ಹೃದಯದ ಡಾಕ್ಟರ್ ಅಲ್ಲ, ಆದ್ರೆ ಇವರೊಬ್ಬ 'ಹೃದಯವಂತ' ವೈದ್ಯ
ಟೀಮ್ ವೈ.ಎಸ್.ಕನ್ನಡ
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆಯೋಡಿನ್ ಕೊರತೆಯಿಂದ ಉಂಟಾಗುವ ರೋಗಗಳು ಹೆಚ್ಚಾಗಿ ಕಂಡುಬರುತ್ತಿಲ್ಲ. ಇದಕ್ಕೆ ಕಾರಣ 90ರ ದಶಕದಲ್ಲಿ ಕೆಲವು ವೈದ್ಯರು, ವಿಜ್ಞಾನಿಗಳು ಮತ್ತು ಸಂಶೋಧಕರ ಪರಿಶ್ರಮ. ಅದರ ಪರಿಣಾಮವಾಗಿಯೇ ಭಾರತದ ಪ್ರತಿಯೊಂದು ಕಡೆಗಳಲ್ಲೂ ಆಯೋಡಿನ್ ಯುಕ್ತ ಉಪ್ಪು ಲಭ್ಯವಾಗುತ್ತಿದೆ. ಜನರ ದೇಹದಲ್ಲಿ ಆಯೋಡಿನ್ ಕೊರತೆ ಕಂಡುಬರ್ತಿಲ್ಲ. ಈ ಕಾರ್ಯದಲ್ಲಿ ಡಾ.ಅಂಬರೀಶ್ ಮಿತ್ತಲ್ ಅವರ ಕೊಡುಗೆ ಅಪಾರ. ಭಾರತದಲ್ಲಿ ಫ್ಲೋರೈಡ್ ಯುಕ್ತ ನೀರಿನ ಅಪಾಯ ಅರಿವಿಗೆ ಬಂದಿರೋದಕ್ಕೂ ಕಾರಣ ಡಾ.ಅಂಬರೀಶ್.
ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಹಲವು ಗ್ರಾಮಗಳ ಕುಡಿಯೋ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಫ್ಲೋರೈಡ್ ಯುಕ್ತ ಜಲದಿಂದ ಮೂಳೆಯನ್ನು ಕಾಡುವ ಅನೇಕ ಖಾಯಿಲೆಗಳು ಬರುತ್ತವೆ ಅನ್ನೋದು ಬಯಲಾಗಿತ್ತು. ಇದರಿಂದಾಗಿ ಜನರಲ್ಲೂ ಜಾಗೃತಿ ಮೂಡಿತು. ಆ ಸಂಶೋಧನೆಯಿಂದಾಗಿ ಅನೇಕ ರಾಜ್ಯಸರ್ಕಾರಗಳ ಗಮನ ಫ್ಲೋರೈಡ್ ಯುಕ್ತ ನೀರಿನೆಡೆಗೆ ಹರಿದಿತ್ತು. ಈ ಸಮಸ್ಯೆಯನ್ನು ನೀಗಿಸುವ ಪ್ರಯತ್ನ ಕೂಡ ಆರಂಭವಾಯ್ತು. ಮನುಷ್ಯದ ದೇಹಕ್ಕೆ ವಿಟಮಿನ್ ಡಿ ಹಾಗೂ ಕ್ಯಾಲ್ಷಿಯಂ ಅಗತ್ಯ ಎಷ್ಟಿದೆ ಅನ್ನೋದನ್ನು ಭಾರತಕ್ಕೆ ತಿಳಿಸಿಕೊಟ್ಟವರು ಡಾ.ಅಂಬರೀಶ್ ಮಿತ್ತಲ್. ವಿವಿಧ ಸಂಸ್ಥೆಗಳೊಡನೆ ಸೇರಿ ಮಿತ್ತಲ್ ಅವರು ನಡೆಸಿದ ಪ್ರಯತ್ನದ ಫಲವಾಗಿ ಈಗ ಹಾಲು, ತುಪ್ಪ ಮತ್ತು ಖಾದ್ಯ ತೈಲಗಳಲ್ಲಿ ವಿಟಮಿನ್ ಡಿ ಅಂಶವನ್ನು ಸೇರಿಸಲಾಗುತ್ತಿದೆ. ಆರೋಗ್ಯ ಹಾಗೂ ಚಿಕಿತ್ಸಾ ವಿಜ್ಞಾನದಲ್ಲಿ ಭಾರತದಲ್ಲಿ ಇದುವರೆಗೆ ಯಾರೂ ಮಾಡಿರದಂತಹ ಅನೇಕ ಸಂಶೋಧನೆಗಳನ್ನು ಮಿತ್ತಲ್ ಮಾಡಿದ್ದಾರೆ. ಭಾರತದಲ್ಲಿ ಮೊದಲ ಭಾರಿಗೆ ಮೂಳೆ ಸಾಂದ್ರತೆ ಮಾಪನ ವ್ಯವಸ್ಥೆ ಜಾರಿ ಮಾಡಿದ ಶ್ರೇಯ ಅವರಿಗೇ ಸಲ್ಲಬೇಕು.
ಬೇರೆ ಬೇರೆ ರೋಗಗಳು ಮತ್ತದಕ್ಕೆ ಪರಿಹಾರವನ್ನು ಕೂಡ ಅವರು ಪತ್ತೆ ಮಾಡಿದ್ದಾರೆ. ಇಂತಹ ಮಾರಕ ಖಾಯಿಲೆಗಳಿಂದ ಪಾರಾಗುವ ಬಗೆಯನ್ನು ಜನರಿಗೆ ತಲುಪಿಸಿದ್ದಾರೆ. ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ಹಾಗೂ ಮರುಜೀವ ಕೊಟ್ಟವರು ಡಾ.ಮಿತ್ತಲ್. ಅವರ ವ್ಯಕ್ತಿತ್ವವೇ ಅತ್ಯಂತ ರೋಚಕವಾದದ್ದು. ಚಿಕ್ಕಂದಿನಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅವರು ವೈದ್ಯರಾಗಬೇಕೆಂದು ನಿರ್ಧರಿಸಿದ್ರು. ಆ ಸಮಯದಲ್ಲಿ ಎಷ್ಟೋ ತಜ್ಞವೈದ್ಯರಿಗೆ ಗೊತ್ತಿಲ್ಲದ ಕ್ಷೇತ್ರವನ್ನೇ ಅವರು ಆಯ್ದುಕೊಂಡ್ರು. ಉಳಿದವರಂತೆ ಹಾರ್ಟ್ ಸ್ಪೆಷಲಿಸ್ಟ್ ಆಗಲು ಹೊರಟಿದ್ರೆ ವೈದ್ಯರ ಸೇನೆಯಲ್ಲಿ ಮಿತ್ತಲ್ ಕೂಡ ಒಬ್ಬ ಸಿಪಾಯಿ ಆಗಿಬಿಡುತ್ತಿದ್ರು. ಡಾ.ಮಿತ್ತಲ್ ಅವರ ಬದುಕಿನಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಅವರ ಯಶಸ್ಸಿನ ಮಂತ್ರಗಳೇ ಇತರರಿಗೆ ಪ್ರೇರಣೆ.
