ ವಿಕಲ ಚೇತನ ಕ್ರಿಕೆಟಿಗ
ದೃಷ್ಟಿ ವಿಕಲಚಚೇತನರ 2017ರ ವಿಶ್ವಕಪ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದ್ರೆ ಅದರಲ್ಲಿ ಶೇಖರ್ ಆಡುತ್ತಿಲ್ಲ. ಫಿಟ್ನೆಸ್ ಸಮಸ್ಯೆ ಶೇಖರ್ಗೆ ಕಾಡುತ್ತಿದೆ. ಬೆಂಗಳೂರಿನ ಎನ್ಜಿಒ ಒಂದರಲ್ಲಿ ಕೆಲಸ ಮಾಡುತ್ತಿರುವ ಶೇಖರ್ ಪದ್ಮಶ್ರೀ ಗೌರವದಿಂದ ಸಂತಸಗೊಂಡಿದ್ದಾರೆ. ಅಷ್ಟೇ ಅಲ್ಲ ಭವಿಷ್ಯದಲ್ಲಿ ದೃಷ್ಟಿ ವಿಕಲ ಚೇತನ ಕ್ರಿಕೆಟಿಗರನ್ನು ಕಾಣುವ ರೀತಿ ಕೂಡ ಭಿನ್ನವಾಗಲಿದೆ ಅನ್ನುವುದನ್ನು ಹೇಳಲು ಮರೆಯುವುದಿಲ್ಲ.
1. ಡೆಬಿಟ್-ಕ್ರೆಡಿಟ್ ಕಾರ್ಡ್ ಇಲ್ಲದಿದ್ರು ವಹಿವಾಟು ಸಾಧ್ಯ- ಇದು ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್ ಕನಸು
2. ಎಂಜಿನಿಯರಿಂಗ್ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್- ಹವ್ಯಾಸವೇ ಫುಲ್ ಟೈಂ ಜಾಬ್ ಆದ ಕಥೆ..!
3. ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಉತ್ತಮ ಭಾಷಣ ಮಾಡುವ ಕಲೆ ಕಲಿತುಕೊಳ್ಳಿ