ಆಹಾರ ಉದ್ಯಮದಲ್ಲಿ ಕಳೆದು ಹೋಗಿದ್ದೇನು..?
ಟೀಮ್ ವೈ.ಎಸ್.ಕನ್ನಡ
ಇತ್ತೀಚಿನ ದಿನಗಳಲ್ಲಿ ಫುಡ್ಟೆಕ್ ಕಂಪನಿಗಳಿಗೆ ಭಾರೀ ಪ್ರಚಾರ ಸಿಗುತ್ತಾ ಇದೆ. ಆದ್ರೆ ದುರದೃಷ್ಟಕರ ವಿಚಾರ ಅಂದ್ರೆ ಆಹಾರ ಕೈಗಾರಿಕೆಯನ್ನು ಮುಳುಗುತ್ತಿರುವ ಹಡಗು ಅಂತಾ ಬಣ್ಣಿಸಲಾಗ್ತಿದೆ. ಸಿಬ್ಬಂದಿ ಗಾತ್ರ ಕುಗ್ಗಿಸುವಿಕೆ, ಕಡಿಮೆಯಾಗ್ತಾ ಇರೋ ಕಾರ್ಯಾಚರಣೆ ಹಾಗೂ ಉದ್ಯಮಗಳನ್ನೇ ಮುಚ್ತಾ ಇರೋದು ಇದಕ್ಕೆ ಕಾರಣ. ಫುಡ್ಟೆಕ್ ಕ್ಷೇತ್ರ ಸವಾಲಿನದ್ದಲ್ಲ, ಅಲ್ಲಿ ಆರ್ಭಟವಿಲ್ಲ ಅನ್ನೋ ಮಾತಿತ್ತು, ಆ ಬೆಂಕಿಗೆ ತುಪ್ಪ ಸುರಿದಂತಾಗಿದೆ ಪರಿಸ್ಥಿತಿ. ಜನರು ಫುಡ್ಟೆಕ್ ಕ್ಷೇತ್ರ ಸ್ಫೋಟಗೊಳ್ಳುವ ಸಮಯ ಸನ್ನಿಹಿತವಾಗಿದೆ ಎಂದುಕೊಂಡಿದ್ದಾರೆ. ಆದ್ರೆ ಬಿಲಿಯನ್ ಡಾಲರ್ ಮೌಲ್ಯದ ಈ ಕ್ಷೇತ್ರ ಇನ್ನೂ ಮುಳುಗಿ ಹೋಗಿಲ್ಲ. ಆಹಾರಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳೂ ಫುಡ್ಟೆಕ್ ಕಂಪನಿಗಳೆಂದೇ ಕರೆಸಿಕೊಳ್ಳುತ್ತವೆ. ಫುಡ್ಪಾಂಡಾ, ಸ್ವಿಗ್ಗಿ, ಮುಂತಾದ ರೆಸ್ಟೋರೆಂಟ್ಗಳಿಗೆ ಆನ್ಲೈನ್ ಮಾರುಕಟ್ಟೆಯೇ ವೇದಿಕೆಗಳಾಗಿವೆ. ಗ್ರಾಹಕರ ಕೈಸೇರುವ ತಿನಿಸುಗಳೊಂದಿಗೆ ಕಂಪನಿಗಳಿಗೆ ಸಂಬಂಧವೇ ಇರುವುದಿಲ್ಲ.
