Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ

ಟೀಮ್​ ವೈ.ಎಸ್​. ಕನ್ನಡ

ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ

Sunday March 26, 2017 , 3 min Read

ಜೀವನದಲ್ಲಿ ಸಾಧಿಸಬೇಕು ಅನ್ನುವ ಛಲ ಇರಬೇಕು. ಹಳೆಯದ್ದು ಏನೂ ಬೇಕಾದ್ರೂ ಆಗಿರಬಹುದು. ನಾಳೆ ಮಾತ್ರ ಸುಮ್ಮನೆ ಕಾಲ ಕಳೆಯುವಂತಾಗಿರಬೇಕು ಅನ್ನುವ ಕನಸಿರಬೇಕು. ಈ ಕಥೆಯ ಹಿಂದೆ ಕಾಣಿಸುವುದು ಕೂಡ ಅದೇ ಪ್ರೇರಣೆ. ಹೊಸತನ್ನು ಸಾಧಿಸಬೇಕು ಅನ್ನುವ ಛಲ. ಸಾಮಾನ್ಯವಾಗಿ ಪೋಲೀಯೋ ಆ್ಯಟಾಕ್ ಆದವರು ನಮ್ಮ ಕೈಲಿ ಏನು ಆಗುವುದಿಲ್ಲ ಎಂದು ಕುಳಿತುಕೊಳ್ಳುತ್ತಾರೆ. ಆದರೆ ಹುಬ್ಬಳ್ಳಿಯ ಈ ಹೈದ ಪೋಲಿಯೊ ರೋಗಕ್ಕೆ ತುತ್ತಾದರೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ್ದಾನೆ. ಹುಬ್ಬಳ್ಳಿಯ ಇಪ್ಪಾತ್ತಾರರ ತರುಣ ಕಿರಣ್ ಶೇರ್ಖಾನೆ ಎಂಬ ಯುವಕನೇ ಈ ಹುಡುಗ.

image


ಕನಸು ಕಂಡರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕಿರಣ್ ಅವರೇ ಸಾಕ್ಷಿ. ಈಗ ಅವರು ಮಾಡಿರುವ ಪೇಂಟಿಂಗ್​ಗಳ ಪ್ರದರ್ಶನ ದೆಹಲಿಯಲ್ಲಿ ನಡೆಯುತ್ತಿದೆ. ದೆಹಲಿಯ ಲಲಿತಾ ಅಕಾಡೆಮಿ ಗ್ಯಾಲರಿಯಲ್ಲಿ " ಇನ್ಸ್​ಫೈರ್ಡ್ ಬೈ ದಿ ನೇಚರ್" ಶೀರ್ಷಿಕೆಯ ಕಲಾಕೃತಿಗಳನ್ನು ಪ್ರದರ್ಶನ ಪ್ರದರ್ಶನಕ್ಕಿಡಲಾಗಿದೆ.

ಮೊದಲ ಬಾರಿಗೆ ದೂರದ ನವದೆಹಲಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಪಡೆದಿದ್ದಕ್ಕೆ ಕಿರಣ್ ಬಹಳ ಸಂತೋಷಗೊಂಡಿದ್ದಾರೆ. ಕಿರಣ್, ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದ ಸಮೀಪದ ಆಸರ್ ಓಣಿಯಲ್ಲಿಯೇ ಹುಟ್ಟಿ ಬೆಳೆದವರು. 26ರ ಈ ಯುವಕ ನೋಡಲು ಈಗಲೂ ಬಾಲಕ. ಪೋಲಿಯೊ ಪೀಡಿತನಾಗಿರುವುದರಿಂದ ಎಲ್ಲ ಮಕ್ಕಳಂತೆ ಬೆಳವಣಿಗೆ ಸಲೀಸಾಗಿ ಆಗಿಲ್ಲ. ದೇಹ ಸದೃಢವಾಗಿ ಇರದಿದ್ದರೆ ಏನಾಯ್ತು, ಎಲ್ಲಾ ಅಂಗಾಂಗಳು ಸರಿಯಾಗಿರುವ ಯುವಕರಿಗಿಂತ ಹೆಚ್ಚು ಕನಸು ಕಾಣಬಲ್ಲ ಶಕ್ತಿ ಆತನದು. ಕುಂಚ ಕೈಗೆತ್ತಿಕೊಂಡರೆ ವರ್ಣಮಯ ಲೋಕ ಸೃಷ್ಟಿಸಬಲ್ಲ. ಬದುಕು ವರ್ಣಮಯವಾಗಿ ಇರದಿದ್ದರೂ ವರ್ಣಮಯ ಲೋಕವನ್ನು ಸೃಷ್ಟಿಸುವ ಶಕ್ತಿ ಕಿರಣ್​ಗಿದೆ ಅನ್ನುವುದರಲ್ಲಿ ಸಂಶಯವಿಲ್ಲ. 

