ರೈತರಿಗಾಗಿ ಬಂದಿದೆ ಮೊಬೈಲ್ ಎಟಿಎಂ..
ಟೀಮ್ ವೈ.ಎಸ್. ಕನ್ನಡ
ನಾವು ಬ್ಯಾಂಕ್ನಲ್ಲಿ ಜಮಾ ಮಾಡಿದ ಹಣವನ್ನು ಸುಲಭವಾಗಿ ತೆಗೆದುಕೊಳ್ಳಲು ಬ್ಯಾಂಕ್ ನೀಡುವ ಒಂದು ಸೇವೆ ಎಟಿಎಂ. ಪಟ್ಟಣ ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗೊಂದು ಎಟಿಎಂಗಳಿವೆ. ಆದ್ರೆ, ಗ್ರಾಮೀಣ ಪ್ರದೇಶದಲ್ಲಿ ಎಟಿಎಂಗಳ ಸಂಖ್ಯೆ ಕಡಿಮೆ. ಗ್ರಾಮೀಣ ಭಾಗದ ಜನರು ಹಣವಿದ್ದರೂ ಡ್ರಾ ಮಾಡಲು ಪರದಾಡಬೇಕಿತ್ತು. ಪಟ್ಟಣಕ್ಕೆ ಹೋಗಬೇಕಿತ್ತು. ಇದನ್ನು ಮನಗಂಡ ಬ್ಯಾಂಕ್ವೊಂದು ಹೊಸ ಪ್ಲಾನ್ ಮಾಡಿದೆ. ಇದರಿಂದ ಜನರು ನಿರಾಳರಾಗಿದ್ದಾರೆ.
ಗ್ರಾಮೀಣ ಭಾಗದ ಜನ ಹಣ ಡ್ರಾ ಮಾಡಲು ಪಟ್ಟಣ ಪ್ರದೇಶಕ್ಕೆ ಹೋಗಬೇಕಿಲ್ಲ. ಎಟಿಎಂಗೆ ಒಬ್ಬರೇ ಹೋದ್ರೆ ಕಳ್ಳಕಾಕರ ಭಯವಿಲ್ಲ. ನಿಮ್ಮ ಮನೆ ಬಾಗಿಲಿಗೆ ಮೊಬೈಲ್ ಎಟಿಎಂ ಬರುತ್ತೆ. ನಿರಾಂತಕವಾಗಿ ಹಣ ಡ್ರಾ ಮಾಡಿಕೊಳ್ಳಬಹುದು. ಇಂಥದೊಂದು ಪ್ಲಾನ್ ಮಾಡಿದ್ದು, ಧಾರವಾಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್.
ಧಾರವಾಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಗಳ ಪೈಕಿ ದೇಶದಲ್ಲಿಯೇ ಅತ್ಯುತ್ತಮ ಸೇವೆ ನೀಡುವುದಿಕ್ಕೆ ಹೆಸರುವಾಸಿ. ದೇಶದಲ್ಲೇ 5ನೇ ಸ್ಥಾನ ಪಡೆದಿರೋ ಈ ಬ್ಯಾಂಕ್ ಈಗಾಗಲೇ 17 ಸಾವಿರ ಕೋಟಿ ರೂ. ವಹಿವಾಟನ್ನು ದಾಟಿದೆ. ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಯಾಂಕ್ ಗಳನ್ನು ಸ್ಥಾಪಿಸಿ, ರಾಜ್ಯದಲ್ಲಿಯೇ ವಿಶಿಷ್ಠ ಬ್ಯಾಂಕ್ ಎನ್ನಿಸಿಕೊಂಡಿದೆ. ಇಂಥದ್ದೊಂದು ವಿಶಿಷ್ಠ ಪರಿಕಲ್ಪನೆ ಮೂಲಕ ಈಗಾಗಲೇ ಮಹಿಳೆಯರ ಅಚ್ಚುಮೆಚ್ಚಿನ ಬ್ಯಾಂಕ್ ಆಗಿರೋ ಕೆವಿಜಿ ಬ್ಯಾಂಕ್ ಇದೀಗ ಮತ್ತೊಂದು ಹೊಸ ಹೆಜ್ಜೆಯನ್ನಿಟ್ಟಿದೆ. ಅದೇ ಮೊಬೈಲ್ ಹಾಗೂ ಸಂಚಾರಿ ಎ.ಟಿ.ಎಂ.
