Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ತಮ್ಮನ ಸ್ಥಿತಿ ಕಂಡು ಮರುಗಿದ ಅಕ್ಕಂದಿರಿಂದ ವಿಶೇಷ ಮಕ್ಕಳಿಗಾಗಿ ಆರಂಭವಾಯಿತು ಐ ಸಪೋರ್ಟ್ ಫೌಂಡೇಶನ್

ಟೀಮ್​​ ವೈ.ಎಸ್​​.

ತಮ್ಮನ ಸ್ಥಿತಿ ಕಂಡು ಮರುಗಿದ ಅಕ್ಕಂದಿರಿಂದ ವಿಶೇಷ ಮಕ್ಕಳಿಗಾಗಿ ಆರಂಭವಾಯಿತು ಐ ಸಪೋರ್ಟ್ ಫೌಂಡೇಶನ್

Sunday October 25, 2015 , 4 min Read

ದಾರಿಯಲ್ಲಿ ಹೋಗುತ್ತಿದ್ದ ಒಂದು ಹುಡುಗಿ ತನ್ನ ತಾಯಿಗೆ “ಓಹ್ ಮೈ ಗಾಡ್! ಆ ಹುಡುಗನ್ನ ನೋಡು ಬಾತುಕೋಳಿ ತರಹ ಕೈಕಾಲು ಆಡಿಸ್ತಿದ್ದಾನೆ!” ಅದಕ್ಕೆ ತಾಯಿ “ಅವನ ಕಡೆ ನೋಡಬೇಡ, ದೇವರು ಇಂತಹ ಮಕ್ಕಳನ್ನೂ ಸೃಷ್ಟಿಸಿದ್ದಾನೆ ಅನ್ನೋದೇ ದುರಂತ” ಎಂದುತ್ತರಿಸುತ್ತಾಳೆ. ಹೀಗೆ ಹೇಳುತ್ತಾ ಶಿವಂ ಎಂಬ 18 ವರ್ಷದ ಹುಡುಗನನ್ನು ವೇಗವಾಗಿ ದಾಟಿಹೋಗುತ್ತಾರೆ ತಾಯಿಮಗಳು. ಶಿವಂ ರಮಣಿ ಹುಟ್ಟುತ್ತಲೇ ಹೀಗಿರಲಿಲ್ಲ. ಎಲ್ಲಾ ಮಕ್ಕಳಂತೆ ಮಾಮೂಲಾಗೇ ಇದ್ದ. ಆದರೆ ಅವನ 3ನೇ ವರ್ಷದಲ್ಲಿ ಅವನಿಗೆ ಟೈಫಾಯ್ಡ್ ಜ್ವರ ಬಂತು. ಇದರ ಅಪರೂಪದ ಆದರೆ ಸಂಭಾವ್ಯ ಪರಿಣಾಮವಾಗಿ ಶಿವಂ ತನ್ನದೇ ಆದ ಪ್ರಪಂಚದಲ್ಲಿ ಮಾತಿಲ್ಲದೇ ಮೂಕನಾಗಿಬಿಟ್ಟ.

image


ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಜನಿಸಿ, ಬೆಳೆದ ಬಾಬ್ಬಿ, ಜೂಹಿ ಮತ್ತು ಶಿವಂ ಒಡಹುಟ್ಟಿದವರು. ತುಂಬಾ ಚಿಕ್ಕವರಿದ್ದಾಗಲೇ ಈ ಮಕ್ಕಳ ತಂದೆ ತೀರಿಹೋದ ಕಾರಣ ಅವರ ತಾಯಿಯೊಬ್ಬರೇ ಮೂರು ಮಂದಿ ಮಕ್ಕಳನ್ನೂ ಬೆಳೆಸಿದರು.