ಫುಡ್ಟೆಕ್ ಅನ್ನೋ ಶಬ್ಧದ ದುರ್ಬಳಕೆ ಆಗ್ತಾ ಇದೆ. ತೂಕ ನಿರ್ವಹಣಾ ಕಂಪನಿಯನ್ನೂ ಫುಡ್ಟೆಕ್ ಎಂದೇ ಕರೆಯಲಾಗ್ತಿದೆ. ಯಾಕಂದ್ರೆ ಆ ಕಂಪನಿ ಕೂಡ ಏನನ್ನು ತಿನ್ನಬೇಕು? ತೂಕ ಕಡಿಮೆ ಮಾಡಲು ಏನು ಮಾಡಬೇಕು ಅನ್ನೋದನ್ನೆಲ್ಲ ತಿಳಿಸಿಕೊಡುತ್ತೆ. ಆಹಾರ ಉತ್ಪಾದನೆ ಜೊತೆಗೆ ಸಂಬಂಧವೇ ಇಲ್ಲದ ಕಂಪನಿಗೆ ಫುಡ್ಟೆಕ್ ಅನ್ನೋ ಹೆಸರು ಕೊಡೋದು ಎಷ್ಟು ಸರಿ? ವಿಷಯ ಅದಲ್ಲ. ಇಂತಹ ಮಾದರಿಗಳ ವೈಫಲ್ಯವನ್ನು ಫುಡ್ಟೆಕ್ ಸೋಲು ಅಂತಾನೇ ಬಿಂಬಿಸಲಾಗ್ತಿದೆ. ಹಾಗಂತ ಫುಡ್ಟೆಕ್ಗೆ ಸೋಲಿನ ಅನುಭವವೇ ಆಗಲ್ಲ ಎಂದರ್ಥವಲ್ಲ, `ಸ್ಪೂನ್ಜೊಯ್' ಬಾಗಿಲು ಮುಚ್ಚಿದೆ, `ಡ್ಯಾಝೋ' ಕೂಡ ಕಾರ್ಯಾಚರಣೆ ನಿಲ್ಲಿಸಿದೆ. ಆದ್ರೆ ಇದರರ್ಥ ಫುಡ್ಟೆಕ್ ಸಂಪೂರ್ಣ ಸೋಲಿನ ಸುಳಿಗೆ ಸಿಲುಕಿದೆ ಎಂದಲ್ಲ. ವ್ಯಾಪಾರದ ಮೂಲ ಮಾನದಂಡವನ್ನು ನೋಡೋಣ, ಫುಡ್ಟೆಕ್ ಎಡವಿದ್ದೆಲ್ಲಿ ಅನ್ನೋದು ಸ್ಪಷ್ಟವಾಗುತ್ತೆ.
1. `ಫುಡ್ಪಾಂಡಾ' ಮತ್ತು `ಟಿನಿಓವ್ಲ್'ನಂತಹ ಕಂಪನಿಗಳು ಆರ್ಡರ್ ಮೌಲ್ಯದ ಮೇಲೆ ಶೇ.10ರಷ್ಟು ಕಮಿಷನ್ ಪಡೆಯುತ್ತವೆ. ಆರ್ಡರ್ನ ಮೌಲ್ಯ 250 ರೂಪಾಯಿ ಇದ್ರೆ ಅವರು ಗಳಿಸುವುದು ಕೇವಲ 25 ರೂಪಾಯಿ. ಗ್ರಾಹಕರ ಗಳಿಕೆಯ ವೆಚ್ಚ 300 ರೂಪಾಯಿ ಆದ್ರೆ, ಗ್ರಾಹಕರ ಬೆಂಬಲ ಖರ್ಚು 20 ರೂಪಾಯಿ. ಇದರರ್ಥ ಪ್ರತಿ ಆರ್ಡರ್ ಮೇಲೂ 320 ರೂಪಾಯಿ ಖರ್ಚು ಮಾಡಿ ಅವರು ಗಳಿಸುವುದು ಕೇವಲ 25 ರೂಪಾಯಿ. ರಿಯಾಯಿತಿ ನೀಡಿದಾಗ ಹೆಚ್ಹೆಚ್ಚು ಆರ್ಡರ್ ಬಂದ್ರೂ ಗ್ರಾಹಕರ ಬೆಂಬಲದ ಖರ್ಚು ಕಡಿಮೆಯಾಗುವುದಿಲ್ಲ. ಅಂದ್ರೆ ಗ್ರಾಹಕರು ತಿಂಗಳಲ್ಲಿ 10 ಬಾರಿ ಫುಡ್ ಆರ್ಡರ್ ಮಾಡಿದ್ರೂ ಕಂಪನಿಗೆ ಲಾಭವಾಗುವುದಿಲ್ಲ. ಇಂತಹ ಕೆಟ್ಟ ಲೆಕ್ಕಾಚಾರವಿದ್ರೆ ಯಾವ ಕಂಪನಿಯೂ ಉಳಿಯಲು ಸಾಧ್ಯವಿಲ್ಲ.
