ಹಠ+ ಛಲ+ ಸಾಧನೆ = ದೀಪಾಲಿ ಸಿಕಂದ್
ಟೀಮ್ ವೈ.ಎಸ್. ಕನ್ನಡ
ಪ್ರತಿಯೊಬ್ಬರ ಜೀವನದಲ್ಲಿ ಯಶಸ್ಸು ಕಾಣಲು ಸಾಮಾಜಿಕ, ಕೌಟುಂಬಿಕ ಹಾಗೂ ಯಾವುದೇ ಕ್ಷೇತ್ರಗಳಲ್ಲಿ ನಮ್ಮ ಬದುಕು ಭಾರವಾಗದಂತೆ ನೋಡಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ನಮಗೆ ಕಷ್ಟವಾಗಿಯೇ ಕಂಡರೂ ಅದನ್ನು ಅರಿವಿಗೆ ತೆಗೆದುಕೊಳ್ಳದೆ ನಮ್ಮ ಬಾಳನ್ನು ಸುಖಮಯವಾಗಿಡುವುದು ನಮ್ಮ ಕೈಯಲ್ಲೆ ಇರುತ್ತದೆ. ಕಷ್ಟ ಬಂದಾಗ ಹೆದರಿ ಓಡದೇ, ಅದನ್ನು ಸವಾಲಾಗಿ ತೆಗೆದುಕೊಂಡು ತಮ್ಮ ಅಸಹಾಯಕತೆಗೆ ಮಣಿಯದೇ ನಿಂತು ಹೆದರಿಸಿದರೆ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಈ ಮಹಿಳೆಯ ಕಥೆಯೆ ಉದಾಹರಣೆ.
ಮಗು ಜನಿಸಿ 20 ದಿನಗಳೂ ಆಗಿರಲಿಲ್ಲ. ಆಗಷ್ಟೆ ಸಾಂಸಾರಿಕ ಕಲಹದಿಂದಾಗಿ ಪತಿಯಿಂದ ದೂರಾಗಿದ್ದರು. ಮಗು ಆರೈಕೆಗೂ ಪರದಾಡುವ ಪರಿಸ್ಥಿತಿ. ತಾಳ ತಪ್ಪಿದ ಬಾಳು ತಾಳಲಾರದ ಗೋಳು ಎಂದು ತಿಳಿದು ಕೈಕಟ್ಟಿ ಕೂರದೇ ಆ ಪರಿಸ್ಥಿತಿಯನ್ನೇ ಸವಾಲಾಗಿ ಸ್ವೀಕರಿಸಿದ ಮಹಿಳೆಯೊಬ್ಬರು ಜೀವನ ಸಾಗಿಸಲು ಸ್ಥಾಪಿಸಿದ ಸಣ್ಣ ಕಂಪೆನಿಯೇ ‘ಲೆಸ್ ಕಾನ್ಸಿರ್ಜಸ್’.
1998ರಲ್ಲಿ ಕೋರಮಂಗಲ ಬಳಿ ಈ ಕಂಪನಿಯನ್ನು ಕೇವಲ ಒಂದು ಕಂಪ್ಯೂಟರ್ ಹಾಗೂ ₹ 5 ಸಾವಿರದಿಂದ ಪ್ರಾರಂಭಿಸಿದವರು ಈ ದಿಟ್ಟ ಮಹಿಳೆ ದೀಪಾಲಿ ಸಿಕಂದ್. ಈ ಕಂಪನಿಯ ಪ್ರಸ್ತುತ ಮೌಲ್ಯ ₹ 500 ಕೋಟಿಗೂ ಅಧಿಕ. ತಮ್ಮ ಉದ್ಯಮದ ಮೂಲಕ ಈಗ ಜಾಗತಿಕಮಟ್ಟದಲ್ಲಿ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ ದೀಪಾಲಿ.