ಇಂತಹ ಮೊಬೈಲ್ ಬ್ಯಾಂಕ್ ಯೋಜನೆಯನ್ನು ಹಲವು ಬ್ಯಾಂಕ್ಗಳು ಜಾರಿಗೆ ತಂದಿವೆ. ಆದ್ರೆ, ಗ್ರಾಮೀಣ ಪ್ರದೇಶಕ್ಕೆ ಯಾರು ಈ ಸೌಲಭ್ಯ ಒದಗಿಸಿರಲಿಲ್ಲ. ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸಿಮೀತವಾಗಿತ್ತು. ಆದ್ರೆ, ಗ್ರಾಮೀಣ ಭಾಗದ ಜನರ ಪರದಾಟ ಅರಿತ ಗ್ರಾಮೀಣ ಬ್ಯಾಂಕ್ ಹಳ್ಳಿ ಹಳ್ಳಿಗೂ ಸೇವೆ ಒದಗಿಸಲು ಮುಂದಾಗಿದೆ. ಸಾಮಾನ್ಯವಾಗಿ ಬೇರೆ ಬ್ಯಾಂಕ್ಗಳು ಗ್ರಾಮೀಣ ಪ್ರದೇಶದಲ್ಲಿ ಎಟಿಎಂ ತೆರೆಯಲು ಹಿಂದೇಟು ಹಾಕುತ್ತವೆ. ಕಾರಣ, ವಹಿವಾಟು ಕಡಿಮೆ ಎಂದು ಆಂದ್ರೆ, ಜನರ ಹಿತಕ್ಕಾಗಿ ಈ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ಎಟಿಎಂ ಕೊಂಡೊಯ್ಯುವ ಮೂಲಕ ಹೊಸ ಶಕೆಗೆ ನಾಂದಿ ಹಾಡಿದೆ.
ಇದನ್ನು ಓದಿ: ಕನ್ನಡ ಚಿತ್ರರಂಗಕ್ಕೆ ಕಾರ್ಪೊರೇಟ್ ಎಂಟ್ರಿ!
ಧಾರವಾಡ, ಗದಗ, ಬೆಳಗಾವಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಉತ್ತಮ ಸೇವೆ ನೀಡೋ ಮೂಲಕ ಗ್ರಾಮೀಣ ಪ್ರದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿರೋ ಈ ಬ್ಯಾಂಕ್ ಈಗ ವಾಹನದಲ್ಲಿಯೇ ಎಟಿಎಂ ಯಂತ್ರ ಅಳವಡಿಸಿ, ಹಳ್ಳಿಗಳಿಗೆ ಈ ಸೇವೆಯನ್ನು ವಿಸ್ತರಿಸಿದೆ. ಉತ್ತರ ಕರ್ನಾಟಕದಲ್ಲಿಯೇ ಇಂಥದ್ದೊಂದು ಯೋಜನೆ ಆರಂಭವಾಗಿರೋದು ಇದೇ ಮೊದಲು. ಎನ್ನತ್ತಾರೆ ಬ್ಯಾಂಕ್ ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ್ ಗುನಗಾ.