2. ಫುಡ್ಟೆಕ್ ಕಂಪನಿಗಳು ಬೇಡಿಕೆ ಮೇರೆಗೆ ಆಹಾರ ಪೂರೈಕೆಯಂತಹ ಕೆಲ ವಿಶೇಷತೆಗಳನ್ನು ಹೊಂದಿವೆ. ಉದಾಹರಣೆಗೆ `ಸ್ಪೂನ್ಜಾಯ್' ಅಂದಾಜು 100 ರೂಪಾಯಿ ಆರ್ಡರ್ ಮೌಲ್ಯದ ಮೇಲೆ ತಿನಿಸುಗಳನ್ನು ಮಾರಾಟ ಮಾಡುತ್ತದೆ. ತಿನಿಸು ತಯಾರಿಕೆಗೆ ತಗುಲುವ ವೆಚ್ಚ 30 ರೂಪಾಯಿ. ವಿತರಣೆಗೆ 80 ರೂಪಾಯಿ ಖರ್ಚಾದ್ರೆ, ಪ್ಯಾಕಿಂಗ್ಗೆ 20 ರೂಪಾಯಿ ಬೇಕಾಗುತ್ತೆ. 130 ರೂಪಾಯಿ ಖರ್ಚು ಮಾಡಿ 100 ರೂಪಾಯಿ ಆದಾಯ ನಿರೀಕ್ಷೆ ಮಾಡಿದ್ರೆ ಯಾವ ಸಂಸ್ಥೆಯೂ ಉದ್ಧಾರವಾಗಲು ಸಾಧ್ಯವಿಲ್ಲ. ಈ ಉದ್ಯಮ ಮಾದರಿಯನ್ನು ಬದಲಾಯಿಸಬೇಕಿದೆ. ತಯಾರಿಕಾ ವೆಚ್ಚ ಹಾಗೂ ಪ್ಯಾಕಿಂಗ್ ಖರ್ಚನ್ನು ಕಡಿಮೆ ಮಾಡಿದ್ರೆ ಮಾತ್ರ ಲಾಭ ಗಳಿಸಬಹುದು. ಇದರರ್ಥ ಫುಡ್ಟೆಕ್ ಕ್ಷೇತ್ರದಲ್ಲಿ ಯಾರೂ ಲಾಭಗಳಿಸಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗಬಹುದು. ಒಂದು ರೀತಿಯಲ್ಲಿ ಅದು ಸತ್ಯ. ನೀವು ಯಾವ ಸಮಸ್ಯೆ ಎದುರಿಸುತ್ತಿದ್ದೀರಾ? ಅದನ್ನು ಪರಿಹರಿಸಿಕೊಳ್ಳುವುದು ಹೇಗೆ? ಅನ್ನೋದನ್ನು ಗಮನದಲ್ಲಿರಿಸಿಕೊಂಡು ಲಾಭ-ನಷ್ಟದ ಪಕ್ಕಾ ಲೆಕ್ಕವುಳ್ಳ ಉದ್ಯಮ ಮಾದರಿ ಅಳವಡಿಸಿಕೊಂಡ್ರೆ ಮಾತ್ರ ಯಶಸ್ಸು ಪಡೆಯಬಹುದು. ಗ್ರಾಹಕರ ಪ್ರತಿದಿನದ ಊಟದ ಸಮಸ್ಯೆಯನ್ನು ಬಗೆಹರಿಸಲು ಬಯಸುತ್ತೀರೋ ಅಥವಾ ಬೇಡಿಕೆ ಮೇಲಿನ ಅಗತ್ಯಗಳನ್ನೋ ಅನ್ನೋ ಬಗ್ಗೆ ಸ್ಪಷ್ಟತೆ ಇರಲಿ.