ಅಂಬರೀಶ್ ಮಿತ್ತಲ್ ಅವರು ಜನಿಸಿದ್ದು 1958ರ ಮಾರ್ಚ್ 29ರಂದು. ಅವರ ತಂದೆ ದೇವಕಿನಂದನ್ ಮಿತ್ತಲ್ ಉತ್ತರಪ್ರದೇಶ ಸಚಿವರಾಗಿದ್ದರು. ತಾಯಿ ರುಕ್ಮಿಣಿ ಅಪ್ಪಟ ಗೃಹಿಣಿ. ದೇವಕಿನಂದನ್ ಮೂಲತಃ ಮೀರತ್ ನವರು. ಉದ್ಯೋಗದ ನಿಮಿತ್ತ ಲಖ್ನೋಗೆ ಬಂದು ನೆಲೆಸಿದ್ರು. ನಾಲ್ವರು ಮಕ್ಕಳಲ್ಲಿ ಅಂಬರೀಶ್ ಕಿರಿಯವರು. ಅಂಬರೀಶ್ ಅವರ ತಂದೆ ಪ್ರಭಾವಿ ವ್ಯಕ್ತಿಯಾಗಿದ್ದರು. ಸ್ವಾತಂತ್ರ್ಯಾ ನಂತರ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ಮೂರನೇ ಸಚಿವರಾಗಿದ್ದರು. 18 ವರ್ಷಗಳ ಕಾಲ ಅವರು ಮಂತ್ರಿಯಾಗಿದ್ದಿದ್ದು ವಿಶೇಷ. ಗಣ್ಯಾತಿಗಣ್ಯರೆಲ್ಲ ಅವರ ಮನೆಗೆ ಬಂದು ಹೋಗುತ್ತಿದ್ರು. ‘ನನ್ನ ತಂದೆಯವರಲ್ಲಿ ಹುದ್ದೆಯ ಅಹಂ ಇರಲಿಲ್ಲ. ನಮ್ಮದು ಮಧ್ಯಮವರ್ಗದ ಕುಟುಂಬವಾಗಿತ್ತು. ನಮಗಿಷ್ಟ ಬಂದಿದ್ದನ್ನು ಓದಲು ಸ್ವಾತಂತ್ರ್ಯವಿತ್ತು’ ಎನ್ನುತ್ತಾರೆ ಅಂಬರೀಶ್. ಅವರ ಮನೆಯಲ್ಲಿ ಮೊದಲಿನಿಂದಲೂ ಶಿಸ್ತು ರೂಢಿಯಲ್ಲಿತ್ತು, ತಂದೆ ತಾಯಿಯನ್ನು ಗೌರವಿಸುವ ಪರಿಪಾಠವಿತ್ತು.
ಬುದ್ಧಿ ಬಂದಾಗಿನಿಂದ್ಲೂ ಅಂಬರೀಶ್ ಅವರಿಗೆ ಮನೆಯಲ್ಲಿ ವಿಜ್ಞಾನ ಮತ್ತು ಗಣಿತದ ಬಗೆಗಿನ ಚರ್ಚೆಯೇ ಹೆಚ್ಚು ಕಿವಿಗೆ ಬೀಳ್ತಾ ಇತ್ತು. ಸಹೋದರರಿಬ್ರೂ ಅದೇ ವಿಷಯದಲ್ಲಿ ಅಧ್ಯಯನ ಮಾಡಿದ್ರು. ಹಾಗಾಗಿ ಅದರ ಪ್ರಭಾವ್ ಅಂಬರೀಶ್ ಅವರ ಮೇಲೂ ಆಗಿತ್ತು. ಎಲ್ಲರೂ ಚೆನ್ನಾಗಿ ಓದಿ ಐಐಟಿಯಲ್ಲಿ ಸೀಟು ಪಡೆಯುವಂತೆ ಅಂಬರೀಶ್ ರನ್ನು ಪ್ರೋತ್ಸಾಹಿಸಿದ್ರು. ಆದ್ರೆ ಅವರ ಆಸಕ್ತಿ ಮಾತ್ರ ಜೀವಶಾಸ್ತ್ರದಲ್ಲಿತ್ತು. ಕೇವಲ ಓದು ಮಾತ್ರವಲ್ಲ ಮನೆಯಲ್ಲಿ ಆಟಕ್ಕೂ ಅವಕಾಶವಿತ್ತು. ಆದ್ರೆ ಚಳಿಗಾಲದಲ್ಲಿ ಸಂಜೆ 6-8, ಬೇಸಿಗೆಯಲ್ಲಿ 7-9 ಗಂಟೆವರೆಗೆ ಓದಬೇಕಿತ್ತು. ಉಳಿದ ಸಮಯದಲ್ಲಿ ಬೇರೆ ಏನನ್ನಾದ್ರೂ ಮಾಡಬಹುದಿತ್ತು. ಅಂಬರೀಶ್ ಗೆ ಮೊದಲಿನಿಂದ್ಲೂ ಕ್ರಿಕೆಟ್ ಮೇಲೆ ಆಸಕ್ತಿ. ಸಮಯ ಸಿಕ್ಕಾಗಲೆಲ್ಲ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ರು. ಕ್ರಿಕೆಟರ್ ಆಗುವ ಕನಸು ಕಾಣದಿದ್ರೂ, ಕ್ರಿಕೆಟ್ ಅಂದ್ರೆ ಬಲುಪ್ರೀತಿ ಅವರಿಗೆ.
ರಾತ್ರಿ ಊಟಕ್ಕೆ ಮನೆಯವರೆಲ್ಲ ಒಂದೆಡೆ ಸೇರುವುದು ವಾಡಿಕೆ. ತಂದೆ ದೇವಕಿನಂದನ್ ರಾಜಕೀಯದ ಬಗ್ಗೆ ಮಕ್ಕಳ ಜೊತೆ ಮಾತನಾಡುತ್ತಿದ್ರು. ಅಂಬರೀಶ್ ಕೂಡ ಚರ್ಚೆಯಲ್ಲಿ ಪಾಲ್ಗೊಳ್ತಾ ಇದ್ರು. ಚಿಕ್ಕಂದಿನಲ್ಲಿ ಅಂಬರೀಶ್ ಅವರ ಮೇಲೆ ಅಮ್ಮನ ಪ್ರಭಾವ ಬಹಳಷ್ಟಾಗಿತ್ತು. ಮನೆಯಲ್ಲಿ ಶಿಸ್ತು, ಮಕ್ಕಳ ಜವಾಬ್ಧಾರಿ ಎಲ್ಲವೂ ಅವರ ಮೇಲಿತ್ತು. 9ನೇ ತರಗತಿಯಲ್ಲಿದ್ದಾಗ ನಡೆದ ಘಟನೆಯಿಂದ ಅಂಬರೀಶ್ ಅವರಿಗೆ ತಮ್ಮ ಜೀವನದ ಗುರಿಯ ಅರಿವಾಗಿತ್ತು. ಅಂಬರೀಶ್ ಅನಾರೋಗ್ಯಪೀಡಿತರಾಗಿದ್ದರು. ಹಾಸಿಗೆಯಿಂದ ಮೇಲಕ್ಕೇಳಲಾಗದಷ್ಟು ನಿಶ್ಯಕ್ತಿ ಆವರಿಸಿತ್ತು. ಹಲವು ತಿಂಗಳುಗಳ ವರೆಗೆ ಅಂಬರೀಶ್ ಹಾಸಿಗೆ ಹಿಡಿದಿದ್ದರು. ಲಖ್ನೋನ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಅಂಬರೀಶ್, ವೈದ್ಯರ ಕಾರ್ಯವೈಖರಿ ನೋಡಿ ಪ್ರಭಾವಿತರಾಗಿದ್ದರು. ಸೂಕ್ತ ಚಿಕಿತ್ಸೆ ಬಳಿಕ ಗುಣಮುಖರಾದರು. ಆದ್ರೆ ಖಾಯಿಲೆಯಿಂದಾಗುವ ಸಮಸ್ಯೆ, ಅದನ್ನು ಪರಿಹರಿಸುವ ವೈದ್ಯರ ಶ್ರಮ ನೋಡಿ ಬೆರಗಾಗಿದ್ದರು. ದೊಡ್ಡ ಡಾಕ್ಟರ್ ಆಗಬೇಕೆಂದು ಅವರು ನಿರ್ಧರಿಸಿಬಿಟ್ರು. ವೈದ್ಯರಾಗಿ ಜನರ ದುಃಖ ದುಮ್ಮಾನ ಪರಿಹರಿಸಿದ್ರೆ ತಮಗೂ ಕೂಡ ಅವರ ಆಶೀರ್ವಾದ ಸಿಗಲಿದೆ ಎನಿಸಿತ್ತು.