ಜೂಹಿ ಹೇಳುವಂತೆ “ನಾವು ಅವಿಭಕ್ತ ಕುಟುಂಬದಲ್ಲಿದ್ದೆವು. ಆದರೆ ಶಿವಂ ನ ವಿಚಿತ್ರ ನಡವಳಿಕೆಗಳು, ಉಗುಳುವಿಕೆ ಮತ್ತು ಬಡಿದುಕೊಳ್ಳುವ ರೀತಿಯನ್ನು ನೋಡುತ್ತಿದ್ದ ಜನ ನಮ್ಮನ್ನು ಕೆಟ್ಟದೃಷ್ಟಿಯಿಂದ ನೋಡುತ್ತಿದ್ದರು. ಅವರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಮಾತ್ರವಲ್ಲ ನನ್ನ ಸೋದರನನ್ನು ಮನುಷ್ಯನಂತೆ ಪರಿಗಣಿಸುತ್ತಲೇ ಇರಲಿಲ್ಲ. ಹೀಗಾಗಿ ನಮ್ಮ ಕುಟುಂಬದ ಕಾರ್ಯಕ್ರಮಗಳಲ್ಲೂ ನಾವು ಅಪರಿಚಿತರಂತಾದೆವು ಮತ್ತು ಎಷ್ಟೋ ಬಾರಿ ನಮ್ಮನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಲೂ ಇರಲಿಲ್ಲ. ಶಿವಂ ತನ್ನ ವರ್ತನೆಯಿಂದ ಎಲ್ಲರನ್ನೂ ಮುಜುಗರಕ್ಕೀಡುಮಾಡುತ್ತಾನೆ ಎಂಬುದು ಅವರ ಅಭಿಪ್ರಾಯವಾಗಿತ್ತು” ಎಂದು ನೋವಿನಿಂದ ನುಡಿಯುತ್ತಾರೆ.

ಐ ಸಪೋರ್ಟ್ ಫೌಂಡೇಶನ್‌ನ ಹುಟ್ಟು

ನಮ್ಮ ಎಲ್ಲಾ ಕಷ್ಟದ ದಿನಗಳೂ ರಾಯಬರೇಲಿಯ ಸಣ್ಣ ಪಟ್ಟಣದಲ್ಲೇ ಕಳೆದವು. ಶಿವಂ ಅನುಭವಿಸುತ್ತಿದ್ದ ಒಂಟಿತನ, ಜನರಿಗರ್ಥವಾಗುತ್ತಿರಲಿಲ್ಲ. ಶಿವಂ ಏನನ್ನು ಅನುಭವಿಸುತ್ತಿದ್ದಾನೆಂಬುದೂ ಸಹ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ನಮ್ಮನ್ನು ಸದಾ ನಿಂದಿಸುತ್ತಿದ್ದರು ಎಂದು ತಮ್ಮ ಸಂಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಬಾಬ್ಬಿ ಮತ್ತು ಜೂಹಿ. ಬಾಬ್ಬಿ, ಜೂಹಿ ಮತ್ತು ಅವರ ತಾಯಿ ಶಿವಂನಂತಹ ಮಕ್ಕಳನ್ನು ಅರ್ಥ ಮಾಡಿಕೊಂಡು ಅವರಿಗೆ ಶಿಕ್ಷಣ ನೀಡುವಂತಹ ಶಾಲೆಯನ್ನು ಹುಡುಕುತ್ತಿದ್ದರು. ಆದರೆ ಅಂತಹ ಯಾವುದೇ ಶಾಲೆಗಳೂ ಅವರಿಗೆ ದೊರಕಲಿಲ್ಲ. ಹೀಗಾಗಿ ಶಿವಂನನ್ನು ವಿಶೇಷ ಮಕ್ಕಳ ಶಾಲೆಗೆ ಸೇರಿಸಲು ಲಕ್ನೋಗೆ ತೆರಳಿತು ಈ ಕುಟುಂಬ.

