“ಹೆಣ್ಣು ಮಕ್ಕಳ ಪಾಲಿನ ದೈವ - ಸಮಾಜಕ್ಕೆ ಮಾದರಿ ಈ ವೈದ್ಯ”
ಪಿ.ಅಭಿನಾಷ್
ಹೆಣ್ಣು ಮಕ್ಕಳು ಅಂದ್ರೆ ಮೂಗು ಮುರಿಯುವವರ ಸಂಖ್ಯೆ ಇನ್ನೂ ಕಮ್ಮಿಯಾಗಿಲ್ಲ. ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಅನ್ನೋದು ಗೊತ್ತಿದ್ರೂ, ಹೆಣ್ಣುಭ್ರೂಣ ಹತ್ಯೆ ಮಾತ್ರ ನಿಂತಿಲ್ಲ. ಹಾಗಾಗೇ ದೇಶದ ಹಲವು ರಾಜ್ಯಗಳು ಇಂದಿಗೂ ಲಿಂಗಾನುಪಾತದ ಸಮಸ್ಯೆ ಎದುರಿಸ್ತಾ ಇವೆ. ಒಂದೆಡೆ ಸಮಾಜದಲ್ಲಿ ಹೆಣ್ಣುಮಕ್ಕಳ ಸಮಾನತೆಗೆ ಹೋರಾಟ ನಡಿತಿದ್ರೆ ಇನ್ನೊಂದೆಡೆ ಸದ್ದಿಲ್ಲದೆ ಹೆಣ್ಣುಮಕ್ಕಳನ್ನ ಹೆತ್ತ ತಪ್ಪಿಗೆ ತಾಯಂದಿರು ದೈಹಿಕ ಯಾತನೆ ಜೊತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗ್ತಿದ್ದಾರೆ. ಇಂತಹ ಸಮಾದಲ್ಲಿ ಹೆಣ್ಣುಮಕ್ಕಳ ತಾಯಂದಿರ ಪಾಲಿಗೆ ದೇವರಾಗಿದ್ದಾರೆ ಈ ವೈದ್ಯ.
ಪುಣೆ ಮೂಲದ ಡಾ. ಗಣೇಶ್ ರಖ್ ತಮ್ಮ ಆಸ್ಪತ್ರೆಯಲ್ಲಿ ಜನಿಸುವ ಹೆಣ್ಣುಮಕ್ಕಳಿಗೆ ಉಚಿತ ಸೌ¯ಭ್ಯಗಳನ್ನ ಒದಗಿಸುತ್ತಾ ಬಂದಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಜನಿಸುವ ಮಗು ಹೆಣ್ಣಾಗಿದ್ದರೆ, ಪ್ರಸೂತಿ ವೆಚ್ಚ ಸೇರಿದಂತೆ, ಔಷದೋಪಚಾರಗಳನ್ನೂ ಫ್ರೀಯಾಗಿ ನೀಡ್ತಾರೆ. ಅಷ್ಟೇ ಅಲ್ಲ, ಹೆಣ್ಣುಮಕ್ಕಳು ಜನಿಸಿದ್ರೆ, ಅಂದೇ ತಮ್ಮ ಆಸ್ಪತ್ರೆಯಲ್ಲಿ ಹುಟ್ಟುಹಬ್ಬವನ್ನ ಸಂಭ್ರಮದಿಮದ ಆಚರಣೆ ಮಾಡುತ್ತಾರೆ ಈ ಮೂಲಕ, ಹೆಣ್ಣೆತ್ತ ತಾಯಂದಿರಿಗೆ ಮಾನಸಿಕವಾಗಿ ಸಹಾಯ ಮಾಡುತ್ತಾ ಬಂದಿದ್ದಾರೆ.