ಗ್ರಾಹಕರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಸೂಕ್ತವಾದ ಫುಡ್ಟೆಕ್ ಉದ್ಯಮವನ್ನು ಬೆಳೆಸುವುದು ಹೇಗೆ ಅನ್ನೋದನ್ನು ನೋಡೋಣ.
ಎ) ದಿನನಿತ್ಯದ ಊಟದ ಸಮಸ್ಯೆ
ಗ್ರಾಹಕರ ದಿನನಿತ್ಯದ ಊಟದ ಅಗತ್ಯಗಳ ಬಗ್ಗೆ ನೀವು ಗಮನಹರಿಸುವುದಾದ್ರೆ 2 ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಬೇಕು.
1. ಕಡಿಮೆ ಬೆಲೆ - 100 ರೂಪಾಯಿ ಒಳಗಿನದನ್ನೇ ಅವರು ಬಯಸುತ್ತಾರೆ
2. ವಿಭಿನ್ನ ರುಚಿ - ಒಂದೇ ರುಚಿಯ ತಿನಿಸನ್ನು ಪದೇ ಪದೇ ತಿನ್ನಲು ಅವರು ಇಷ್ಟಪಡುವುದಿಲ್ಲ
ಜೊತೆಗೆ ಇಂತಹ ಬೇಡಿಕೆ ಮೇಲಿನ ಪೂರೈಕೆ ಸಂದರ್ಭದಲ್ಲಿ ನೀವು ಸುಂದರವಾಗಿ ಅದನ್ನು ಪ್ಯಾಕ್ ಮಾಡಬೇಕೆಂದು ಗ್ರಾಹಕರು ನಿರೀಕ್ಷಿಸುವುದಿಲ್ಲ. ಹಾಗಾಗಿ ಫ್ಯಾನ್ಸಿ ಬಾಕ್ಸ್ಗಳಲ್ಲಿ ಪ್ಯಾಕ್ ಮಾಡುವುದನ್ನು ಬಿಟ್ಟು ಕಡಿಮೆ ಬೆಲೆಯಲ್ಲಿ, ದಿನಕ್ಕೊಂದು ಬಗೆಯ ತಿನಿಸನ್ನು ಪೂರೈಸುವತ್ತ ನೀವು ಗಮನಹರಿಸಬೇಕು. ಆದಷ್ಟು ಡಿಮ್ಯಾಂಡ್ ಆರ್ಡರ್ಗಳನ್ನು ಅಲಕ್ಷಿಸುವುದು ಒಳಿತು. ಅದರ ಬದಲು ಊಟಕ್ಕಾಗಿ ಮೊದಲೇ ಬುಕ್ಕಿಂಗ್ ಮಾಡುವಂತೆ ಗ್ರಾಹಕರಿಗೆ ಸೂಚಿಸಿ.
ಬಿ) ಬೇಡಿಕೆ ಮೇಲಿನ ಅಗತ್ಯಗಳು...
ಗ್ರಾಹಕರ ಬೇಡಿಕೆ ಮೇಲಿನ ಅಗತ್ಯಗಳನ್ನು ಪೂರೈಸಲು ನೀವು ಮುಂದಾಗಿದ್ರೆ ಡೆಲಿವರಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲೇಬೇಕು.