ಡಾಕ್ಟರ್ ಆಗಬೇಕೆಂದು ತೀರ್ಮಾನಿಸಿದ ಬಳಿಕ ಅಂಬರೀಶ್ ಓದಿನ ಕಡೆಗೆ ಹೆಚ್ಚಿನ ಗಮನಕೊಟ್ರು. ಅದರ ಫಲವಾಗಿ 14ನೇ ತರಗತಿಯಲ್ಲಿ ರಾಜ್ಯಕ್ಕೇ ರ್ಯಾಂಕ್ ಪಡೆದ್ರು. ತಮ್ಮ ಫೋಟೋ ಪತ್ರಿಕೆಗಳಲ್ಲೆಲ್ಲ ಬಂದಿದ್ದು ನೋಡಿ ಅವರಿಗೆ ಖುಷಿಯೋ ಖುಷಿ. ನಂತರ ಅವರು ಜೀವವಿಜ್ಞಾನವನ್ನೇ ಪ್ರಮುಖ ವಿಷಯವನ್ನಾಗಿ ಆಯ್ದುಕೊಂಡ್ರು. ಇಂಟರ್ ಮೀಡಿಯೆಟ್ ಹಾಗೂ ಪ್ರಿಮೆಡಿಕಲ್ ನಲ್ಲಿ ದೊರೆತ ಅಂಕಗಳಿಂದಾಗಿ ಅವರಿಗೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು.
ಅಂಬರೀಶ್ ಕಾನ್ಪುರ ಮೆಡಿಕಲ್ ಕಾಲೇಜು ಸೇರಿ, ಅಲ್ಲೇ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಡಾಕ್ಟರ್ ಆಗೋದು ಅಂದ್ರೆ 24 ಗಂಟೆಗಳ ಕರ್ತವ್ಯ ಅನ್ನೋದು ಅವರಿಗೆ ಅರ್ಥವಾಗಿತ್ತು. ವೈದ್ಯರ ಬದುಕಿನಲ್ಲಿ ಕೆಲಸದ ಒತ್ತಡ ಹೇಗಿರುತ್ತದೆ ಅನ್ನೋದು ಗೊತ್ತಾಗಿತ್ತು. ‘ಆ ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲ ಪುಸ್ತಕಗಳನ್ನೇ ಅವಲಂಬಿಸಿದ್ದರು.ನನಗದು ಇಷ್ಟವಿರಲಿಲ್ಲ. ಯಾರು ಹೆಚ್ಚಾಗಿ ಓದ್ತಾರೋ ಅವರಿಗೆ ಹೆಚ್ಚು ಅಂಕ ಬರುತ್ತಿತ್ತು. ಸಿಲೆಬಸ್ ನಲ್ಲಿರುವ ಕೆಲವೊಂದು ವಿಷಯಗಳು ನನಗೆ ಇಷ್ಟವಾಗಿತ್ತಿರಲಿಲ್ಲ. ಆಗ ನಮ್ಮ ವೈದ್ಯಕೀವ ವ್ಯವಸ್ಥೆ ಒಂದು ಭಯದಲ್ಲಿತ್ತು, ಹಳೆಯದಾಗಿತ್ತು. ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವಿತ್ತು. ಆ ಬದಲಾವಣೆಗಳನ್ನು ಇನ್ನಷ್ಟು ಬೇಗ ಮಾಡಿದ್ರೆ ಬಹಳಷ್ಟು ಲಾಭವಾಗುತ್ತಿತ್ತು’ ಎನ್ನುತ್ತಾರೆ ಅಂಬರೀಶ್.
ಎಂಬಿಬಿಎಸ್ ಓದುತ್ತಿರುವ ಸಂದರ್ಭದಲ್ಲೇ ಅಂಬರೀಶ್ ತಮ್ಮ ಸಂಗಾತಿಯನ್ನೂ ಆಯ್ಕೆ ಮಾಡಿಕೊಂಡಿದ್ರು. ಅವರ ಪತ್ನಿ ರಂಜನಾ ಕಣ್ಣಿನ ಡಾಕ್ಟರ್. ಸದ್ಯ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಎಂಬಿಬಿಎಸ್ ಬಳಿಕ ಯಾವುದಾದರೂ ವಿಷಯದಲ್ಲಿ ಸ್ಪೆಷಲೈಸೇಶನ್ ಪಡೆಯಬೇಕೆಂದು ಅಂಬರೀಶ್ ನಿರ್ಧರಿಸಿದ್ರು. ಹಾರ್ಟ್ ಸ್ಪೆಷಲಿಸ್ಟ್ ಆಗುವಂತೆ ಎಲ್ಲರೂ ಸಲಹೆ ನೀಡಿದ್ರು. ಕಾರ್ಡಿಯಾಲಜಿಗೆ ಅಂಬರೀಶ್ ರಜಿಸ್ಟ್ರೇಶನ್ ಕೂಡ ಮಾಡಿಯಾಗಿತ್ತು. ಆದ್ರೆ ಏನಾದರೂ ಹೊಸದು ಮಾಡಬೇಕು ಅನ್ನೋ ಆಸೆ ಅವರ ಮನದಲ್ಲಿತ್ತು. ನಂತರ ಕಾರ್ಡಿಯಾಲಜಿ ಬದಲು ಹೊಸದೇನನ್ನಾದ್ರೂ ಮಾಡುವ ಗುರಿಯೊಂದಿಗೆ ದೆಹಲಿಗೆ ಬಂದ್ರು. ಆ ಸಮಯದಲ್ಲಿ ಹಾರ್ಟ್ ಸ್ಪೆಷಾಲಿಸ್ಟ್ ಗಳಿಗೆ ಬಹಳ ಬೇಡಿಕೆಯಿತ್ತು. ಕಾರ್ಡಿಯಾಲಜಿಸ್ಟ್ ಆದ್ರೆ ಶ್ರೀಮಂತಿಕೆ ಕೂಡ ಸಿಗುತ್ತಿತ್ತು. ಅದಕ್ಕೆಲ್ಲ ಮರುಳಾಗದೆ ಇದ್ದಿದ್ರಿಂದ್ಲೇ ಅಂಬರೀಶ್ ತಮ್ಮ ಬದುಕಿನಲ್ಲಿ ಯಶಸ್ಸು ಸಾಧಿಸಿದ್ದಾರೆ.