ಡಾ.ಗಣೇಶ್ ರಖ್, ಆರ್ಥಕವಾಗಿ ತುಂಬಾ ಶ್ರೀಮಂತರಲ್ಲ. ಬದಲಾಗಿ ಪುಣೆಯಲ್ಲಿ 'ಹಡಪ್ಸರ್' ಎನ್ನುವ ಹೆಸರಿನ ಇವರದ್ದು ಒಂದು ಸಾಧಾರಣ ಆಸ್ಪತ್ರೆ. ಹೆಣ್ಣುಮಗು ಜನಿಸಿದಾಗ ಸಂಬಂಧಿಕರು ತಾಯಂದಿರನ್ನ ನೋಡುತ್ತಿದ್ದ ಬಗೆ, ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ರೀತಿಯನ್ನ ಕಣ್ಣಾರೆ ಕಂಡಿದ್ದರು. ಅದೆಷ್ಟೋ ಬಾರಿ ಸಂಬಂಧಿಕರಿಗೆ ಹಾಗೂ ಮನೆಯವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಮಾಡಿದ್ದರು. ಆದ್ರೆ, ಗಂಡು ಮಗು ಬೇಕೆನ್ನುವವರನ್ನ ಸಂತೈಸುವುದು ಸಾಧ್ಯವಾಗಿರಲಿಲ್ಲ. ಇನ್ನು, ಗಂಡು ಮಗು ಹುಟ್ಟಿದ್ರೆ, ಟಿಪ್ಸ್ ಕೊಡ್ತಿದ್ದ ಜನ, ಹೆಣ್ಣುಮಗು ಜನಿಸಿದಾಗ, ಆಸ್ಪತ್ರೆ ಬಿಲ್ ನೀಡಲು ತಕರಾರು ಮಾಡ್ತಿದ್ರು. ಇದೆಲ್ಲವನ್ನೂ ಕಂಡ ಡಾ.ರಖ್ ಸಮಾಜದಲ್ಲಿ ಮಹಿಳೆಯರ ಸಹಾಯಕ್ಕೆ ನಿಲ್ಲಲು ಮುಂದಾದ್ರು. ತಮ್ಮ ಕೈಲಾದಷ್ಟು ಬದಲಾವಣೆ ತರಲು ಮುಂದಡಿಯಿಟ್ರು.
ಜನವರಿ ಹನ್ನೆರೆಡು 2012ರಲ್ಲಿ ತಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ಹೆಣ್ಣುಮಗುವಿನ ಡೆಲಿವರಿ ಮಾಡಿಸಿದ್ರು. ಅಂದಿನಿಂದ ಇಂದಿನವರೆಗೂ ಒಟ್ಟು 432 ಹೆಣ್ಣುಮಕ್ಕಳಿಗೆ ಉಚಿತ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ವೈದ್ಯ ಲೋಕಕ್ಕೆ ಮಾದರಿಯಾಗಿದ್ದಾರೆ.
'9ತಿಂಗಳು ಮಗುವನ್ನ ಹೊಟ್ಟಿಯಲ್ಲಿರಿಕೊಂಡಷ್ಟೂ ದಿನ ತಾಯಂದಿರು ಆತಂಕದಲ್ಲೇ ಸಮಯ ದೂಡುತ್ತಾರೆ. ಹೆರಿಗೆ ದಿನ ಆ ನೋವಿನೊಳಗೂ ತನಗುಟ್ಟುವ ಮಗುವಿನ ಲಿಂಗದ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಇಂತಾ ಸಾಕಷ್ಟು ಹೆಣ್ಣುಮಕ್ಕಳನ್ನ ನಾನು ನೋಡಿದ್ದೇನೆ. ಹಾಗಾಗಿ ಉಚಿತವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಂದಿರಲ್ಲಿ ಧೈರ್ಯ ತುಂಬಲು ಮುಂದಾದೆ. ಉಚಿತವಾಗಿ ಹೆರಿಗೆ ಮಾಡಿಸೋದ್ರಿಂದ ಮೊದಮೊದಲು ಆಸ್ಪತ್ರೆ ವೆಚ್ಚ ಭರಿಸಲು, ಸಿಬ್ಬಂದಿಗೆ ಸಂಬಳ ನೀಡಲು ಕಷ್ಟವಾಗ್ತಾ ಇತ್ತು. ಆದ್ರೆ, ನನ್ನ ನಿರ್ಧಾರದ ನನಗೆ ಹೆಮ್ಮೆಯಿತ್ತು. ಇಂದು ಹಲವು ಮಂದಿ ನನ್ನಿಂದ ಪ್ರೇರೇಪಿತರಾಗಿದ್ದಾರೆ ಅನ್ನೋದು ನನಗೆ ಸಂತಸ ತಂದಿದೆ'.
