ಅಜ್ಜಿಯರ ಶಿಕ್ಷಣಕ್ಕೆ ಹುಟ್ಟಿಕೊಂಡಿದೆ ಶಾಲೆ- 90 ವರ್ಷದ ವಿದ್ಯಾರ್ಥಿನಿಯೇ ಇಲ್ಲಿನ ಆಕರ್ಷಣೆ
ಟೀಮ್ ವೈ.ಎಸ್. ಕನ್ನಡ
ಶಾಲೆಗೆ ಹೋಗುವ ವಯಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಬ್ಬಾಬ್ಬಾ ಅಂದ್ರೆ 3ನೇ ವರ್ಷದಿಂದ 25 ಅಥವಾ 30ನೇ ವರ್ಷದ ತನಕ ವಿದ್ಯಾಭ್ಯಾಸ ಮಾಡಬಹುದು. ಆದ್ರೆ ಮಹಾರಾಷ್ಟ್ರದ ಥಾನೆ ಜಿಲ್ಲೆಯ ಫಂಗಾನೆಯಲ್ಲಿ ವಿಚಿತ್ರ ಶಾಲೆಯೊಂದಿದೆ. ಇಲ್ಲಿ ಶಿಕ್ಷಣ ಪಡೆಯಲು ಬರುವವರೆಲ್ಲರೂ ವಯಸ್ಸಾದ ಅಜ್ಜಿಯರು. ಇಲ್ಲಿನ ವಿದ್ಯಾರ್ಥಿಗಳ ವಯಸ್ಸು 60 ರಿಂದ 90 ಅಂದ್ರೆ ನಂಬಲೇಬೇಕು. ಈ ಶಾಲೆಯ ಹೆಸರು "ಆಜಿಬಾಯಿಚಿ ಶಾಲಾ" ಎಂದು. ಅಂದಹಾಗೇ ಇದನ್ನು ನಡೆಸುತ್ತಿರುವುದು ಯೋಗೇಂದ್ರ ಬಂಗಾರ್ ಮತ್ತು ಮೊತಿರಾಮ್ ದಲಾಲ್ ಚಾರಿಟೇಬಲ್ ಟ್ರಸ್ಟ್. ಈ ವಯಸ್ಕರ ಶಾಲೆ ಸೋಸಿಯಲ್ ಮೀಡಿಯಾ ಮತ್ತು ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಹೆಡ್ಲೈನ್ ಆಗಿ ಸುದ್ದಿ ಮಾಡ್ತಿದೆ.
ಅಂದಹಾಗೇ ಈ ಶಾಲೆ ಪ್ರತಿದಿನ ಒಂದೆರಡು ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ. ಇಲ್ಲಿಗೆ ಬರುವ ವಿದ್ಯಾರ್ಥಿನಿಯರು ಪಿಂಕ್ ಸೀರೆ ಉಟ್ಟುಕೊಂಡು ಬರಬೇಕು. ವಯಸ್ಸಾದವರಿಗೆ ಪ್ರೀತಿ ಮತ್ತು ಗೌರವ ತೋರಿಸುವ ಉದ್ದೇಶದಿಂದ ಈ ಶಾಲೆಯನ್ನು ಆರಂಭಿಸಲಾಗಿದೆ ಎಂದು ಮೋತಿಲಾಲ್ ದಲಾಲ್ ಚಾರಿಟೇಬಲರ್ ಟ್ರಸ್ಟ್ನ ದಿಲೀಪ್ ದಲಾಲ್ ಹೇಳಿದ್ದಾರೆ. ವಯಸ್ಸಾದವರು ಸಮಾಜಕ್ಕೆ ತುಂಬಾ ಹತ್ತಿರದವರಾಗಿದ್ದಾರೆ ಅನ್ನೋ ಸಂದೇಶ ಸಾರುವ ಉದ್ದೇಶ ಈ ಶಾಲೆಯದ್ದಾಗಿದೆ.
ಇದನ್ನು ಓದಿ: ತಾಯಿ ಮನೆಯಲ್ಲಿ ಎಲ್ಲರೂ ಕ್ಷೇಮ..
ಈ ಶಾಲೆ ಕಳೆದ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಮಾರ್ಚ್ 8 ರಂದು ಆರಂಭವಾಗಿತ್ತು. ಈ ಶಾಲೆಯಲ್ಲಿ ಸುಮಾರು 27 ವಿದ್ಯಾರ್ಥಿನಿಯರಿದ್ದು ಎಲ್ಲರೂ ಒಟ್ಟಾಗಿ ಓದು, ಬರವಣಿಗೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಮರಾಠಿಯಲ್ಲಿ ಶಿಕ್ಷಣ ನೀಡುತ್ತಿದೆ. 90 ವರ್ಷ ವಯಸ್ಸಿನ ಸೀತಾಬಾಯಿ ದೇಶ್ಮುಖ್ ಈ ಶಾಲೆಯ ಹಿರಿಯ ವಿದ್ಯಾರ್ಥಿನಿ.