ಅಂಬರೀಶ್ ನೌಕರಿಯ ಹುಡುಕಾಟದಲ್ಲಿ ದೆಹಲಿಯಲ್ಲಿ ಓಡಾಡುತ್ತಿದ್ರು. ಒಮ್ಮೆ ಏಮ್ಸ್ ಗೆ ತೆರಳಿದ್ರು. ಅಲ್ಲಿಂದ ಅವರ ಬದುಕಿನ ದೆಸೆ ಬದಲಾಗಿತ್ತು. ದೊಡ್ಡ ದೊಡ್ಡ ವೈದ್ಯರೆಲ್ಲ ಅನ್ನನಾಳ ನಿರ್ಮೂಲನ ಆಂದೋಲನದಲ್ಲಿ ತೊಡಗಿದ್ರು. ಅವರಿಗೆ ಪ್ರತಿಭಾವಂತರ ಅವಶ್ಯಕತೆಯಿತ್ತು. ಅಂಬರೀಶ್ ಈ ಆಂದೋಲನ ಸೇರಿದ್ರು. ಆಯೋಡಿನ್ ಕೊರತೆಯಿಂದ ಬಹುತೇಕ ಜನರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುತ್ತಿತ್ತು. ಈ ಖಾಯಿಲೆಯಿಂದ ಗಂಟಲು ವಿಪರೀತ ಊದಿಕೊಳ್ಳುತ್ತಿತ್ತು. ನೀರಿನಲ್ಲಿ ಆಯೋಡಿನ್ ಪ್ರಮಾಣವಿಲ್ಲದ ನೀರಿರುವ ಪ್ರದೇಶದಲ್ಲೆಲ್ಲ ಗಳಗಂಡ ರೋಗ ಹರಡಿತ್ತು.
ಏಮ್ಸ್ ಆಂದೋಲನದ ಭಾಗವಾದ ಅಂಬರೀಶ್, ಉತ್ತರಪ್ರದೇಶ, ಬಿಹಾರ, ಆಸ್ಸಾಂ ಸೇರಿ ಹಲವೆಡೆ ಪ್ರವಾಸ ಮಾಡಿ ಅಲ್ಲಿ ರೋಗಪೀಡಿತರನ್ನು ಭೇಟಿಯಾಗಿ ಅವರ ಸಮಸ್ಯೆಯನ್ನು ಅರಿತರು. ಗರ್ಭಾವಸ್ಥೆಯಲ್ಲಿ ಮಹಿಳೆಯ ಶರೀರದಲ್ಲಿ ಆಯೋಡಿನ್ ಪ್ರಮಾಣ ಕಡಿಮೆ ಇದ್ದಲ್ಲಿ ಹುಟ್ಟೋ ಮಕ್ಕಳು ದೈಹಿಕ ಮತ್ತು ಮಾನಸಿಕ ದೌರ್ಬಲ್ಯದಿಂದ ಬಳಲುತ್ತಾರೆ. ಆಯೋಡಿನ್ ಕೊರತೆಯಿಂದ ಜನಿಸಿದ ಮಕ್ಕಳಿಂದ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಇದನ್ನೆಲ್ಲ ಅರ್ಥಮಾಡಿಕೊಂಡ ಅಂಬರೀಶ್, ಭಾರತೀಯ ಆಯುರ್ವಿಜ್ಞಾನ ಸಂಸ್ಥೆ, ಸಂಜಯ್ ಗಾಂಧಿ ಸ್ನಾತಕೋತ್ತರ ಆಯುರ್ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಗಳು ಹಾಗೂ ಇತರ ವೈದ್ಯರೊಂದಿಗೆ ಸೇರಿ ಭಾರತದಾದ್ಯಂತ ಆಯೋಡಿನ್ ಯುಕ್ತ ಉಪ್ಪು ಕಾರ್ಯಕ್ರಮ ತಯಾರಿಸಿದ್ರು. ಇದರ ಪರಿಣಾಮ ಭಾರತದಲ್ಲೆಲ್ಲ ಕಡೆ ಆಯೋಡಿನ್ ಯುಕ್ತ ಉಪ್ಪು ದೊರೆಯುತ್ತಿದೆ. ಭಾರತದಲ್ಲಿ ಯಾರೊಬ್ಬರೂ ಆಯೋಡಿನ್ ಕೊರತೆಯ ರೋಗದಿಂದ ಬಳಲಬಾರದು ಅನ್ನೋದು ಈ ಅಭಿಯಾನದ ಉದ್ದೇಶ. ಅದು ಸಂಪೂರ್ಣ ಸಫಲವಾಗಿದ್ದು, ಇವತ್ತಿಗೂ ಜಾರಿಯಲ್ಲಿದೆ.
90ರ ದಶಕದಲ್ಲಿ ಆಯೋಡಿನ್ ಜಾಗೃತಿ ಕಾರ್ಯಕ್ರಮವನ್ನು ಎಲ್ಲೆಡೆ ಆಯೋಜಿಸುವುದು ಸುಲಭವಾಗಿರಲಿಲ್ಲ. ಕೆಲ ವ್ಯಕ್ತಿಗಳು, ಪ್ರಭಾವಿಗಳು, ಸಂಸ್ಥೆಗಳು ಇದನ್ನು ವಿರೋಧಿಸಿದ್ದರು. ವಿದೇಶಿ ಕಂಪನಿಗಳ ಜೊತೆ ಸೇರಿ ಹುನ್ನಾರ ಮಾಡಲಾಗ್ತಿದೆ ಅಂತಾ ಸುದ್ದಿ ಹಬ್ಬಿಸಿದ್ದರು. ಆಯೋಡಿನ್ ಯುಕ್ತ ಉಪ್ಪು ತಯಾರಿಕಾ ಕಂಪನಿಗಳಿಗೆ ಲಾಭ ಮಾಡಿಕೊಡುವ ಪ್ರಯತ್ನ ಇದು ಅಂತಾ ಹೇಳಲಾಗಿತ್ತು. ಇದ್ರಿಂದ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟವಾಗಲಿದೆ ಎನ್ನಲಾಗುತ್ತಿತ್ತು.
ಆಂದೋಲನ ವಿರೋಧಿಸಿದವರು ರೋಗಪೀಡಿತ ಗ್ರಾಮಕ್ಕೆಂದೂ ಭೇಟಿ ಕೊಟ್ಟಿಲ್ಲ. ಖಾಯಿಲೆಪೀಡಿತರ ದುಸ್ಥಿತಿಯ ಅರಿವು ಅವರಿಗಿಲ್ಲ. ಶರೀರದಲ್ಲಿ ಆಯೋಡಿನ್ ಕೊರತೆಯಿಂದ ಉಂಟಾಗುವ ತೊಂದರೆಯ ಅರಿವಿಲ್ಲ. ದೊಡ್ಡ ದೊಡ್ಡ ನಗರಗಳ ಎಸಿ ರೂಮ್ ನಲ್ಲಿ ಕುಳಿತು ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದರು. ಜನಹಿತವಾದ ಆಂದೋಲನ ಅವರಿಗೆ ಬೇಕಿರಲಿಲ್ಲ. ಆದ್ರೆ ಅದರ ಮಹತ್ವ ಅರಿತುಕೊಂಡ ಸರ್ಕಾರ ಭಾರತೀಯರಲ್ಲಿದ್ದ ಆಯೋಡಿನ್ ಕೊರತೆ ನೀಗಿಸಲು ನೆರವಾಯಿತು ಅಂತಾ ಮಿತ್ತಲ್ ತಿಳಿಸಿದ್ದಾರೆ.