image


ಹುಬ್ಬಳ್ಳಿ ಧಾರಾವಾಡ ಸಂಸ್ಕೃತಿ ಬಿಂಬಿಸುವ ಆಸೆ

ಕಲೆಯನ್ನು ಪ್ರೋತ್ಸಾಹಿಸುವ ಹುಬ್ಬಳ್ಳಿ ಧಾರವಾಡದ ಮಣ್ಣಿನ ಗುಣವನ್ನು, ಇಲ್ಲಿನ ಸಂಸ್ಕೃತಿ, ಪರಂಪರೆ, ಸುತ್ತಮುತ್ತಲಿನ ಪರಿಸರ ಇವೆಲ್ಲವನ್ನೂ ಕ್ಯಾನ್ವಾಸ್ ಮೇಲೆ ಕಟ್ಟಿಕೊಡುವ ಆಸೆ ಅವರದ್ದು. ಈ ಪ್ರಯತ್ನದಲ್ಲಿ ಕಿರಣ್​ ತಕ್ಕಮಟ್ಟಿನ ಯಶಸ್ಸು ಕೂಡ ಕಂಡಿದ್ದಾರೆ. ಹುಬ್ಬಳ್ಳಿ ಮತ್ತು ಧಾರಾವಾಡ ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ವರಕವಿ ದ.ರಾ.ಬೇಂದ್ರೆಯಿಂದ ಹಿಡಿದು ಅದೆಷ್ಟೋ ಕವಿಗಳನ್ನು ನೀಡಿದ ಕೀರ್ತಿ ಧಾರಾವಾಡ ಮತ್ತು ಹುಬ್ಬಳ್ಳಿಯ ಮಣ್ಣಿಗಿದೆ. ಕಿರಣ್​ ಈ ಸಂಸ್ಕೃತಿಯನ್ನು ಬೇರೆಯದ್ದೇ ರೀತಿಯಲ್ಲಿ ಬಿಂಬಿಸುವ ಕನಸು ಕಾಣುತ್ತಿದ್ದಾರೆ. 

" ನನಗೆ ತಂಪು ವರ್ಣಗಳೇ ಹೆಚ್ಚು ಇಷ್ಟ. ನಮ್ಮೂರನ್ನು ಅದು ಇದ್ದ ಹಾಗೆಯೇ ಚಿತ್ರಿಸುವುದು ಖುಷಿ. ಚಿತ್ರಿಸಲು ಬಣ್ಣ ಇದ್ದರಾಯಿತು. ದೊಡ್ಡ ಕ್ಯಾನ್​ವಾಸ್​​, ಒಳ್ಳೆ ಪೇಪರು ಅಂತೆಲ್ಲ ಕಾಯುವುದಿಲ್ಲ. ಏನೂ ಸಿಗದಿದ್ದರೆ ದಿನ ಪತ್ರಿಕೆ ಹೀಗೆ ಒಟ್ಟಿನಲ್ಲಿ ಏಲ್ಲಿಯಾದರೂ ನಾನು ಚಿತ್ರ ರಚಿಸುತ್ತೇನೆ."
-ಕಿರಣ್, ಕಲಾವಿದ

ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ

ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹೋಗುವಾಗಲೇ ಚಿತ್ರ ರಚಿಸುವ ಹವ್ಯಾಸ ಕಿರಣ್ ಅವರಿಗಿತ್ತು. ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿದ್ದ ಕಿರಣ್ ಅವರ ಚಿಕ್ಕಪ್ಪ ರಮೇಶ್ ಅವರೇ ಕಿರಣ್ ಇಂದು ಈ ಮಟ್ಟಕ್ಕೆ ಬರಲು ಮುಖ್ಯ ಕಾರಣಕರ್ತರು. ಧಾರವಾಡದ ಸೃಜನಾ ಫೈನ್ ಆರ್ಟ್ಸ್ ಕಾಲೇಜು ಸೇರಿ ಬಿಎಫ್ಎ ಪದವಿ ಪಡೆದೆ ಎನ್ನುವ ಕಿರಣ್ ಈಗ ಪೂರ್ಣಾವಧಿ ಕಲಾವಿದರು.

ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡಿ ನಿವೃತ್ತರಾಗಿರುವ ಅಪ್ಪ ಬದುಕಿಗಾಗಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದಾರೆ. ಅಮ್ಮ, ತಂಗಿ ಹಾಗೂ ಸಹೋದರ ರಾಹುಲ್ ಇದಿಷ್ಟು ಕಿರಣ್​ ಕುಟುಂಬ. ರಾಹುಲ್ ಬಹುತೇಕ ಸಂದರ್ಭಗಳಲ್ಲಿ ಕಿರಣ್​ಗೆ ಸಾಥ್ ನೀಡುತ್ತಾರೆ. ಸ್ವತಂತ್ರವಾಗಿ ಅಡ್ಡಾಡಲು ಸಾಧ್ಯವಾಗದ ಅವರನ್ನು ಹೊತ್ತು ತಿರುಗಿಸುತ್ತಾರೆ. ಸಹೋದರ ಈ ಪ್ರೀತಿಗೆ ಕಿರಣ್​ ಮನಸೋತಿದ್ದಾರೆ. ಇವತ್ತಿನ ಬ್ಯೂಸಿ ಜೀವನದಲ್ಲಿ ತನ್ನ ಕೆಲಸವೇ ಹೆಚ್ಚು ಅನ್ನುವವರ ಮಧ್ಯೆ ಕಿರಣ್​ ಸಹೋದರ ರಾಹುಲ್​ ಕೊಂಚ ವಿಭಿನ್ನವಾಗಿ ಕಾಣುತ್ತಾರೆ. 