ಈ ಬ್ಯಾಂಕ್ನ ಇತಿಹಾಸ ಮತ್ತು ಸೌಲಭ್ಯಗಳು ಯಾವುದೇ ರಾಷ್ಟ್ರೀಯ ಬ್ಯಾಂಕಿಗೂ ಕಡಿಮೆಯಿಲ್ಲ. ಉತ್ತರ ಕರ್ನಾಟಕದಲ್ಲಿ 582 ಶಾಖೆಗಳನ್ನು ಹೊಂದಿದ್ದು, 2900 ಗ್ರಾಮಗಳಿಗೆ ಸೇವೆಯನ್ನು ನೀಡುತ್ತಿದೆ. ಪ್ರಧಾನಮಂತ್ರಿಯವರ ಜನಧನ ಯೋಜನೆಯಡಿ, ಗ್ರಾಮೀಣ ಭಾಗದ ಜನರಿಗೆ ಖಾತೆ ತೆರೆದುಕೊಟ್ಟಿದ್ದು, ಎಟಿಎಂ ಕಾರ್ಡ್ ನೀಡಿದೆ. ಆದ್ರೆ, ಎಟಿಎಂ ನೀಡಿದ್ರೆ ಏನ್ ಬಂತು ಹಣ ತೆಗೆಯಲು ಎಟಿಎಂ ಮಷಿನ್ ಬೇಕಲ್ಲ. ಹೀಗಾಗಿ ಗ್ರಾಮಸ್ಥರು ಎಟಿಎಂ ತೆರೆಯುವಂತೆ ದುಂಬಾಲು ಬಿದ್ದಾಗ ಬ್ಯಾಂಕ್ನವರು ಈ ಯೋಜನೆ ರೂಪಿಸಿದ್ರು. ಹೀಗಾಗಿ ಪಟ್ಟಣ ಪ್ರದೇಶಕ್ಕೆ ಹೋಗುತ್ತಿದ್ದ ಜನರು ಅನೇಕ ಸಮಸ್ಯೆ ಎದುರಿಸುತ್ತಿದ್ದರು. ಭದ್ರತೆ, ವಿದ್ಯುತ್ ಸಮಸ್ಯೆ, ಇಂಟರ್ನೆಟ್, ಹೀಗೆ ಹಲವು ಸಮಸ್ಯೆಯಿಂದ ಹಣ ಡ್ರಾಮಾಡಲು ಆಗುತ್ತಿರಲಿಲ್ಲ. ಇದೆನೆಲ್ಲಾ ತಿಳಿದ ಬ್ಯಾಂಕ್ ಸಿಬ್ಬಂದಿ ರೂಪಿಸಿದ ಹೊಸ ಯೋಜನೆಯೇ ಸಂಚಾರಿ ಎಟಿಎಂ ವ್ಯವಸ್ಥೆ .
ನಬಾರ್ಡ್ ಯೋಜನೆಯಡಿ, ವಾಹನ ಖರೀದಿಸಿ, ವಾಹನದ ಮೇಲೆ ಇಂಟರ್ನೆಟ್ ಸಂಪರ್ಕಕ್ಕಾಗಿ ಡಿಷ್ ಅಳವಡಿಸಿ ಸ್ಯಾಟಲೈಟ್ ಮೂಲಕ ಸಂಪರ್ಕ ಪಡೆದು, ಅನೇಕ ಗ್ರಾಮಗಳಲ್ಲಿ ಸಂಚರಿಸಿ ಸೇವೆ ಒದಗಿಸಲಾಯಿತು. ಈ ವಾಹನ ತಯಾರು ಮಾಡಲು ಆದ ವೆಚ್ಚ ಕೇವಲ 20 ಲಕ್ಷ. ಹೀಗಾಗಿ ಎಲ್ಲ ಗ್ರಾಮ ಗ್ರಾಮಗಳಿಗೆ ಎಟಿಎಂ ಸೇವೆ ಒದಗಿಸಿತ್ತಿದ್ದೇವೆ ಎನ್ನುತ್ತಾರೆ. ಬ್ಯಾಂಕ್ ಶಾಖಾಧಿಕಾರಿ ಬಸವರಾಜ್.