ನಂತರ ಏಮ್ಸ್ ಎಂಡ್ರೋಕ್ರನಾಲಜಿಯಲ್ಲಿ ಸೂಪರ್ ಸ್ಪೆಷಾಲಿಟಿ ಕೋರ್ಸ್ ಆರಂಭಿಸಿತ್ತು. 1987ರಲ್ಲಿ ಅಂಬರೀಶ್ ಈ ಪದವಿ ಪಡೆದ ಮೊದಲ ಡಾಕ್ಟರ್ ಎನಿಸಿಕೊಂಡ್ರು. ಆ ಸಮಯದಲ್ಲಿ ಈ ವಿಭಾಗದಲ್ಲಿ ಅತಿ ಕಡಿಮೆ ವೈದ್ಯರಿದ್ದರು. ಬಹುತೇಕ ವೈದ್ಯರಿಗೆ ಈ ವಿಷಯದ ಬಗ್ಗೆ ಗೊತ್ತಿರಲಿಲ್ಲ. ತಮ್ಮ ಮಗ ಮುಂದೇನು ಮಾಡ್ತಾನೆ ಅನ್ನೋದು ಅವರ ತಾಯಿಗೂ ಗೊತ್ತಿರಲಿಲ್ಲ. ಯಾವ ಬಗೆಯ ರೋಗಿಗಳಿಗೆ ಚಿಕಿತ್ಸೆ ನೀಡಲಿದ್ದಾನೆ ಅನ್ನೋದು ಗೊತ್ತಿರಲಿಲ್ಲ. ಈ ಸಂದೇಹಗಳನ್ನೆಲ್ಲ ನಿವಾರಿಸಿಕೊಳ್ಳಲು ಅಂಬರೀಶ್ ಅವರ ತಾಯಿ ಮೆಡಿಕಲ್ ಕಾಲೇಜು ಪ್ರೊಫೆಸರ್ ಜೊತೆ ಮಾತನಾಡಿದ್ರು. ಅವರು ವಿವರಿಸಿದ್ರೂ ತಾಯಿಗೆ ಅರ್ಥವಾಗಿರಲಿಲ್ಲ. ಏನಾದ್ರೂ ಮಾಡು, ಆದ್ರೆ ರೋಗಿಗಳ ಸೇವೆ ಮಾಡು ಅಂತಾ ಮಗನ ಬಳಿ ಹೇಳಿದ್ರು. ‘ಆ ದಿನಗಳಲ್ಲಿ ಎಂಡೋಕ್ರನಾಲಜಿ ಬಗ್ಗೆ ಪ್ರೊಫೆಸರ್ ಗಳಿಗೂ ಗೊತ್ತಿರಲಿಲ್ಲ. ಮೊದಮೊದಲು ಈ ಕ್ಷೇತ್ರ ಕೇವಲ ಸಕ್ಕರೆ ಖಾಯಿಲೆ ಮತ್ತು ಥೈರಾಯ್ಡ್ ಗೆ ಸಂಬಂಧಿಸಿದ್ದೆಂದು ನನಗೂ ಅನಿಸಿತ್ತು. ಕೆಲಸ ಮಾಡುತ್ತ ಮಾಡುತ್ತ ಕ್ಷೇತ್ರ ಭಾರತೀಯರೊಂದಿಗೆ ಬೆಸೆದುಕೊಂಡಿದೆ ಅನ್ನೋದು ಅರ್ಥವಾಯ್ತು’.
ಅಂಬರೀಶ್ ಸಂಜಯ್ ಗಾಂಧಿ ಸ್ನಾತಕೋತ್ತರ ವಿಜ್ಞಾನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ್ರು. ಈ ಸಮಯದಲ್ಲಿ ಫ್ಲೋರೈಡ್ ಯುಕ್ತ ನೀರಿನಿಂದಾಗುವ ಅಪಾಯದ ಬಗ್ಗೆ ಅರಿವು ಮೂಡಿಸುವ ಕೆಲಸ ಆರಂಭಿಸಿದ್ರು. ಭಾರತದಲ್ಲಿ ಮೊಟ್ಟ ಮೊದಲ ಮೂಳೆ ಸಾಂದ್ರತೆ ಮಾಪನಾ ವ್ಯವಸ್ಥೆ ಆರಂಭಿಸಿದ್ರು. ಆಸ್ಟಿಯೋಪೋರೋಸಿಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ರು.
16 ವರ್ಷದ ಯುವಕನೊಬ್ಬ ಆಸ್ಪತ್ರೆಗೆ ಬಂದಿದ್ದ. ಅವನ ಮೂಳೆಗಳು ತಿರುಚಿಕೊಂಡಿದ್ದರಿಂದ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಆತನನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರಿಗೆ ಅದು ಯಾವ ರೋಗವೆಂಬುದು ಅರಿವಿಗೇ ಬರಲಿಲ್ಲ. ಬಹುಷಃ ಹಾರ್ಮೋನ್ ಸಮಸ್ಯೆ ಇರಬಹುದು ಎಂದುಕೊಂಡ್ರು ಡಾಕ್ಟರ್ ಗಳು. ನಂತರ ಅವರು ಅಂಬರೀಶ್ ಅವರನ್ನು ರೆಫರ್ ಮಾಡಿದ್ರು. ಆ ಯುವಕ ತುಂಬಾ ದುಸ್ಥಿತಿಯಲ್ಲಿದ್ದ. ಅವನ ಶರೀರ ಅರ್ಧಚಂದ್ರಾಕೃತಿಯಲ್ಲಿ ಮುದುಡಿ ಹೋಗಿತ್ತು. ಅದರ ಹಿಂದಿರುವ ಕಾರಣ ಪತ್ತೆ ಮಾಡಲು ಅಂಬರೀಶ್ ಪಣತೊಟ್ಟರು. ಆ ಯುವಕನನ್ನು ಹತ್ತಾರುಬಗೆಯ ಪರೀಕ್ಷೆಗೆ ಒಳಪಡಿಸಿದ್ರು. ಇದು ಮೂಳೆ ಸಮಸ್ಯೆ ಅದಕ್ಕೆ ಕಾರಣ ಆಹಾರ ಅನ್ನೋದು ಸ್ಪಷ್ಟವಾಗಿತ್ತು. ಈ ಬಗ್ಗೆ ಅಧ್ಯಯನ ಮಾಡಿದ ಅಂಬರೀಶ್ ಆ ಯುವಕನ ಮನೆ ಮತ್ತು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು. ಆ ಊರಿನಲ್ಲಿ ಹಲವರು ಇದೇ ರೀತಿಯ ಸಮಸ್ಯೆಯಿಂದ ಕಂಗಾಲಾಗಿದ್ರು. ಮಕ್ಕಳು, ಯುವಕರು, ಪುರುಷರು, ಮಹಿಳೆಯರು ಎಲ್ಲರಲ್ಲೂ ಮೂಳೆಯ ಸಮಸ್ಯೆ. ಅಂಬರೀಶ್ ಆ ಗ್ರಾಮದ ಕುಡಿಯುವ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ರು. ಆ ವರದಿ ಬರ್ತಿದ್ದಂತೆ ಮೂಳೆಯ ಸಮಸ್ಯೆಗೆ ಕಾರಣ ಸ್ಪಷ್ಟವಾಗಿತ್ತು. ಉನ್ನಾವ್ ಜಿಲ್ಲೆಯ ಜನರೆಲ್ಲ. ಫ್ಲೋರೈಡ್ ಯುಕ್ತ ನೀರು ಕುಡಿಯುತ್ತಿದ್ರು. ಫ್ಲೋರೈಡ್ ಅಂಶ ಹೆಚ್ಚಾಗಿದ್ರೆ ಆ ನೀರು ವಿಷವಾಗುತ್ತದೆ. ನೀರಿನಲ್ಲಿರುವ ಫ್ಲೋರೈಡ್ ಮೂಳೆಗಳ ಮೇಲೆ ಶೇಖರಣೆಯಾಗುತ್ತದೆ. ಅದರಿಂದ ಮೂಳೆಗಳ ಶಕ್ತಿ ಕುಸಿಯುತ್ತದೆ.