image


2014ರಲ್ಲಿ ಶಿವಂನಂತಹ ಒಂಟಿತನ ಮತ್ತು ತನ್ನದೇ ಆದ ಪ್ರಪಂಚದಲ್ಲಿರುವ ವಿಶೇಷ ಮಕ್ಕಳಿಗಾಗಿ ಬಾಬ್ಬಿ ಲಕ್ನೋದಲ್ಲಿ ಸಣ್ಣ ಶಾಲೆಯೊಂದನ್ನು ಆರಂಭಿಸಿದರು. ಇಂತಹ ಮಕ್ಕಳಿಗೆ ಆರೋಗ್ಯಪೂರ್ಣ ವಾತಾವರಣ ನಿರ್ಮಿಸುವುದು ಬಾಬ್ಬಿಯ ಆಶಯವಾಗಿತ್ತು. ನಂತರ ಇದರ ಸಹ ಸಂಸ್ಥಾಪಕರಾಗಿ ಜೂಹಿ ಸಹ ಸೇರಿಕೊಂಡರು. ನಂತರ ಈ ಸಂಸ್ಥೆ ಐ ಸಪೋರ್ಟ್ ಫೌಂಡೇಶನ್ ಎಂಬ ಲಾಭದಾಯಕವಲ್ಲದ ಎನ್‌ಜಿಓ ಹೆಸರಿನಲ್ಲಿ ದಾಖಲುಗೊಂಡಿತು. ಅನಾಥ ಮತ್ತು ವಿಶೇಷ ಮಕ್ಕಳ ಶಿಕ್ಷಣಕ್ಕಾಗಿ ಈ ಸಂಸ್ಥೆ ಕಾರ್ಯನಿರ್ವಹಿಸಲಾರಂಭಿಸಿತು. ಈ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ತಮ್ಮ ಅತ್ಯುತ್ತಮ ಮಟ್ಟವನ್ನು ಸಾಧಿಸುವುದಕ್ಕಾಗಿ ವೇದಿಕೆ ಒದಗಿಸುವುದು ಮತ್ತು ಸಹಾಯ ಮಾಡುವುದು ಸಂಸ್ಥೆಯ ಗುರಿಯಾಯಿತು.

ಪರಿಣಾಮ

ರೋಗಗಳ ನಿಯಂತ್ರಣ ಮತ್ತು ನಿಗ್ರಹ ಕೇಂದ್ರದ ವರದಿ ಪ್ರಕಾರ 88 ಮಕ್ಕಳಲ್ಲಿ 1 ಮಗು ತನ್ನದೇ ಪ್ರಪಂಚದಲ್ಲಿರುವಂತಹ ಬುದ್ಧಿಮಾಂದ್ಯ ಮಕ್ಕಳು ಹುಟ್ಟುತ್ತಾರೆ. ಕೆಲ ವರ್ಷಗಳ ಹಿಂದೆ ಇದು 110 ಮಕ್ಕಳಲ್ಲಿ 1 ಮಗುವಿಗೆ ಕಾಣಿಸಿಕೊಳ್ಳುತ್ತಿದ್ದಂತಹ ಸಮಸ್ಯೆಯಾಗಿತ್ತು.

ಶಿವಂನಂತೆಯೇ ಇನ್ನೂ ಅನೇಕ ಮಕ್ಕಳಿರಬಹುದು ಅಥವಾ ಅವನಿಗಿಂತ ಹೀನ ಸ್ಥಿತಿಯಲ್ಲಿರಬಹುದು. ಸಮಸ್ಯೆಯನ್ನು ನಿರ್ಲಕ್ಷಿಸುವ ಬದಲು ಸಮಾಜಕ್ಕೆ ಈ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಬೇಕೆಂದು ನಾನು ಮತ್ತು ನನ್ನ ಸಹೋದರಿ ಐ ಸಪೋರ್ಟ್ ಫೌಂಡೇಶನ್ ಸ್ಥಾಪಿಸಿದೆವು. ನಾವು ನಮ್ಮ ಸಮಾಜದ ಯುವ ಜನತೆ. ಭವಿಷ್ಯವನ್ನು ರೂಪಿಸುವುದರಲ್ಲಿ ನಮ್ಮ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಅರಿತು ಸಮಾಜದಲ್ಲಿ ಬದಲಾವಣೆ ತರುವುದು ನಮ್ಮ ಜವಾಬ್ದಾರಿ ಎನ್ನುತ್ತಾರೆ ಬಾಬ್ಬಿ.