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡಗಳ ಮಧ್ಯೆ ಉದ್ಯೋಗಿಗಳು ಕುಟುಂಬವನ್ನು ಮರೆಯುತ್ತಾರೆ. ವಿದ್ಯುತ್, ನೀರಿನ ಬಿಲ್ ಪಾವತಿಸುವುದು,ಮಕ್ಕಳ ಶಾಲಾ ಶುಲ್ಕ ಕಟ್ಟುವುದು, ಮನೆಗೆ ದಿನಸಿ ತರುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನೂ ಮಾಡಲಾಗದೆ ಕಲಹಕ್ಕೆ ಆಸ್ಪದಮಾಡಿಕೊಂಡು ಬೇರಾಗುವುದನ್ನು ಕಾಣಬಹುದು. ಅಂಥವರ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡು, ಅಗತ್ಯ ಸೇವೆ ಒದಗಿಸುವ ಕೆಲಸವನ್ನು ದೀಪಾಲಿಯವರ 'ಲೆಸ್ ಕಾನ್ಸಿರ್ಜಸ್’ ಕಂಪೆನಿ ಮಾಡುತ್ತಿದೆ.
ಪ್ರಸ್ತುತ ಈ ಕಂಪನಿಯೊಂದಿಗೆ ಮಲ್ಟಿನ್ಯಾಷನಲ್ ಕಂಪನಿಗಳಾದ ಐಬಿಎಂ, ಅಕ್ಸೆಂಚರ್, ಇಂಟೆಲ್, ಫ್ಲಿಫ್ಕಾರ್ಟ್, ಐ–ಗೇಟ್, ಎಚ್ಎಸ್ಬಿಸಿ,ನೆಟ್ ಆ್ಯಪ್, ಅಮೆಜಾನ್, ಸಿಟಿ ಬ್ಯಾಂಕ್, ಹನಿವೆಲ್, ಸೇರಿದಂತೆ 200ಕ್ಕೂ ಹೆಚ್ಚು ಕಂಪೆನಿಗಳು 'ಲೆಸ್ ಕಾನ್ಸಿರ್ಜಸ್’ಯೊಡನೆ ಒಪ್ಪಂದಮಾಡಿಕೊಂಡಿವೆ. ಉದ್ಯೋಗಿಗಳು ಏನು ಕೆಲಸವಾಗಬೇಕಿದೆ ಎಂದು ಆನ್ಲೈನ್ನಲ್ಲಿ ತಿಳಿಸಿದರೆ ಸಾಕು ಅವರ ಕುಟುಂಬಕ್ಕೆ ತಕ್ಷಣವೇ ನಮ್ಮಸಿಬ್ಬಂದಿ ಆ ಸೇವೆ ಒದಗಿಸುತ್ತಿದ್ದಾರೆ ಎನ್ನುತ್ತಾರೆ ದೀಪಾಲಿ.
ಆ ದಿನಗಳು...
ಮೂಲತಃ ಬೆಂಗಳೂರಿನವರೇ ಆದ ದೀಪಾಲಿ ಕಲಿತಿದ್ದು ಕೋಲ್ಕತ್ತಾ ಮತ್ತು ಮುಂಬೈನಲ್ಲಿ. ‘ನನ್ನನ್ನು ಸಂತ್ರಸ್ತೆ ಎಂದುಕರೆಯಬೇಡಿ. ನಾನೀಗ ಎಲ್ಲವನ್ನೂ ಗೆದ್ದಿದ್ದೇನೆ’ ಎನ್ನುತ್ತಲೇ ಮಾತು ಪ್ರಾರಂಭಿಸಿದ ಅವರು, ‘ಎಂಥ ಪರಿಸ್ಥಿತಿಯಲ್ಲೂ ಧೈರ್ಯಗೆಡಬೇಡಿ’ ಎಂದುಮಹಿಳೆಯರಿಗೆ ಸಲಹೆ ನೀಡುತ್ತಾರೆ.