" ನನ್ನ ಬದುಕಿನಲ್ಲಿ ನಾನೆಂದು ಶಾಲೆಯ ಮೆಟ್ಟಿಲು ಹತ್ತಿಲ್ಲ. ನಾವು ಯುವತಿ ಆಗಿದ್ದಾಗ ನನ್ನ ಕುಟುಂಬ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿತ್ತು. ಅಷ್ಟೇ ಅಲ್ಲ ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಅನ್ನುವುದು ಕೇವಲ ಕನಸು ಮಾತ್ರ ಆಗಿತ್ತು. ಆದ್ರೆ ಈಗ ನನಗೆ ಖುಷಿ ಆಗುತ್ತಿದೆ. ನಾನು ಕೂಡ ಶಾಲೆಯಲ್ಲಿ ಕಲಿಯುತ್ತಿದ್ದೇನೆ."
- ಸೀತಾಬಾಯಿ ದೇಶ್ಮುಖ್, 90 ವರ್ಷದ ವಿದ್ಯಾರ್ಥಿನಿ
ಸೀತಾಬಾಯಿಗೆ 8 ವರ್ಷದ ಮೊಮ್ಮಗಳು ಶಾಲೆಗೆ ಬರುವುದಕ್ಕೆ ಸಹಾಯ ಮಾಡುತ್ತಿದ್ದಾಳೆ. ಕೆಲವೊಮ್ಮೆ ಮೊಮ್ಮಗಳು ಅನುಷ್ಕಾ ಸೀತಾಬಾಯಿಗೆ ಹೋಮ್ ವರ್ಕ್ ಕೂಡ ಮಾಡಿಕೊಡುತ್ತಾಳೆ. ಇದು ಅನುಷ್ಕಾಗೆ ಹೆಚ್ಚು ಖುಷಿ ನೀಡುತ್ತಿದೆ.
ಆರಂಭದಲ್ಲಿ ಚಿಕ್ಕ ಸ್ಥಳದಲ್ಲಿ ಶಾಲೆ ಆರಂಭವಾಗಿತ್ತು. ಆದ್ರೆ ಮೊನ್ನೆಯ ಗಣರಾಜ್ಯೋತ್ಸವದ ವೇಳೆಯಲ್ಲಿ ಹೆಚ್ಚು ಸ್ಥಳಾವಕಾಶ ಇರುವ ಜಾಗಕ್ಕೆ ಸ್ಥಳಾಂತರವಾಗಿದೆ. ಸ್ಥಳೀಯ ವಿದ್ಯಾರ್ಥಿಗಳ ಜೊತೆ ಈ ಅಜ್ಜಿಯರು ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದ್ದರು. ಈ ಸಂಭ್ರಮವನ್ನು ಎಲ್ಲರು ಇಷ್ಟ ಪಟ್ಟಿದ್ದರು ಅನ್ನುವುದು ಮತ್ತೊಂದು ವಿಶೇಷ.
“ನಾವು ಆರಂಭದಲ್ಲಿ ಶಾಲೆ ಆರಂಭಿಸುವ ಬಗ್ಗೆ ಚರ್ಚೆ ನಡೆಸಿದಾಗ ಗ್ರಾಮದ ಎಲ್ಲರೂ ಸಹಕಾರ ನೀಡಿದ್ರು. ಸಮಾಜಕ್ಕೆ ಉತ್ತಮವಾಗುವ ಕೆಲಸ ಇದ್ದರೆ ಎಲ್ಲರೂ ಸಹಕಾರ ನೀಡುತ್ತಾರೆ. ನಾವು ಯಾರೂ ಕೂಡ ಇಲ್ಲಿ ತನಕ ಮಾಡದೇ ಇರುವ ಕೆಲಸ ಮಾಡಿದ್ದೇವೆ. ಬದುಕಿನಲ್ಲಿ ಜ್ಞಾನ ಅನ್ನುವುದು ತುಂಬಾ ಮಹತ್ವ ಪಡೆಯುತ್ತದೆ. ಆದ್ರೆ ಕೆಲವರಿಗೆ ಶಾಲೆಗೆ ಹೋಗುವ ಅವಕಾಶ ಸಿಕ್ಕಿರುವುದಿಲ್ಲ. ಶೇಕಡಾ 100ರಷ್ಟು ಶಿಕ್ಷಣವಂತರನ್ನಾಗಿ ಮಾಡುವುದೇ ನಮ್ಮ ಉದ್ದೇಶ”
- ಯೋಗೇಂದ್ರ ಬಂಗಾರ್, ಶಾಲೆ ಸಂಸ್ಥಾಪಕ
ಅಂದಹಾಗೇ, ಈ ಶಾಲೆಯಲ್ಲಿ ಅಕ್ಷರಗಳ ಜೊತೆಗೆ ಪೇಪರ್ ಬ್ಯಾಗ್ಗಳನ್ನು ತಯಾರಿಸುವ ಬಗ್ಗೆ ಹೇಳಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ವಿದ್ಯಾರ್ಥಿನಿಯರನ್ನು ಪಿಕ್ನಿಕ್ ಕರೆದುಕೊಂಡು ಹೋಗುವ ಯೋಜನೆಯೂ ಇದೆ. ಅಜ್ಜಿಯರು ಅದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.
1. ಕಾಫಿ ಪುಡಿ, ಟೀ ಪೌಡರ್ ಖಾಲಿ ಆದ್ರೆ ಚಿಂತೆ ಬೇಡ- ಹಾಲಿನ ಜೊತೆಗೆ ಅಗತ್ಯವಸ್ತುಗಳು ಕೂಡ ಬಂದೇ ಬರುತ್ತದೆ..!