45 ಮಕ್ಕಳಿಗೆ ಲಕ್ನೋದ ವಿಶೇಷ ಶಾಲೆಯಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಅಲ್ಲದೇ ಬೆಂಗಳೂರು, ಸರ್ಕಾರಿ ಶಾಲೆಗಳು ಮತ್ತು ಅನಾಥಾಶ್ರಮಗಳಲ್ಲಿ ಕಾರ್ಯಾಗಾರವನ್ನೂ ಸಹ ನಡೆಸಲಾಗುತ್ತಿದೆ. ತನ್ನ ಸೋದರಿಯೊಂದಿಗೆ ಲಕ್ನೋದ ಐ ಸಪೋರ್ಟ್ ಫೌಂಡೇಶನ್ ನೋಡಿಕೊಳ್ಳುತ್ತಿರುವ ಜೂಹಿ ವಿಪ್ರೋದಲ್ಲಿ ಪೂರ್ಣಕಾಲಿಕ ಕೆಲಸಮಾಡುತ್ತಿದ್ದಾರೆ. ಬೆಂಗಳೂರಿನ ಅನಾಥ ಮಕ್ಕಳಿಗಾಗಿ ಚಟುವಟಿಕೆಗಳನ್ನೂ ಸಹ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಇದಕ್ಕಾಗಿಯೇ 100 ಮಂದಿ ಸ್ವಯಂ ಸೇವಕರ ತಂಡವನ್ನೂ ಕಟ್ಟಿದ್ದಾರೆ. ಇಲ್ಲಿವರೆಗೆ ಈ ಸಂಸ್ಥೆಯ ಸೇವೆ 8000 ಅನಾಥ ಮತ್ತು ವಿಶೇಷ ಮಕ್ಕಳನ್ನು ತಲುಪಿದೆ ಎನ್ನುತ್ತಾರೆ ಜೂಹಿ.

image


ಚಟುವಟಿಕೆ ಮತ್ತು ಕಾರ್ಯಕ್ರಮಗಳು

ವಿಶೇಷ ಅಗತ್ಯಗಳೊಂದಿಗೆ ಮಕ್ಕಳ ಅಭಿವೃದ್ಧಿ: ಮಕ್ಕಳ ಅಭಿವೃದ್ಧಿಗಾಗಿ ಸಮಗ್ರ ಕಾರ್ಯಕ್ರಮ ರೂಪಿಸುವುದು, ಮಕ್ಕಳ ಅಗತ್ಯಗಳನ್ನು ನಿರ್ವಹಿಸುವುದು, ಮಗುವಿನ ಸಾಮರ್ಥ್ಯವನ್ನು ಗುರುತಿಸುವುದು ಇದರ ಉದ್ದೇಶ. ಕ್ರಿಯಾತ್ಮಕ ಶಿಕ್ಷಣದ ಜೊತೆಗೆ ಮಗುವಿನ ಅಗತ್ಯಕ್ಕೆ, ಮಗುವಿನ ಮಟ್ಟಕ್ಕೆ ತಕ್ಕಂತೆ ವಿಶೇಷ ಶಿಕ್ಷಣ, ಮನಃಶಾಸ್ತ್ರಜ್ಞ, ಮಾತುಗಳಿಗೂ ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತದೆ.

ಗುರಿಗಳನ್ನು ನಿಖರಪಡಿಸಿಕೊಳ್ಳುವಾಗ ಇಂತಹ ಮಕ್ಕಳ ಕುಟುಂಬಗಳ ಅಗತ್ಯತೆಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಪ್ರದರ್ಶನದ ಆಧಾರದ ಮೇಲೆ ಮಕ್ಕಳ ಪ್ರಗತಿಯನ್ನು ಗಮನಿಸಿ ಅವರು ಮುಂದೆ ಸಾಧಿಸಬೇಕಿರುವುದರ ಕುರಿತು ಸಣ್ಣ ಅವಧಿಯ ಗುರಿಗಳನ್ನು ಗೊತ್ತುಪಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಸಮಾನವಾಗಿರುತ್ತದೆ. ಶಿಕ್ಷಕರು ಮತ್ತು ಪೋಷಕರು ಇಬ್ಬರೂ ಸೇರಿ ಶಾಲೆ ಮತ್ತು ಮನೆಯಲ್ಲಿ ಮಕ್ಕಳ ನಡವಳಿಕೆ ಹೇಗಿದೆ ಎಂಬುದನ್ನು ಚರ್ಚಿಸುತ್ತಾರೆ. ಕ್ಲಾಸ್‌ ರೂಂನಲ್ಲಿ ಮಕ್ಕಳ ನಡವಳಿಕೆ ಗಮನಿಸಲು ಪೋಷಕರು ಯಾವಾಗಬೇಕಾದರೂ ಶಾಲೆಗೆ ಭೇಟಿ ನೀಡಬಹುದಾಗಿರುತ್ತದೆ.