ಇದನ್ನು ಓದಿ: ಗಾರ್ಮೆಂಟ್ಸ್ಗೆ ಎಂಟ್ರಿಕೊಡುತ್ತಿದೆ "ಪತಂಜಲಿ"- ವಿದೇಶಿ ಬ್ರಾಂಡ್ಗಳಿಗೆ ತಿಲಾಂಜಲಿ..!
ರಾಜಕೀಯದಲ್ಲಿ ದೀಪಾಲಿಯವರಿಗೆ ಎಲ್ಲಿಲ್ಲದ ಆಸಕ್ತಿ. 1987ರಲ್ಲಿ ಮುಂಬೈನಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಸದಸ್ಯೆ ಕೂಡ ಆಗಿದ್ದರು. ಅದರೆ, ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಬೆಂಗಳೂರಿಗೆ ಮರಳಿ ‘ಎಸ್ ಆರ್ ಗ್ರೂಪ್ಸ್’ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯಾಗಿ ಸೇರಿ ಕಾರ್ಯನಿರ್ವವಹಿಸತೊಡಗಿದರು.
‘ಎಸ್ ಆರ್ ಗ್ರೂಪ್ಸ್’ ಬದುಕನ್ನು ಕಲಿಸಿದ ಕಂಪೆನಿ. 90ರ ದಶಕದಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಮಹಿಳೆಯರ ಸಂಖ್ಯೆ ತೀರಾ ಕಡಿಮೆ. ನನ್ನ ಅದೃಷ್ಟವೋ ಏನೋ. ಬಹಳ ಬೇಗನೆ ಮೇಲಧಿಕಾರಿಯಾದೆ. ಕೆಲಸ ಹುಡುಕಿಕೊಂಡು ಊರೂರು ಅಲೆಯುತ್ತಿದ್ದ ನನಗೆ, ಆ ಕಂಪನಿ ವಿದೇಶಗಳನ್ನು ಸುತ್ತಾಡುವಂತಹ ಅವಕಾಶ ಕೊಟ್ಟಿತು. ಉದ್ಯಮದ ಆಳ–ಅಗಲಗಳನ್ನು ತಿಳಿದುಕೊಳ್ಳಲು ಪೂರಕವಾಯಿತು. ಸ್ವಂತ ಕಂಪನಿ ಆರಂಭಿಸಬೇಕೆಂಬ ಕನಸು ಚಿಗುರಿದ್ದು ಆ ದಿನಗಳಲ್ಲೇ’ ಎಂದು ಮಾತು ಮುಂದುವರೆಸುತ್ತಾರೆ.
1994ರಲ್ಲಿ ನನಗೆ ವಿವಾಹವಾಯಿತು. ಆದರೆ, ದಾಂಪತ್ಯ ಜೀವನ ಕೇವಲ ಎರಡು ವರ್ಷಕ್ಕೇ ಮುರಿದು ಬಿತ್ತು. ಗರ್ಭಿಣಿ ಆಗಿದ್ದಾಗಲೇ ಗಂಡನಿಂದ ಪ್ರತ್ಯೇಕವಾಗಿ ಜೀವನ ಪ್ರಾರಂಭಿಸಿ, ಮಗ ಆದಿತ್ಯನಿಗೆ ಜನ್ಮ ನೀಡಿದೆ. ಒಂದು ಕಡೆ ಮಗು ಹುಟ್ಟಿದ ಸಂತಸ. ಇನ್ನೊಂದು ಕಡೆ ಪತಿಯನ್ನು ತೊರೆದ ನೋವು. ಆದರೂ ಧೃತಿಗೆಡದೆ, ಮಗುವನ್ನು ಕರೆದುಕೊಂಡು ಬೆಂಗಳೂರಿನ ತನ್ನ ತವರು ಮನೆಗೆ ಮರಳಿದೆ.