ಮೂಳೆ ಖಾಯಿಲೆಯ ಮೂಲ ಗೊತ್ತಾಗ್ತಿದ್ದಂತೆ ಅಂಬರೀಶ್, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಭಿಯಾನ ಶುರುಮಾಡಿದ್ರು. ಆ ಗ್ರಾಮಗಳಿಗೆಲ್ಲ ಸರ್ಕಾರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾರಂಭಿಸಿತ್ತು. ದೇಶದಲ್ಲಿ 6-7 ಕೋಟಿ ಜನರು ಫ್ಲೋರೈಡ್ ಯುಕ್ತ ನೀರಿಗೆ ಬಲಿಯಾಗ್ತಿದ್ದಾರೆ ಅನ್ನೋದನ್ನು ಅಂಬರೀಶ್ ಪತ್ತೆ ಮಾಡಿದ್ರು. ಇದಕ್ಕೆ ಕಾರಣ ಗೊತ್ತಾದ ಮೇಲೂ ಸರ್ಕಾರ ಶುದ್ಧ ನೀರನ್ನು ಪೂರೈಸದೇ ಇರೋದು ಅಂಬರೀಶ್ ಅವರಿಗೆ ಬೇಸರ ಮೂಡಿಸಿತ್ತು. ಅಂಬರೀಶ್ ಅವರು ಇದುವರೆಗೆ ಅನೇಕ ಬಗೆಯ ರೋಗಗಳ ಬಗ್ಗೆ ಹೊಸ ಹೊಸ ಸಂಶೋಧನೆ ಮಾಡಿದ್ದಾರೆ. ಉತ್ತರಪ್ರದೇಶದಾದ್ಯಂತ ಫ್ಲೋರೈಡ್ ಯುಕ್ತ ನೀರಿನಿಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಈ ವಿಷಯದ ಮೇಲೆ ಮಾತನಾಡಲು ಹಾರ್ವರ್ಡ್ ವಿಶ್ವವಿದ್ಯಾನಿಲಯ ಕೂಡ ಅವರನ್ನು ಆಹ್ವಾನಿಸಿತ್ತು. ತಮ್ಮ ಪ್ರಯೋಗಾಲಯದಲ್ಲೂ ಇಂಥದ್ದೇ ಸಂಶೋಧನೆ ನಡೆಸುವಂತೆ ಮನವಿ ಮಾಡಿತ್ತು. ಹಾರ್ವರ್ಡ್ ವಿವಿ 1993-94ರಲ್ಲಿ ಅವರಿಗೆ ಫೆಲೋಶಿಪ್ ಕೂಡ ಪ್ರಧಾನ ಮಾಡಿದೆ.
ಭಾರತದಲ್ಲಿ ಇದುವರೆಗೆ ಯಾರೂ ಮಾಡಿರದಂತಹ ಅದ್ಭುತ ಕಾರ್ಯಗಳನ್ನು ಅಂಬರೀಶ್ ಮಾಡಿದ್ದಾರೆ. ಅವರ ಸಂಶೋಧನೆಗಳಿಂದ ಭಾರತದ ಚಿಕಿತ್ಸಾ ವಿಜ್ಞಾನಕ್ಕೆ ಹೊಸ ಆಯಾಮ ಸಿಕ್ಕಿದೆ. ಅಂಬರೀಶ್ 1997ರಲ್ಲಿ ರಾಜೀವ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಯಲ್ಲಿ ಮೂಳೆ ಸಾಂದ್ರತೆ ಮೌಲ್ಯಮಾಪನ ವ್ಯವಸ್ಥೆ ಆರಂಭಿಸಿದ್ರು. ಜಪಾನ್ ನ ಜೆಐಸಿಎನಲ್ಲಿ ಮೂಳೆ ಸಾಂದ್ರತೆ ನಿರ್ವಹಣೆ ಶಿಕ್ಷಣ ಪಡೆದ ಮೊದಲ ಭಾರತೀಯ ಡಾ.ಅಂಬರೀಶ್. ಆಸ್ಟಿಯೊಪೋರೊಸಿಸ್ ಒಂದು ದೊಡ್ಡ ಸಮಸ್ಯೆ, ಭಾರತದಲ್ಲಿ 5 ಕೋಟಿ ಜನ ಈ ರೋಗದಿಂದ ಬಳಲುತ್ತಿದ್ದಾರೆ ಎಂಬುದನ್ನು ಕೂಡ ಪತ್ತೆ ಮಾಡಿದವರು ಅಂಬರೀಶ್.
ಇದರಿಂದ ಪಾರಾಗುವ ಬಗೆಯ ಬಗ್ಗೆ ಜಾಗೃತಿ ಮೂಡಿಸಲು ಅಂಬರೀಶ್ ಆರಂಭಿಸಿದ್ರು. ಭಾರತದಲ್ಲಿ ವಿಟಮಿನ್ ಡಿ ಕೊರತೆಯಿಂದ ಲಕ್ಷಾಂತರ ಮಂದಿ ಬಗೆಬಗೆಯ ರೋಗಗಳಿಂದ ಬಳಲುತ್ತಿದ್ದಾರೆ ಅನ್ನೋದನ್ನು ಕಂಡುಹಿಡಿದ್ರು. ಆ ಸಮಯದಲ್ಲಿ ಹಲವು ಗರ್ಭಿಣಿಯರಲ್ಲಿ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ವಿಟಮಿನ್ ಡಿ ಕೊರತೆ ದೂರ ಮಾಡಲು ಕೆಲ ಸಂಸ್ಥೆಗಳೊಂದಿಗೆ ಸೇರಿ ಅಂಬರೀಶ್, ವಿಟಮಿನ್ ಡಿಯುಕ್ತ ಹಾಲು, ಖಾದ್ಯ ತೈಲ ಉತ್ಪಾದನೆ ಮತ್ತು ಅದರ ಬಳಕೆಗೆ ನಾಂದಿ ಹಾಡಿದ್ರು. ಹತ್ತಾರು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಭಾರತದ ಮೊಟ್ಟ ಮೊದಲ ವೈದ್ಯ ಅಂದ್ರೆ ಅಂಬರೀಶ್.
ಅಂಬರೀಶ್ ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಸಂಸ್ಥೆಗಳ ನೇತೃತ್ವ ವಹಿಸಿದ್ದರು. ಈ ಮೂಲಕ ದೇಶಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅಂಬರೀಶ್ ಅವರ ಸಂಶೋಧನೆಗಳ ಬಗ್ಗೆ ವಿಶ್ವದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ವಾಹಿನಿಗಳಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ಕೂಡ ಅವರು ರೋಗಿಗಳಿಗೆ ನೆರವಾಗುತ್ತಿದ್ದಾರೆ. ಚಿಕಿತ್ಸೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗಿದೆ. 2004ರಲ್ಲಿ ಅಮೆರಿಕನ್ ಸೊಸೈಟಿ ಆಫ್ ಬೋನ್ & ಮಿನರಲ್ ರಿಸರ್ಚ್ ನ ‘ಬಾಯ್ ಫ್ರೇಮ್ ಪ್ರಶಸ್ತಿ’ ಪಡೆದ ಮೊದಲ ಭಾರತೀಯ ಅಂಬರೀಶ್. 2005ರಲ್ಲಿ ಅಂತರಾಷ್ಟ್ರೀಯ ಅಸ್ಟಿಯೊಪೊರೋಸಿಸ್ ಫೌಂಡೇಶನ್ ನ ಹೆಲ್ತ್ ಪ್ರೊಫೆಷನಲ್ ಅವೇರ್ನೆಸ್ ಪ್ರಶಸ್ತಿ ನೀಡಲಾಗಿದೆ. 2015ರಲ್ಲಿ ಭಾರತ ಸರ್ಕಾರ ಅಂಬರೀಶ್ ಅವರಿಗೆ ‘ಪದ್ಮಭೂಷಣ’ ನೀಡಿ ಗೌರವಿಸಿದೆ.