ಸದ್ಯಕ್ಕೆ ಕೇವಲ ಒಂದೇ ವಾಹನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗೆ ಅಳವಡಿಸಲಾಗಿದ್ದು, ಜನರ ಪ್ರತಿಕ್ರಿಯೆ ನೋಡಿ ಮತ್ತಷ್ಟು ವಾಹನಗಳನ್ನು ಸೇವೆ ನಿಯೋಜಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಸಂಚಾರಿ ವಾಹನದಲ್ಲಿ ಕೇವಲ ಎಟಿಎಂ ಸೇವೆ ಅಷ್ಟೇ ಇಲ್ಲ, ಇದರ ಜೊತೆಗೆ ಗ್ರಾಮೀಣ ಜನರಿಗೆ ಬೇಕಾದ ಅಗತ್ಯ ಸೇವೆಗಳನ್ನು ನೀಡಲಾಗ್ತಿದೆ. ಹಣ ಡ್ರಾ ಮಾಡೋದ್ರ ಜೊತೆಗೆ ಡಾಕ್ಟರ್ ಟ್ರೀಟ್ಮೆಂಟ್ ಕೂಡ ಸಿಗುತ್ತದೆ.
ಈ ಎಟಿಎಂ ಕೇವಲ ಹಣ ತೆಗೆಯೋದಕ್ಕೆ ಮಾತ್ರ ಮೀಸಲಾಗಿಲ್ಲ. ಇಲ್ಲಿ ವೈದ್ಯಕೀಯ ಸೇವೆಯೂ ಸಿಗುತ್ತೆ. ಏಕೆಂದರೆ ಈ ಎಟಿಎಂ ಬಳಕೆ ಉಳಿದ ಎಟಿಎಂ ಬಳಕೆಗಿಂತ ಕೊಂಚ ದುಬಾರಿಯೇ. ವಾಹನದಲ್ಲಿ ಓರ್ವ ಚಾಲಕ, ನಿರ್ವಹಣೆಗೆ ಓರ್ವ ಎಂಜಿನಿಯರ್ ಮತ್ತು ಬ್ಯಾಂಕ್ನ ಓರ್ವ ಹಿರಿಯ ಅಧಿಕಾರಿ ಇರುತ್ತಾರೆ. ಅಷ್ಟೇ ಅಲ್ಲ, ಇಂಧನದ ಖರ್ಚನ್ನೂ ಕೂಡ ಗಮನಿಸಲೇಬೇಕು. ಇಷ್ಟೊಂದು ಖರ್ಚನ್ನಿಟ್ಟುಕೊಂಡು ಸೇವೆ ಕೊಡುವಾಗ ಬ್ಯಾಂಕ್ನ ಸಿಬ್ಬಂದಿ ಮತ್ತಷ್ಟು ಯೋಜನೆಗಳನ್ನು ಅದರಲ್ಲಿ ಅಳವಡಿಸಲು ನಿರ್ಧರಿಸಿದರು. ಅದೇ ವೈದ್ಯಕೀಯ ಸೇವೆ.
ಗ್ರಾಮೀಣ ಪ್ರದೇಶದ ಜನರು ದಿನನಿತ್ಯ ಅನುಭವಿಸೋದು ವೈದ್ಯಕೀಯ ಸೌಲಭ್ಯದ ಕೊರತೆ. ಎಷ್ಟೋ ಗ್ರಾಮಗಳಲ್ಲಿ ಆಸ್ಪತ್ರೆ ಇದ್ದರೂ ಅಲ್ಲಿ ವೈದ್ಯರಿಲ್ಲ. ಇನ್ನು ಸಣ್ಣ ಗ್ರಾಮಗಳಲ್ಲಿ ಆಸ್ಪತ್ರೆಗಳೇ ಇಲ್ಲ. ಇಂಥ ಗ್ರಾಮಗಳಿಗೆ ವಾಹನ ಹೋಗುವಾಗ ಅದರೊಂದಿಗೆ ಓರ್ವ ವೈದ್ಯರು ಇದ್ದರೆ ಒಳ್ಳೆಯದು ಅಂತಾ ತೀರ್ಮಾನಿಸಿದ ಬ್ಯಾಂಕ್ ಅಧಿಕಾರಿಗಳು ಎಂ.ಬಿ.ಬಿ.ಎಸ್. ಆಗಿರೋ ವೈದ್ಯರನ್ನು ನೇಮಕ ಮಾಡಿಕೊಂಡರು. ವಾಹನದಲ್ಲೇ ಎರಡು ಭಾಗ ಮಾಡಿ, ಒಂದುಕಡೆ ಎಟಿಎಂ ಮತ್ತೊಂದು ಕಡೆ ಟ್ರೀಟ್ ಮೆಂಟ್ ನೀಡಲು ನಿರ್ಧರಿಸಿ, ಜನರಿಗೆ ಸೇವೆ ನೀಡುತ್ತಾ ಬಂದಿದೆ.