ಅನಾಥಮಕ್ಕಳ ಸಬಲೀಕರಣ: ಐ ಸಪೋರ್ಟ್ ಫೌಂಡೇಶನ್ ಕೊಳಗೇರಿ ಮಕ್ಕಳ ಸ್ಥಿತಿಯ ಬಗ್ಗೆಯೂ ಗಮನಿಸುತ್ತಿರುತ್ತದೆ. ಅಲ್ಲದೇ ನಿರ್ಲಕ್ಷಕ್ಕೊಳಗಾದ ಪ್ರದೇಶಗಳಲ್ಲಿ ಶಾಲೆಗೆ ದಾಖಲಾಗಿರುವ ಮಕ್ಕಳ ಕುರಿತು ಅಂಕಿ ಅಂಶಗಳನ್ನು ಕಲೆಹಾಕಲಾಗುತ್ತದೆ. ಲಿಂಗ ಮತ್ತು ಜಾತಿಯ ಬೇಧವಿಲ್ಲದೇ ಬಾಲಕಾರ್ಮಿಕ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಸಮುದಾಯದ ಮಕ್ಕಳಿಗಾಗಿ ಶ್ರಮಿಸಲಾಗುತ್ತದೆ. ಅಲ್ಲದೇ ಈ ಮಕ್ಕಳಿಗೆ ಭಾರತದ ಕಾನೂನು ಮತ್ತು ನೀತಿಗಳ ಬಗ್ಗೆ ಜಾಗೃತಿ ನೀಡಲಾಗುತ್ತದೆ. ಇದಕ್ಕಾಗಿ ಐ ಸಪೋರ್ಟ್ ಫೌಂಡೇಶನ್ ವಿವಿಧ ಕಾರ್ಯಕ್ರಮಗಳನ್ನೂ, ಕಾರ್ಯಾಗಾರಗಳನ್ನೂ ನಡೆಸುತ್ತಿದೆ.

ಅಮೂಲ್ಯವಾದುದರ ರಕ್ಷಣೆ: ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಇದರಲ್ಲಿ ಮುಖಾಮುಖಿ ಕಾರ್ಯಕ್ರಮಗಳನ್ನೂ ಸಹ ನಡೆಸಲಾಗುತ್ತದೆ. ಅಲ್ಲದೇ ಬುದ್ಧಿಮಾಂದ್ಯತೆ ಬಗ್ಗೆ ಶಿಬಿರಗಳನ್ನೂ ನಡೆಸಲಾಗುತ್ತದೆ.

ಬುದ್ಧಿಮಾಂದ್ಯತೆ ಬಗ್ಗೆ ಕಾರ್ಯಾಗಾರ ಮತ್ತು ಜಾಗೃತಿ ಮೂಡಿಸುವ ಕಾರ್ಯ: ಈ ಕಾರ್ಯಕ್ರಮದಡಿ ಪೋಷಕರೊಂದಿಗೆ ವಿಶೇಷ ಸಮಾಲೋಚನೆ ನಡೆಸಲಾಗುತ್ತದೆ. ಅಲ್ಲದೇ ಮಕ್ಕಳು ಕಲಿಯಬಹುದಾದ ವಿಷಯಗಳ ಕಲಿಕಾ ಚಾರ್ಟ್ ಮತ್ತು ಅಭಿವೃದ್ಧಿ ಯೋಜನೆಯನ್ನೂ ತಯಾರಿಸಲಾಗುತ್ತದೆ.

image


• ಅಶಕ್ತತೆ, ಅಂಗವೈಕಲ್ಯತೆ ಕುರಿತು ಜಾಗೃತಿ ಮತ್ತು ಅಂಗವೈಕಲ್ಯಗಳ ಕುರಿತು ಜನರಿಗೆ ಶಿಕ್ಷಣ

• ಮಕ್ಕಳ ಸಂಭಾವ್ಯ ಸಾಮರ್ಥ್ಯವನ್ನು ಗುರುತಿಸುವುದು, ವೇದಿಕೆ ನಿರ್ಮಿಸುವುದು, ವಿಶೇಷ ಮಕ್ಕಳಿಗಾಗಿ ಸಕಾರಾತ್ಮಕ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವುದು.

ರೋಬೋಟಿಕ್ಸ್ ಲೇಗೋ ಸೆಷನ್ಸ್: ವಿಶೇಷ ಮತ್ತು ಅನಾಥಮಕ್ಕಳಲ್ಲಿ ಸಾಮಾಜಿಕ ಅಭಿವೃದ್ಧಿ ಕೌಶಲ್ಯಗಳ ಅಭಿವೃದ್ಧಿ ಹಾಗೂ ತಾರ್ಕಿಕ ಕಾರಣಗಳ ಚಿಂತನೆ ಮೂಡಿಸುವುದು.