ನಾನು ಮತ್ತು ಪತಿ ಜಂಟಿಯಾಗಿ ಬ್ಯಾಂಕ್ ಖಾತೆ ತೆರೆದಿದ್ದೆವು. ಹೆರಿಗೆ ರಜೆಯಿಲ್ಲಿದ್ದ ಆ ದಿನಗಳಲ್ಲಿ ಹಣ ಡ್ರಾ ಮಾಡಲು ಬ್ಯಾಂಕ್ಗೆ ಹೋದಾಗ ಖಾತೆಯಲ್ಲಿ ಒಂದೇ ಒಂದು ರೂಪಾಯಿ ಹಣವು ಇರಲಿಲ್ಲ. ಮತ್ತೆ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯ. ಅದೇ ಸಮಯಕ್ಕೆ ಸಿಂಗಪುರದ‘ಇಂಟರ್ನ್ಯಾಷನಲ್ ಟೆಲಿಕಾಂ ಕಂಪೆನಿ’ಯಲ್ಲಿ ನೌಕರಿ ಸಿಕ್ಕಿತು.
‘ಒಂದು ಕೈಯಲ್ಲಿ ಕೆಲಸ, ಮತ್ತೊಂದು ಕೈಯಲ್ಲಿ ಮಗುವಿನ ಆರೈಕೆ ಅಲ್ಲಿಯೂ ಮುಂದುವರಿಯಿತು. ಕಚೇರಿಯ ಹಲವು ವಿಭಾಗಗಳಲ್ಲಿ ಕೆಲಸಮಾಡಿದ ಅನುಭವದ ವಿಶ್ವಾಸದಲ್ಲಿದ್ದ ನಾನು, ವಾರ್ಷಿಕ ₹ 80 ಸಾವಿರ ವೇತನ ಬರುತ್ತಿದ್ದ ಆ ಉದ್ಯೋಗವನ್ನೂ ಬಿಟ್ಟು ಸ್ವಂತ ಕಂಪನಿ ತೆರೆಯಲು ನಿರ್ಧರಿಸಿದೆ.
ಕಂಪನಿ ಸ್ಥಾಪಿಸಿದ ಉದ್ದೇಶ
ಕೆಲಸದ ಒತ್ತಡಗಳಿಂದ ಕುಟಂಬದ ಆರೈಕೆ ಮಾಡಲು ಕಷ್ಟ ಪಡುತ್ತಿರುವ ಎಲ್ಲ ಉದ್ಯೋಗಿಗಳಿಗೆ ನೆರವಾಗಬೇಕು,ಅದಕ್ಕೆ ಪ್ರತಿಯಾಗಿ ಸಂಭಾವನೆ ಪಡೆದು ನಾನೂ ಜೀವನ ನಡೆಸಬೇಕು ಎಂಬ ನಿರ್ಧಾರಕ್ಕೆ ಬಂದೆ. ಇದೇ ಉದ್ದೇಶಕ್ಕಾಗಿ ‘ಲೆಸ್ ಕಾನ್ಸಿರ್ಜಸ್’ಕಂಪೆನಿ ಪ್ರಾರಂಭಿಸಿದೆ.
ವಾಚ್ಮನ್ ಮೊದಲ ಉದ್ಯೋಗಿ
ನನ್ನ ಮನೆಯ ವಾಚ್ಮನ್ ಅನ್ನು ಕಂಪನಿಯ ಮೊದಲ ಉದ್ಯೋಗಿಯನ್ನಾಗಿ ನೇಮಿಸಿಕೊಂಡೆ. ನಂತರ ಸ್ನೇಹಿತರು, ಸಂಬಂಧಿಕರು, ಪರಿಚಿತರು ಕೈ ಜೋಡಿಸಿದರು. ಹೀಗೆ ನನ್ನ ಉದ್ಯೋಗಿಗಳ ದೊಡ್ಡ ವೃಂದವೇ ಸೃಷ್ಟಿಯಾಯಿತು. ಇದ್ದ ಒಂದೇ ಕಂಪ್ಯೂಟರ್ನಿಂದ ಆನ್ಲೈನ್ ಮೂಲಕ ವಿವಿಧ ಕಂಪೆನಿಗಳನ್ನು ಸಂಪರ್ಕಿಸಿ, ತಮ್ಮ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶವನ್ನು ಹೇಳಿಕೊಂಡೆವು. ಅದಕ್ಕೆ ಕೆಲ ಕಂಪೆನಿಗಳು ಒಪ್ಪಿಕೊಂಡು ಒಪ್ಪಂದವನ್ನೂ ಮಾಡಿಕೊಂಡವು.