ಇಷ್ಟೆಲ್ಲಾ ಸೌಲಭ್ಯ ಸಿಕ್ಕ ಮೇಲೆ ಗ್ರಾಹಕರು ಈ ಸಂಚಾರಿ ಎಟಿಎಂಗೆ ಮುಗಿಬಿದ್ದಿದ್ದಾರೆ. ಬ್ಯಾಂಕ್ನ ಸೇವೆಗೆ ಗ್ರಾಹಕರಿಂದಲು ಉತ್ತಮ ಪ್ರತಿಕ್ರಿಯೆ ಬಂದಿದೆ. ಇಷ್ಟೆ ಅಲ್ಲ, ಯಾವ ಯಾವ ಗ್ರಾಮಗಳಿಗೆ ಯಾವಾಗ ಹೋಗಬೇಕು ಅಂತಾ ಮೊದಲೇ ವೇಳಾಪಟ್ಟಿ ಸಿದ್ದ ಮಾಡಿ, ಜನರಿಗೆ ಮೊದಲೇ ಎಟಿಎಂ ಬರೋ ಬಗ್ಗೆ ತಿಳಿಸಲಾಗಿರುತ್ತೆ. ಸಂಚಾರಿ ಎಟಿಎಂಗೆ ಕಾದು ನಿಲ್ಲುವ ಜನ ಹಣ ಪಡೆಯೋ ಜೊತೆಗೆ, ಸಾಲ, ಅಕೌಂಟ್ಗೆ ಹಣ ಜಮಾ ಮಾಡಲು ಬಳಸಿಕೊಳ್ತಿದ್ದಾರೆ. ಏನಾದರೂ ಅನುಮಾನವಿದ್ದರೆ ಬ್ಯಾಂಕ್ ಅಧಿಕಾರಿಗಳು ಸಹಾಯ ಮಾಡ್ತಾರೆ.
ಕೇವಲ ಬ್ಯಾಂಕ್ ಖಾತೆ ಮಾಡಿಸಿಕೊಂಡು ಸುಮ್ಮನಾಗುವ ಬ್ಯಾಂಕ್ ಗಳ ಮುಂದೆ ಈ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಜನಸ್ನೇಹಿಯಾಗಿದೆ. ರೈತರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಗ್ರಾಮೀಣ ಜನರ ಮಂದಹಾಸಕ್ಕೆ ಕಾರಣವಾಗಿದೆ.
1. ಶಾಲೆಗೆ ಹೋಗಿ ಮಕ್ಕಳ ಫೀಸ್ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್..!
2. ಕಬಾಲಿಯಿಂದ ಕಲಿಬೇಕು ಪ್ರಚಾರಕಲೆ
3. ಕನ್ನಡ ಪದ ಹಾಡಿ ಗೆದ್ದರು- ದೇಸಿ ಸ್ಟೈಲ್ ಹಾಡುಗಾರನಿಗೆ ವಿಶ್ವದಾಧ್ಯಂತ ಅಭಿಮಾನಿಗಳು