ಕೆಲಸದ ಬಗ್ಗೆ ಚಿಂತೆ ಬಿಡಿ- ಜಾಬ್ ಫಾರ್ ಹರ್ ಮೂಲಕ ಉದ್ಯೋಗಕ್ಕೆ ಟ್ರೈ ಮಾಡಿ..!
ಟೀಮ್ ವೈ.ಎಸ್. ಕನ್ನಡ
ಇವತ್ತು ಕೆಲಸಕ್ಕೆ ಹೋಗಬೇಕು.. ಕೈ ತುಂಬಾ ದುಡಿಯಬೇಕು. ಸುಮ್ಮನೆ ಮನೆಯಲ್ಲಿ ಕುಳಿತು ಮನೆ ಕೆಲಸ ಮಾಡಲು ಇಷ್ಟ ಪಡದೇ ಇರುವ ಮಹಿಳೆಯರ ಸಂಖ್ಯೆಯೇ ಹೆಚ್ಚು. ಆದ್ರೆ ಮಹಿಳೆಯರು ಉದ್ಯೋಗಕ್ಕೆ ಹೋದ್ರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಮಹಿಳೆಯರು, ಉದ್ಯೋಗಕ್ಕಾಗಿ ಕಂಪೆನಿಗಳಿಗೆ ಅಲೆಯುವುದರಿಂದ ಹಿಡಿದು ಈ ಉದ್ಯೋಗ ಸೂಕ್ತವೇ, ಇಲ್ಲಿ ಸೇಫ್ ಟಿ ಇದೆಯೇ, ಅನ್ನೋ ನೂರಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಇದನ್ನೆಲ್ಲ ಮನಗಂಡೇ ಮಹಿಳೆಯರ ಔದ್ಯೋಗಿಕ ಸಮಸ್ಯೆ ನೀಗಿಸಲು ಜಾಬ್ ಫಾರ್ ಹರ್ ಎಂಬ ವೆಬ್ತಾಣ ಬೆಂಗಳೂರಿನಲ್ಲಿ ಆರಂಭವಾಗಿದೆ.
ಈ ಜಾಬ್ ಫಾರ್ ಹರ್ ವೆಬ್ ತಾಣದ ಮೂಲಕ ಮಹಿಳೆಯರು ಆನ್ಲೈನ್ ಮೂಲಕ ಉಚಿತವಾಗಿ ಉದ್ಯೋಗವನ್ನು ಪಡೆಯಬಹುದು. ಬೆಂಗಳೂರು ಸ್ಟಾರ್ಟ್ಅಪ್ ಆಗಿರುವ ಈ ಜಾಬ್ ಫಾರ್ ಹರ್ ಮಹಿಳೆಯರಿಗೆ ಬರೀ ಉದ್ಯೋಗ ಮಾತ್ರವಲ್ಲದೆ ಉದ್ಯೊಗಕ್ಕಾಗಿ ಯಾವ ರೀತಿ ತಯಾರಿ ನಡೆಸಬೇಕು, ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸುವುದು ಹೇಗೆ..? ಎಂಬಿತ್ಯಾದಿ ಕೌಶಲ್ಯಗಳ ಬಗ್ಗೆ ಉಪನ್ಯಾಸ, ಸಲಹೆ, ಸೂಚನೆ, ಮಾರ್ಗದರ್ಶನವನ್ನೂ ಈ ವೆಬ್ ಪೋರ್ಟಲ್ ನೀಡುತ್ತದೆ.
ಇದನ್ನು ಓದಿ: ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ
ನಾವು ಎದುರಿಸಿದ ಸಮಸ್ಯೆಗಳೇ ಹೊಸ ಅವಿಷ್ಕಾರಗಳಿಗೆ ಕಾರಣವಾಗುತ್ತವೆ ಎಂಬ ಮಾತಿದೆ. ಅದರಂತೆ ಜಾಬ್ ಫಾರ್ ಹರ್ನ ಸಂಸ್ಥಾಪಕ ಸಿಇಒ ನೇಹಾ ಬಗಾರಿಯಾ ಅವರೂ ತಮಗಾದ ಉದ್ಯೋಗ ಸಮಸ್ಯೆ ಇಟ್ಟುಕೊಂಡೇ 2015 ರ ಮಾರ್ಚ್ನಲ್ಲಿ ಈ ಸಂಸ್ಥೆ ಹುಟ್ಟುಹಾಕಿದ್ದಾರೆ. ಬೆಂಗಳೂರಿನ ಫ್ರೆಜರ್ಟೌನ್ನಲ್ಲಿ ಜಾಬ್ ಫಾರ್ ಹರ್ನ ಮುಖ್ಯ ಕಚೇರಿ ಇದೆ.