ಡಾ.ರಖ್ ಅವರ ಈ ನಿಲುವು ಈಗ ಚಳುವಳಿಯಾಗಿ ಮಾರ್ಪಟ್ಟಿದೆ. ದೇಶದಾದ್ಯಂತ ಹಲವು ವೈದ್ಯರು ಡಾ.ರಖ್ ಅವರ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ಹಲವು ಮಂದಿ ಭ್ರೂಣಲಿಂಗ ಪತ್ತೆಯನ್ನ ತಮ್ಮ ತಮ್ಮ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಹತ್ತಾರು ಗ್ರಾಮ ಪಂಚಾಯ್ತಿಗಳು ಡಾ.ರಖ್ ಅವರ ಕಾರ್ಯಕ್ರಮಗಳನ್ನ ತಮ್ಮ ಹಳ್ಳಿಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
'ನಾವು ನಮ್ಮ ಹಳ್ಳಿಯಲ್ಲಿ ಡಾ. ರಖ್ ಅವರ ಕಾರ್ಯಕ್ರಮವನ್ನ ಏರ್ಪಡಿಸಿದ್ದೆವು. ಹೆಣ್ಣು ಭ್ರೂಣ ಹತ್ಯೆ ಮಹಾಪಾಪ ಅನ್ನೋದನ್ನ ಅವರು ಮನವರಿಕೆ ಮಾಡಿಕೊಟ್ರು. ಅಲ್ಲದೆ, ಹೆಣ್ಣಮಕ್ಕಳ ಪೋಷಕರಲ್ಲಿ ಧೈರ್ಯ ತುಂಬಿದರು. ನಮ್ಮ ಹಳ್ಳಿಯಲ್ಲಿ ಯಾರೇ ಭ್ರೂಣ ಲಿಂಗ ಪತ್ತೆಗೆ ಮುಂದಾದ್ರೂ, ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತೇವೆ' ಅಂತಾರೆ ಗ್ರಾಮದ ನಿವಾಸಿ ಅರ್ಜುನ್ ಬುದ್ದವಂತ್.
'ನಾನು ಡಾ.ರಖ್ ಅವರ ಕೆಲಸದಿಂದ ಪ್ರೇರೇಪಿತನಾಗಿದ್ದೇನೆ. ಅವರು ಹೆಣ್ಣುಮಗುವಿಗೆ ಸಂಪೂರ್ಣವಾಗಿ ಉಚಿತ ಹೆರಿಗೆ ಮಾಡಿಸುತ್ತಿದ್ದಾರೆ. ನಾನು ನನ್ನ ಕೈಲಾದ ಸಹಾಯ ಮಾಡಲು ನಿರ್ಧರಿಸಿದ್ದು ಕಳೆದ ಕೆಲ ತಿಂಗಳಿಂದ ಹೆಣ್ಣುಮಗುವಿನ ಹೆರಿಗೆ ವೆಚ್ಚದ ಅರ್ಧದಷ್ಟನ್ನ ಮಾತ್ರ ಪಡೆಯುತ್ತಿದ್ದೇನೆ' ಅಂತಾರೆ ಡಾ.ದುಂಗ್ರಾವರ್ ಸಾಯಿ.
ಸಮಾಜ ಸುಧಾರಣೆ, ಬದಲಾವಣೆ, ಹೆಣ್ಣುಮಕ್ಕಳ ಸಮಾನತೆ ಬಗ್ಗೆ ಬರೀ ಮಾತಿನಲ್ಲಿ ಬಡಯಿ ಕೊಚ್ಚಿಕೊಳ್ಳುವವರೇ ಹೆಚ್ಚಾಗಿರುವವರ ಮಧ್ಯೆ ಡಾ.ಗಣೇಶ್ ರಖ್ ಅವರ ಸಾಧನೆ ನಿಜಕ್ಕೂ ಪ್ರಶಂಸನೀಯ.