1. ಉತ್ತಮ ಅನುಭವ
2. ಸ್ಥಿರತೆಯ ಜೊತೆಗೆ ಅದ್ಭುತ ರುಚಿ
3. ವಿತರಣೆ ಕಾರ್ಯ ವೇಗವಾಗಿ ಆಗಲಿ, ಗ್ರಾಹಕರು ಮೊದಲೇ ಬಕ್ಕಿಂಗ್ ಮಾಡಬೇಕು ಅಥವಾ ಚಂದಾದಾರರಾಗಬೇಕೆಂದು ನಿರೀಕ್ಷಿಸಬೇಡಿ
ಇಂತಹ ಸಂದರ್ಭಗಳಲ್ಲಿ ಗ್ರಾಹಕರು 200 ರೂಪಾಯಿ ವರೆಗೂ ಹಣ ಪಾವತಿಸಲು ಸಿದ್ಧರಿರ್ತಾರೆ. ನಿಮ್ಮ ತಿನಿಸು ಹಾಗೂ ವಿತರಣಾ ಸೇವೆ ಉತ್ತಮವಾಗಿದ್ದಲ್ಲಿ ಇನ್ನೂ ಹೆಚ್ಚು ಹಣವನ್ನು ನೀವು ನಿರೀಕ್ಷಿಸಬಹುದು. ಆದ್ರೆ ಇದನ್ನೆಲ್ಲ ಸಾಧಿಸುವುದು ಅಂದುಕೊಂಡಷ್ಟು ಸುಲಭವಲ್ಲ. `ಪೆಟೂ' ಸಂಸ್ಥೆಯಲ್ಲಿ ಈ ಎಲ್ಲ ಮಾದರಿಗಳನ್ನು ಅಳವಡಿಸಲು ಸಹಸಂಸ್ಥಾಪಕ ಕುಮಾರ್ ಸೇತು ಪ್ರಯತ್ನಿಸ್ತಿದ್ದಾರೆ. ಗ್ರಾಹಕರಿಂದ ಶಹಬ್ಬಾಸ್ಗಿರಿ ಪಡೆಯಬೇಕಂದ್ರೆ ಅದ್ಭುತ ರುಚಿಯ ಜೊತೆ ಜೊತೆಗೆ ಅತ್ಯುತ್ತಮ ವಿತರಣಾ ವ್ಯವಸ್ಥೆ ಇರಲೇಬೇಕು. ಆದ್ರೆ ಇದು ಫುಡ್ಟೆಕ್ ಬಗ್ಗೆ ಕೇಳಿ ಬರ್ತಾ ಇರೋ ಟೀಕೆಗಳಿಗೆ ಮೂಲ ಕಾರಣವಲ್ಲ.
ನಾವು ನಿಶ್ಚಿತವಾಗಿ ಏನನ್ನು ಬಗೆಹರಿಸಲು ಹೊರಟಿದ್ದೇವೆ ಎಂಬುದನ್ನು ಅರ್ಥಮಾಡಿಕೊಂಡ್ರೆ ಎಲ್ಲವೂ ಸರಳವಾಗುತ್ತವೆ. ಭಾರತದಲ್ಲಂತೂ ಫುಡ್ಟೆಕ್ ಇಂಡಸ್ಟ್ರಿ ಬಹುಕೋಟಿ ಮೌಲ್ಯದ ಮಾರುಕಟ್ಟೆ. ಈ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಇದಕ್ಕಿಂತ ಸುಸಮಯ ಬೇರೆ ಇಲ್ಲ. ಉದ್ಯಮ ಮಾದರಿ ಸರಿಯಾಗಿದ್ರೆ, ಲೆಕ್ಕಾಚಾರಗಳು ವರ್ಕೌಟ್ ಆಗುವಂತಿದ್ರೆ ಫುಡ್ಟೆಕ್ನಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕಬೇಡಿ. ಆಹಾರ ವಿತರಣಾ ಮಾರುಕಟ್ಟೆ ಈಗಷ್ಟೇ ವಿಸ್ತರಿಸ್ತಾ ಇದೆ. ಇನ್ನು ಕೆಲ ವರ್ಷಗಳಲ್ಲಿ ಫುಡ್ಟೆಕ್ ಕ್ಷೇತ್ರ ಉತ್ತುಂಗ ತಲುಪುವುದರಲ್ಲಿ ಅನುಮಾನವೇ ಇಲ್ಲ. ಗಾಸಿಪ್ಗಳಿಗೆ ಕಿವಿಗೊಡದೆ ನಿಮ್ಮ ಕಾರ್ಯಕ್ಷಮತೆ ಬಗ್ಗೆ ಗಮನವಿಟ್ರೆ ಯಶಸ್ಸು ಅಸಾಧ್ಯವಲ್ಲ.
ಅನುವಾದಕರು: ಭಾರತಿ ಭಟ್