ಅಂಧತ್ವಕ್ಕೆ ಸೆಡ್ಡು ಹೊಡೆದ ಭಕ್ತಿ – ನಾಗ್ಪುರ ವಿವಿಯಲ್ಲಿ ಚಿನ್ನದ ಪದಕ ಪಡೆದ ಯುವತಿ
ಟೀಮ್ ವೈ.ಎಸ್.ಕನ್ನಡ
ಆರು ತಿಂಗಳ ಪುಟ್ಟ ಮಗುವಾಗಿದ್ದಾಗ್ಲೇ ಆಕೆಯ ಬಲಗಣ್ಣಿಗೆ ರೆಟಿನೋಬ್ಲಾಸ್ಟೋಮಾ (ಒಂದು ರೀತಿಯ ಕಣ್ಣಿನ ಕ್ಯಾನ್ಸರ್) ಇದೆ ಅನ್ನೋದು ಗೊತ್ತಾಗಿತ್ತು. ಆ ಖಾಯಿಲೆ ಎಡಗಣ್ಣಿಗೂ ಹರಡದಂತೆ ವೈದ್ಯರು ಸಕಲ ಪ್ರಯತ್ನ ಮಾಡಿದ್ರು. ಆದ್ರೆ ಸಾಧ್ಯವಾಗಲಿಲ್ಲ, 9 ವರ್ಷವಿದ್ದಾಗ ಭಕ್ತಿ ಘಟೋಲೆ ತನ್ನ ದೃಷ್ಟಿಶಕ್ತಿಯನ್ನೇ ಕಳೆದುಕೊಂಡ್ಲು. ಭಕ್ತಿ ಮುಂದೊಮ್ಮೆ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕ ಗೆಲ್ಲಬಹುದೆಂಬ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ.
ಭಕ್ತಿ ತಂದೆ ರಮೇಶ್ ಘಟೋಲೆ ನ್ಯಾಶನಲ್ ಇನ್ಷೂರೆನ್ಸ್ ಕಂಪನಿಯಲ್ಲಿ ಡೆವಲಪ್ಮೆಂಟ್ ಅಧಿಕಾರಿ. ತಾಯಿ ಸುಷ್ಮಾ ಗೃಹಿಣಿ. ಭಕ್ತಿಗೆ ಓರ್ವ ಸಹೋದರಿಯಿದ್ದಾಳೆ. ಭಕ್ತಿಗೆ ಒಳ್ಳೆಯ ಚಿಕಿತ್ಸೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅವರು ನಾಗ್ಪುರಕ್ಕೆ ಶಿಫ್ಟ್ ಆದ್ರು. ಆಗಾಗ ಹೈದ್ರಾಬಾದ್ ಮತ್ತು ಚೆನ್ನೈಗೂ ಬಂದು ಹೋಗುತ್ತಿದ್ರು. ಸುಮಾರು 25 ಬಾರಿ ಭಕ್ತಿ ಕಿಮೋಥೆರಪಿಗೆ ಒಳಗಾಗಿದ್ದಾಳೆ. ಆದ್ರೆ ಪ್ರಯೋಜನ ಮಾತ್ರ ಶೂನ್ಯ.