image


ಹಿರಿಯರಿಂದ ಮೆಚ್ಚುಗೆಯ ಮಾತು

ರಾಷ್ಟ್ರಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಇವರ ಚಿತ್ರಗಳಿಗೆ ಹಿರಿಯ ಕಲಾವಿದರು ಉತ್ತಮ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಯುವಕನಿಗೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ. ಹಿತೈಷಿಗಳು ಸ್ನೇಹಿತರ ಬೆಂಬಲದಿಂದಲೇ ಅವರ ಪ್ರತಿಭೆ ಈಗ ದೆಹಲಿಯ ಲಲಿತಕಲಾ ಅಕಾಡೆಮಿಯ ಗ್ಯಾಲರಿ ತಲುಪಿದೆ.

ಕಿರಣ್ ಚಿತ್ರಗಳಲ್ಲಿ ಚಿತ್ರಗಳಲ್ಲಿ ಕಡುಬಣ್ಣದ ವರ್ಣ ಸಂಯೋಜನೆಯಿಲ್ಲ. ತಿಳಿಯಾದ ಬಣ್ಣಗಳ ಬಳಕೆ ಅವರ ಕಲಾಕೃತಿಗಳ ವಿಶೇಷ. ಜಲವರ್ಣ ಚಿತ್ರಗಳಲ್ಲಿ ಅಗತ್ಯವಾಗಿ ಅರಿವಿರಬೇಕಾದದ್ದು ಪದರು ಪದರಾಗಿ ಬಣ್ಣಗಳ ಬಳಸುವಿಕೆ ಹಾಗೂ ದೃಶ್ಯಗಳಲ್ಲಿ ನೆರಳು ಬೆಳಕಿನ ಸಂಯೋಜನೆ, ವೇಗವಾಗಿ ಬಣ್ಣಗಳ ಲೇಪನ, ಕ್ಯಾನ್ವಾಸ್​ನ ಮೈವಳಿಕೆಗಳನ್ನು ಹಾಗೆಯೇ ಉಳಿಸಿಕೊಂಡು ಮಾಡುವ ಒಂದಿಷ್ಟು ತಂತ್ರಗಾರಿಕೆ. ಅಷ್ಟಕ್ಕೂ ತಿಳಿಯಾದ ಬಣ್ಣಗಳ ಲೇಪನದಿಂದ ಹೆಚ್ಚು ಕಡುವರ್ಣಗಳತ್ತ ಸಾಗುವ ಹಾದಿ ಅಷ್ಟು ಸುಲಭವೂ ಅಲ್ಲ. ಅದು, ಹಾಡುಗಾರನ ಕಂಠ ಪಳಗಿದಂತೆ ಒಲಿಯುವ ಹಾಡಿದ್ದಂತೆ..!

ದಿಲ್ಲಿಯಲ್ಲಿ ಚಿತ್ರಕಲಾ ಪ್ರದರ್ಶನ ಮಾಡೋದಿಕ್ಕೆ ಅರ್ಜಿ ಹಾಕು ಅಂತ ಚಿಕ್ಕಮಠ ಸರ್ ಹೇಳಿದ್ರು, ಹಾಕಿದೆ. ಈಗ ಅವಕಾಶ ಸಿಕ್ಕಿದೆ. ಮನಸು ಮಾಡಿದ್ರೆ ಏನಾದ್ರೂ ಮಾಡಬಹುದು. ಬರೀ ಕನಸು ಕಾಣ್ತಾ ಇಲ್ಲೇ ಇರ್ತಿದ್ದೆ ನೋಡ್ರಿ ಎಂದು ಕಿರಣ್ ನಕ್ಕರು. ಅವರ ನಗೆಯಲ್ಲಿ ಜೀವನಪ್ರೀತಿಯ ಸೂತ್ರವೊಂದು ಸುಳಿದುಹೋದಂತೆ ಅನ್ನಿಸಿತು.

ಇದನ್ನು ಓದಿ:

1. ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​

2. ನೃತ್ಯದ ಶಕ್ತಿ+ಮಾತಿನ ಯುಕ್ತಿ = ವಸಂತ ವೈಕುಂಠ

3. 115 ವರ್ಷಗಳ ಸಂಪ್ರದಾಯ ಹೊಂದಿರುವ "ಮದರ್ಸ್ ರೆಸೆಪಿ"ಯ ಕಥೆ ಕೇಳಿ