ಮುಂಬೈ ಮೂಲದವರಾದ ನೇಹಾ ಪೆನ್ಸಿಲ್ವೇನಿಯಾದ ವರ್ಟನ್ ಸ್ಕೂಲ್ನಲ್ಲಿ ಮಾರ್ಕೆಟಿಂಗ್ ಮತ್ತು ಎಂಐಎಸ್ ಪದವಿ ಪಡೆದವರು. ಶಿಕ್ಷಣದ ಬಳಿಕ ಪ್ಯಾರಗಾನ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿದರು. ಮದುವೆ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿ ತಮ್ಮ ಪತಿಯ ಕೆಮ್ ವೆಲ್ ಬಯಾರ್ಮ್ ಕಂಪನಿಯಲ್ಲಿ ಎಚ್. ಆರ್ ಮತ್ತು ಫೈನಾನ್ಸ್ ಮತ್ತು ಮಾರ್ಕೆಟಿಂಗ್ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಮಕ್ಕಳನ್ನು ಸಾಕುವ ಕಾರಣಕ್ಕೆ ಕೆಲಸವನ್ನು ಬಿಟ್ಟು ಮನೆಯಲ್ಲಿಯೇ ಉಳಿದರು. ಕೆಲ ಕಾಲದ ನಂತರ ಪುನಃ ಉದ್ಯೋಗಕ್ಕೆ ತೆರಳಬೇಕೆಂದು ಹಲವೆಡೆ ಪ್ರಯತ್ನಿಸದರೂ ಅವರಿಗೆ ಸೂಕ್ತ ಉದ್ಯೋಗ ದೊರೆಯಲಿಲ್ಲ. ಈ ವೇಳೆ ತಮ್ಮಂತೆಯೇ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ ಮಹಿಳೆಯರನ್ನು ಕಂಡು ಜಾಬ್ ಫಾರ್ ಹರ್ಗೆ ಬುನಾದಿ ಹಾಕಿದರು. ಕೇವಲ ಉದ್ಯೋಗಾಕಾಂಕ್ಷಿಗಳೊಂದಿಗಷ್ಟೇ ಅಲ್ಲದೆ ಉದ್ಯೋಗ ನೀಡುವ ಕಂಪನಿಗಳೊಂದಿಗೆ ಜಾಬ್ ಫಾರ್ ಸಂಪರ್ಕ ಸಾಧಿಸುತ್ತದೆ. ಈ ಮೂಲಕ ನಿರುದ್ಯೋಗಿಗಳಿಗೂ ಮತ್ತು ಕಂಪನಿಗಳಿಗೂ ನೇರ ಸಂಪರ್ಕ ಸೇತುವಾಗುತ್ತದೆ. ಇದರಿಂದ ಮಹಿಳೆಯರ ರಕ್ಷಣಾತ್ಮಕ ವ್ಯವಸ್ಥೆ ಬಗ್ಗೆಯೂ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಈಗಾಗಲೇ ಯೆಸ್ ಬ್ಯಾಂಕ್, ಐಡಿಯಾ ಸೆಲ್ಯುಲರ್, ಮೈಂಟ್ರಿ, ಅಮೇಜಾನ್ ಸೇರಿದಂತೆ ಸಾಕಷ್ಟು ಕಂಪನಿಗಳಲ್ಲಿ ಜಾಬ್ ಫಾರ್ ಹರ್ ಮಹಿಳೆಯರಿಗೆ ಉದ್ಯೋಗ ಸಿಗುಂವಂತೆ ಮಾಡಿದೆ. ಅಷ್ಟೇ ಅಲ್ಲದೆ ಈ ವೆಬ್ ತಾಣಕ್ಕೆ ಸದ್ಯ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗವನ್ನು ಅರಸಿ ಅರ್ಜಿ ಸಲ್ಲಿಸಿದ್ದಾರೆ.
25ಕ್ಕೂ ಹೆಚ್ಚು ಮಂದಿಗೆ ಕೆಲಸ
ಈ ಸಂಸ್ಥೆ ಎರಡು ವರ್ಷಗಳಿಂದ ಸಾಕಷ್ಟು ಮಹಿಳೆಯರಿಗೆ ಕೆಲಸ ಕೊಡಿಸಿದ್ದು ಸುಮಾರು 25ಕ್ಕೂ ಹೆಚ್ಚು ಮಂದಿ ಈ ಜಾಬ್ಫಾರ್ ಹರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಸ್ವಯಂ ಸೇವಕರಾಗಿ, ಕೆಲವರು ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ಮೂರು ಹಂತಗಳಲ್ಲಿ ತರಬೇತಿ
ಈ ಜಾಬ್ ಫಾರ್ ಹರ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಈ ಸಂಸ್ಥೆ ಮೂರು ಹಂತಗಳಲ್ಲಿ ತರಬೇತಿ ನೀಡುತ್ತದೆ. ಉದ್ಯೋಗಕ್ಕೆ ಬೇಕಾದ ಪೂರಕ ಸಿದ್ಧತೆಗಳೇನು, ಕಂಪನಿಗಳೊಂದಿಗೆ ಅವರು ಹೇಗೆ ಸಂವಹನ ನಡೆಸಬೇಕು, ಸೂಕ್ತ ಸಲಹೆ ಸೂಚನೆ ಮಾರ್ಗದರ್ಶನ ನೀಡಿ ತರಬೇತಿ ನೀಡಲಾಗುತ್ತದೆ. ಇದನ್ನೆಲ್ಲವನ್ನೂ ಜಾಬ್ ಫಾರ್ ಹರ್ ಸಂಸ್ಥೆ ಉಚಿತವಾಗಿಯೇ ಮಾಡುತ್ತದೆ. ಈ ಮೂಲಕ ಉದ್ಯೋಗಾಕಾಕ್ಷಿಗಳ ನೆರವಿಗೆ ನಿಲ್ಲುತ್ತಿದೆ. ನೀವು ಕೆಲಸ ಹುಡುಕುವ ಯೋಚನೆ ಮಾಡಿದ್ದೀರಾ... ಹಾಗಾದ್ರೆ ನೀವು ಒಂದು ಟ್ರೈ ಮಾಡಿ ನೋಡಿ...!
1. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್
2. "ಓಲಾ ಡ್ರೈವ್" ಈಗ ಮತ್ತಷ್ಟು ಫ್ರೆಂಡ್ಲಿ ವಿತ್ "ಓಲಾ ಪ್ಲೇ"
3. ಸಿನಿಮಾ ತಾರೆಯರಿಗೆಲ್ಲ ಮಾದರಿ ಎವೆಲಿನ್ ಶರ್ಮಾರ ಸಮಾಜ ಸೇವೆ..!