ಉಚಿತ ವೈದ್ಯಕೀಯ ಪರೀಕ್ಷೆ ಮತ್ತು ರಕ್ತದಾನ: ಮಗುವಿನ ಬೆಳವಣಿಗೆಗೆ ಹೆಚ್ಚಿನ ಒತ್ತು ಮತ್ತು ಪೌಷ್ಠಿಕಾಂಶಯುಕ್ತ ಆಹಾರ ನೀಡುವುದರ ಮೂಲಕ ಮಗುವಿನ ಬೆಳವಣಿಗೆ ಗಮನಿಸಲು ವೈದ್ಯಕೀಯ ಪರೀಕ್ಷೆಗಳನ್ನು ಆಗಾಗ ಕೈಗೊಳ್ಳಲಾಗುತ್ತದೆ. ಇನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರಗಳನ್ನೂ ನಡೆಸಲಾಗುತ್ತಿದೆ.

ಎ ಕಪ್ ಫಾರ್ ಥಾಟ್ ಯೋಜನೆ: ಪ್ರತೀ ವಾರಾಂತ್ಯದಲ್ಲೂ ಬೆಂಗಳೂರಿನ ಬಿಟಿಎಂ ಲೇಔಟ್‌ಗೆ ಭೇಟಿ ನೀಡುವ ಕುಲ್ಹಾದ್ ಟೀ ಸ್ಟಾಲ್ ಅವರಿಗಾಗಿ ಚಂದಾ ಎತ್ತುವ ಕೆಲಸ ಮಾಡುತ್ತಿದೆ.

ಕ್ಲಿಕ್ -ಓ- ಕ್ಲಿಕ್(ಬಾಲಕಾರ್ಮಿಕ ಪದ್ಧತಿ ನಿವಾರಣೆಯ ಯೋಜನೆ): ಈ ಯೋಜನೆಯಲ್ಲಿ ಸ್ವಯಂಸೇವಕರು ಪ್ರಮುಖ ಪಾತ್ರ ವಹಿಸುತ್ತಾರೆ. ಸ್ವಯಂಸೇವಕರು ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸುವ ಕಾರ್ಯಕೈಗೊಂಡಿದ್ದಾರೆ.

ಸದ್ಯಕ್ಕೆ ಐ ಸಪೋರ್ಟ್ ಫೌಂಡೇಶನ್ ಬಳಿ ಹಣವಾಗಲಿ, ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಗಳ ಬೆಂಬಲವೂ ಇಲ್ಲ. ಆದರೆ ಸಧ್ಯದಲ್ಲೇ ಅದನ್ನು ಗಳಿಸಿಕೊಳ್ಳುವ ಗುರಿ ಇದೆ. ಒಂದು ಕುಟುಂಬದ ಹೋರಾಟದಿಂದಲೇ ಹುಟ್ಟಿದೆ ಐ ಸಪೋರ್ಟ್ ಫೌಂಡೇಶನ್. ಬುದ್ಧಿಮಾಂದ್ಯ ಮಕ್ಕಳ ಬಗ್ಗೆ ಪೋಷಕರಿಗೆ ತಿಳುವಳಿಕೆ ನೀಡಲು ಒಂದು ವೇದಿಕೆ ನಿರ್ಮಿಸುವುದೂ ಸಹ ಇದರ ಮುಂದಿನ ಗುರಿಯಾಗಿದೆ.

ಇದು ಆರಂಭ ಮಾತ್ರ. ಇದು ಬಹುಕಾಲದ ಕನಸು. ಕಲ್ಯಾಣ ಮತ್ತು ಪುನರ್ವಸತಿಗಾಗಿ ಒಂದು ದಿಟ್ಟ ಹೆಜ್ಜೆ. ದೈಹಿಕ ಸಾಮರ್ಥ್ಯದಿಂದ ಮಾತ್ರ ಶಕ್ತಿ ಬರುವುದಿಲ್ಲ. ಅದಮ್ಯ ಅಂತಃಶಕ್ತಿಯಿಂದ ಸಾಮರ್ಥ್ಯ ಒಗ್ಗೂಡುತ್ತದೆ ಎಂಬುದು ಜೂಹಿಯವರ ದೃಢವಾದ ನಂಬಿಕೆ.