ಸದ್ಯ ಅಂಬರೀಶ್ ಮಿತ್ತಲ್ ಗುರ್ಗಾಂವ್ ನ ಮೇದಾಂತಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಬಿಟ್ಟು ಅವರು ಖಾಸಗಿ ಹಾಸ್ಪಿಟಲ್ ಸೇರಿರೋದು ಸರಿಯಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ‘ಎಲ್ಲಾದ್ರೂ ಕೆಲಸ ಮಾಡಲಿ, ರೋಗಿಗಳಿಗೆ ಚಿಕಿತ್ಸೆ ನೀಡುವುದು ಮುಖ್ಯ. ಆಸ್ಪತ್ರೆ ಬದಲಿಸಿದಾಕ್ಷಣ ಕೆಲಸ ಬದಲಾಗುವುದಿಲ್ಲ. ಚಿಕಿತ್ಸಾ ವಿಧಾನ ಬದಲಾಗುವುದಿಲ್ಲ. ನಾನೆಲ್ಲೇ ಇದ್ರೂ ರೋಗಿಗಳ ಸೇವೆ ಮಾಡುತ್ತೇನೆ. ನನ್ನ ಜೀವನದ ಉದ್ದೇಶವೇ ಅದು. ರೋಗಿಗಳ ಸೇವೆ ಮಾಡುವ ಉದ್ದೇಶವಿದ್ದವರು ಮಾತ್ರ ವೈದ್ಯರಾಗಬೇಕು. ದೊಡ್ಡ ಕಾರು, ಬಂಗಲೆ ಐಷಾರಾಮಿ ಬಯಸುವವರು ವೈದ್ಯವೃತ್ತಿಗೆ ಸೂಕ್ತವಲ್ಲ’ ಎನ್ನುತ್ತಾರೆ ಅಂಬರೀಶ್. ಯಾವ ವೈದ್ಯರಿಗೂ ಗೊತ್ತಾಗದಂತ ಅದೆಷ್ಟೋ ಖಾಯಿಲೆಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿದ ಹೆಗ್ಗಳಿಕೆ ಅಂಬರೀಶ್ ಅವರದ್ದು. ತಮ್ಮ ಅನುಭವ ಮತ್ತು ಜ್ಞಾನವನ್ನು ರೋಗಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಎರಡು ಘಟನೆಗಳನ್ನು ನೆನೆಸಿಕೊಂಡಾಗಲೆಲ್ಲ ಅಂಬರೀಶ್ ಭಾವುಕರಾಗುತ್ತಾರೆ.
ಗೋರಖ್ಪುರದ ಒಂದು ಮಗುವಿಗೆ ವಿಚಿತ್ರ ಖಾಯಿಲೆ ಬಂದಿತ್ತು. ಮೂಳೆಗಳು ದುರ್ಬಲವಾಗಿ ನೋವು ಬರುತ್ತಿತ್ತು. ಎಷ್ಟು ವೈದ್ಯರಿಗೆ ತೋರಿಸಿದ್ರು ರೋಗಕ್ಕೆ ಕಾರಣ ಪರಿಹಾರ ಯಾವುದೂ ಸಿಕ್ಕಿರಲಿಲ್ಲ. ಕೊನೆಗೆ ಅಂಬರೀಶ್ ಅವರ ಬಳಿ ಕರೆತಂದ್ರು. ವಿವಿಧ ಪರೀಕ್ಷೆ ಮಾಡಿಸಿದ ಅಂಬರೀಶ್ ಮಗುವಿನ ಸಮಸ್ಯೆಯ ಮೂಲ ಪತ್ತೆ ಮಾಡಿದ್ರು. ಬಾಲಕನ ರಕ್ತದಲ್ಲಿ ಕ್ಯಾಲ್ಷಿಯಂ ಪ್ರಮಾಣ ತೀರಾ ಕಡಿಮೆಯಿತ್ತು. ಅಂಬರೀಶ ಅವರ ಚಿಕಿತ್ಸೆಯ ಫಲವಾಗಿ ಕೆಲವೇ ದಿನಗಳಲ್ಲಿ ಆತ ಗುಣಮುಖನಾದ. ಈಗ ಆತ ದೊಡ್ಡವನಾಗಿದ್ದು, ಅಮೆರಿಕದಲ್ಲಿದ್ದಾನಂತೆ. ಈಗಲೂ ಅಂಬರೀಶ್ ಅವರೊಂದಿಗೆ ಸಂಪರ್ಕದಲ್ಲಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಮಹಿಳೆಯೊಬ್ಬಳನ್ನು ಆವರಿಸಿದ್ದ ಖಾಯಿಲೆ ಪತ್ತೆ ಮಾಡಲು ಯಾವ ವೈದ್ಯರಿಂದ್ಲೂ ಸಾಧ್ಯವಾಗಿರಲಿಲ್ಲ. ದೆಹಲಿಯ ಆ ಮಹಿಳೆಗೂ ಮೂಳೆಯ ಸಮಸ್ಯೆ ಇತ್ತು. ನೋವಿನಿಂದಾಗಿ ನಡೆದಾಡಲು ಸಾಧ್ಯವಾಗ್ತಿರಲಿಲ್ಲ. ವ್ಹೀಲ್ ಚೇರ್ ನಲ್ಲಿ ಕುಳಿತೇ ಬದುಕು ಸಾಗಿಸಬೇಕಿತ್ತು. ಅಂಬರೀಶ್ ಅವರ ಬಳಿ ಚಿಕಿತ್ಸೆ ಪಡೆಯಲು ಬಂದ ಮಹಿಳೆ ತನ್ನ ದುಸ್ಥಿತಿಯನ್ನು ವಿವರಿಸುತ್ತ ಕಣ್ಣೀರಿಟ್ಟಿದ್ಲು. ಅವಳನ್ನು ಪರೀಕ್ಷೆಗೊಳಪಡಿಸಿದ ಅಂಬರೀಶ್ ಅವರಿಗೆ, ಕೆಲವೊಂದು ಮೂಳೆಗಳೇ ಮುರಿದು ಹೋಗಿರೋದು ಗೊತ್ತಾಗಿತ್ತು. ಆಕೆಗೂ ಕ್ಯಾಲ್ಷಿಯಂ ಹಾಗೂ ವಿಟಮಿನ್ ಡಿ ಕೊರತೆ ಇತ್ತು. ಅಂಬರೀಶ್ ಅವರಿಂದ ಚಿಕಿತ್ಸೆ ಪಡೆದ ಮಹಿಳೆ ಕೇವಲ ಮೂರು ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖಳಾದ್ಲು. ಆರಾಮಾಗಿ ಓಡಾಡಲಾರಂಭಿಸಿದ್ಲು. ಅವಳ ಮುಖದಲ್ಲಿ ಕೃತಜ್ಞತಾ ಭಾವದ ಜೊತೆಗೆ ಖುಷಿ ಇತ್ತು. ‘ರೋಗಿಗಳ ಸಂತೋಷ ಬಿಟ್ರೆ ಇನ್ಯಾವುದೂ ನನಗೆ ಮುಖ್ಯವಲ್ಲ. ಸಂಪೂರ್ಣ ಚೇತರಿಸಿಕೊಂಡು ರೋಗಿಗಳು ತುಂಬು ಹೃದಯದಿಂದ ಆಶೀರ್ವದಿಸಿದ್ರೆ ನನ್ನ ಬದುಕು ಸಾರ್ಥಕವೆನಿಸುತ್ತದೆ’ ಅನ್ನೋದು ಅಂಬರೀಶ್ ಅವರ ಮನದಾಳದ ಮಾತು.