ಕಣ್ಣುಗಳಿಲ್ಲ ಅನ್ನೋ ಕಾರಣಕ್ಕೆ ಭಕ್ತಿ ತನ್ನ ಬದುಕಿನ ಗುರಿಯನ್ನು ಕೈಬಿಡಲಿಲ್ಲ. ಪರಿಶ್ರಮ ಮತ್ತು ಸಮರ್ಪಣಾ ಭಾವವನ್ನು ಬಿಡಲಿಲ್ಲ. ದೃಷ್ಟಿಯಿಲ್ಲ ಅನ್ನೋ ಹಿಂಜರಿಕೆಯಿಂದ ಸುಮ್ಮನಾಗಲಿಲ್ಲ. 21ರ ಹರೆಯದ ಭಕ್ತಿ ಈಗ ನಾಗ್ಪುರ ವಿಶ್ವವಿದ್ಯಾನಿಲಯದಲ್ಲಿ ಪೊಲಿಟಿಕಲ್ ಸೈನ್ಸ್ ವಿಭಾಗದ ಬಿಎ ಮೊದಲ ವರ್ಷದ ವಿದ್ಯಾರ್ಥಿನಿ. ''ತಡರಾತ್ರಿ ಓದುವುದು ನನಗಿಷ್ಟ, ಯಾಕಂದ್ರೆ ಆಗ ಇಡೀ ಏರಿಯಾ ಶಾಂತವಾಗಿರುತ್ತದೆ, ಯಾವುದೇ ಸದ್ದುಗದ್ದಲವಿರುವುದಿಲ್ಲ. ಪರೀಕ್ಷೆ ಸಂದರ್ಭಗಳಲ್ಲಿ ಓದಿಗಾಗಿಯೇ ಜಾಸ್ತಿ ಸಮಯ ಮೀಸಲಿಡುತ್ತೇನೆ. ಅಷ್ಟೇ ಅಲ್ಲ ಸರಿಯಾದ ಟೈಮ್ ಟೇಬಲ್ ಪ್ರಕಾರ ಓದುತ್ತೇನೆ. ಅದರಿಂದಾಗಿಯೇ ಒಳ್ಳೆಯ ಅಂಕಗಳು ಬಂದಿವೆ. ನನ್ನ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ನನ್ನ ಪೋಷಕರು, ಸಹೋದರಿ, ಕುಟುಂಬ, ಸ್ನೇಹಿತರು ಮತ್ತು ಕಾಲೇಜಿನ ಪ್ರಾಧ್ಯಾಪಕರಿಗೆ ಸಲ್ಲಬೇಕು'' ಎನ್ನುತ್ತಾಳೆ ಭಕ್ತಿ.
''ಕುಟುಂಬದವರು ನನ್ನ ಬಗ್ಗೆ ಹೆಮ್ಮೆಪಡುವಂತಾಗಿದ್ದು ನಿಜಕ್ಕೂ ಖುಷಿಕೊಟ್ಟಿದೆ. ಆದ್ರೆ ಇದ್ಯಾವುದು ಸುಲಭದ ಕೆಲಸವಾಗಿರಲಿಲ್ಲ. ಆದ್ರೆ ನಾನು ಅಪೂರ್ಣ ಎಂದು ಯಾವತ್ತೂ ನನಗೆ ಅನಿಸಿಯೇ ಇಲ್ಲ. ಕೆಲವೊಮ್ಮೆ ಅಂಗವೈಕಲ್ಯ ಹಿನ್ನಡೆ ಉಂಟು ಮಾಡಿದ್ದು ನಿಜ. ಆದ್ರೆ ನನ್ನ ಕನಸುಗಳನ್ನು ನನಸು ಮಾಡದಂತೆ ತಡೆಯಲು ಸಾಧ್ಯವಿಲ್ಲ. ಬದುಕು ನಿಜಕ್ಕೂ ಸುಂದರ, ಅದನ್ನು ನಾನು ಸಂಪೂರ್ಣವಾಗಿ ಜೀವಿಸಲು ಬಯಸುತ್ತೇನೆ'' ಎನ್ನುವ ಭಕ್ತಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.
ಮನಶಾಸ್ತ್ರಜ್ಞೆಯಾಗಬೇಕು ಅನ್ನೋದು ಭಕ್ತಿಯ ಕನಸು. ನಂತರ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದಾಳೆ. ಕಠಿಣವಾದ್ರೂ ಸಾಧಿಸಬೇಕೆಂಬ ಛಲ ಅವಳಲ್ಲಿದೆ. ಈ ಮೂಲಕ ಯುವಜನತೆಗೆ ಮಾದರಿಯಾಗಿ ನಿಲ್ಲಬೇಕೆಂಬುದು ಭಕ್ತಿಯ ಹಂಬಲ. ''ನಾನು ಆಗ 7 ವರ್ಷದವಳಿದ್ದೆ, ಅಷ್ಟು ಸಮಯದಲ್ಲೇ ಸಾಕಷ್ಟು ಕಷ್ಟ ಅನುಭವಿಸಿದ್ದೆ. ಬರಬರುತ್ತಾ ನನ್ನ ದೃಷ್ಟಿಶಕ್ತಿ ಸಂಪೂರ್ಣವಾಗಿ ಹೊರಟುಹೋಯ್ತು. ಆಗ ನಾನು ಕುಸಿದು ಹೋಗಿದ್ದೆ, ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ, ಆಸ್ಪತ್ರೆಗೆ ಹೋಗಲು ಒಪ್ಪುತ್ತಿರಲಿಲ್ಲ. ದೇವಸ್ಥಾನಕ್ಕೂ ಹೋಗುತ್ತಿರಲಿಲ್ಲ. ಎಲ್ಲವೂ ಸಾಕೆನಿಸಿತ್ತು. ಆಗ ಹೆತ್ತವರು ನನ್ನನ್ನು ನಾಗ್ಪುರದ ಯೋಗ ಅಭ್ಯಾಸ ಮಂಡಲಕ್ಕೆ ಕರೆದುಕೊಂಡು ಹೋದ್ರು. ಯೋಗ ಮತ್ತು ಧ್ಯಾನವನ್ನು ಕಲಿಯಲು ಆರಂಭಿಸಿದೆ, ಅದು ನನಗೆ ನೆರವಾಯ್ತು. ನಾನೊಬ್ಬ ಪಾಸಿಟಿವ್ ವ್ಯಕ್ತಿಯಾಗಿ ಬದಲಾದೆ. ನನ್ನ ಬದುಕು ಹೇಗಿದೆಯೋ ಹಾಗೇ ಅದನ್ನು ಒಪ್ಪಿಕೊಂಡೆ'' ಅಂತಾ ಹಳೆಯ ದಿನಗಳನ್ನು ಭಕ್ತಿ ಮೆಲುಕು ಹಾಕಿದ್ದಾರೆ. ಭಕ್ತಿ ಬ್ರೈಲಿ ಲಿಪಿ ಕಲಿತಿದ್ದಾಳೆ. ಶಿಕ್ಷಕಿ ಹಾಗೂ ಮೆಂಟರ್ ಜಿದ್ನ್ಯಾಸಾ ಕುಬ್ದೆ ಅವರನ್ನು ಭೇಟಿಯಾದ ಮೇಲೆ ಭಕ್ತಿಯ ಬದುಕಲ್ಲಿ ಹೊಸ ಆಶಾಕಿರಣ ಮೂಡಿತ್ತು. ‘ಆತ್ಮದೀಪಂ ಸೊಸೈಟಿ’ ಎಂಬ ಎನ್ ಜಿಓ ಒಂದನ್ನು ನಡೆಸುತ್ತಿರುವ ಆಕೆ ದೃಷ್ಟಿಹೀನರಿಗೆ ಕಂಪ್ಯೂಟರ್ ಕಲಿಸುತ್ತಾರೆ.
ಭಕ್ತಿಗೆ ಬ್ರೈಲಿ ಕಲಿಯುವುದು ಇಷ್ಟವಾಗುತ್ತಿರಲಿಲ್ಲ. ಆದ್ರೆ ಕಂಪ್ಯೂಟರ್ ಬಳಕೆ ಕಲಿತ ಮೇಲೆ ಯಾವುದೂ ಕಷ್ಟವಾಗಲೇ ಇಲ್ಲ. ಭಕ್ತಿ ಈಗ ಇಮೇಲ್ ಕಂಪೋಸ್ ಮಾಡ್ತಾಳೆ, ಅವಳ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಖುದ್ದು ಮ್ಯಾನೇಜ್ ಮಾಡ್ತಾಳೆ. ಇಂಟರ್ನೆಟ್ ಬ್ರೌಸ್ ಮಾಡ್ತಾಳೆ. ಕಂಪ್ಯೂಟರ್ ಬಳಸಿಯೇ ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದಾಳೆ. 10ನೇ ಕ್ಲಾಸ್ ಬೋರ್ಡ್ ಎಕ್ಸಾಮ್ ನಲ್ಲಿ ಭಕ್ತಿ ಶೇ.94ರಷ್ಟು ಅಂಕ ಪಡೆದಿದ್ದಾಳೆ. ವಿಕಲಚೇತನರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ ಶೇ.88ರಷ್ಟು ಅಂಕಗಳೊಂದಿಗೆ ನಾಗ್ಪುರದಲ್ಲಿ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ. ಕಲಿಯುವ ಹಂಬಲ, ಆಸಕ್ತಿ ಮತ್ತು ಪರಿಶ್ರಮ ಇದ್ರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಭಕ್ತಿಯೇ ಜೀವಂತ ನಿದರ್ಶನ.
ಇದನ್ನೂ ಓದಿ...
ಗರ್ಭಧಾರಣೆಯ ಪ್ರತಿ ಸಮಯದಲ್ಲೂ ನಿಮ್ಮ ಸಂಗಾತಿ ಈ ಆ್ಯಪ್
ಅಪ್ಪನ ಪ್ರೀತಿ ಜೊತೆಗೆ ಕೇಕ್ ಉದ್ಯಮದಲ್ಲಿ ಯಶಸ್ವಿಯಾದ ಬೆಂಗಳೂರಿನ ಯುವತಿ