ಬೆಳವಣಿಗೆಯತ್ತ ಚಿತ್ತ
ಬದುಕು ಒಂದು ಹಂತಕ್ಕೆ ಬಂದು ನಿಂತ ಸಂದರ್ಭದಲ್ಲೇ ನನ್ನ ತಂದೆ ದೂರವಾದರು. ನೊಂದ ಜೀವಕ್ಕೆ ಮತ್ತೆ ತಾಳಲಾರದ ಆಘಾತ. ಆದರೆ, ಅದೇ ನೋವಿನಲ್ಲಿ ಕುಳಿತರೆ ಬದುಕು ಮತ್ತಷ್ಟು ಕಷ್ಟವಾದೀತು ಎಂದು ತಿಳಿದು, ಕಂಪೆನಿಯ ಬೆಳವಣಿಗೆಯತ್ತಚಿತ್ತ ಹರಿಸಿದೆ. ಆರಂಭದ ಒಂದೂವರೆ ವರ್ಷ ಹಲವು ಏರಿಳಿತಗಳ ಮೂಲಕ ತೆವಳಿದ ಕಂಪೆನಿ, ಈಗ ಜಗತ್ತಿನಾದ್ಯಂತ ತನ್ನ ಛಾಪನ್ನು ಮೂಡಿಸಿದೆ ಎನ್ನುವುದು ದೀಪಾಲಿ ವಿಶ್ವಾಸ.
ಎಲ್ಲೆಲ್ಲಿ ಶಾಖೆಗಳಿವೆ..?
ಬೆಂಗಳೂರಿನ ಕೋರಮಂಗಲದಲ್ಲಿ ಕಂಪನಿಯ ಮುಖ್ಯ ಕಚೇರಿ ಇದೆ. ಮುಂಬೈ, ದೆಹಲಿ, ಗುಡಗಾಂವ್, ಕೋಲ್ಕತ್ತಾ,ಚೆನ್ನೈ, ಹೈದರಾಬಾದ್, ಪುಣೆ, ಅಹಮದಾಬಾದ್ ಹಾಗೂ ಜೈಪುರದಲ್ಲಿ ಶಾಖೆಗಳಿವೆ. ಅಲ್ಲದೆ, ಸಿಂಗಪುರ, ಆಸ್ಟ್ರಿಯಾ, ಸ್ವಿಟ್ಜರ್ಲೆಂಡ್, ದುಬೈ,ಯುರೋಪ್, ಮೊರಾಕ್ಕೊ ಹಾಗೂ ಈಜಿಪ್ಟ್ ರಾಷ್ಟ್ರಗಳ 20 ಪಟ್ಟಣಗಳಲ್ಲಿ ಕಂಪೆನಿಯ ಶಾಖೆಗಳಿದ್ದು, ವಾರ್ಷಿಕ ₹ 56 ಕೋಟಿ ವಹಿವಾಟುನಡೆಸುತ್ತಿದೆ. ದೀಪಾಲಿ ಅಂದು ಮಾಡಿದ್ದ ಹಠ ಇಂದು ಫಲ ಕೊಡುತ್ತಿದೆ.
1. ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ಫುಡ್ಟ್ರಕ್ಗೆ ವಿಸಿಟ್ ಕೊಡಿ
2. ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಗೆರ್ರಿ ಮಾರ್ಟಿನ್
3. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಯೋಗ್ಯಾಸ್ ಘಟಕ ನಿರ್ಮಾಣ ಮಾಡುವ ಕಂಪನಿ..!