‘ಪ್ರಶಸ್ತಿಯಿಂದ ಖುಷಿ ಸಿಗುವುದಿಲ್ಲ, ಆದ್ರೆ ಮಾನ್ಯತೆ ಸಿಗುತ್ತದೆ. ನಾನು ಏನು ಮಾಡುತ್ತಿದ್ದೇನೆ ಅನ್ನೋದು ಎಲ್ಲರಿಗೂ ತಿಳಿಯುತ್ತದೆ. ಪ್ರಶಸ್ತಿ ಸಿಗಲಿ ಬಿಡಲಿ ನನ್ನ ಕರ್ತವ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಪ್ರತಿನಿತ್ಯ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳು ಬರ್ತಾರೆ. ಪ್ರತಿ ರೋಗಿಯೂ ಒಂದು ಸವಾಲು ಇದ್ದಂತೆ’ ಎನ್ನುತ್ತಾರೆ ಅಂಬರೀಶ್.
ವೈದ್ಯರಿಂದ್ಲೂ ತಪ್ಪುಗಳು ನಡೆಯುತ್ತವೆ ಅನ್ನೋದನ್ನು ಒಪ್ಪಿಕೊಳ್ಳಲು ಅಂಬರೀಶ್ ಹಿಂದೇಟು ಹಾಕುವುದಿಲ್ಲ. ತಮ್ಮಿಂದ್ಲೂ ತಪ್ಪಾಗಿದೆ ಅಂತಾ ಒಪ್ಪಿಕೊಳ್ತಾರೆ. ‘ಒಮ್ಮೊಮ್ಮೆ ಏನು ಮಾಡಬೇಕೆಂಬುದೇ ವೈದ್ಯರಿಗೆ ಅರ್ಥವಾಗುವುದಿಲ್ಲ. ವೈದ್ಯರು ಕೂಡ ಉಪಾಯ ಹುಡುಕುತ್ತಾರೆ. ಹಾಗಾಗಿ ಪ್ರತಿ ವೈದ್ಯನಿಗೂ ಪ್ರತಿ ರೋಗಿ ಒಂದು ಸವಾಲು. ಪ್ರತಿ ರೋಗಿಯೂ ನೋವಿನಿಂದಾಗಿಯೇ ವೈದ್ಯರ ಬಳಿ ಬಂದಿದ್ದಾನೆ ಅನ್ನೋದನ್ನು ಡಾಕ್ಟರ್ ಗಳು ಅರ್ಥಮಾಡಿಕೊಳ್ಳಬೇಕು. ಆ ನೋವನ್ನು ದೂರ ಮಾಡುವುದು ವೈದ್ಯರ ಕರ್ತವ್ಯ. ರೋಗಿಯ ಸ್ಥಾನದಲ್ಲಿ ನಿಂತು ವೈದ್ಯ ಯೋಚಿಸಬೇಕು. ಆಗ ರೋಗಿಯ ಪರಿಸ್ಥಿತಿ ಅರ್ಥವಾಗುತ್ತದೆ. ತಮ್ಮ ಬಳಿ ಬರುವ ಪ್ರತಿ ರೋಗಿಯೂ ಖುಷಿಯಿಂದ ತೃಪ್ತಿಯಿಂದ ಹೋಗುವಂತಾಗಲಿ ಅನ್ನೋದು ವೈದ್ಯರ ಗುರಿಯಾಗಿರಬೇಕು’ ಅಂತಾ ಅಂಬರೀಶ್ ವಿವರಿಸಿದ್ದಾರೆ.
ಅಂಬರೀಶ್ ಈಗ ಮಾಹಿತಿ ತಂತ್ರಜ್ಞಾನ ಹಾಗೂ ಹೊಸ ಟೆಕ್ನಾಲಜಿ ಬಳಸಿ ರೋಗಿಗಳಿಗೆ ನೆರವಾಗುತ್ತಿದ್ದಾರೆ. ಇಂಟರ್ನೆಟ್, ಮೊಬೈಲ್ ಮತ್ತು ಆ್ಯಪ್ ಮೂಲಕ ಸಲಹೆ ಸೂಚನೆ, ಮಾಹಿತಿಗಳನ್ನು ರೋಗಿಗಳಿಗೆ ತಲುಪಿಸುತ್ತಾರೆ. ತೀವ್ರ ಅನಾರೋಗ್ಯಪೀಡಿತರಾದವರು ವಾಟ್ಸಾಪ್ ನಂತರ ಅಪ್ಲಿಕೇಶನ್ ಗಳ ಮೂಲಕ ಮನೆಯಲ್ಲೇ ತಮ್ಮ ಸಲಹೆ ಪಡೆಯುವಂತಾಗಬೇಕು ಅನ್ನೋದು ಅವರ ಉದ್ದೇಶ. ತಮ್ಮ ಬದುಕಿನಲ್ಲಿ ಯಾವುದೇ ಗುರಿಯಿಲ್ಲ, ಆದ್ರೆ ಆದ್ಯತೆಗಳಿವೆ ಎನ್ನುತ್ತಾರೆ ಅಂಬರೀಶ್. ಮೊದಲನೆಯದು ರೋಗಿಗಳಿಗೆ ಉತ್ತಮ ಸೇವೆ ನೀಡುವುದು. ಎರಡನೆಯದು ಮಾಹಿತಿ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ನೆರವಾಗುವುದು. ಹಾಲು, ತುಪ್ಪ ಮತ್ತು ಎಣ್ಣೆಗಳಲ್ಲಿ ವಿಟಮಿನ್ ಡಿ ಅಳವಡಿಸಲು ಸಂಸ್ಥೆ ಮತ್ತು ಕಂಪನಿಗಳಿಗೆ ಸರ್ಕಾರದ ಮೂಲಕ ಒತ್ತಡ ಹೇರುವುದು. ಮಾಧ್ಯಮಗಳ ಸಹಾಯದಿಂದ ಬೇರೆ ಬೇರೆ ವಿಷಯಗಳ ಮೇಲೆ ಆರೋಗ್ಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ತಪ್ಪು ಗ್ರಹಿಕೆಯನ್ನು ದೂರ ಮಾಡುವುದು. ಸಾಮಾಜಿಕ ತಾಣಗಳ ಮೂಲಕವೂ ಅಂಬರೀಶ್ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರೋಗಗಳಿಂದ ಪಾರಾಗುವ ಉಪಾಯ ಹೇಳಿಕೊಡ್ತಿದ್ದಾರೆ.
ಇದನ್ನೂ ಓದಿ...